ಬಾವಲಿ ರೂಪದ ರೋಬೊ... ರೋಬೊಟಿಕ್‌ ತಂತ್ರಜ್ಞಾನದ ಬಗೆಗಿನ ಕುತೂಹಲ ಎಂದೆಂದೂ ಕಡಿಮೆಯಾಗದು. ಇವುಗಳ ಕುರಿತ ಸಂಶೋಧನೆ ಮತ್ತು ಅನ್ವೇಷಣೆ ವಿಶ್ವದಾದ್ಯಂತ ನಡೆಯುತ್ತಲೇ ಇರುತ್ತದೆ. ಇದಕ್ಕೊಂದು ವೇದಿಕೆಯನ್ನು ಚೀನಾ ಒದಗಿಸುತ್ತಾ ಬಂದಿದೆ. ವಿಶ್ವ ರೋಬೊಟ್‌ ಸಮ್ಮೇಳನವನ್ನು (ಡಬ್ಲ್ಯುಆರ್‌ಸಿ) ಇದೇ 15 ರಿಂದ 19 ರವರೆಗೆ ಬೀಜಿಂಗ್‌ನ ಈಸ್ಟಾಂಗ್ ಅಂತರರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ದೇಶಗಳಲ್ಲಿನ ರೋಬೊಟ್‌ ತಯಾರಕರು ತಂದಿದ್ದ ರೋಬೊಗಳ ಪ್ರದರ್ಶನವಲ್ಲದೆ ಐದು ಹಂತಗಳಲ್ಲಿ ಸ್ಪರ್ಧೆಗಳೂ ನಡೆದದ್ದು ಈ ಸಮಾವೇಶದ ವಿಶೇಷವಾಗಿತ್ತು. ಹಿಂದಿನ ವರ್ಷವೂ ಬೀಜಿಂಗ್‌ನಲ್ಲಿಯೇ ಈ ಸಮ್ಮೇಳನ ನಡೆದಿತ್ತು. ಉದ್ಯಮಿಗಳು, ತಜ್ಞರು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ರೋಬೋಟ್‌ ತಯಾರಕ ಕಂಪನಿಗಳು, ಹೂಡಿಕೆದಾರರು ಇದರಲ್ಲಿ ಭಾಗವಹಿಸಿದ್ದರು. 300ಕ್ಕೂ ರೋಬೊ ಪರಿಣತರು ಪಾಲ್ಗೊಂಡಿದ್ದರು. ರೋಬೊಟ್‌ಗಳ ಕುರಿತು ಜಾಗತಿಕ ಮಟ್ಟದಲ್ಲಿ ನಡೆಯುವ ಸಂಶೋಧನೆಯ ಪರಿಚಯ ಮಾಡುವುದರೊಂದಿಗೆ ಅದನ್ನು ಬಳಸಿಕೊಳ್ಳುವ ಬಗೆಗೂ ವಿಚಾರ ಹಂಚಿಕೊಳ್ಳಲು ಇದು ಅವಕಾಶ ಕಲ್ಪಿಸಿತ್ತು. ‘ಬುದ್ಧಿವಂತ ಸಮಾಜ’ಕ್ಕಾಗಿ ನಡೆಯುತ್ತಿರುವ ರೋಬೊಟ್‌ ಸಂಶೋಧನೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳವುದು ಹೇಗೆ ಎಂದು ತಜ್ಞರು ವಿಷಯ ಹಂಚಿಕೊಂಡರು. ‘ರೋಬೊಟಿಕ್‌ ಉದ್ಯಮವನ್ನು ‌ದೇಶ ಮತ್ತು ವಿದೇಶಗಳಲ್ಲಿ ವಿಸ್ತರಣೆ ಮಾಡಿಕೊಳ್ಳಲು ಅಂತರರಾಷ್ಟ್ರೀಯ ಸಹಕಾರ ಮತ್ತು ಶೈಕ್ಷಣಿಕ ವಿನಿಮಯ ಮಾಡಿಕೊಳ್ಳಲು ಈ ರೀತಿಯ ಸಮ್ಮೇಳನಗಳು ಸಹಕಾರಿಯಾಗಬಲ್ಲವು’ ಎಂಬ ಅಭಿಪ್ರಾಯವನ್ನು ಚೀನಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ವ್ಯಕ್ತಪಡಿಸಿದೆ. ಬಾವಲಿ ರೋಬೊ ಪ್ರಾಣಿಗಳನ್ನು ಹೋಲುವ ರೋಬೊಟ್‌ಗಳು ಪ್ರದರ್ಶನಗೊಂಡಿದ್ದು ಇಲ್ಲಿನ ವಿಶೇಷವಾಗಿತ್ತು. ಮೀನು, ನಾಯಿ, ಅಕ್ಟೋಪಸ್‌ ರೋಬೊ ಇಲ್ಲಿದ್ದವು. ಇವುಗಳಿಗಿಂತ ಬಾವಲಿ ಮತ್ತು ಮೀನುಗಳ ರೂಪದ ರೋಬೊಟ್‌ಗಳಿದ್ದುದು ಇನ್ನೂ ವಿಶೇಷವಾಗಿತ್ತು. ಫೆಸ್ಟೊ ಕಂಪನಿ ಈಗಾಗಲೇ ಚಿಟ್ಟೆ, ಕಾಂಗರೊ, ಇರುವೆ ಸೃಷ್ಟಿಸಿದೆ. ಈಗ ಬಾವಲಿಯನ್ನು ಪ್ರದರ್ಶನಕ್ಕಿಟ್ಟಿತ್ತು. ಬಾವಲಿ ರೋಬೊ ಅನ್ನು ‘ಬಯೋನಿಕ್‌ ಫ್ಲೈಯಿಂಗ್‌ ಫಾಕ್ಸ್‌’ ಎಂದು ಕರೆಯಲಾಗುತ್ತದೆ. ಕಡಿಮೆ ತೂಕದ, ಥೇಟು ಬಾವಲಿಯನ್ನೇ ಹೋಲುವ ಇದು ಹಾರಲು ‘ಮಷಿನ್‌ ಲರ್ನಿಂಗ್’ ಅನ್ನು ಬಳಸುತ್ತದೆ. ಗೇರು ಮತ್ತು ಮೋಟರ್‌ ಇದಕ್ಕಿವೆ. ರೆಕ್ಕೆಗಳನ್ನು ಎರಡು ಏರ್‌ಟೈಟ್‌ ಫಿಲ್ಮ್ಸ್‌ನಿಂದ ಮಾಡಲಾಗಿದೆ. 228 ಸೆ.ಮೀ. ಅಗಲದ ಇದರ ದೇಹ 87 ಸೆ.ಮೀ ಇದೆ. ಒಟ್ಟು ತೂಕ ಕೇವಲ 580 ಗ್ರಾಂ. ಇವಿಷ್ಟೇ ಅಲ್ಲ...‌ ‌ಸಂಗೀತ ಸಾಧನಗಳನ್ನು ನುಡಿಸಲು ರೋಬೊಗಳನ್ನು ಬಹಳ ವರ್ಷಗಳ ಹಿಂದಿನಿಂದಲೂ ಬಳಕೆ ಮಾಡಲಾಗುತ್ತಿದೆ. ವೀಣೆ, ಗಿಟಾರ್, ಡೋಲು ಮುಂತಾದವುಗಳನ್ನು ನುಡಿಸಲು ಇವುಗಳನ್ನು ಉಪಯೋಗಿಸಲಾಗುತ್ತದೆ. ಡಬ್ಲ್ಯುಆರ್‌ಸಿಯಲ್ಲೂ ವೀಣೆ ನುಡಿಸುವ ರೋಬೊ ಪ್ರೇಕ್ಷಕರನ್ನು ಆಕರ್ಷಿಸಿತು. ಬಾರ್ ಅಟೆಂಡರ್ ರೋಬೊಟ್‌, ಕಾಫಿ ತಯಾರಿಸುವ ರೋಬೊಟ್‌ಗಳೂ ಗಮನ ಸೆಳೆದಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.