ಕ್ಯಾಮೆರಾ 4 ಕೆ ಸಣ್ಣ ಬಂಡವಾಳದಲ್ಲಿ ಸಿನಿಮಾ ಚಿತ್ರೀಕರಿಸುವ ಆಸಕ್ತಿ ಇದೆಯೇ? ಕಡಿಮೆ ಹಣದಲ್ಲಿ ಪ್ರವಾಸಿ ಸಾಕ್ಷ್ಯಚಿತ್ರ ನಿರ್ಮಾಣದ ಯೋಚನೆ ಇದೆಯೇ.ಹಾಗಾದರೆ, ಸ್ವಲ್ಪ ನಿಧಾನಿಸಿ. ಇಂಥ ಕಡಿಮೆ ಬಜೆಟ್‌ನ ಚಿತ್ರೀಕರಣಕ್ಕೆ ಸಹಾಯವಾಗುವಂತಹ ಪಾಕೆಟ್‌ ಕ್ಯಾಮೆರಾವೊಂದು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದರಿಂದ ಕಡಿಮೆ ಬಜೆಟ್ ಸಿನಿಮಾಗಳು, ಸಾಕ್ಷ್ಯಾಚಿತ್ರಗಳು, ಟ್ರಾವೆಲ್ ಡಾಕ್ಯುಮೆಂಟರಿಗಳನ್ನು ತಯಾರಿಸಬಹುದು. ‘ಬ್ಲ್ಯಾಕ್ ಮ್ಯಾಜಿಕ್ ಸಿನಿಮಾ ಕ್ಯಾಮೆರಾ 4 ಕೆ’ – ಇದೇ ಮಾರುಕಟ್ಟೆಗೆ ಪರಿಚಯವಾಗುತ್ತಿರುವ ಅಗ್ಗದ ಬೆಲೆಯ, ಹೆಚ್ಚು ಆಯ್ಕೆಗಳುಳ್ಳ ಕ್ಯಾಮೆರಾ. ಕ್ಯಾಮೆರಾ ಮತ್ತು ಎಡಿಟಿಂಗ್‌ ಸಾಫ್ಟ್‌ವೇರ್‌ಗಳ ತಯಾರಿಕಾ ಸಂಸ್ಥೆ ‘ಬ್ಲಾಕ್ ಮ್ಯಾಜಿಕ್’, ಇದರ ತಯಾರಿಕಾ ಕಂಪನಿ. ಕ್ಯಾಮೆರಾ 4ಕೆ ಮಿರರ್‌ ಲೆಸ್‌ ಮತ್ತು ಸುಧಾರಿತ ಡಿಜಿಟಲ್‌ ತಂತ್ರಜ್ಞಾನದಿಂದ ಕೂಡಿದೆ. 13 ಸ್ಟಾಪ್ ಡೈನಾಮಿಕ್ ರೇಂಜ್‌ನೊಂದಿಗೆ ಬೆಳ್ಳಿತೆರೆಯ ಮೇಲೆ ಪ್ರದರ್ಶನಗೊಳ್ಳುವ ಸಿನಿಮಾ ದೃಶ್ಯಗಳನ್ನು ಸೆರೆಹಿಡಿಯಲೂ ಸಹಾಯಕವಾಗಿದೆ.‌ ಈ ಕ್ಯಾಮೆರಾದಲ್ಲಿ ಸೆನ್ಸರ್, ನೇಟಿವ್ ಡ್ಯುಯೆಲ್ ಐಎಸ್ಒ ಮತ್ತು ಎಚ್‌ಡಿಆರ್ ಆಯ್ಕೆಗಳಿದ್ದು, ಕಡಿಮೆ ಬೆಳಕಿನಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ. ಅಡ್ವಾನ್ಸ್‌ ಕಲರ್ ತಂತ್ರಜ್ಞಾನ ಹೊಂದಿರುವುರಿಂದ ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಇರುವವರು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಕಲರ್ ಕರೆಕ್ಷನ್ ಕುರಿತಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ಅವರದೇ ಉತ್ಪನ್ನವಾದ ಡಾವಿನ್ಸಿ ಎಡಿಟಿಂಗ್‌ ಸಾಫ್ಟ್‌ವೇರ್‌ ಬಳಸಿ ಕಲರ್ ದೋಷಗಳನ್ನು ಉತ್ತಮ ಪಡಿಸಬಹುದಾಗಿದೆ. ಅದರೆ, ಕಂಟಿನ್ಯೂ ಆಟೊ ಫೋಕಸ್‌ ವಿಚಾರದಲ್ಲಿ ಈ ಕ್ಯಾಮೆರಾ ಇನ್ನಷ್ಟು ಸುಧಾರಣೆಗೊಳ್ಳಬೇಕಿದೆ. ಆದರೂ ತನ್ನ ಇತರೆ ತಾಂತ್ರಿಕ ಅಂಶಗಳಿಂದ ಎಲ್ಲರ ಗಮನ ಸೆಳೆದಿದೆ. ವಿನ್ಯಾಸ ಮತ್ತು ವೀಕ್ಷಣಾ ಪರದೆ ಇದರ ವಿನ್ಯಾಸವು ಬಹಳ ಸುಂದರವಾಗಿದ್ದು, ಕೈ ಮುಷ್ಟಿಯಲ್ಲಿ ಸರಳವಾಗಿ ಹಿಡಿದುಕೊಳ್ಳಬಹುದಾಗಿದೆ. ಅಗತ್ಯ ಬಟನ್ನುಗಳನ್ನು ಮಾತ್ರ ನೀಡಿ, ನೇರ ಚಿತ್ರ ವೀಕ್ಷಣಾ ಪರದೆಗೆ () ಹೆಚ್ಚು ಸ್ಥಳವನ್ನು ನೀಡಲಾಗಿದೆ. ಹಾಗಾಗಿ ಕ್ಯಾಮೆರಾ ಚಿತ್ರಿಸುತ್ತಿರುವ ದೃಶ್ಯ ವೀಕ್ಷಣೆಯ ಪರದೆ 5ಇಂಚುಗಳ ಎಚ್‌ಡಿ ಸಾಮರ್ಥ್ಯದಿಂದ ಕೂಡಿದೆ. ಇದರಿಂದ ಛಾಯಾಗ್ರಾಹಕರಿಗೆ ದೃಶ್ಯದಲ್ಲಿನ ಫೋಕಸ್ ವಿಚಾರದ ಕುರಿತಾಗಿ ನಿಖರತೆಯನ್ನು ಕಂಡುಕೊಳ್ಳಲು ಸಹಾಯಕವಾಗಿದೆ. ಆದರೆ, ಪರದೆಯನ್ನು ನಮಗೆ ಬೇಕಾದ ರೀತಿ ಟಿಲ್ಟ್ ಅಥವಾ ಫ್ಲಿಪ್ ಮಾಡಲು ಸಾಧ್ಯವಿರದ ಕಾರಣ ಲೋ ಅಥವಾ ಟಾಪ್ ಆಂಗಲ್ ಶಾಟ್ ಸೆರೆಹಿಡಿಯುವಾಗ ದೃಶ್ಯ ಪರದೆಯ ವೀಕ್ಷಣೆ ಕೊಂಚ ಕಷ್ಟವೇ ಸರಿ. ಸೆನ್ಸರ್ ಮತ್ತು ರೆಸಲ್ಯೂಷನ್‌ ಕ್ಯಾಮೆರಾದಲ್ಲಿ ಬಳಸಲಾಗಿರುವ ಸೆನ್ಸರ್ ಗಾತ್ರವು ಫುಲ್ ಸೈಜ್ ಮೈಕ್ರೋ ಫೋರ್ ಥರ್ಡ್ ಸೆನ್ಸಾರ್‌ ಆಗಿದ್ದು, 4096*2160 ರೆಸಲ್ಯೂಷನ್‌ ಸಾಮರ್ಥ್ಯದ ವಿಡಿಯೊವನ್ನು ಪ್ರತಿ ಸೆಕೆಂಡಿಗೆ 60 ಪ್ರೇಮ್‌ಗಳಲ್ಲಿ ಮತ್ತು 12ಬಿಟ್ ರಾ ()ದಲ್ಲಿ ಸೆರೆಹಿಡಿಯುತ್ತದೆ. ಅಲ್ಟ್ರಾ ಎಚ್‌ಡಿ (3840*3160) ಮತ್ತು ಎಚ್‌ಡಿ (1920*1040) ರೆಸಲ್ಯೂಷನ್‌ನಲ್ಲೂ ವಿಡಿಯೊವನ್ನು ಸೆರೆಹಿಡಿಯಬಹುದು. ಎಚ್‌ಡಿ ರೆಸಲ್ಯೂಷನ್‌ನಲ್ಲಿ ಸೆಕೆಂಡಿಗೆ 120 