: ಕೋವಿಡ್-19 ಪತ್ತೆಗೆ ವಿಶೇಷ ತಂತ್ರಜ್ಞಾನ ಪರಿಚಯಿಸಿದ ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ಪೈಕಿ ಜನಪ್ರಿಯ ಸಂಸ್ಥೆ ಫೇಸ್‌ಬುಕ್, ಕೋವಿಡ್-19 ಲಕ್ಷಣ ಪತ್ತೆಹಚ್ಚಲು ಮತ್ತು ಚಿಕಿತ್ಸೆಯ ಅಗತ್ಯತೆ ತಿಳಿಯಲು ನೆರವಾಗುವಂತೆ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಹೊಸ ಸಂಶೋಧನೆ ಕೈಗೊಂಡಿದೆ. ಈ ಕುರಿತು ಫೇಸ್‌ಬುಕ್ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದ್ದು, ಫೇಸ್‌ಬುಕ್‌ನ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್ ‘(ಎಐ) ತಂಡ ಈ ಸಂಶೋಧನೆ ಕೈಗೊಂಡಿದೆ. ರೋಗ ಲಕ್ಷಣ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯನ್ನು ತ್ವರಿತವಾಗಿ ನೀಡಬೇಕು ಹಾಗೂ ಕೋವಿಡ್-19 ಹರಡುವಿಕೆಯನ್ನು ತಡೆಯಬೇಕು ಎನ್ನುವ ಉದ್ದೇಶದಿಂದ ಫೇಸ್‌ಬುಕ್ ಎಐ ತಂಡ ಎರಡು ಮಾದರಿಗಳನ್ನು ಅಭಿವೃದ್ಧಿಪಡಿಸಿದೆ. ಒಂದು ಮಾದರಿ, ವ್ಯಕ್ತಿಯ ಎದೆಭಾಗದ ಎಕ್ಸ್-ರೇ ಮತ್ತು ಇನ್ನೊಂದು ಸರಣಿ ಎಕ್ಸ್‌ರೇ ಮೂಲಕ ಕೋವಿಡ್ ಬಾಧಿತ ರೋಗಿಯ ಸ್ಥಿತಿಯನ್ನು ತಿಳಿಸಲಿದೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಅದನ್ನು ತಿಳಿಯಲು ಅನುಕೂಲವಾಗಲಿದೆ. ಮತ್ತೊಂದು ಮಾದರಿಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿದ್ದಲ್ಲಿ, ಅದನ್ನು ತಿಳಿಸುತ್ತದೆ. ಹೊಸ ಸಂಶೋಧನೆ, ಕೋವಿಡ್ ರೋಗ ಪತ್ತೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಅಲ್ಲದೆ, ‘ನ್ಯೂಯಾರ್ಕ್ ಯೂನಿವರ್ಸಿಟಿ ಲಾಂಗೂನ್ ಹೆಲ್ತ್ ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಯುನಿಟ್ ಮತ್ತು ರೇಡಿಯಾಲಜಿ ವಿಭಾಗ’ ಸಹಯೋಗದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿದೆ. ಫೇಸ್‌ಬುಕ್ ಅಭಿವೃದ್ಧಿಪಡಿಸಿರುವ ಎಐ ಆಧಾರಿತ ಮಾದರಿ, ರೋಗಿಗೆ ಚಿಕಿತ್ಸೆ ಮತ್ತು ತೀವ್ರ ನಿಗಾ ಅಗತ್ಯವಿದ್ದಲ್ಲಿ ಅದನ್ನು ನಾಲ್ಕು ದಿನ ಮುಂಚಿತವಾಗಿ ಪತ್ತೆಹಚ್ಚುವಲ್ಲಿ ಸಹಕರಿಸಿದ್ದು, ಮನುಷ್ಯರಿಗಿಂತ ಹೆಚ್ಚು ನಿಖರ ಮತ್ತು ಸ್ಪಷ್ಟವಾಗಿ ಅಂದಾಜಿಸುವಲ್ಲಿ ಸಫಲವಾಗಿದೆ. ಇದನ್ನೂ ಓದಿ:‘ನ್ಯೂ ನಾರ್ಮಲ್‌’ಗೆ ತಂತ್ರಜ್ಞಾನದ ಕೊಡುಗೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.