ಸ್ಥಾನದ ದುರ್ಬಳಕೆ: ಗೂಗಲ್ ವಿರುದ್ಧ ತನಿಖೆಗೆ ಸಿಸಿಐ ಆದೇಶ ನವದೆಹಲಿ: ಗೂಗಲ್ ಕಂಪನಿಯು ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ದೂರಿನ ಕುರಿತು ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶಿಸಿದೆ. ‘ಒಳ್ಳೆಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರವನ್ನು ಕಡೆಗಣಿಸಲು ಆಗದು. ಜನರಿಗೆ ಯಾವ ಮಾಹಿತಿ ತಲುಪಬೇಕು ಎಂಬುದನ್ನು ತೀರ್ಮಾನಿಸುವ ಡಿಜಿಟಲ್ ಕಂಪನಿಗಳು ತಮ್ಮ ಪ್ರಬಲ ಸ್ಥಾನವನ್ನು ಆದಾಯದ ನ್ಯಾಯಬದ್ಧ ಹಂಚಿಕೆಯ ಪ್ರಕ್ರಿಯೆಯನ್ನು ಹಾಳುಗೆಡವದಂತೆ ನೋಡಿಕೊಳ್ಳಬೇಕು’ ಎಂದು ಸಿಸಿಐ ಹೇಳಿದೆ. ಗೂಗಲ್ ಕಂಪನಿಯು ಸ್ಪರ್ಧಾ ಕಾಯ್ದೆಯ ಸೆಕ್ಷನ್‌ 4ನ್ನು ಉಲ್ಲಂಘಿಸಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಅದು ಈಚೆಗೆ ನೀಡಿರುವ ಆದೇಶದಲ್ಲಿ ಹೇಳಿದೆ. ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘ (ಡಿಎನ್‌ಪಿಎ) ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಸಿಸಿಐ ನೀಡಿರುವ ತನಿಖೆ ಆದೇಶದಲ್ಲಿ ಈ ಮಾತು ಹೇಳಲಾಗಿದೆ. ಡಿಎನ್‌ಪಿಎ ಒಂದು ಖಾಸಗಿ ಕಂಪನಿ. ಸುದ್ದಿ ವೆಬ್‌ಸೈಟ್‌ಗಳಿಗೆ ಬಹುಪಾಲು ಓದುಗರು ಬರುವುದು ಸರ್ಚ್‌ ಎಂಜಿನ್‌ಗಳ ಮೂಲಕ. ಗೂಗಲ್‌ ತನ್ನನ್ನು ತಾನು ಅತ್ಯಂತ ಪ್ರಬಲ ಸರ್ಚ್‌ ಎಂಜಿನ್‌ ಎಂದು ಹೇಳಿಕೊಳ್ಳುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸುದ್ದಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವವರ ಪೈಕಿ ಶೇಕಡ 50ಕ್ಕಿಂತ ಹೆಚ್ಚಿನವರು ಗೂಗಲ್‌ ಮೂಲಕ ಬರುತ್ತಾರೆ. ಆದರೆ, ಸರ್ಚ್‌ ವೇಳೆ ಯಾವ ಸುದ್ದಿ ವೆಬ್‌ಸೈಟ್‌ ಕಾಣಿಸಿಕೊಳ್ಳಬೇಕು ಎಂಬುದನ್ನು ಪ್ರಬಲ ಕಂಪನಿಯಾಗಿರುವ ಗೂಗಲ್ ತೀರ್ಮಾನಿಸುತ್ತಿದೆ. ಡಿಜಿಟಲ್ ಜಾಹೀರಾತು ಪ್ರಪಂಚದಲ್ಲಿ ಗೂಗಲ್‌ಗೆ ದೊಡ್ಡ ಪಾಲು ಇದೆ. ಪ್ರಕಾಶಕರಿಗೆ ಅವರು ಸೃಷ್ಟಿಸುವ ವಸ್ತು–ವಿಷಯಗಳಿಗೆ ಎಷ್ಟು ಸಂಭಾವನೆ ಪಾವತಿಸಬೇಕು ಎಂಬುದನ್ನು, ಯಾವ ನಿಯಮಗಳಿಗೆ ಅನುಗುಣವಾಗಿ ಸಂಭಾವನೆ ಪಾವತಿಯಾಗಬೇಕು ಎಂಬುದನ್ನು ಗೂಗಲ್ ಕಂಪನಿಯೇ ಏಕಪಕ್ಷೀಯವಾಗಿ ತೀರ್ಮಾನಿಸುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ‘ಸುದ್ದಿ ಪ್ರಕಟಿಸುವವರ ವೆಬ್‌ಸೈಟ್‌ಗಳಿಗೆ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಆಗುವಲ್ಲಿ ಗೂಗಲ್ ಪಾತ್ರವೂ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಜಾಹೀರಾತು ಆದಾಯದಲ್ಲಿ ನ್ಯಾಯಬದ್ಧ ಹಂಚಿಕೆಯನ್ನು ನಿರಾಕರಿಸಲಾಗುತ್ತಿದೆ ಎಂದು ದೂರುದಾರರು ಹೇಳಿರುವುದರ ಬಗ್ಗೆ ವಿಸ್ತೃತ ತನಿಖೆಗೆ ಅಗತ್ಯವಿದೆ’ ಎಂದು ಸಿಸಿಐ ಆದೇಶದಲ್ಲಿ ಹೇಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.