ಸುಳ್ಳು ಸುದ್ದಿ ನೀವೇ ಪತ್ತೆ ಹಚ್ಚಿ ಸುಳ್ಳು ಸುದ್ದಿ ನೀವೇ ಪತ್ತೆ ಹಚ್ಚಿ ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿ ತಿಳಿಯುವರು ಬಹಳ ಮಂದಿ ಇದ್ದಾರೆ. ಹೀಗಿರುವಾಗ ಇಲ್ಲಿ ಸುಳ್ಳು ಸುದ್ದಿಗಳೂ ಬೇಗನೆ ಹರಡಿ ಬಿಡುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗುವ ಸುದ್ದಿ ಸತ್ಯವೋ ಸುಳ್ಳೋ ಎಂಬುದನ್ನು ಅರಿಯದೆಯೇ ಅದನ್ನು ನಾವು ಶೇರ್, ಲೈಕ್ ಮಾಡುವ ಮೂಲಕ ಸುಳ್ಳು ಸುದ್ದಿಯನ್ನು ಹರಡಿ ಅನಾಹುತಗಳಿಗೆ ದಾರಿ ಮಾಡಿ ಕೊಡುತ್ತಿದ್ದೇವೆ. ಯಾವುದೇ ಸುದ್ದಿ ಅಥವಾ ಲೇಖನವನ್ನು ಫಾರ್ವರ್ಡ್ ಮಾಡುವ ಮುನ್ನ ಇದು ನಿಜವೋ ಸುಳ್ಳೋ ಎಂದು ಪರಿಶೀಲಿಸಿ, ಸುಳ್ಳು ಸುದ್ದಿ ಆಗಿದ್ದರೆ ಅದನ್ನು ಫಾರ್ವರ್ಡ್ ಮಾಡದಿರುವುದು ಒಳ್ಳೆಯದು. ಪತ್ತೆ ಹಚ್ಚುವುದು ಹೇಗೆ? ಇಂಥ ಸುದ್ದಿಗಳು ನಮ್ಮ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿರುತ್ತವೆ. ಶೀರ್ಷಿಕೆ ಮತ್ತು ವಿಷಯಗಳನ್ನು ಹೇಳುವಾಗ ಆಶ್ಚರ್ಯ, ಪ್ರಶ್ನೆ ಚಿಹ್ನೆಗಳ ಮೂಲಕ ನಮ್ಮ ಗಮನವನ್ನು ಸೆಳೆಯುವಂತೆ ಮಾಡುತ್ತವೆ. ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದರೂ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಅವರು ಹೀಗಂದರು, ಅಲ್ಲಿ ಹೀಗಾಗಿತ್ತು ಎಂದು ಹೇಳುವ ವಾಕ್ಯಗಳೇ ಇಲ್ಲಿ ಜಾಸ್ತಿ ಇರುತ್ತವೆ. ದಿನಾಂಕ ಗಮನಿಸಿ ಯಾವುದೇ ಸುದ್ದಿ ಅಥವಾ ಲೇಖನ ಇರಲಿ ಅದು ಯಾವ ತಾರೀಖಿನಂದು ಪ್ರಕಟವಾಗಿದೆ ಎಂಬುದನ್ನು ಗಮನಿಸಿ. ಹಲವಾರು ಬಾರಿ ಹಳೇ ಲೇಖನಗಳನ್ನು ಅಥವಾ ವಿಡಿಯೊಗಳನ್ನು ಶೇರ್ ಮಾಡಿ ಹೊಸತು ಎಂಬಂತೆ ಬಿಂಬಿಸಲಾಗುತ್ತದೆ. ಕೆಲವೊಂದು ವಿಷಯಗಳು ಆ ಕಾಲಘಟ್ಟದಲ್ಲಿ , ಆ ಸಂದರ್ಭದಲ್ಲಿ ಹೇಳಿದ್ದಾಗಿರಬಹುದು. ಅದನ್ನೇ ಮತ್ತೆ ಹೆಕ್ಕಿ ತಂದು ಅಲ್ಲಿರುವ ಕೆಲವೇ ಕೆಲವು ಭಾಗಗಳನ್ನು ಆಯ್ದು, ವಿವಾದ ಸೃಷ್ಟಿಸುವವರೂ ಇದ್ದಾರೆ. ಇಂಥ ಲೇಖನ, ಸುದ್ದಿ, ವಿಡಿಯೊಗಳನ್ನು ಶೇರ್ ಮಾಡು ಮುನ್ನ ಅದರ ನೈಜತೆಯನ್ನು ಪರಿಶೀಲಿಸಿ ಹೇಳಿಕೆಗಳನ್ನು ಗಮನಿಸಿ ಆ ಸುದ್ದಿ ಅಥವಾ ಲೇಖನದಲ್ಲಿ ನೀಡಿರುವ ಹೇಳಿಕೆಗಳನ್ನು ಗಮನಿಸಿ. ಯಾರು ಎಲ್ಲಿ ಹೇಳಿದರು? ಎಂಬುದರ ಬಗ್ಗೆ ಖಚಿತ ಮಾಹಿತಿ ಇರದೇ ಇದ್ದರೆ, ಅದು ಸತ್ಯ ಎಂದು ನಂಬಲಾಗದು. ಫೋಟೊ ಗಮನಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಿರುಚಿದ ಫೋಟೊಗಳು ಹರಿದಾಡುತ್ತಲೇ ಇರುತ್ತವೆ. ಯಾವುದೇ ಸಂದರ್ಭದಲ್ಲಿನ ಫೋಟೊವನ್ನು ಇನ್ಯಾವುದೋ ವಿಷಯಕ್ಕೆ ಲಿಂಕ್ ಮಾಡಿ ಸುಳ್ಳು ಸುದ್ದಿಗಳು ಉಂಟು ಮಾಡಿದ ಅನಾಹುತಗಳು ಅದೆಷ್ಟೋ ಇವೆ. ಹೀಗಿರುವಾಗ ಯಾವುದೇ ಫೋಟೊವನ್ನು ಕಣ್ಮುಚ್ಚಿ ನಂಬುವಂತಿಲ್ಲ. ಫೋಟೊ ಬಗ್ಗೆ ಏನಾದರೂ ಸಂದೇಹ ಕಂಡು ಬಂದರೆ ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಫೋಟೊ ಸರ್ಚ್ ಮಾಡಿ. ನೀವು ಅಪ್ ಲೋಡ್ ಮಾಡಿ ಹುಡುಕುತ್ತಿರುವ ಫೋಟೊ ಎಲ್ಲಿ ಶೇರ್ ಆಗಿದೆ, ಅದರ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲು ಇದು ಸುಲಭ ವಿಧಾನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.