‘16 ನಂಬರ್ ಶಾಲೆ’ಯಲ್ಲಿ ಹೈಟೆಕ್ ವಿಜ್ಞಾನ ಕೇಂದ್ರ ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿಹೊಸೂರು ವೃತ್ತವಿದೆ. ಅದನ್ನುತಲುಪುವುದಕ್ಕೂ ಮೊದಲೇಎಡ ತಿರುವು ಸಿಗುತ್ತದೆ. ಆ ದಾರಿಯಲ್ಲಿಸಾಗಿದರೆ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡವೊಂದು ಕಣ್ಣಿಗೆ ಬೀಳುತ್ತದೆ.ಅದು‘16 ನಂಬರ್ ಶಾಲೆ’ ಎಂದೇ ಚಿರಪರಿಚಿತ.ಎಲ್ಲಸರ್ಕಾರಿ ಶಾಲೆಯಂತೆಯೇ, ಇದೂ ಹಾಗೆ ಇದೆ. ಆದರೆ, ವಿಶೇಷ ಕುತೂಹಲವಿರುವುದು, ಆ ಶಾಲೆಯ ಮುಂಭಾಗವಿರುವ ಮೂರು ಅಂತಸ್ತಿನ ದೊಡ್ಡ ಕಟ್ಟಡದ ಬಗ್ಗೆ. 'ಇಂಥ ಸರ್ಕಾರಿ ಶಾಲೆ ಮುಂದೆ, ಈ ಹೈಟೆಕ್ ಕಟ್ಟಡ ಯಾಕೆ ಕಟ್ಟಿದ್ದಾರೆ' ಎಂದು ಯೋಚಿಸುತ್ತಿರುವಾಗಲೇ, ಕಟ್ಟಡದ ಮೇಲಿದ್ದ 'ಅನಸೂಯ ಮೆಳ್ಳಿಗೇರಿ ವಿಜ್ಞಾನ ತಂತ್ರಜ್ಞಾನ ಕೇಂದ್ರ' ಎಂಬ ಬೋರ್ಡ್ ಕಣ್ಣಿಗೆ ಬಿತ್ತು. ಕಟ್ಟಡದ ಒಳಗೆ ಪ್ರವೇಶಿಸಿದಾಗ, ಅದೇ 16 ನಂಬರ್ ಶಾಲೆ ಮಕ್ಕಳು ಗುಂಪು ಗುಂಪಾಗಿ ನಿಂತು ವಿವಿಧ ವಿಜ್ಞಾನ ಪ್ರಯೋಗಗಳಲ್ಲಿ ತೊಡಗಿದ್ದರು. ವಿಜ್ಞಾನ ಶಿಕ್ಷಕರು ಪ್ರಯೋಗದ ವಿವರಣೆ ನೀಡುತ್ತಿದ್ದರು. ಸಾಮಾನ್ಯವಾಗಿಪ್ರತಿಷ್ಠಿತಖಾಸಗಿ ಶಾಲೆಗಳಲ್ಲಷ್ಟೇ ಇರುವ ಇಂಥ ಸೌಲಭ್ಯಗಳು, ಈ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಕ್ಕಿದಾದರೂ ಹೇಗೆ? ಎಂದು ಕುತೂಹಲದ ಪ್ರಶ್ನೆ ಮೂಡಿತು. ಈ ಬಗ್ಗೆ ಅಲ್ಲಿದ್ದ ಸಿಬ್ಬಂದಿ ವಿಚಾರಿಸಿದಾಗ, ಹೈಟೆಕ್ ವಿಜ್ಞಾನ – ತಂತ್ರಜ್ಞಾನ ಕೇಂದ್ರದ ಹಿಂದಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಕೊಂಡಿತು. ಹಿರಿಯ ವಿದ್ಯಾರ್ಥಿಯ ಕೊಡುಗೆ: ವಿಜ್ಞಾನ – ತಂತ್ರಜ್ಞಾನ ಕೇಂದ್ರ 30 ವರ್ಷಗಳ ಹಿಂದೆಈಶಾಲೆಯಲ್ಲಿ ಕಲಿತು,ಈಗ ದೊಡ್ಡ ಉದ್ಯಮಿಯಾಗಿರುವ ಅರವಿಂದ ಮೆಳ್ಳಿಗೇರಿಎಂಬ ಹಿರಿಯ ವಿದ್ಯಾರ್ಥಿಯ ಕೊಡುಗೆ. ಮೆಕಾನಿಕಲ್ಎಂಜಿನಿಯರಿಂಗ್ ವಿಷಯದಲ್ಲಿ ಎಂ.