ಪ್ರೇಮ್‌ಗಳಲ್ಲಿಯೂ ಚಿತ್ರಿಸಬಹುದಾಗಿದೆ. ಸೆನ್ಸರ್ ಫುಲ್ ಸೈಜ್‌ ಆಗಿರುವ ಕಾರಣ ಫುಲ್ ಫ್ರೇಮ್ ಕ್ಯಾಮೆರಾದ ಲೆನ್ಸ್‌ಗಳನ್ನು ಬಳಸಿದಾಗ ಕ್ರಾಪ್ ಫ್ಯಾಕ್ಟರ್ ಅನ್ವಯಿಸುವುದಿಲ್ಲ. ಅಂದರೆ, ಫೋಕಸ್ ವೆಲ್ತ್ ಬದಲಾಗಿದೆ 14ಎಂಎಂ ಬಳಸಿದರೆ 14ಎಂಎಂ ಹಾಗೇ ವೈಡ್ ಶ್ರೇಣಿಯಿಂದ ( ) ಕೂಡಿರುತ್ತದೆ. ಲೆನ್ಸ್ ಮತ್ತು ಕ್ಯಾಮೆರಾ ಮೌಂಟ್ ಗುಣಮಟ್ಟದ ವಿಡಿಯೊ ಅಥವಾ ಛಾಯಾಚಿತ್ರವನ್ನು ಸಂಪಾದಿಸಬೇಕೆಂದರೆ ಕ್ಯಾಮೆರಾದ ದೇಹದಷ್ಟೆ, ಲೆನ್ಸ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಈ ಕ್ಯಾಮೆರಾದಲ್ಲಿ ನೀಡಲಾಗಿರುವ ಎಂಎಫ್‌ಟಿ ( ) ಮೌಂಟ್ ನಿಮಗೆ ಪಿಎಲ್, ಸಿ, ಇಎಫ್ ಲೆನ್ಸ್ ಅಡಾಪ್ಟರ್‌ಗಳನ್ನು ಬಳಸಿ ನಿಮ್ಮ ಬಳಿ ಇರುವ ಕ್ಯಾನಾನ್, ನಿಕಾನ್ ಮತ್ತು ಇತರೆ ಲೆನ್ಸ್‌ಗಳನ್ನು ಉಪಯೋಗಿಸುವ ಅವಕಾಶವಿದೆ. ಒಂದು ವೇಳೆ ಎಂಎಫ್‌ಟಿ ಲೆನ್ಸ್‌ಗಳನ್ನು ಬಳಸುವುದಾದರೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾನಸೋನಿಕ್, ಒಲಿಂಪಿಕ್ ಮತ್ತು ಥರ್ಡ್ ಪಾರ್ಟಿ ಲೆನ್ಸ್‌ಗಳನ್ನು ಉಪಯೋಗಿಸಬಹುದು. ರೆಕಾರ್ಡಿಂಗ್ ಮೀಡಿಯಾ ಮತ್ತು ಬ್ಯಾಟರಿ ಕ್ಯಾಮೆರಾ ದೃಶ್ಯ ಹಾಗೂ ಛಾಯಾಚಿತ್ರಗಳನ್ನು ದಾಖಲಿಸಿಕೊಳ್ಳಲು ಎಸ್‌ಡಿ, ಯುಹೆಚ್ಎಸ್ ಮತ್ತು ಸಿ ಫಾಸ್ಟ್ ಕಾರ್ಡುಗಳನ್ನು ಬಳಸುವ ಅವಕಾಶವಿದೆ. ಒಂದು ವೇಳೆ ಹೈ ಸ್ಪೀಡ್ ಪ್ರೇಮ್ ಹಾಗೂ 12ಬಿಟ್ ರಾ ವಿಡಿಯೊ ಫಾರ್ಮೆಟ್‌ನಲ್ಲಿ ಚಿತ್ರಿಕರಿಸುತ್ತಿದ್ದರೆ ಯುಎಸ್‌ಬಿ ಬಳಸಿ ಎಸ್ಎಸ್‌ಡಿ ಹಾರ್ಡ್‌ ಡಿಸ್ಕ್‌ಗೆ ನೇರವಾಗಿ ದಾಖಲಿಸಬಹುದಾಗಿದೆ. ಅಷ್ಟೆ ಅಲ್ಲದೆ ಯುಎಸ್‌ಬಿಯಿಂದ ಕ್ಯಾಮೆರಾ ಬ್ಯಾಟರಿಯನ್ನು ಸಹ ರೀಚಾರ್ಜ್ ಮಾಡಬಹುದು ಅಥವಾ ಡಿಸಿ ಅಡಾಪ್ಟರ್ ಬಳಸಿ ಬ್ಯಾಟರಿ ಸಮಸ್ಯೆ ಇರದೆ ದೀರ್ಘಕಾಲ ಚಿತ್ರೀಕರಣ ಮಾಡಬಹುದು. ಸಿನಿಮಾ ಡಿಎನ್‌ಜಿ ಫಾರ್ಮೆಟ್ (ಸೆಕೆಂಡಿಗೆ 270ಎಂಬಿ), 3:1(ಸೆಕೆಂಡಿಗೆ 128ಎಂಬಿ), 4:1(ಸೆಕೆಂಡಿಗೆ 96ಎಂಬಿ), ಪ್ರೊರೆಸ್ 422, 422ಎಚ್ ಕ್ಯೂ ಮತ್ತು ಕ್ವಿಕ್ ಟೈಂ. ಈ ಎಲ್ಲಾ ವಿಡಿಯೊ ಫಾರ್ಮೆಟ್‌ಗಳು ಸಂಕಲನ ಮತ್ತು ಡಿಐಗೆ(ಕಲರ್ ಕರೆಕ್ಷನ್) ಯೋಗ್ಯವಾದ ಕೋಡ್‌ಗಳಾಗಿವೆ. ಮಲ್ಟಿಮೀಡಿಯಾ ಕ್ಯಾಮೆರಾ ಒಳಗೆ ಇಂಟರ್ನಲ್ ಮೈಕ್ ಮತ್ತು ಸ್ಪೀಕರ್ ಲಭ್ಯವಿದೆ. ವೃತ್ತಿಪರವಾಗಿ ವಿಡಿಯೊ ಚಿತ್ರಿಕರಿಸಲು 3.5ಎಂಎಂ ಸ್ಟಿರಿಯೊ ಹೆಡ್ ಸೆಟ್, ಎಕ್ಸ್‌ಟರ್ನಲ್ ಮೈಕ್ರೊಫೋನ್ ಕನೆಕ್ಟ್ ಮಾಡಲು 3.5ಎಂಎಂ ಮತ್ತು ಮಿನಿ ಎಕ್ಸ್‌ಎಲ್‌ಆರ್‌ ಆಯ್ಕೆಗಳಿದ್ದು, ವಿಡಿಯೊ ಔಟ್‌ಪುಟ್‌ಗಾಗಿ ಫುಲ್‌ಸೈಜ್‌ ಹೆಚ್‌ಡಿಎಂಐ ಆಯ್ಕೆಯೂ ಲಭ್ಯವಿದೆ. ಮತ್ತೊಂದು ವಿಶೇಷವೆಂದರೆ ಕ್ಯಾಮೆರಾದ ಜೊತೆ ಜೊತೆಗೆ ನಿಮಗೆ ವೃತ್ತಿಪರ ಡಾವಿನ್ಸಿ() ಸಂಕಲನ ಮತ್ತು ಕಲರ್ ಕರೆಕ್ಷನ್ ತಂತ್ರಾಂಶವನ್ನು ಉಚಿತವಾಗಿ ನೀಡಲಾಗುತ್ತದೆ. ಈ ತಂತ್ರಾಂಶದ ಬೆಲೆ ₹ 25000. ಈ ಕಾರಣಗಳಿಂದಾಗಿಯೇ ಹವ್ಯಾಸಿ ಸಿನಿಮಾ, ಲೋ ಬಜೆಟ್ ಸಿನಿಮಾ, ಕಿರುಚಿತ್ರ, ಸಾಕ್ಷಚಿತ್ರ ಮತ್ತು ಟ್ರಾವೆಲ್ ವಿಡಿಯೊ ಚಿತ್ರಗಳನ್ನು ನಿರ್ಮಿಸುವ ಆಸಕ್ತಿಯನ್ನು ಹೂಂದಿರುವವರ ಪಾಲಿಗೆ ಇದು ವರದಾನವಾಗಲಿದೆ. ಈಗಾಗಲೇ ಹಲವಾರು ಕ್ಯಾಮೆರಾ ತಜ್ಞರಿಂದ ಉತ್ತಮ ವಿಮರ್ಶೆಯನ್ನು ಪಡೆದಿರುವ ಈ ಕ್ಯಾಮೆರಾ ಹವ್ಯಾಸಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಕ್ಯಾಮೆರಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ:://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.