ಮೇ ತಿಂಗಳಲ್ಲಿ 5ಜಿ ಹರಾಜು? ನವದೆಹಲಿ (ಪಿಟಿಐ): ತರಂಗಾಂತರ ಮಾರಾಟ ಪ್ರಕ್ರಿಯೆಯ ನಿಯಮಗಳಿಗೆಸಂಬಂಧಿಸಿದ ಶಿಫಾರಸುಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮಾರ್ಚ್‌ ಒಳಗೆ ಸಲ್ಲಿಸಿದರೆ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯು ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. 5ಜಿ ತರಂಗಾಂತರ ಹರಾಜಿಗೆ ಸಂಬಂಧಿಸಿದ ಶಿಫಾರಸುಗಳನ್ನು ಮಾರ್ಚ್‌ಗೆ ಮುನ್ನ ಸಲ್ಲಿಸುವುದಾಗಿ ಟ್ರಾಯ್ ಹೇಳಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಈಚೆಗೆ ತಿಳಿಸಿದ್ದರು. ಹರಾಜನ್ನು ಆದಷ್ಟು ಬೇಗ ನಡೆಸುವುದಕ್ಕೆ ಅಗತ್ಯವಿರುವ ಇತರ ಪ್ರಕ್ರಿಯೆಗಳಿಗೆ ದೂರಸಂಪರ್ಕ ಇಲಾಖೆಯು ಸಜ್ಜಾಗುತ್ತಿದೆ ಎಂದೂ ಅವರು ಹೇಳಿದ್ದರು. ‘ಟ್ರಾಯ್‌ ಶಿಫಾರಸು ಮಾರ್ಚ್‌ ಒಳಗೆ ಬರಲಿದೆ. ಅದಾದ ನಂತರ, ನಮಗೆ ಶಿಫಾರಸುಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಒಂದು ತಿಂಗಳು ಬೇಕು’ ಎಂದು ದೂರಸಂಪರ್ಕ ಕಾರ್ಯದರ್ಶಿ ಕೆ. ರಾಜಾರಾಮನ್ ತಿಳಿಸಿದ್ದಾರೆ. ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 4ಜಿ ಸೇವೆಗಳಲ್ಲಿ ಸಿಗುವುದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಡೌನ್‌ಲೋಡ್‌ ವೇಗ 5ಜಿ ಸೇವೆಗಳಲ್ಲಿ ಲಭ್ಯವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.