ಈ ಸೌಲಭ್ಯ ವ್ಯಸನದಿಂದ ಮುಕ್ತಗೊಳಿಸುತ್ತದೆಯೇ? ಸಾಮಾಜಿಕ ಜಾಲಾತಾಣಗಳ ಹೊರತಾದ ಜೀವನವನ್ನು ಊಹಿಸಿಕೊಳ್ಳಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕರು, ಯೂಟ್ಯೂಬ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲೇ ತಮ್ಮ ಜೀವನದ ಬಹುಪಾಲು ಸಮಯವನ್ನು ಕಳೆಯುತ್ತಿದ್ದಾರೆ.ಕೆಲವರಿಗಂತೂ ಇವುಗಳ ಬಳಕೆ ವ್ಯಸನವಾಗಿರುತ್ತದೆ. ಇದರಿಂದ ಹೊರಬರಲು ದಾರಿಗಳನ್ನು ಹುಡುಕುತ್ತಿರುವಾಗ ಕೆಲವು ಮಾಧ್ಯಮಗಳು ಬಳಕೆ ನಿಯಂತ್ರಣಕ್ಕೆ ನೆರವಾಗುವಂತಹ ಹೊಸ ಸೌಲಭ್ಯಗಳನ್ನು ಅಳವಡಿಸುತ್ತಿವೆ. ವಿಡಿಯೊಗಳನ್ನು ನೋಡುತ್ತಿದ್ದರೆ ಕಾಲ ಕಳೆಯುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ವಿಡಿಯೊಗಳ ಭಂಢಾರವೇ ಆಗಿರುವ ಯೂಟ್ಯೂಬ್‌ ವಿಡಿಯೊಗಳನ್ನು ವೀಕ್ಷಿಸುತ್ತಿದ್ದರೆ ಕಾಲ ತನ್ನ ಕಾಲುಗಳಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವಂತೆ ಭಾಸವಾಗುತ್ತದೆ. ಬಳಕೆದಾರರ ಹಿತದೃಷ್ಟಿಯಿಂದ ಯೂಟ್ಯೂಬ್ ಹೊಸ ಸೌಲಭ್ಯವನ್ನು ಅಳವಡಿಸಿದ್ದು ಇದರಿಂದ ವೀಕ್ಷಿಸಿದ ಮಾಹಿತಿ ದೊರೆಯುತ್ತದೆ. ಇದು ಬಳಕೆ ನಿಯಂತ್ರಣಕ್ಕೆ ನೆರವಾಗಲಿದೆ ಎಂಬುದು ಯೂಟ್ಯೂಬ್ ಅಭಿಪ್ರಾಯ. ಯಾವ ದಿನ ಎಷ್ಟು ಹೊತ್ತು ಯೂಟ್ಯೂಬ್ ವೀಕ್ಷಿಸಿದ್ದೇವೆ ಎಂಬ ಮಾಹಿತಿ ತಿಳಿದುಕೊಳ್ಳುವುದಷ್ಟೇ ಅಲ್ಲದೇ, ಹಿಂದಿನ ದಿನ, ಹಿಂದಿನ ವಾರ ಎಷ್ಟುಹೊತ್ತು ಬಳಸಿದ್ದೆವು ಎಂದು ಹೋಲಿಕೆ ಕೂಡ ಮಾಡಬಹುದು. ಅಲ್ಲದೇ ದಿನದಲ್ಲಿ ಸರಾಸರಿ ಎಷ್ಟುಹೊತ್ತು ವೀಕ್ಷಿಸುತ್ತಿದ್ದೇವೆ ಎಂಬುದು ಕೂಡ ತಿಳಿಯುತ್ತದೆ. ಹೆಚ್ಚು ಹೊತ್ತು ವೀಕ್ಷಿಸುತ್ತಿದ್ದರೆ ವಿರಾಮ ತೆಗೆದುಕೊಳ್ಳುವಂತೆ ಸೂಚನೆ ನೀಡುವ ಸೌಲಭ್ಯವೂ ಸಿಗಲಿದ್ದು, ನಿರ್ದಿಷ್ಟ ಅವಧಿ ಮೀರಿದರೆ ನಿಲ್ಲಿಸುವಂತೆ ಶಬ್ದ ಮಾಡುವಂತಹ ಸೌಲಭ್ಯವನ್ನು ಕಲ್ಪಿಸಿದೆ. ಇನ್ನರ್ ಡಾನ್ ಕೌನ್ಸೆಲಿಂಗ್ ಮತ್ತು ಟ್ರೈನಿಂಗ್ ಸರ್ವಿಸ್‌ನ ಮನಃಶಾಸ್ತ್ರಜ್ಞರಾದ ಕಲಾ ಬಾಲಸುಬ್ರಮಣಿಯನ್ ಅವರ ಪ್ರಕಾರ ಮೂರು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಇದ್ದಾರೆ. ಮೊದಲನೆಯವರು ಎಚ್ಚರಿಕೆಯಿಂದ ಹೆಚ್ಚು ಹೊತ್ತು ಬಳಸುವವರು. ಎಚ್ಚರಿಕೆಯಿಲ್ಲದೇ ಹೆಚ್ಚುಹೊತ್ತು ಬಳಸುವವರು ಮತ್ತು ಬಳಕೆಯನ್ನೇ ವ್ಯಸನ ಮಾಡಿಕೊಂಡಿರುವವರು. ಮೊದಲ ವಿಧಧ ಬಳಕೆದಾರರ ಮೇಲೆ ಈ ಸೌಲಭ್ಯವು ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಹೆಚ್ಚು ಹೊತ್ತು ಬಳಸುತ್ತಿದ್ದರೆ ಇದರಿಂದ ಹೊರಬರಬೇಕು. ಇವುಗಳ ಬಳಕೆ ವ್ಯಸನವಾಗಿದ್ದರೆ ಅಂತಹವರಿಗೆ ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ ಎಂದು ಅವರು ಹೇಳುತ್ತಾರೆ. ಅತಿಯಾದ ಬಳಕೆಯಿಂದ ಆಗುವ ಹಾನಿಗಳನ್ನು ತಪ್ಪಿಸಲು ಗೂಗಲ್‌ನಂತ ಸಂಸ್ಥೆಗಳು ಈ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸಂತೋಷದ ವಿಷಯ. ಸಾಮಾಜಿಕ ಜಾಲತಾಣಗಳು ಯಾವುದೇ ಕಾರಣಕ್ಕೂ ವೈಯಕ್ತಿಕವಾಗಿ ಮತ್ತು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಾರದು.‌‌‌‌‌ಆದರೆ ಬಳಕೆದಾರರು ಈ ಬಗ್ಗೆ ಹೆಚ್ಚು ಎಚ್ಚರವಹಿಸುವ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯ. ಈ ಸೌಲಭ್ಯಗಳು ನಮ್ಮನ್ನು ಎಚ್ಚರಗೊಳಿಸುವುದಕ್ಕೆ ನೆರವಾಗಲಿವೆ. ಈ ಬಗ್ಗೆ ಶಾಲೆ–ಕಾಲೇಜು, ಮನೆ, ಕಚೇರಿ ಎಲ್ಲ ಕಡೆ ಬಳಕೆ ನಿಯಂತ್ರಣ ಅಗತ್ಯ.ಯೂಟ್ಯೂಬ್ ಒಂದೇ ಅಲ್ಲ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಕೂಡ ಬಳಕೆ ನಿಯಂತ್ರಣಕ್ಕೆ ನೆರವಾಗುವ ಸೌಲಭ್ಯವನ್ನು ಒದಗಿಸಿವೆ. ‘ಸಾಮಾಜಿಕ ಮಾಧ್ಯಮಗಳ ಈ ಪ್ರಯತ್ನದಿಂದ ಯಾವುದೇ ಪ್ರಯೋಜನವಿಲ್ಲ. ನಾನು ಕೂಡ ಅದನ್ನು ಬಳಸಿ ನೋಡಿದ್ದೇನೆ. ಹೆಚ್ಚುಹೊತ್ತು ಬಳಸಿದ್ದರೆ ತೋರಿಸುವಂತಹ ಸೂಚನೆಗಳು ಪರಿಣಾಮಕಾರಿಯಾಗಿಲ್ಲ. ಅಲರಾಂ ಸದ್ದಿನ ತೀವ್ರತೆ ಕೂಡ ಕಡಿಮೆ’ ಎಂಬುದುಬೆಂಗಳೂರಿನ ಅಂತರ್ಜಾಲ ಮತ್ತು ಸಮಾಜ ಕೇಂದ್ರದ ಪೊಲೀಸ್ ಮಹಾನಿರ್ದೇಶಕ ಸ್ವರಾಜ್ ಬರೂಹ ಅವರ ಅಭಿಪ್ರಾಯ. ‘ಸಾಮಾಜಿಕ ಮಾಧ್ಯಮಗಳನ್ನು ನಡೆಸುತ್ತಿರುವ ಸಂಸ್ಥೆಗಳ ಕಣ್ಣೊರೆಸುವಂತಹ ತಂತ್ರ ಇದು. ಸಾಮಾಜಿಕ ಜಾಲತಾಣಗಳನ್ನು ಮಿತಿ ಮೀರಿ ಬಳಸದಂತೆ ಕ್ರಮ ಕೈಗೊಂಡಿರುವುದಾಗಿ ತಿಳಿಸುತ್ತಿವೆಯಷ್ಟೇ’ ಎಂದು ಅವರು ಹೇಳುತ್ತಾರೆ. ಇದರ ಬದಲು ಎಂತಹ ವಿಷಯಗಳಿಗಾಗಿ ಎಷ್ಟು ಸಮಯ ವ್ಯಯಿಸುತ್ತಿದ್ದೇವೆ ಎಂಬುದರ ಬಗ್ಗೆ ತಿಳಿಸಿ, ಬಳಕೆದಾರರಿಗೆ ಉಪಯೋಗವಾಗುವ ಸೌಲಭ್ಯಗಳನ್ನು ಕಲ್ಪಿಸುವುದು ಒಳ್ಳೆಯದು ಎಂದು ಅವರು ತಿಳಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.