ಹ್ಯಾಕರ್‌ನಿಂದ ತಪ್ಪಿಸಿಕೊಳ್ಳಿ ಇ ನ್‌ಸ್ಟಾಗ್ರಾಮ್‌ - ಖ್ಯಾತನಾಮರಿಂದ ಹಿಡಿದು, ಪಡ್ಡೆಹುಡುಗರ ತನಕ, ಮೆಟ್ರೊ ನಗರಗಳಿಂದ ಆರಂಭವಾಗಿ, ಪಟ್ಟಣ–ಪಂಚಾಯ್ತಿಗಳ ತನಕ ಎಲ್ಲರಿಗೂ ಆಪ್ತಮಿತ್ರನಂತಾಗಿದೆ. ಫೋಟೊ–ವಿಡಿಯೊ ಹಂಚಿಕೆಯ ಸಾಮಾಜಿಕ ವೇದಿಕೆಯಾಗಿ ಜನಪ್ರಿಯತೆಯನ್ನೂ ಹೆಚ್ಚಿಸಿಕೊಂಡಿದೆ. ಆದರೆ, ಹ್ಯಾಕರ್ ಗಳ ಕಪಿಮುಷ್ಟಿಯಿಂದ ಕಾಯ್ದಿಟ್ಟುಕೊಳ್ಳುವುದೇ ಸವಾಲಾಗಿದೆ. ಹ್ಯಾಕರ್‌ಗಳು ವೈಯಕ್ತಿಕ ಮಾಹಿತಿಗಳ ಡಾರ್ಕ್‌ವೆಬ್ ಡೇಟಾಬೇಸ್ ರಚಿಸಿದ ನಂತರದಿಂದ ಈವರೆಗೆ ಅರವತ್ತು ಲಕ್ಷ ಇನ್‌ಸ್ಟಾಗ್ರಾಮ್‌ ಖಾತೆಗೆ ಕನ್ನ ಹಾಕಲಾಗಿದೆ. ಕಳೆದ ವಾರವಷ್ಟೇ ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿತ್ತು. ನ್ಯೂ ಜರ್ಸಿಯ ಗಾಯಕಿ, ನಟಿ ಸೆಲೆನಾ ಗೊಮೆಜ್ ಖಾತೆಯೂ ಕೆಲ ತಿಂಗಳ ಹಿಂದೆ ಹ್ಯಾಕ್‌ ಆಗಿತ್ತು. ಖ್ಯಾತರೇ ಆಗಿರಲಿ, ಸಾಮಾನ್ಯರೇ ಆಗಿರಲಿ ಖಾತೆಗಳು ಹ್ಯಾಕ್‌ ಆಗಿ, ಅಸಂಬದ್ಧ ಪೋಸ್ಟ್‌ಗಳು ಹೊರಬಿದ್ದಾಗ ಯಾರಿಗಾದರೂ ಮುಜುಗರ ತರುವ ಸಂಗತಿಯೇ. ಆದ್ದರಿಂದ ಬಳಕೆಯ ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಬಗ್ಗೆಯೂ ಅಷ್ಟೇ ಮುತುವರ್ಜಿ ವಹಿಸಬೇಕು. ಹ್ಯಾಕ್ ತಿಳಿಯುವುದು ಹೇಗೆ? ಖಾತೆ ಹ್ಯಾಕ್‌ ಆಗಿದ್ದರ ಮೊದಲ ಸೂಚನೆ ಎಂದರೆ ನಿಮಗೆ ನಿಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಪ್ರೊಫೈಲ್ ಚಿತ್ರಗಳು ಆನಿಮೇಟೆಡ್ ಚಿತ್ರಕ್ಕೆ ಬದಲಾಗಿರುತ್ತವೆ ಅಥವಾ ಖಾತೆ ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಮಾಡದೇ ಇರುವ ಅಸಂಬದ್ಧವಾದ ಕಮೆಂಟ್‌ಗಳು, ಚಿತ್ರಗಳು ನಿಮ್ಮ ಖಾತೆಯಿಂದ ಪೋಸ್ಟ್‌ ಆಗುತ್ತವೆ. ನಿಮಗೇ ತಿಳಿಯದೇ ನೀವು ಏಕಕಾಲದಲ್ಲಿ ಅನೇಕ ಅಪರಿಚಿತ ವ್ಯಕ್ತಿಗಳನ್ನು ಫಾಲೋ ಮಾಡು‌ತ್ತಿರುತ್ತೀರಿ. ಇಮೇಜ್ ಮತ್ತು ವಿಡಿಯೊಗಳು ತನ್ನಿಂದ ತಾನೇ ಲೈಕ್ ಆಗುತ್ತವೆ. ಇದೆಲ್ಲ ಕೆಲವೊಮ್ಮೆ ನಿಮ್ಮನ್ನು ಮುಜುಗರಕ್ಕೆ ಈಡುಮಾಡಬಹುದು. ಹ್ಯಾಕ್‌ ಬಗ್ಗೆ ತಿಳಿದ ಕೂಡಲೇ ಇನ್‌ಸ್ಟಾಗ್ರಾಮ್‌ ಆ ಖಾತೆಗೆ ಪ್ರವೇಶವನ್ನು ನಿಲ್ಲಿಸುತ್ತದೆ. ಕೂಡಲೇ ಪಾಸ್‌ವರ್ಡ್‌ ಮರುಹೊಂದಿಸುವಂತೆ ಖಾತೆದಾರರಿಗೂ ಸಂದೇಶ ಹೋಗುತ್ತದೆ. ಆದರೆ ಕೆಲವೊಮ್ಮೆ ಈ ಯಾವ ಸೂಚನೆಯೂ ಸಿಗದೇ ಇರಬಹುದು ಅಥವಾ ಸೂಚನೆ ಸಿಗುವ ವೇಳೆಗೆ ಬಹಳ ತಡವಾಗಿ ಖಾತೆ ಹಾನಿಗೊಳಗಾಗಿರಲೂಬಹುದು! ಹ್ಯಾಕರ್‌ಗಳು ಖಾತೆಗೆ ಲಿಂಕ್ ಮಾಡಲಾದ ಎಲ್ಲ ಸಂಪರ್ಕ ಮಾಹಿತಿಗಳನ್ನು ಮೊದಲು ಬದಲಿಸುತ್ತಾರೆ. ಇದರಿಂದ ಪ್ರವೇಶವನ್ನು ಮರಳಿ ಪಡೆಯಲು ಖಾತೆದಾರರಿಗೆ ಕಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ತಕ್ಷಣಕ್ಕೆ ನೆರವು ಪಡೆಯಲು ಇನ್‌ಸ್ಟಾಗ್ರಾಮ್ ಯಾವುದೇ ವ್ಯವಸ್ಥೆ ಮಾಡಿಲ್ಲ. ಇದಕ್ಕಾಗಿ ಸ್ವಯಂಚಾಲಿತ ಖಾತೆ ಮರುಪಡೆಯುವಿಕೆ ಪ್ರಕ್ರಿಯೆ ಇದೆಯಾದರೂ, ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಅಂತಹ ಸ್ಥಿತಿಯಲ್ಲಿ ಯಾರಿಗೂ ಅಷ್ಟೊಂದು ತಾಳ್ಮೆ ಇರುವುದಿಲ್ಲ. ಖಾತೆಗಳೇಕೆ ಹ್ಯಾಕ್‌ ಆಗುತ್ತವೆ… ಖಾತೆಗಳು ಏಕೆ ಮತ್ತು ಹೇಗೆ ಹ್ಯಾಕ್‌ ಆಗುತ್ತವೆ ಎನ್ನುವ ಬಗ್ಗೆ ಇನ್‌ಸ್ಟಾಗ್ರಾಮ್‌ಗೂ ಸರಿಯಾಗಿ ತಿಳಿದುಕೊಳ್ಳಲು ಆಗುತ್ತಿಲ್ಲ. ಆದಾಗ್ಯೂ ಬಹುತೇಕ ಪ್ರಕರಣಗಳಲ್ಲಿ ಇದಕ್ಕೆ ಪ್ರಮುಖ ಕಾರಣ ‘ದುರ್ಬಲ ಪಾಸ್‌ವರ್ಡ್’ಗಳು ಹಾಗೂ ಖಾತೆದಾರರ ನಿರ್ಲಕ್ಷ್ಯ. ಹ್ಯಾಕರ್ ದಾಳಿ ಮಾಡಿದಾಗ ಒಂದು ಸೆಂಕೆಂಡಿಗೂ ಕಡಿಮೆ ಸಮಯದಲ್ಲಿ ಈ ತರಹದ ಪಾಸ್‌ವರ್ಡ್‌ ಹೊಂದಿದ ಖಾತೆಗಳು ಅವರ ಕೈಸೇರುತ್ತವೆ. ಯಾವ್ಯಾವ ರೀತಿ ದಾಳಿ ಹ್ಯಾಕರ್‌ಗಳು ಖಾತೆಯನ್ನು ಹ್ಯಾಕ್ ಮಾಡಲು ಬಳಸುವ ಕೆಲವು ಸಾಮಾನ್ಯ ಪ್ರಕಾರಗಳೆಂದರೆ ಕೀ ಲಾಗರ್‌ಗಳು ಅಥವಾ ಸಿಸ್ಟಮ್ ಮಾನಿಟರ್, ಬ್ರೂಸ್ ಫೋರ್ಸ್ ಅಟ್ಯಾಕ್, ಡಿಕ್ಷನರಿ ದಾಳಿಗಳು, ಫಿಶಿಂಗ್ ದಾಳಿಗಳು. ಕೀ ಲಾಗರ್‌ಗಳು ಅಥವಾ ಸಿಸ್ಟಮ್ ಮಾನಿಟರ್ ಆ್ಯಂಡ್ರಾಯಿಡ್‌ ತಂತ್ರಜ್ಞಾನದಲ್ಲಿ ಮತ್ತು ಕಂಪ್ಯೂಟರ್ ನಲ್ಲಿ ಕೀಲಾಗರ್‌ಗಳು ಅತ್ಯಂತ ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತವೆ. ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಹ್ಯಾಕರ್ ತನ್ನದೇ ಆದ ತಂತ್ರಾಂಶದ ಮೂಲಕ ನಮ್ಮ ಎಲ್ಲ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತಾರೆ. ಕೀ ಒತ್ತಿದಾಗ ಮಾನಿಟರ್ ಮೇಲೆ ಮೂಡುವ ಪ್ರತಿಯೊಂದು ಮಾಹಿತಿಯೂ ಹ್ಯಾಕರ್ ಕೈ ಸೇರುತ್ತದೆ. ಬ್ರೂಟ್ ಫೋರ್ಸ್ ಅಟ್ಯಾಕ್ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ಬಹುತೇಕರು ಈ ತರಹದ ದಾಳಿಗೆ ತುತ್ತಾಗಲು ಪ್ರಮುಖ ಕಾರಣವೆಂದರೆ ‘ದುರ್ಬಲ ಪಾಸ್‌ವರ್ಡ್‌ಗಳು. ಸುಲಭವಾಗಿ ಊಹಿಸಬಹುದಾದ ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ಹೊಂದಿರುವವರು ಈ ಪ್ರಕಾರದ ದಾಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಇಲ್ಲಿ ದಾಳಿಕೋರ ತನಗೆ ಪ್ರವೇಶ ಸಿಗುವವರೆಗೆ ನಾನಾ ರೀತಿಯ ಹೆಸರು ಮತ್ತು ಪಾಸ್ವರ್ಡ್‌ಗಳನ್ನು ಊಹಿಸುತ್ತಾನೆ. ನಿರ್ದಿಷ್ಟವಾದ ತಂತ್ರಗಳ ಮೂಲಕ ಇಂತಹ ಖಾತೆಗೆ ಲಾಗಿನ್ ಆಗುತ್ತಾನೆ. ಡಿಕ್ಷನರಿ ದಾಳಿಗಳು ಇದನ್ನು ಸ್ವಲ್ಪ ಸುಧಾರಿತ ದಾಳಿ ಎಂದು ಹೇಳಬಹುದು. ಇಲ್ಲಿ ಹ್ಯಾಕರ್ ನಿಮ್ಮ ಖಾತೆಗೆ ದಾಳಿ ಮಾಡುವ ಮುನ್ನ ಡಿಕ್ಷನರಿಯ ಸಹಾಯ ಪಡೆಯುತ್ತಾನೆ. ಸಾಮಾನ್ಯವಾಗಿ ಬಳಸುವ ಪದಗಳು, ವಾಕ್ಯಗಳು, ಹೆಸರುಗಳನ್ನು ಹೊಂದಿರುವ ಪಾಸ್‌ವರ್ಡ್‌ಗಳು ಅತಿ ಸುಲಭವಾಗಿ ಇಲ್ಲಿ ಕಂಡುಹಿಡಿಯಲಾಗುತ್ತದೆ. ಫಿಶಿಂಗ್ ದಾಳಿಗಳು ಹ್ಯಾಕಿಂಗ್ ವಲಯದಲ್ಲಿ ಸದ್ಯ ಅತ್ಯಂತ ಪ್ರಚಲಿತದಲ್ಲಿರುವ ದಾಳಿ ಇದು. ಇಲ್ಲಿ ದಾಳಿಕೋರ ನಿಮ್ಮ ಖಾತೆಗೆ ಹೋಲುವ ಮತ್ತೊಂದು ನಕಲಿ ಖಾತೆಯನ್ನು ಸೃಷ್ಟಿಸಿ ನಕಲಿ ಇಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾನೆ. ನಿಮಗೆ ಸಂದೇಹ ಬರದ ರೀತಿಯಲ್ಲಿ ಖಾತೆಯ ಭದ್ರತೆ ಮತ್ತು ಹೊಸ ಅಪ್‌ಡೇಟ್‌ ನೆಪವನ್ನು ಮುಂದಿಟ್ಟುಕೊಂಡು ನಿಮಗೆ ಇಮೇಲ್ ಕಳುಹಿಸಲಾಗಿರುತ್ತದೆ.ಇಮೇಲ್‌ನಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನಕಲಿ ಖಾತೆಗೆ ನಿಮ್ಮನ್ನು ಎಳೆದುಕೊಂಡು ಹೋಗಲಾಗುತ್ತದೆ. ಗೌಪ್ಯಮಾಹಿತಿಯನ್ನು ನಿಮಗೆ ಅರಿವಿಲ್ಲದಂತೆಯೇ ನೀವು ಅವರ ಕೈಗೊಪ್ಪಿಸಿಬಿಡುತ್ತಿರಿ. ಈ ತರದಹ ಮೇಲ್‌ಗಳು ಬಂದಾಗ ಅತ್ಯಂತ ಜಾಗರೂಕತೆ ಮತ್ತು ಚಾಣಾಕ್ಷತನದಿಂದ ವ್ಯವಹರಿಸಬೇಕಾಗುತ್ತದೆ. ಸುರಕ್ಷಿತವಾಗಿರಲಿ ನಿಮ್ಮ ಖಾತೆ ಜಟಿಲವಾದ ಪಾಸ್‌ವರ್ಡ್. ಅಂದರೆ ಉದ್ದ ಕಡಿಮೆ ಎಂದರೂ 12 ಪದಗಳಿರಲಿ ಪಾಸ್‌ವರ್ಡ್‌ಗಳಲ್ಲಿ ದೊಡ್ಡಕ್ಷರ/ಸಂಖ್ಯೆಗಳು/ವಿಶೇಷ ಅಕ್ಷರಗಳು ಇರಲಿ 2 ತಿಂಗಳಿಗೆ ಒಮ್ಮೆಯಾದರೆ ಪಾಸ್‌ವರ್ಡ್ ಬದಲಿಸಿ ಒಮ್ಮೆ ಬಳಸಿದ ಪಾಸ್‌ವರ್ಡ್ ಮತ್ತೆ ಬಳಸಬೇಡಿ ಟು ಫ್ಯಾಕ್ಟರ್ ಅಥೆಂಟಿಕೇಷನ್ ಬಳಸಿಕೊಳ್ಳುವುದು. ಆಂಟಿ ಮಾಲ್ವೇರ್ ಟೂಲ್‌ಗಳನ್ನು ಬಳಸಿಕೊಳ್ಳುವುದು. * 2010ರಲ್ಲಿ ಕೆವಿನ್ ಸಿಸ್ಟಾರ್ಮ್ ಮತ್ತು ಮೈಕ್ ಕ್ರೆಂಜರ್ ವಿನ್ಯಾಸಗೊಳಿಸಿದ ಒಂದು ಆ್ಯಪ್‌ ಇದು. ಮೊಬೈಲ್‌ ಅಥವಾ ಕಂಪ್ಯೂಟರ್‌ ಪರದೆಯ ಮೇಲೆ ಏನನ್ನು ಕಂಡರೂ ತಕ್ಷಣಕ್ಕೆ ಪ್ರತ್ಯುತ್ತರ ನೀಡಿ ಫಾರ್ವರ್ಡ್ ಮಾಡುವ ಆತುರ ಆತನದು. ಇದನ್ನು ಸೂಚಿಸುವಂತೆ ಆ್ಯಪ್‌ಗೆ ಇನ್‌ಸ್ಟಾ+ಟೆಲಿಗ್ರಾಂ ಪದಗಳನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ ಎಂದು ಹೆಸರಿಡಲಾಯಿತು. ಈ ಆ್ಯಪ್ ನಿರ್ಮಾಣಕ್ಕೆ ಹಿಡಿದ ಸಮಯ ಕೇವಲ 8 ವಾರಗಳು. ಒಂದು ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಆಕರ್ಷಿತರಾದರು. ಅತ್ಯಂತ ವೇಗವಾಗಿ ಬೆಳೆಯುತ್ತಿರುವುದನ್ನು ಗಮನಿಸಿದ ಅಂತರ್ಜಾಲದ ದೈತ್ಯ ಕಂಪನಿ ಫೇಸ್‌ಬುಕ್‌ ರೂ 100 ಕೋಟಿಗೆ ಖರಿದಿಸಿತು. 2018 ರ ಜೂನ್ ವೇಳೆಗೆ ಇದರ ಬಳಕೆದಾರ ಸಂಖ್ಯೆ 80 ಕೋಟಿ ದಾಟಿದೆ. 2019ರ ಅಂತ್ಯಕ್ಕೆ 11100 ಕೋಟಿಯ ಬಳಕೆದಾರರನ್ನು ಹೊಂದುವ ಸಾಧ್ಯತೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.