ಯುಪಿಐ ಅಡಿ ನಿತ್ಯ ₹100 ಕೋಟಿ ವ್ಯವಹಾರ ನಿರೀಕ್ಷೆ- ದಿಲೀಪ್ ಆಬ್ಸೆ ಬೆಂಗಳೂರು: ‘ದೇಶದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಅಡಿ ವಹಿವಾಟು ನಡೆಸುವವರ ಪ್ರಮಾಣ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ನಿತ್ಯ ₹100 ಕೋಟಿ ಮೊತ್ತದ ವಹಿವಾಟು ನಡೆಯಲಿದೆ’ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಪ್ ಆಬ್ಸೆೆ ತಿಳಿಸಿದರು. ತಂತ್ರಜ್ಞಾನ ಮೇಳದಲ್ಲಿ ಶುಕ್ರವಾರ ‘ಯುಪಿಐ ಮುನ್ನೋಟ- ಹಣಕಾಸು ವಹಿವಾಟಿಗೆ ಮುಕ್ತ ವೇದಿಕೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು. ‘ಈಗ ಎರಡು ವಾರಗಳಲ್ಲಿ ನಡೆಯುತ್ತಿರುವ ವಹಿವಾಟು ಮುಂದಿನ ಎರಡು ಮೂರು ವರ್ಷಗಳಲ್ಲಿ ಒಂದೇ ದಿನದಲ್ಲಿ ನಡೆಯುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಅಕ್ಟೋಬರ್‌ನಲ್ಲಿ ಯುಪಿಐ ಅಡಿ ₹200 ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ನಡೆದಿದೆ. ಆರಂಭಿಕ ದಿನಗಳಿಗೆ ಹೋಲಿಸಿದರೆ, ಹತ್ತುಪಟ್ಟು ಪ್ರಗತಿ ಕಂಡುಬಂದಿದೆ’ ಎಂದರು. ‘ಪಾವತಿ ವ್ಯವಸ್ಥೆೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಪೂರಕ ಸೌಲಭ್ಯಗಳನ್ನು ಮುಕ್ತಗೊಳಿ ಸುವ ಚಿಂತನೆಯೂ ಇದೆ’ ಎಂದರು. ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳಿಗೆ ಸವಾಲಾಗಿರುವ ಹಣಕಾಸಿನ ನಿರ್ವಹಣೆಗೆ ಯುಪಿಐ ಸೂಕ್ತ ಪರಿಹಾರ’ ಎಂದು ಸಂವಾದದಲ್ಲಿ ಪಾಲ್ಗೊಂಡ ವಿವಿಧ ತಜ್ಞರು ಅಭಿಪ್ರಾಯಪಟ್ಟರು. ‘ದೇಶದಲ್ಲಿ ಶೇ 16ರಷ್ಟು ಕೈಗಾರಿಕೆಗಳು ಮಾತ್ರ ಸಾಂಪ್ರದಾಯಿಕ ವಹಿವಾಟಿನಲ್ಲಿ ಆಸಕ್ತಿ ಹೊಂದಿವೆ. ಉಳಿದ ಎಲ್ಲ ಕೈಗಾರಿಕೆಗಳು ಆನ್‌ಲೈನ್‌ ವಹಿವಾಟು ನಡೆಸುತ್ತಿವೆ. ಸಾಮಾನ್ಯರೂ ಸರಾಗವಾಗಿ ವ್ಯವಹಾರ ನಡೆಸಲು ಸಾಧ್ಯವಾಗುವಂತೆ ನಿಯಮಗಳನ್ನು ಸರಳಗೊಳಿಸಿದರೆ, ಈ ಯುಪಿಐ ಸೌಲಭ್ಯ ಮತ್ತಷ್ಟು ಜನಪ್ರಿಯಗೊಳ್ಳಲಿದೆ’ ಎಂದು ತಜ್ಞರು ಹೇಳಿದರು. ತಜ್ಞರಾದ ಪ್ರಮೋದ್ ವರ್ಮ, ಅರುಂಧತಿ ಭಟ್ಟಾಚಾರ್ಯ, ಸ್ಮಿತಾ ಭಗತ್, ರಾಹುಲ್ ಮಲ್ಲಿಕ್ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.