ಸೃಷ್ಟಿಗೆ ಪ್ರತಿಸೃಷ್ಟಿ… ಸಿಮ್ಯುಲೇಟರ್! ‌ಹಲವರಿಗೆ ಚಿಕ್ಕಂದಿನಲ್ಲಿ ಬಿಸಿನೆಸ್ ಆಟ ಆಡಿದ ನೆನಪು ಇರಬಹುದು. ಆಟಿಕೆ ಕರೆನ್ಸಿ ನೋಟುಗಳಿಂದ ಮಾರಾಟ, ಖರೀದಿ, ಸಾಲ, ವಹಿವಾಟು ಮುಂತಾದ ಆರ್ಥಿಕ ವ್ಯವಹಾರಗಳ ಬಗ್ಗೆ ಆಟದ ಮೂಲಕ ತಿಳಿಯಬಹುದು. ಆಟ ಮುಗಿಯುವ ಹೊತ್ತಿಗೆ ಯಾರಿಗೂ ಲಾಭ-ನಷ್ಟಗಳು ಇರುತ್ತಿರಲಿಲ್ಲ. ಆದರೆ ಬ್ಯಾಂಕ್‌ನಲ್ಲಿ ನಡೆಯುವ ಎಲ್ಲ ವ್ಯವಹಾರಗಳೂ ಆ ಆಟದಲ್ಲಿ ಇರುತ್ತಿದ್ದವು. ಅಂದರೆ ಆಟಕ್ಕೆ ಬಳಸಿದ ಪರಿಕರಗಳು ನಿಜವಾದ ಬ್ಯಾಂಕ್‌ಗೆ ಸಿಮ್ಯುಲೇಟರ್. ಆಟಿಕೆ ಕರೆನ್ಸಿ ನಿಜವಾದ ಕರೆನ್ಸಿಗೆ ಸಿಮ್ಯುಲೇಟರ್. ಒಂದು ಮಾತಿನಲ್ಲಿ ಹೇಳಬೇಕೆಂದರೆ ನಿಜವಾದ ಪ್ರಪಂಚವನ್ನು ಕೃತಕವಾಗಿ ಒಂದು ಕೋಣೆಯಲ್ಲಿ ಸೃಷ್ಟಿಸುವ ಪ್ರಕ್ರಿಯೆಯೇ ಸಿಮ್ಯುಲೇಷನ್. ನೈಜ ಯಂತ್ರಗಳನ್ನು ಹೋಲುವ ಸಾಧನಗಳನ್ನೇ ಸಿಮ್ಯುಲೇಟರ್ಸ್ ಎನ್ನುತ್ತಾರೆ. ಇದರಿಂದ ಹಲವು ಕ್ಷೇತ್ರಗಳಲ್ಲಿ ತಜ್ಞರ ಸಂಖ್ಯೆ ಹೆಚ್ಚಾಗುತ್ತಿದೆ. ನೇರವಾಗಿ ಕಲಿಯುವ ಬದಲು ಕೃತಕ ವಾತಾವರಣದಲ್ಲಿ ಕಲಿತರೆ ಖರ್ಚು ಕಡಿಮೆ, ಸಮಯವೂ ಉಳಿತಾಯ. ಕಲಿಯುವ ಪ್ರಯತ್ನಗಳಲ್ಲಿ ವಿಫಲವಾದರೆ ನಷ್ಟವೂ ಕಡಿಮೆ. ಎಂತಹ ಪರಿಸ್ಥಿತಿಗಳನ್ನೂ ಎದುರಿಸುವ ನೈಪುಣ್ಯ ದೊರೆಯುತ್ತದೆ. ಇಂತಹ ಹಲವು ಉಪಯೋಗಗಳನ್ನು ಒಳಗೊಂಡಿರುವ ಸಿಮ್ಯುಲೇಟರ್ಸ್ ಬಳಕೆ, ಆಟಿಕೆಗಳಿಂದ ಹಿಡಿದು ಅಂತರಿಕ್ಷ ಸಂಶೋಧನೆಗಳವರೆಗೆ ಎಲ್ಲ ಕ್ಷೇತ್ರಗಳಲ್ಲೂ ಸದ್ದು ಮಾಡುತ್ತಿದೆ. ಪೈಲಟ್‌ಗಳಿಗೆ ಭರವಸೆ ವಿಮಾನಗಳಲ್ಲಿ ಪ್ರಯಾಣಿಸುವುದಕ್ಕೇ ಕೆಲವರು ಭಯಪಡುತ್ತಾರೆ. ಇನ್ನು ವಿಮಾನ ಚಲಾಯಿಸಬೇಕೆಂದರೆ, ಭಯ ಇನ್ನೂ ಹೆಚ್ಚಾಗುತ್ತದೆ. ಈ ಜೀವಕ್ಕೇ ಕುತ್ತು ತರಬಹುದು. ಹೀಗಾಗಿ ಪೈಲಟ್ ಶಿಕ್ಷಣ ಪಡೆಯಲು ಖರ್ಚು ಮತ್ತು ಅಪಾಯದ ಬಗ್ಗೆ ಲೆಕ್ಕಾಚಾರ ಹಾಕಬೇಕು. ಆದರೆ ಪೈಲಟ್ ಸಿಮ್ಯುಲೇಟರ್ ಇದ್ದರೆ ಯಾವುದೇ ಅಪಾಯವಿಲ್ಲದೇ ಕಡಿಮೆ ಖರ್ಚಿನಲ್ಲಿ ಶಿಕ್ಷಣ ಪಡೆಯಬಹುದು. ವಿಮಾನದ ಕಾಕ್‌ಪಿಟ್‌ನಲ್ಲಿ ಇರುವಂತಹ ಎಲ್ಲ ಸೌಲಭ್ಯಗಳೂ ಇಲ್ಲಿ ಇರುತ್ತವೆ. ಪೈಲಟ್ ಕುರ್ಚಿ ಎದುರಿಗೆ ದೊಡ್ಡ ಪರದೆಗಳನ್ನು ಅಳವಡಿಸಿ ಮೇಘಗಳ ಮಧ್ಯೆ ವಿಮಾನ ಸಂಚರಿಸುತ್ತಿರುವಂತೆ ಮಾಡಲಾಗುತ್ತದೆ.ವಿಮಾನಗಳಲ್ಲಿ ಇರುವಂತೆಯೇ ಸೌಂಡ್ ಎಫೆಕ್ಟ್, ಟೇಕಾಫ್, ಲ್ಯಾಂಡಿಂಗ್ ಎಫೆಕ್ಟ್‌ ಇರುತ್ತವೆ. ಒಟ್ಟಿನಲ್ಲಿ ನೈಜ ವಿಮಾನವನ್ನು ಚಲಾಯಿಸಿದ ಅನುಭವವನ್ನೇ ಪೈಲಟ್ ಶಿಕ್ಷಣಾರ್ಥಿಗಳಿಗೆ ನೀಡಬಹುದು. ವಿದ್ಯುತ್ ಅವಘಡ, ಎಂಜಿನ್ ವಿಫಲ, ವಿದ್ಯುತ್ ಸಂಚಾರ ಸ್ಥಗಿತ ಇತ್ಯಾದಿ ಸಮಸ್ಯೆಗಳು ಎದುರಾದರೆ ಅವನ್ನು ಸಮರ್ಥವಾಗಿ ಎದುರಿಸುವಂತಹ ಸ್ಥೈರ್ಯ ಪೈಲಟ್‌ಗಳಿಗೆ ಕಲಿಸಬಹುದು. ವೈದ್ಯಕೀಯ ಕ್ಷೇತ್ರಕ್ಕೆ ನೆರವು ವೈದ್ಯರ ತಪ್ಪು, ನಿರ್ಲಕ್ಷ್ಯಗಳಿಂದಾಗಿ ಪ್ರತೀ ವರ್ಷ ಸಾವಿರಾರು ಜನ ಸಾಯುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಇದಕ್ಕೆ ವೈದ್ಯರಿಗೆ ಸೂಕ್ತ ತರಬೇತಿ, ಪ್ರಯೋಗಕ್ಕೆ ಮೃತ ದೇಹಗಳ ಕೊರತೆ ಮುಂತಾದ ಹಲವು ಕಾರಣಗಳಿವೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಸಿಮ್ಯುಲೇಟರ್‌ಗಳೇ ಉತ್ತಮ ಪರಿಹಾರ. ಅಂದರೆ ಮನುಷ್ಯನನ್ನು ಹೋಲುವ ಸಿಮ್ಯುಲೇಟರ್‌ಗಳ ಮೇಲೆ ಪ್ರಯೋಗ ಮಾಡಿ ಪರೀಕ್ಷಿಸಬಹುದು. ಇಲ್ಲಿ ಮನುಷ್ಯನ ದೇಹದಲ್ಲಿರುವಂತೆ ರಕ್ತ ಸಂಚಾರ ಇರುತ್ತದೆ. ಎದೆ ಬಡಿತ ಇರುತ್ತದೆ. ಶ್ವಾಸಕೋಶಗಳು ಕೆಲಸ ಮಾಡುತ್ತಿರುತ್ತವೆ. ಜೀವ ಇಲ್ಲ ಎಂಬುದನ್ನು ಬಿಟ್ಟರೆ ಮನುಷ್ಯ ದೇಹದಲ್ಲಿ ನಡೆಯುವ ಹಲವು ಕ್ರಿಯೆಗಳು ಈ ಸಿಮ್ಯುಲೇಟರ್‌ಗಳಲ್ಲಿ ನಡೆಯುತ್ತವೆ. ಇವನ್ನು ತೆರೆದು ನೋಡಿದರೆ ಮಾನವನ ಇಡೀ ದೇಹದ ರಚನೆ ಕಾಣಿಸುತ್ತದೆ. ಇಂತಹ ಸಿಮ್ಯುಲೇಟರ್‌ಗಳನ್ನು ಬಳಸಿ ವೈದ್ಯರಿಗೆ ಶಿಕ್ಷಣ ನೀಡಿದರೆ ಹಲವು ವಿಧದಲ್ಲಿ ನೆರವಾಗಲಿದೆ. ಸೈನಿಕರಿಗೆ ಅಭಯಹಸ್ತ ಸೇನೆಗೆ ಸೇರಿದರೆ, ಅತ್ಯಾಧುನಿಕ ಆಯುಧಗಳು, ಯಂತ್ರಗಳು, ರಕ್ಷಣಾ ವ್ಯವಸ್ಥೆ ನಿಯಂತ್ರಣ ಇತ್ಯಾದಿ ತಿಳಿದುಕೊಳ್ಳುವುದು ಅನಿವಾರ್ಯ. ಗುರಿ ಕಿಲೊಮೀಟರ್‌ಗಟ್ಟಲೇ ದೂರದಲ್ಲಿ ಇದ್ದರೂ ಭೇಧಿಸಬೇಕು. ಇವೆಲ್ಲಾ ಸಾಕಾರವಾಗಬೇಕೆಂದರೆ ಕಠಿಣ ತರಬೇತಿ ಅಗತ್ಯ. ಲಕ್ಷಗಟ್ಟಲೇ ಸೈನಿಕರಿಗೆ ಇಂತಹ ತರಬೇತಿ ನೀಡುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಶಿಕ್ಷಣಕ್ಕಾಗಿಯೇ ದುಬಾರಿ ಪರಿಕರಗಳನ್ನು ಬಳಸಿದರೆ ವೃಥಾ ಖರ್ಚು. ಕೆಲವೊಮ್ಮೆ ಪರೀಕ್ಷಿಸುವುದಕ್ಕೆ ಸೂಕ್ತ ಸ್ಥಳ ಇಲ್ಲದಿರಬಹುದು. ಇಂತಹ ಹಲವು ಸಮಸ್ಯೆಗಳಿಗೆ ಸಿಮ್ಯುಲೇಟರ್‌ಗಳೇ ಉತ್ತಮ ಪರಿಹಾರ. ಇವುಗಳ ಸಹಾಯದಿಂದ ಒಂದು ಕೋಣೆಯಲ್ಲೇ ಇದ್ದುಕೊಂಡು ಸೇನಾ ತರಬೇತಿ ಪಡೆಯಬಹುದು. ಈಗಾಗಲೇ ಹಲವು ದೇಶಗಳು ತಮ್ಮ ಸೈನಿಕರಿಗೆ ಶಿಕ್ಷಣ ನೀಡಲು ಸಿಮ್ಯುಲೇಟರ್ಸ್ ಬಳಸುತ್ತಿವೆ. ಇಲ್ಲಿ ಶಿಕ್ಷಣ ಪಡೆದ ಸೈನಿಕರನ್ನು ವಾಸ್ತವವಾಗಿ ಪರೀಕ್ಷಿಸಿದಾಗ ಶೇ 99ರಷ್ಟು ಯಶಸ್ವಿಯಾಗಿದ್ದಾರೆ. ಸಂಶೋಧನೆಗಳಿಗೆ ನೆರವು ಅಂತರಿಕ್ಷ ಮತ್ತು ಸಮುದ್ರಗರ್ಭದಲ್ಲಿ ಯಾವುದೇ ತರಬೇಇ ಇಲ್ಲದೆ ನೇರವಾಗಿ ಹೋಗಿ ಸಂಶೋಧನೆ ಮಾಡುವುದು