‘ಆಶಾ’ದಲ್ಲಿ ಆಟಿಸಂ ನಿವಾರಣೆಗೆ ಒತ್ತು... ‘ಆಶಾ’ (: ) ವಿಶೇಷ ಮಕ್ಕಳ ಶಾಲೆ ಬೆಂಗಳೂರಿನ ಬಸವೇಶ್ವರ ನಗರದ ಎಚ್‌.ಬಿ.ಸಿ.ಎಸ್‌. 3ನೇ ಸ್ಟೇಜ್ 4ನೇ ಬ್ಲಾಕ್‌ನಲ್ಲಿರುವ ಕಿರ್ಲೋಸ್ಕರ್‌ ಕಾಲೊನಿಯ ಪ್ಲಾಟ್‌ ನಂ: ಎಲ್–76/ಎರಲ್ಲಿ ನೆಲೆಗೊಂಡಿದೆ. ಆಟಿಸಂ ಪೀಡಿತ ಮಕ್ಕಳ ಶಿಕ್ಷಣ ಮತ್ತು ತರಬೇತಿಗೆ ಆದ್ಯತೆ ನೀಡಿರುವ ಈ ಶಾಲೆಯನ್ನು 1995ರಲ್ಲಿ ಜಯಶ್ರೀ ರಮೇಶ್ ಅವರು ಸ್ಥಾಪಿಸಿದ್ದಾರೆ. ‘ಆಶಾ’ ಮೂರು ಮಕ್ಕಳು ಹಾಗೂ ಇಬ್ಬರು ಸ್ವಯಂಸೇವಕ ಬೋಧಕರೊಂದಿಗೆ ಕಾರ್ಯನಿರ್ವಹಣೆ ಆರಂಭಿಸಿತ್ತು. ಪ್ರಸ್ತುತ ಇಲ್ಲಿ 60 ಮಕ್ಕಳು ಹಾಗೂ 45 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಆಟಿಸಂನಿಂದ ಮಕ್ಕಳಿಗೆ ಆದ್ಯತೆ ನೀಡಿದ್ದು, 3 ವರ್ಷ ಮೇಲ್ಪಟ್ಟ 16 ವರ್ಷದೊಳಗಿನ ಮಕ್ಕಳಿಗೆ ಇಲ್ಲಿ ಪ್ರವೇಶ ನೀಡಲಾಗುತ್ತದೆ. ವಿಶೇಷ ಮಕ್ಕಳು ಮಾತ್ರವಲ್ಲದೇ ಆ ಮಕ್ಕಳ ಕುಟುಂಬದ ಸದಸ್ಯರಿಗೂ ವಿಶೇಷ ಮಗುವಿನ ಪಾಲನೆ– ಪೋಷಣೆ ಕುರಿತು ಮಾರ್ಗದರ್ಶನ ನೀಡುವುದು ‘ಆಶಾ’ ವಿಶೇಷತೆಯಾಗಿದೆ. ಸ್ಥಾಪನೆ ಆದಾಗಿನಿಂದ ಇಲ್ಲಿಯವರೆಗೆ ಸುಮಾರು 500ಕ್ಕೂ ಹೆಚ್ಚು ವಿಶೇಷ ಮಕ್ಕಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ‘ಸಮಗ್ರ ಮಾರ್ಗದರ್ಶನ’ ಕಾರ್ಯಕ್ರಮದಡಿ ತರಬೇತಿ ನೀಡಿದೆ. ಹಲವು ಕಾರ್ಯಾಗಾರ, ಆಪ್ತಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಇಲ್ಲಿ ‘ಮಗು ಕೇಂದ್ರಿತ’ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ಪ್ರತಿ ಮಗುವಿಗೂ ವಿಶೇಷ ಗಮನ ನೀಡಲಾಗುತ್ತದೆ. ಹೀಗಾಗಿಯೇ ಮಕ್ಕಳ ಪ್ರವೇಶವನ್ನು 60ಕ್ಕೆ ಸೀಮಿತಗೊಳಿಸಿದ್ದು, 45 ಜನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಈಚೆಗೆ ಆಟಿಸಂನಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಅದರಲ್ಲೂ ಬಾಲಕಿಯರಲ್ಲಿ ಈ ಪ್ರಮಾಣ ಅಧಿಕವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಸರಾಸರಿ ಪ್ರತಿ 68 ಮಕ್ಕಳಲ್ಲಿ ಒಂದು ಮಗು ಆಟಿಸಂ ಸಮಸ್ಯೆಗೆ ಒಳಪಟ್ಟಿರುತ್ತದೆ. ಹೀಗಾಗಿ ‘ಆಟಿಸಂ’ನತ್ತ ಶಿಕ್ಷಣ ತಜ್ಞರು, ಪೋಷಕರು, ಸೇವ ಸಂಸ್ಥೆಗಳು ಗಮನಹರಿಸುವುದು ಅಗತ್ಯವಾಗಿದೆ ಎಂಬುದು ‘ಆಶಾ’ ಸಂಸ್ಥಾಪಕಿ ಜಯಶ್ರೀ ಅವರ ಅಭಿಪ್ರಾಯ. ‘ಆಶಾ’ ಸುಸಜ್ಜಿತ ತರಗತಿಗಳು, ಸಭಾಗೃಹ, ಆಪ್ತಸಮಾಲೋಚನಾ ಕೊಠಡಿ, ಗಣಕಯಂತ್ರ ಕೊಠಡಿ, ಚಿಕಿತ್ಸಾ ಕೊಠಡಿ, ಒಳಾಂಗಣ ಕ್ರೀಡಾ ವ್ಯವಸ್ಥೆ, ಆಟದ ಮೈದಾನ, ಸಂಪನ್ಮೂಲ ಕೊಠಡಿ, ಉತ್ಕೃಷ್ಟ ಗ್ರಂಥಾಲಯ, ಶೌಚಾಲಯ, ಕುಡಿಯುವ ನೀರು, ಸಿಸಿಟಿವಿ ಭದ್ರತೆ... ಇತ್ಯಾದಿ ಸೌಕರ್ಯಗಳನ್ನು ಒಳಗೊಂಡಿದೆ. ಇಲ್ಲಿ ಅನುಭವಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ತಂತ್ರಜ್ಞಾನ ಆಧರಿತ ಕಲಿಕೆ ಇರುವುದರಿಂದ ಈ ಶಾಲೆ ವಿಶೇಷ ಮಕ್ಕಳ ವಿಶ್ರಾಂತಿ ತಾಣವಾಗಿರದೇ, ಕ್ರಿಯಾತ್ಮಕ ಕಲಿಕೆ ಹಾಗೂ ಸೃಜನಾತ್ಮಕ ಅಭಿವ್ಯಕ್ತಿಯ ಕೇಂದ್ರವಾಗಿದೆ. ಮಕ್ಕಳ ಅಗತ್ಯಕ್ಕೆ ತಕ್ಕಂತೆ ಇಲ್ಲಿ ಸ್ಪೀಚ್ ಥೆರಪಿ, ಫಿಜಿಯೋ ಥೆರಪಿ, ಮ್ಯೂಸಿಕ್ ಥೆರಪಿ, ಡ್ಯಾನ್ಸ್ ಥೆರಪಿ, ಬಾಲ್‌ ಥೆರಪಿ, ಪ್ಲೇ ಥೆರಪಿ, ಯೋಗ ಥೆರಪಿ, ಆರ್ಟ್‌ ಆ್ಯಂಡ್ ಕ್ರಾಫ್ಟ್‌ ಥೆರಪಿ... ಹೀಗೆ ಬಹುವಿಧ ಚಿಕಿತ್ಸೆಯನ್ನು ತಜ್ಞರಿಂದ ಕೊಡಿಸಲಾಗುತ್ತದೆ. ವಿಶೇಷ ಪಠ್ಯಕ್ರಮ ಅಧ್ಯಯನದ ಜತೆ ಮಕ್ಕಳಿಗೆ ಅಗತ್ಯವಾಗಿರುವ ಜೀವನ ಕೌಶಲಗಳನ್ನು