ಠಾಣೆಗೆ ಎಸ್‌ಎಂಎಸ್‌ ಕಳುಹಿಸಿದರೆ ಮನೆ ರಕ್ಷಣೆ ಚಾಮರಾಜನಗರ: ಮೂರು–ನಾಲ್ಕು ದಿನಗಳ ಕಾಲ ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗುತ್ತಿದ್ದೀರಾ? ಕಳ್ಳ ಕಾಕರಿಂದ ಮನೆಯನ್ನು ರಕ್ಷಿಸುವುದು ಹೇಗಪ್ಪಾ ಎಂಬ ಯೋಚನೆ ನಿಮ್ಮಲ್ಲಿರಬಹುದು. ಒಂದು ಆ್ಯಪ್‌ ಮೂಲಕ ಪೊಲೀಸರಿಗೆ ಸಂದೇಶ ಕಳುಹಿಸಿ ಬಿಡಿ. ನೀವು ಬರುವವರೆಗೆ ಬೀಟ್‌‌ಪೊಲೀಸರು ನಿಮ್ಮ ಮನೆ ಮೇಲೆ ನಿಗಾ ಇಟ್ಟಿರುತ್ತಾರೆ. –ಇಂತಹ ಒಂದು ವಿನೂತನ ವ್ಯವಸ್ಥೆಯನ್ನು ಚಾಮರಾಜನಗರ ಜಿಲ್ಲಾ ಪೊಲೀಸರು ಜಾರಿಗೆ ತರಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಬೀಟ್‌ ವ್ಯವಸ್ಥೆಯನ್ನು ಸುಧಾರಿಸಲು ‘ಸುಭಹು’ ಎಂಬ ಆ್ಯಪ್‌ಗಳ ಗುಚ್ಛವನ್ನು ಅಭಿವೃದ್ಧಿ ಪಡಿಸಿದ್ದು, ಅದರಲ್ಲಿ, ಜನರಿಗೆ ಪೊಲೀಸರೊಂದಿಗೆ ಸಂವಹನ ನಡೆಸಲು ಪ್ರತ್ಯೇಕ ಆ್ಯಪ್‌ ಒಂದನ್ನು ಮೀಸಲಿಟ್ಟಿದೆ. ಈ ಆ್ಯಪ್‌ ಗುಚ್ಛದಲ್ಲಿ ಮೂರು ಆ್ಯಪ್‌ಗಳಿವೆ. ಸುಭಹು ಅಡ್ಮಿನ್‌, ಸುಭಹು ಗಾರ್ಡ್‌ ಮತ್ತು ಸುಭಹು ಸಿಟಿಜನ್‌. ಮೊದಲ ಆ್ಯಪ್‌ ಪೊಲೀಸ್‌ ಉನ್ನತ ಅಧಿಕಾರಿಗಳಿಗಳ ಬಳಕೆಗೆ ಮೀಸಲಾಗಿದ್ದರೆ, ಎರಡನೆಯದ್ದು ಬೀಟ್‌ ನಿರ್ವಹಿಸುತ್ತಿರುವ ಸಿಬ್ಬಂದಿ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಸುಭಹ್‌ ಸಿಟಿಜನ್‌ ಆ್ಯಪ್‌ ಜನರಿಗಾಗಿ ಇರುವಂತಹದ್ದು‌. ಆ್ಯಪ್‌ ಕಾರ್ಯನಿರ್ವಹಣೆ ಹೇಗೆ?: ‘ಸುಭಹು ಸಿಟಿಜನ್‌’ ಎಂಬ ಆ್ಯಪ್‌ ಅನ್ನು ಯಾರೂ ಬೇಕಾದರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಂಡ್ರಾಯ್ಡ್‌ ಮತ್ತು ಐಒಎಸ್‌ ಕಾರ್ಯನಿರ್ವಹಣಾ ತಂತ್ರಾಂಶದ ಮೊಬೈಲ್‌ಗಳಲ್ಲಿ ಲಭ್ಯ. ಹೆಸರು, ವಿಳಾಸ, ದೂರವಾಣಿ ‌ಸೇರಿದಂತೆ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು. ‘ದೀರ್ಘ ಸಮಯದವರೆಗೆ ಮನೆಯಿಂದ ಹೊರಗಡೆ ಹೋಗುವಾಗ ಬೀಟ್‌ ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ, ಯಾರೂ ಅದನ್ನು ಮಾಡುತ್ತಿಲ್ಲ. ಈ ಆ್ಯಪ್‌ ಮೂಲಕ, ಮನೆಯಲ್ಲಿ ಇಷ್ಟು ದಿನ ಇರುವುದಿಲ್ಲ ಎಂದು ಸಂದೇಶ ಕಳುಹಿಸಿದರೆ, ಅದು ಆಯಾ ಠಾಣಾ ವ್ಯಾಪ್ತಿಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಮನಕ್ಕೆ ಬರುತ್ತದೆ. ಅವರು ಅದನ್ನು ಬೀಟ್‌ ಪೊಲೀಸರ ಗಮನಕ್ಕೆ ತರುತ್ತಾರೆ. ಆ ಸಿಬ್ಬಂದಿ ರಾತ್ರಿ ಹೊತ್ತು ಗಸ್ತು ತಿರುಗುವಾಗ ಆ ಮನೆ ಬಳಿ ತಪಾಸಣೆ ನಡೆಸುತ್ತಾರೆ. ಅದನ್ನು ಆ್ಯಪ್‌ನಲ್ಲಿ ನಮೂದಿಸಿದಾಗ, ಮಾಲೀಕರಿಗೆ ಸಂದೇಶ ಹೋಗುತ್ತದೆ. ಪೊಲೀಸರು ಭೇಟಿ ನೀಡಿರುವ ಬಗ್ಗೆಅವರು ಆ್ಯಪ್‌ನಲ್ಲೇಮಾಹಿತಿ ಪಡೆಯಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು. ಎರಡೂವರೆ ವರ್ಷಗಳ ಹಿಂದೆ ಬೀದರ್‌ನಲ್ಲಿ ಮೊದಲ ಬಾರಿಗೆ ಆ್ಯಪ್‌ ಆಧರಿತ ಬೀಟ್‌ ವ್ಯವಸ್ಥೆ ಜಾರಿಗೆ ಬಂದಿತ್ತು. ಶಿವಮೊಗ್ಗದಲ್ಲೂ ಇಂತಹ ವ್ಯವಸ್ಥೆ ಇದೆ. ಆದರೆ, ಜಿಲ್ಲೆಯಲ್ಲಿ ಆರಂಭವಾಗಲಿರುವ ವ್ಯವಸ್ಥೆ ಅತ್ಯಂತ ಸುಧಾರಿತವಾಗಿದ್ದು, ಇದರಿಂದ ಗುಣಮಟ್ಟದ ಸೇವೆ ಸಾಧ್ಯವಾಗಲಿದೆ. ಶೀಘ್ರದಲ್ಲಿ ಈ ಆ್ಯಪ್‌ಗಳಿಗೆ ಚಾಲನೆ ನೀಡಲಾಗುವುದು ಎಂದುಅವರು ವಿವರಿಸಿದರು. ಜನರಿಗಾಗಿ ಇರುವ ಆ್ಯಪ್‌ ರಾಜ್ಯದಲ್ಲಿ ಎಲ್ಲೂ ಇಲ್ಲ. ಈ ಸೇವೆಯನ್ನು ಶೀಘ್ರ ಆರಂಭಿಸಲಾಗುವುದು -ಧರ್ಮೇಂದರ್‌ ಕುಮಾರ್‌ ಮೀನಾ, ಎಸ್‌ಪಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.