ಅಪಾಯ. ಆದರೆ ಸೀ ಸಿಮ್ಯುಲೇಟರ್, ಸ್ಪೇಸ್ ಸಿಮ್ಯುಲೇಟರ್‌ಗಳಿಂದ ಈ ಅಪಾಯ ತಪ್ಪಿಸಬಹುದು. ಸಾಮಾನ್ಯವಾಗಿ ಗಗನಯಾನಿಗಳಿಗೆ ಈ ರೀತಿಯ ಸಿಮ್ಯುಲೇಟರ್‌ಗಳನ್ನು ಬಳಸಿಯೇ ಶಿಕ್ಷಣ ನೀಡುತ್ತಾರೆ. ಸಮುದ್ರ ಗರ್ಭಗಳನ್ನು ಸಂಶೋಧನೆ ಮಾಡುವವರಿಗೂ ಇದೇ ರೀತಿ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಅಲ್ಲಿಯ ವಾತಾವರಣ ಅರಿಯಬಹುದು. ಈಚೆಗಷ್ಟೇ ಅಮೆರಿಕ ಮಂಗಳ ಗ್ರಹದ ಸಿಮ್ಯುಲೇಟರ್ ತಯಾರಿಸಿದೆ. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸಿಮ್ಯುಲೇಟರ್ ಬಳಸಿ ನೈಪುಣ್ಯ ಸಾಧಿಸಲು ಅವಕಾಶವಿದೆ. ಆದರೆ ವಾಸ್ತವಕ್ಕೆ ಎಷ್ಟೇ ಹತ್ತಿರವಾಗಿದ್ದರೂ ಸಮುದ್ರದಲ್ಲಿ ಈಜಿದರೆ ಸಿಗುವ ಅನುಭವ ಸಣ್ಣ ಕಾಲುವೆಯಲ್ಲಿ ಈಜಿದಾಗ ಸಿಗುತ್ತದೆಯೇ ಎಂಬುದು ಸಿಮ್ಯುಲೇಟರ್‌ಗಳ ಬಗೆಗೆ ಕೆಲವರು ವ್ಯಕ್ತಪಡಿಸುತ್ತಿರುವ ವಿಮರ್ಶೆ. ಆದರೆ ಇದರ ಅನುಕೂಲತೆ ಮುಂದೆ ವಿಮರ್ಶೆಗಳು ಮೂಲೆಗೆ ಸರಿಯುತ್ತವೆ ಎಂಬ ವಾದವೂ ಇದೆ. ಎಲ್ಲ ಕ್ಷೇತ್ರಗಳಲ್ಲಿನ ಸಿಮ್ಯುಲೇಟರ್‌ಗಳು ವಾಸ್ತವ ಪರಿಸ್ಥಿತಿಗೆ ಶೇ 90ಕ್ಕೂ ಹೆಚ್ಚು ಹತ್ತಿರ ಇವೆ ಎಂದು ಹೇಳಲಾಗುತ್ತಿದೆ. ಇದರಿಂದ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ನೈಪುಣ್ಯ, ಸಾಮರ್ಥ್ಯ ಹೆಚ್ಚಾಗುತ್ತಿದೆ. ಖರ್ಚು ಮತ್ತು ಅಪಾಯಗಳು ಕಡಿಮೆಯಾಗುತ್ತಿವೆ. ಹೆಸರಿಗೆ ಕೃತಕ ವ್ಯವಸ್ಥೆ ಆದರೂ ವಾಸ್ತವಕ್ಕೆ ಹತ್ತಿರವಾಗುವಂತೆ ಮಾಡುತ್ತಿವೆ. ಎಲ್ಲ ಕ್ಷೇತ್ರಗಳ ಬಗ್ಗೆ ಅಪಾಯರಹಿತವಾಗಿ ಮತ್ತು ಸುಲಭವಾಗಿ ತಿಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.