ಸೂಪರ್ ಪ್ರೀಮಿಯಂ ಸ್ಮಾರ್ಟ್‌ಫೋನ್‌: ಶೇ 50ರಷ್ಟು ಪಾಲು ಹೊಂದಲು ಸ್ಯಾಮ್ಸಂಗ್‌ ಗುರಿ ಸೋಲ್‌: ಭಾರತದ ಸೂಪರ್ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಶೇಕಡ 50ರಷ್ಟು ಮಾರುಕಟ್ಟೆ ಪಾಲು ಹೊಂದುವ ಗುರಿಯನ್ನು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್‌ ಹೊಂದಿದೆ. ಫೋಲ್ಡಿಂಗ್‌ ಸಾಧನಗಳಾದ ಗ್ಯಾಲಕ್ಸಿ ಫೋಲ್ಡ್‌ 5 ಮತ್ತು ಗ್ಯಾಲಕ್ಸಿ ಫ್ಲಿಪ್‌ 5 ಈ ಗುರಿ ಸಾಧನೆಗೆ ನೆರವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಕಂಪನಿಯ ಅಧ್ಯಕ್ಷ ಟಿ.ಎಂ. ರೋಹ್‌ ಹೇಳಿದ್ದಾರೆ. ಭಾರತದ ಸೂಪರ್ ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಕಂಪನಿಯು ಸದ್ಯ ಶೇ 35ರಷ್ಟು ಪಾಲನ್ನು ಹೊಂದಿದೆ. ಆ್ಯಪಲ್‌ ಕಂಪನಿಯು ಮೊದಲ ಸ್ಥಾನದಲ್ಲಿದೆ. ಸೂಪರ್ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗವು ₹82 ಸಾವಿರಕ್ಕಿಂತಲೂ ಅಧಿಕ ಬೆಲೆಯ ಹ್ಯಾಂಡ್‌ಸೆಟ್‌ಗಳನ್ನು ಒಳಗೊಂಡಿದೆ. ಕೌಂಟರ್‌ಪಾಯಿಂಟ್‌ ರಿಸರ್ಚ್‌ನ ಪ್ರಕಾರ, ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ ಕಂಪನಿಯು 2023ರ ಮೊದಲ ತ್ರೈಮಾಸಿಕದಲ್ಲಿ ಶೇ 20ರಷ್ಟು ಪಾಲು ಹೊಂದುವ ಮೂಲಕ ಮುಂಚೂಣಿಯಲ್ಲಿದೆ. ₹45 ಸಾವಿರಕ್ಕಿಂತಲೂ ಅಧಿಕ ಬೆಲೆಯ ಅಲ್ಟ್ರಾ ಪ್ರೀಮಿಯಂ ವಿಭಾಗದಲ್ಲಿ ಕಂಪನಿಯ ಪಾಲು ವರ್ಷದಿಂದ ವರ್ಷಕ್ಕೆ ಶೇ 247ರಷ್ಟು ಏರಿಕೆ ಕಂಡಿದೆ. ಅಲ್ಟ್ರಾ ಪ್ರೀಮಿಯಂ ವಿಭಾಗದಲ್ಲಿ ಶೇ 62ರಷ್ಟು ಷೇರುಪಾಲು ಹೊಂದುವ ಮೂಲಕ ಆ್ಯಪಲ್‌ ಕಂಪನಿಯು ಮೊದಲ ಸ್ಥಾನದಲ್ಲಿದೆ. ಭಾರತದ ಮಾರುಕಟ್ಟೆಯು ಈಗ ಹೊಸತನದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿದೆ. ಮೊಬೈಲ್‌ ಸಾಧನಗಳ ಬಳಕೆಯೂ ಹೆಚ್ಚಾಗುತ್ತಿದೆ. ಪ್ರೀಮಿಯಂ ವಿಭಾಗದ ಹೆಚ್ಚಿನ ಬೆಲೆಯ ಸಾಧನಗಳಿಗೆ ಬೇಡಿಕೆಯು ತ್ವರಿತವಾಗಿ ಹೆಚ್ಚಾಗುತ್ತಿದೆ ಎಂದು ರೋಹ್‌ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.