ಸಂಶೋಧನೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಅಗತ್ಯ: ಸಂಜಯ್ ನಾಯಕ್ ಬೆಂಗಳೂರು: ‘ಭಾರತವು ಜಾಗತಿಕ ಮಟ್ಟದಲ್ಲಿ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿ ಹೈಟೆಕ್ ಉತ್ಪಾದನಾ ರಾಷ್ಟ್ರವಾಗಬೇಕಿದೆ. ಆತ್ಮನಿರ್ಭರತೆ ಮತ್ತು ತಂತ್ರಜ್ಞಾನದ ಸಾರ್ವಭೌಮತೆಯ ಮೂಲಕ ನಾವು ಎಲ್ಲ ರೀತಿಯಲ್ಲೂ ಸಜ್ಜಾಗಬೇಕಿದೆ’ ಎಂದು ತೇಜಸ್ ನೆಟ್‌ವರ್ಕ್ಸ್ ಸಂಸ್ಥಾಪಕ ಸಂಜಯ್ ನಾಯಕ್ ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಗುರುವಾರ ‘ಭಾರತದಲ್ಲಿ ಟೆಲಿಕಾಂ ಉತ್ಪನ್ನಗಳ ನಿರ್ಮಾಣ’ ಕುರಿತು ಮಾತನಾಡಿ, ಭಾರತದ ಡಿಜಿಟಲ್ ಆರ್ಥಿಕತೆಗೆ ವೇಗ ನೀಡಲು ಮತ್ತು ಯಶಸ್ಸು ಸಾಧಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ಹೂಡಿಕೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ‘ಭಾರತ ಸರಕಾರದ ಆಸ್ಥೆಯಿಂದಾಗಿ ಈಗಾಗಲೇ ಆಧಾರ್, ಯುಪಿಐ, ನೇರ ನಗದು ವರ್ಗಾವಣೆ, ಡಿಜಿಲಾಕರ್, ಅಗ್ಗದ 4ಜಿ-5ಜಿ ಶುಲ್ಕಗಳು, ಭಾರತ್‌ನೆಟ್, ವೈರ್‌ಲೆಸ್ ತಂತ್ರಜ್ಞಾನ ಮತ್ತು ಆ್ಯಪ್‌ಗಳ ಬಳಕೆಯು ಜನಸಾಮಾನ್ಯರನ್ನೂ ತಲುಪುತ್ತಿದೆ. ಇಷ್ಟು ದೊಡ್ಡ ಜನಸಂಖ್ಯೆಯಿರುವ ದೇಶದಲ್ಲಿ ನಡೆದ ಈ ತಂತ್ರಜ್ಞಾನದ ಕ್ರಾಂತಿಯಿಂದ ಈಗ ಜಗತ್ತೇ ನಮ್ಮತ್ತ ನೋಡುತ್ತಿದೆ. ನಾವು ಈ ನಿಟ್ಟಿನಲ್ಲಿ ಆರಂಭಿಕ ಯಶಸ್ಸು ಸಾಧಿಸಿದ್ದೇವೆ. ನವೋದ್ಯಮಗಳು ಸಾಕಷ್ಟು ಹುಟ್ಟಿಕೊಂಡಿವೆ, ಅವಕಾಶಗಳೂ ಸಾಕಷ್ಟಿವೆ. ಭಾರತದ ಟೆಲಿಕಾಂ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಲು ಭಾರತಕ್ಕೆ ಅಪಾರ ಅವಕಾಶಗಳಿವೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.