ಯುವಜೋಡಿಗಳ ಸಪ್ತಪದಿಗೆ ವರ್ಚುವಲ್ ಡೇಟಿಂಗ್‌ ಮುನ್ನುಡಿ ವರ್ಚುವಲ್ ಡೇಟಿಂಗ್‌ನಲ್ಲಿ ಅಪಾಯ ಕಡಿಮೆ, ಅವಕಾಶ ಹೆಚ್ಚು. ಬೇಡವೆನಿಸಿದಲ್ಲಿ ಬಿಡಿಸಿಕೊಳ್ಳುವುದೂ ಸುಲಭ ಎನ್ನುತ್ತಾರೆ ಭಾರತೀಯ ಮಿಲೇನಿಯಲ್‌ ತಲೆಮಾರಿನವರು. ಕೋವಿಡ್‌ ಕಾಲದಲ್ಲಿ ಆರೋಗ್ಯ, ಆಹಾರ, ಪ್ರಯಾಣ, ಉದ್ಯೋಗ, ಉದ್ಯಮ… ಎಲ್ಲವೂ ಬದಲಾಗಿದೆ. ಮನೆಯಲ್ಲೇ ಕೆಲಸ, ಮನೆಯಲ್ಲೇ ಮೀಟಿಂಗ್‌, ಹೊಸ ಸಂಗಾತಿಗಳ ಹುಡುಕಾಟವೂ ಮನೆಯಲ್ಲೇ ಆಗಲಿ ಬಿಡಿ ಎನ್ನುತ್ತಿದ್ದಾರೆ ಮಿಲೇನಿಯಲ್‌ಗಳು. ನಿಜ, ಇದೀಗ ಬದಲಾವಣೆಯ ಬಿಸಿಗಾಳಿಗೆ ಒಡ್ಡಿಕೊಂಡಿದ್ದು ‘ಪ್ರೇಮ–ಪುರಾಣ’. ಯುವ ಜೋಡಿಗಳು ತಮ್ಮ ‘ಪ್ರಣಯ ಗೀತೆ’ಗೆ ‘ವರ್ಚುವಲ್ ಡೇಟಿಂಗ್’ ಎನ್ನುವ ಹೊಸ ದಾರಿ ಕಂಡುಕೊಂಡಿದ್ದಾರೆ. ವಯಸ್ಸು ಕಳೆಯುತ್ತದೆಯೇ ಹೊರತು, ಬರುವುದಿಲ್ಲ. ಕೋವಿಡ್‌ ಕಾರಣ ಮುಂದಿಟ್ಟುಕೊಂಡು ಎಷ್ಟು ದಿನ ಅಂತ ಸಂಗಾತಿ ಆಯ್ಕೆಯನ್ನು ಮುಂದೂಡುವುದು? ಅದಕ್ಕೆಂದೇ ಇಂದಿನ ಯುವ ಜೋಡಿಗಳು ‘ವರ್ಚುವಲ್ ಡೇಟಿಂಗ್’ ಎನ್ನುವ ಹೊಸ ಸಾಧ್ಯತೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಡೇಟಿಂಗ್‌ ವೆಬ್‌ಸೈಟ್‌/ ಆ್ಯಪ್‌ಗಳ ಮೂಲಕ ಅನುಬಂಧ ಹೊಂದಿಸಿಕೊಳ್ಳುವ ಪರಂಪರೆ ಆರಂಭವಾಗಿ ದಶಕಗಳೇ ಕಳೆದಿವೆ. ಆನ್‌ಲೈನ್‌ ಪರಿಚಯದ ನಂತರ ವರ–ಕನ್ಯೆ ತಂತಮ್ಮ ಅನುಕೂಲಕ್ಕೆ ತಕ್ಕಂತೆ ನೇರ ಭೇಟಿಯಾಗಿ ಆಸಕ್ತಿ, ಅಭಿರುಚಿ ಹಂಚಿಕೊಳ್ಳುತ್ತಿದ್ದರು. ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೀಗೇ ಇಬ್ಬರ ನಡುವೆ ಒಂದಷ್ಟು ಆತ್ಮೀಯತೆ ಬೆಳೆದ ಮೇಲೆ ಸಂಬಂಧ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ ಭೂಮಂಡಲದ ಯಾವೊಂದು ಗಡಿಯನ್ನೂ ಬಿಡದಂತೆ ಕೋವಿಡ್‌ ಚಾಚಿಕೊಂಡಿರುವ ಈ ಹೊತ್ತಿನಲ್ಲಿ ಜೋಡಿಗಳು ಡೇಟಿಂಗ್‌ ಎಂದು ಪರಸ್ಪರ ಭೇಟಿಯಾಗುವ ಅಪಾಯವನ್ನು ಎಳೆದುಕೊಳ್ಳಲು ಸಿದ್ಧರಿಲ್ಲ. ಇದರಿಂದಾಗಿ ಆನ್‌ಲೈನ್‌ನಲ್ಲಿಯೇ ಸಂಬಂಧವನ್ನು ಗಟ್ಟಿಗೊಳಿಸುವ, ಬಾಳ ಸಾಂಗತ್ಯಕ್ಕೆ ಮುನ್ನುಡಿ ಬರೆಯುವ ಪ್ರಯತ್ನದಲ್ಲಿದ್ದಾರೆ. ಆನ್‌ಲೈನ್ ಡೇಟಿಂಗ್ ಆ್ಯಪ್‌– ಓಕೆಕ್ಯುಪಿಡ್‌ ನಡೆಸಿದ ಸಮೀಕ್ಷೆಯೊಂದು ವಿವಾಹ ಆಕಾಂಕ್ಷಿಗಳು ಸಂಗಾತಿಗಳನ್ನು ಕಂಡುಕೊಳ್ಳುವ ಪ್ರವೃತ್ತಿಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ. ಭಾವನಾತ್ಮಕ ಬದ್ಧತೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 85ರಷ್ಟು ಬಳಕೆದಾರರು ದೈಹಿಕ ಸ್ಪರ್ಶಕ್ಕಿಂತಲೂ ಮೊದಲು, ಭಾವನಾತ್ಮಕ ಬಂಧವನ್ನು, ಬದ್ಧತೆಯನ್ನು ಸ್ಥಾಪಿಸುವುದು ಬಹಳ ಮುಖ್ಯ ಎಂದು ನಂಬಿದ್ದಾರೆ. ಹೀಗಾಗಿ ಮುಖತಃ ಭೇಟಿಗಿಂತಲೂ ಮೊದಲು ಆನ್‌ಲೈನ್‌ ಮೂಲಕ ಪರಸ್ಪರರ ಆಸಕ್ತಿ–ಅಭಿರುಚಿ–ಅನಿಸಿಕೆಗಳನ್ನು ಹಂಚಿಕೊಳ್ಳುವುದು ಉತ್ತಮ ಆಯ್ಕೆ ಎಂದಿದ್ದಾರೆ. 2020ರ ಮೊದಲಾರ್ಧದಲ್ಲಿ, ಡೇಟಿಂಗ್‌ ಆ್ಯಪ್‌ಗಳಲ್ಲಿ ಪರಿಚಯವಾದ ಸಂಗಾತಿಯನ್ನು ವೈಯಕ್ತಿಕವಾಗಿ ಭೇಟಿಯಾಗುವ ಆಸಕ್ತಿ ಹೊಂದಿದವರು ಹೆಚ್ಚಿದ್ದರೆ, ಇತ್ತೀಚಿನ ಕೆಲ ತಿಂಗಳುಗಳಲ್ಲಿ ಶೇ 91ರಷ್ಟು ಬಳಕೆದಾರರ ಮೊದಲ ಆಯ್ಕೆ ವರ್ಚುವಲ್ ಡೇಟಿಂಗ್‌. ‘ವರ್ಚುವಲ್ ಡೇಟಿಂಗ್‌ನಲ್ಲಿ ಏಕತಾನತೆ ಕಾಡಬಹುದು. ಆದರೆ ಇದು ಹೆಚ್ಚು ಸುರಕ್ಷಿತ ಮತ್ತು ಭಾವನಾತ್ಮಕ ಬೆಸುಗೆಗೆ ಹೆಚ್ಚು ಪೂರಕ’ ಎನ್ನುವ ಕಾಲೇಜು ಉಪನ್ಯಾಸಕಿ ವಂದನಾ ರೆಡ್ಡಿ, ‘ವರ್ಚುವಲ್ ಡೇಟಿಂಗ್ ಮೂಲಕ ತಮ್ಮ ಸಂಗಾತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಇದರಲ್ಲಿ ಮಾನಸಿಕ ಒತ್ತಡ ಕಡಿಮೆ ಇದೆ’ ಎನ್ನುತ್ತಾರೆ. ವರ್ಚುವಲ್ ಡೇಟಿಂಗ್: ಕೆಲವು ಟಿಪ್ಸ್‌ ಪ್ರೊಫೈಲ್: ನಿಮ್ಮ ಪ್ರೊಫೈಲ್ ಅನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ರೂಪಿಸಿ. ನಿಮ್ಮ ಉದ್ಯೋಗ, ಕೆಲಸ ಮಾಡುವ ಸಂಸ್ಥೆ, ಕುಟುಂಬ ಎಲ್ಲೂ ಮುಚ್ಚುಮರೆ ಬೇಡ. ಫೋಟೊ: ಫೋಟೊಗಳಿಗೆ ಫಿಲ್ಟರ್‌ಗಳನ್ನು ಬಳಸಬೇಡಿ. ನಿಮ್ಮ ಸಂಗಾತಿ ನಿಮ್ಮನ್ನು ನೀವಿರುವ ಹಾಗೆಯೇ ನೋಡಿ ಒಪ್ಪಿಕೊಳ್ಳುವುದು ಬಹಳ ಮುಖ್ಯ. ಸಂವಹನ: ಒಂದೇ ಬಾರಿ ಹತ್ತಾರು ಜನರೊಂದಿಗೆ ಸಂವಹನ ಬೇಡ. ಡೇಟಿಂಗ್‌ ಆ್ಯಪ್‌ಗಳು ನಿಮ್ಮನ್ನು ಈ ಜಾಲದಲ್ಲಿ ಸಿಲುಕಿಸಬಹುದು. ನಿಮ್ಮ ಆಸಕ್ತಿ–ಅಭಿರುಚಿಗೆ ಹೊಂದುವ ಒಬ್ಬರೊಂದಿಗೆ ಮಾತ್ರ ಚಾಟಿಂಗ್‌ ಆರಂಭಿಸಿ. ಸೂಕ್ಷ್ಮ ಅವಲೋಕನ: ಸಂಗಾತಿಯ ಧ್ವನಿ, ಮುಖಚರ್ಯೆ, ದೈಹಿಕ ಭಾಷೆ, ಸ್ವರ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ. ಅವರು ಗಂಭೀರವಾಗಿ ಕುಟುಂಬ ಜೀವನದ ಆಸಕ್ತಿ ಹೊಂದಿದ್ದಾರಾ ಅಥವಾ ಇಲ್ಲವೇ ಎನ್ನುವುದನ್ನು ಆರಂಭದಲ್ಲೇ ಗುರುತಿಸಿ. ವಿಡಿಯೊ ಚಾಟಿಂಗ್‌: ಈ ವೇಳೆ ನಿಮ್ಮ ದಿರಿಸು, ನಿಮ್ಮ ಕೋಣೆ, ಅಲ್ಲಿನ ಪರಿಸರದ ಬಗ್ಗೆ ಎಚ್ಚರಿಕೆ ಇರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.