ರೂಢಿಸಲಾಗುತ್ತದೆ. ಶಾಲೆಯಲ್ಲಿ ಮಕ್ಕಳ ಸಾಮಾಜೀಕರಣ, ನೈತಿಕ ವಿಕಾಸ ಹಾಗೂ ವೃತ್ತಿ ಕೌಶಲ ವಿಕಸನಕ್ಕೆ ಒತ್ತು ನೀಡಿದ್ದು, ವೃತ್ತಿ ತರಬೇತಿ ಹಂತದಲ್ಲಿ ಕಾಗದದ ಕೈಚೀಲ, ಲಕೋಟೆ, ಕರಕುಶಲ ವಸ್ತುಗಳು, ಸೆರಾಮಿಕ್ ಆಭರಣ, ಮೇಣದಬತ್ತಿ, ಮಣ್ಣಿನ ಮಾದರಿ, ದೀಪಗಳ ತಯಾರಿಕೆ, ಚಿತ್ರಕಲೆ, ಪೇಂಟಿಂಗ್, ಕೈತೋಟ ನಿರ್ವಹಣೆ ಹಾಗೂ ಕಂಪ್ಯೂಟರ್ ತರಬೇತಿ ಒದಗಿಸಲಾಗುತ್ತದೆ. ಏ. 2107ರಲ್ಲಿ ‘ಆಶಾ’ ಸಹಯೋಗದಲ್ಲಿ ಆಯೋಜಿಸಿದ್ದ ಆಟಿಸಂ ಜಾಗೃತಿ ಕುರಿತ ಚಿತ್ರ ಮೇಳ ಗಿನ್ನಿಸ್‌ ದಾಖಲೆಗೆ ಪರಿಗಣಿತವಾಗಿತ್ತು. 2017ರಲ್ಲಿ ‘ಬ್ರೇನ್‌ ಫೀಡ್’ ನಿಯತಕಾಲಿಕೆ ನೀಡುವ ಅತ್ಯುತ್ತಮ ವಿಶೇಷ ಶಾಲೆ ಪ್ರಶಸ್ತಿಗೆ ‘ಆಶಾ’ ಭಾಜನವಾಗಿದೆ.‘ಎಜುಕೇಶನ್ ವರ್ಲ್ಡ್ ಸ್ಕೂಲ್ ರ‍್ಯಾಂಕಿಗ್’ ಪ್ರಕಾರ ‘ಆಶಾ’ ಭಾರತದಲ್ಲಿ 5ನೇ ಅತ್ಯುತ್ತಮ ಹಾಗೂ ರಾಜ್ಯದಲ್ಲಿ 2ನೇ ಅತ್ಯುತ್ತಮ ವಿಶೇಷ ಮಕ್ಕಳ ಡೇ ಕೇರ್ ಸೆಂಟರ್ ಎಂದು ಗುರುತಿಸಿಕೊಂಡಿದೆ. 2009ರಲ್ಲಿ ಶಾಲೆಗೆ ‘ರೋಟರಿ ಅತ್ಯುತ್ತಮ ಶಾಲೆ’, 2004ರಲ್ಲಿ ನ್ಯಾಶನಲ್ ಟ್ರಸ್ಟ್‌ನ ಅತ್ಯುತ್ತಮ ಡೇ ಕೇರ್ ಸೆಂಟರ್ ಪ್ರಶಸ್ತಿಗಳು ದೊರೆತಿವೆ.ಶಾಲೆಯಲ್ಲಿ ವಿವಿಧ ರಾಷ್ಟ್ರೀಯ ಮತ್ತು ಧಾರ್ಮಿಕ ಉತ್ಸವಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ವರ್ಷ ಕ್ರೀಡೆ ಮತ್ತು ಸಾಂಸ್ಕೃತಿಕ ಮೇಳ, ವಾರ್ಷಿಕೋತ್ಸವ, ಬೇಸಿಗೆ ಶಿಬಿರ ಆಯೋಜಿಸಲಾಗುತ್ತದೆ. ಶಾಲೆಯಲ್ಲಿ ಪ್ರವೇಶ, ನೆರವು, ಮತ್ತಿತರ ಮಾಹಿತಿಗೆ ದೂರವಾಣಿ:080–23225279 ಅಥವಾ 23230357 ಸಂಪರ್ಕಿಸಬಹುದು. * –ಆಶಾ ಶಾಲೆಯಲ್ಲಿ ಯೋಗಾಭ್ಯಾಸ ನಿರತ ಮಕ್ಕಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.