ಎರಡು ತಿಂಗಳಲ್ಲಿ ಗಗನಯಾನ ಪರೀಕ್ಷಾರ್ಥ ಉಡಾವಣೆ ಬೆಂಗಳೂರು(ಪಿಟಿಐ): ಮಾನವಸಹಿತ ಗಗನಯಾನಕ್ಕೆ ಮುನ್ನ ನಡೆಸಲು ಉದ್ದೇಶಿಸಿರುವ ಮೊದಲ ಪರೀಕ್ಷಾರ್ಥ ಉಡಾವಣೆ ಇನ್ನು ಒಂದು ಅಥವಾ ಎರಡು ತಿಂಗಳಲ್ಲಿ ನಡೆಯಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದರು. ಮಾನವರನ್ನು ಬಾಹ್ಯಾಕಾಶಕ್ಕೆ ಕಳಿಸುವುದಕ್ಕೆ ಮುಂಚಿತವಾಗಿ ಒಟ್ಟು ನಾಲ್ಕು ಬಾರಿ ಪರೀಕ್ಷಾರ್ಥವಾಗಿ ಉಡಾವಣೆ ನಡೆಸಲು ಉದ್ದೇಶಿಸಲಾಗಿದೆ. ಉಡಾವಣೆ ಮತ್ತು ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್‌ ಕರೆತರುವ ಪ್ರಯೋಗಗಳನ್ನು ನಡೆಸಲಾಗುವುದು. ಮೊದಲ ಪರೀಕ್ಷಾರ್ಥ ಉಡಾವಣಾ ವಾಹನ ಟಿವಿ–ಡಿ1, ಎರಡನೆಯದು ಟಿವಿ–ಡಿ2 , ಮೂರನೆಯದು ಟಿವಿ–ಡಿ3 ಮತ್ತು ನಾಲ್ಕನೆಯದು ಟಿವಿ–ಡಿ4 ಈ ರಾಕೆಟ್‌ಗಳ ಮೂಲಕ ಉಡಾವಣೆ ನಡೆಯಲಿದೆ. ಆ ಬಳಿಕ ಎಲ್‌ವಿಎಂ3–ಜಿ2 ನಲ್ಲಿ ರೊಬೋಟಿಕ್‌ ಉಪಕರಣಗಳನ್ನಿಟ್ಟು ಉಡಾವಣೆ ಮಾಡಲಾಗುವುದು. ಇವುಗಳ ಯಶಸ್ಸಿನ ಆಧಾರದಲ್ಲಿ ಮಾನವರನ್ನು ಗಗನಯಾನಕ್ಕೆ ಕಳುಹಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಗಗನಯಾನಿಗಳು ಸುರಕ್ಷಿತವಾಗಿ ಭೂಮಿಗೆ ಬಂದ ಬಳಿಕ ಪಾರಾಗುವ ವ್ಯವಸ್ಥೆಯನ್ನು ಇನ್ನಷ್ಟು ಪಕ್ಕಾಗೊಳಿಸುವತ್ತ ಗಮನಹರಿಸಿದ್ದೇವೆ ಎಂದು ಅವರು ತಿಳಿಸಿದರು. ಆದಿತ್ಯ ಎಲ್‌–1ಕಕ್ಷೆ ಬದಲಾವಣೆ: ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಆದಿತ್ಯ ಎಲ್‌–1ರ ನಾಲ್ಕನೇ ಕಕ್ಷೆ ಬದಲಾವಣೆ ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಕಕ್ಷೆ ಬದಲಾವಣೆಯ ವೇಳೆಯಲ್ಲಿ ಮಾರಿಷಸ್‌, ಬೆಂಗಳೂರು ಮತ್ತು ಪೋರ್ಟ್‌ಬ್ಲೇರ್‌ಗಳಲ್ಲಿರುವ ಇಸ್ರೊ ನಿಲ್ದಾಣಗಳು ಆದಿತ್ಯ ಎಲ್‌–1 ಚಲನೆಯ ಮೇಲೆ ನಿಗಾ ವಹಿಸಿದ್ದವು. ಇದೀಗ 256 ಕಿ.ಮೀ 121973 ಕಿ.ಮೀ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿದೆ. ಮುಂದಿನ ಕಕ್ಷೆ ಬದಲಾವಣೆ ಇದೇ 19ರಂದು ನಡೆಯಲಿದ್ದು, ಅಂದು ಭೂಕಕ್ಷೆಯಿಂದ ಸೂರ್ಯನ ಲಗ್ರಾಂಜಿಯನ್‌ ಬಿಂದುವಿನತ್ತ ಪ್ರಯಾಣ ಬೆಳೆಸಲಿದೆ ಎಂದು ಇಸ್ರೊ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.