ಪಿಟ್ರಾನ್‌ ಫೋರ್ಸ್‌ ಎಕ್ಸ್‌11ಪಿ: ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ವಾಚ್‌ ಪಿಟ್ರಾನ್‌ ಕಂಪನಿಯು ಈಚೆಗಷ್ಟೇ ಫೋರ್ಸ್‌ ಎಕ್ಸ್‌11ಪಿ ಎನ್ನುವ ಬ್ಲುಟೂತ್‌ ಕಾಲಿಂಗ್‌ ಇರುವ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ‘ಫೋರ್ಸ್‌ ಎಕ್ಸ್‌ 11’ನ ಸುಧಾರಿತ ಆವೃತ್ತಿ ಇದಾಗಿದೆ. ಬೆಲೆ ₹1,499. ಈ ಸ್ಮಾರ್ಟ್‌ವಾಚ್‌ 1.3 ಇಂಚು ಎಚ್‌ಡಿ ರೌಂಡ್‌ ಡಿಸ್‌ಪ್ಲೇ ಹೊಂದಿದೆ. ಸಿಲಿಕಾನ್‌ ಬೆಲ್ಟ್‌ ಗುಣಮಟ್ಟ ತಕ್ಕಮಟ್ಟಿಗೆ ಇದೆ. ಬೇಗನೆ ದೂಳು ಹಿಡಿಯುತ್ತದೆ. ಪಿಟ್ರಾನ್‌ ಫಿಟ್‌+ ಆ್ಯಪ್‌ ಮೂಲಕ ವಾಚ್‌ನ ಹಲವು ಆಯ್ಕೆಗಳನ್ನು ನಿಯಂತ್ರಿಸಬಹುದು. ಆ್ಯಪ್‌ ಮೂಲಕ 8 ಕಾಂಟ್ಯಾಕ್ಟ್‌ ಸೇವ್‌ ಮಾಡಿಟ್ಟುಕೊಳ್ಳಬಹುದು. 100ಕ್ಕೂ ಹೆಚ್ಚು ವಾಚ್‌ ಫೇಸ್‌ಗಳು ಇದರಲ್ಲಿವೆ. ಬ್ಲುಟೂತ್ ಮೂಲಕ ಫೋನ್‌ನೊಂದಿಗೆ ಸಂಪರ್ಕ ಸಾಧಿಸಿದರೆ ಸ್ಮಾರ್ಟ್‌ವಾಚ್‌ ಮೂಲಕವೇ ಕರೆ ಮಾಡಲು ಮತ್ತು ಸ್ವೀಕರಿಸಲು ಸಾಧ್ಯ. ಫೋನ್‌ ಕಾಂಟ್ಯಾಕ್ಟ್‌ ಅನ್ನು ವಾಚ್‌ನೊಂದಿಗೆ ಸಿಂಕ್ ಮಾಡಿ ಕಾಲ್‌ ಹಿಸ್ಟರಿ ಪಡೆಯಬಹುದು. ಫೆವರಿಟ್‌ ಕಾಂಟ್ಯಾಕ್ಟ್‌ಗಳನ್ನು ಸಹ ವಾಚ್‌ನಲ್ಲಿ ಸಿದ್ಧಪಡಿಸಿಟ್ಟುಕೊಳ್ಳಬಹುದು. ಇಷ್ಟೇ ಅಲ್ಲದೆ, ಸೇವ್ ಆಗಿಲ್ಲದ ನಂಬರ್‌ಗೂ ಡಯಲ್‌ ಮಾಡಿ ಕಾಲ್‌ ಮಾಡಬಹುದು. ಬಳಕೆ ಬಹಳ ಸುಲಭವಾಗಿರುವುದರಿಂದ ಕರೆ ಮಾಡಲು ಫೋನ್‌ ಅನ್ನೇ ಬಳಸಬೇಕು ಎಂದೇನೂ ಇಲ್ಲ. ಮೈಕ್ರೊಫೋನ್‌ ಮೂಲಕ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಫೋನಿನ ಇನ್ನೊಂದು ತುದಿಯಲ್ಲಿ ಮಾತನಾಡುವವರಿಗೂ ನನ್ನ ಧ್ವನಿ ಸ್ಪಷ್ಟವಾಗಿ ಕೇಳಿದೆ. ಆ್ಯಪ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಷನ್‌ ಸಕ್ರಿಯಗೊಳಿಸುವ ಆಯ್ಕೆ ಇದೆ. ಅಲ್ಲಿ ಮೆಸೇಜ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌... ಹೀಗೆ ಯಾವೆಲ್ಲಾ ಆ್ಯಪ್‌ಗಳ ನೋಟಿಫಿಕೇಷನ್‌ಗಳು ಅಗತ್ಯ ಇದೆ ಎಂದು ಕ್ಲಿಕ್‌ ಮಾಡಿದರೆ ಅವೆಲ್ಲವೂ ಸ್ಮಾರ್ಟ್‌ವಾಚ್‌ ಪರದೆಯಲ್ಲಿ ಕಾಣಿಸುತ್ತವೆ. ಆರೋಗ್ಯ ಮತ್ತು ಫಿಟ್‌ನೆಸ್ ಮೇಲ್ವಿಚಾರಣೆ ಮಾಡಬಹುದು. ಹೃದಯದ ಬಡಿತ, ರಕ್ತ ಸಂಚಾರ, ಉಸಿರಾಟ, ಎಷ್ಟು ಗಂಟೆ ನಿದ್ದೆ ಮಾಡಿದ್ದೇವೆ, ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೇವೆ. ಓಡಿದ್ದೇವೆ ಇತ್ಯಾದಿಗಳನ್ನು ಸುಲಭವಾಗಿ ದಾಖಲಿಸಬಹುದು. ಹೆಲ್ತ್‌ ಆ್ಯಂಡ್‌ ಫಿಟ್‌ನೆಸ್‌, 7 ಸ್ಪೋರ್ಟ್‌ ಮೋಡ್‌, ವೆದರ್, ಅಲಾರ್ಮ್‌, ಸ್ಟಾಪ್‌ವಾಚ್‌, ಫೈಂಡ್ ಯುವರ್ ವಾಚ್‌, ಡುನಾಟ್ ಡಿಸ್ಟರ್ಬ್‌ ಆಯ್ಕೆಗಳಿವೆ. ಐಪಿ68 ರೇಟಿಂಗ್ಸ್‌ ಇದ್ದು, ದೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತದೆ. ಇಷ್ಟೇ ಅಲ್ಲದೆ ಬೇರೆ ಸ್ಮಾರ್ಟ್‌ವಾಚ್‌ಗಳಲ್ಲಿ ಇರುವಂತೆಯೇ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ಕ್ಯಾಮೆರಾ ಶೆಟರ್‌ ಕಂಟ್ರೋಲ್‌ ಸಹ ಇದರಲ್ಲಿ ಇದೆ. 260ಎಂಎಎಚ್ ಬ್ಯಾಟರಿ ಬ್ಯಾಟರಿ ಒಳಗೊಂಡಿದ್ದು, ಪೂರ್ತಿ ಚಾರ್ಜ್‌ ಆಗಲು 2 ಗಂಟೆ ಬೇಕು. 5 ದಿನ ಸಾಮಾನ್ಯ ಬಳಕೆಗೆ. ನಿರಂತರವಾಗಿ ಕಾಲ್‌ ಮಾಡಿದರೆ 3 ಗಂಟೆ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ. ಮ್ಯಾಗ್ನೆಟಿಕ್‌ ಚಾರ್ಜಿಂಗ್ ಕೇಬಲ್‌ ಹೊಂದಿದೆ. ಬ್ಲುಟೂತ್ ಮೂಲಕ ಮೊಬೈಲ್‌ ಕ್ಯಾಮೆರಾ ನಿಯಂತ್ರಿಸಬಹುದು. ವಾಯ್ಸ್‌ ಅಸಿಸ್ಟಂಟ್‌ ಸೌಲಭ್ಯ ಇದೆ. ‌ಒಟ್ಟಾರೆಯಾಗಿ, ಗುಣಮಟ್ಟದ ಬ್ಲುಟೂತ್ ಕಾಲಿಂಗ್‌, ಉತ್ತಮ ಬ್ಯಾಟರಿ ಬಾಳಿಕೆ ದೃಷ್ಟಿಯಿಂದ ₹ 1,500 ಬೆಲೆಯ ಒಳಗಿನ ಸ್ಮಾರ್ಟ್‌ವಾಚ್‌ಗಳಲ್ಲಿ ಇದನ್ನು ಆದ್ಯತೆಯ ಆಯ್ಕೆಯಾಗಿ ಪರಿಗಣಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.