ಟೆಕ್ ಮಾಡಿರುವ ಅವರು ಏಕಸ್ ಹೆಸರಿನ ಉದ್ಯಮ ಸಂಸ್ಥೆಯನ್ನು ಆರಂಭಿಸಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು, ಋಣ ತೀರಿಸಬೇಕು ಎಂದು ಮನಸ್ಸು ಮಾಡಿದರು. ತಾವು ಕಲಿತ ಶಾಲೆಯಷ್ಟೇ ಅಲ್ಲ, ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲದಿರುವುದನ್ನು ಮನಗಂಡರು. ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನದ ವಿಷಯಗಳನ್ನು ಪ್ರಾಯೋಗಿಕ ಅನುಭವ ಇಲ್ಲದೆ ಕಲಿತ ನೆನಪುಗಳು ಅವರನ್ನು ಕಾಡಿದವು. ತನ್ನೂರಿನ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಬೇಕು, ಶ್ರೇಷ್ಠ ವಿಜ್ಞಾನಿಗಳಾಗಬೇಕೆಂದರೆ ಈಗಿರುವ ವ್ಯವಸ್ಥೆಯಿಂದ ಅದು ಅಸಾಧ್ಯ ಎಂದು ತೀರ್ಮಾನಿಸಿದರು. ನಂತರ ತಾಯಿ ಅನಸೂಯ ಮೆಳ್ಳಿಗೇರಿ ಅವರ ಹೆಸರಿನಲ್ಲಿ ₹ 7 ಕೋಟಿ ವೆಚ್ಚದಲ್ಲಿ ವಿಜ್ಞಾನ– ತಂತ್ರಜ್ಞಾನ ಕೇಂದ್ರ ನಿರ್ಮಿಸಿದರು. ಪ್ರಾಯೋಗಿಕ ಪಾಠಗಳು ಮೂಲಕ ವಿಜ್ಞಾನದ ವಿಷಯಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಡುವುದು, ಡಿಜಿಟಲ್ ಉಪಕರಣಗಳ ಮೂಲಕ ಬೋಧನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಈ ಕೇಂದ್ರದಉದ್ದೇಶವಾಗಿದೆ. ಏನೇನಿದೆ ಆ ಕೇಂದ್ರದಲ್ಲಿ: ಭೌತ– ರಸಾಯನ ವಿಜ್ಞಾನ, ಗಣಿತ, ಜೀವ ವಿಜ್ಞಾನ ಪ್ರಯೋಗಾಲಯಗಳು ಇಲ್ಲಿವೆ. ಅಷ್ಟೇ ಏಕೆ ರೊಬೊಟಿಕ್ಸ್ ಕಲಿಕೆಗೆ ಪೂರಕವಾದ ಸಾಧನಗಳಿವೆ. ಈ ಕೇಂದ್ರ ಕೇವಲ ಒಂದು ಸರ್ಕಾರಿ ಶಾಲೆಗೆ ಸೀಮಿತವಾಗಿಲ್ಲ. ತಾಲ್ಲೂಕಿನಲ್ಲಿರುವ ಹತ್ತಾರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ಕೇಂದ್ರಕ್ಕೆ ಬಂದು ಪ್ರಾಯೋಗಿಕ ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ 20 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು, ಪ್ರತಿ ದಿನ ಇಲ್ಲಿಗೆ ಪ್ರತಿ ದಿನ ಬಂದು ಹೋಗುವುದು ಕಷ್ಟ ಎಂಬುದನ್ನು ಅರಿತ ಅರವಿಂದ, ವಿದ್ಯಾರ್ಥಿಗಳು ಶಾಲೆಯಿಂದ ಬಂದು ಹೋಗಲು ಬಸ್ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಈ ಕೇಂದ್ರದಲ್ಲಿ ಸುಮಾರು 100 ಗಂಟೆಗಳ ತರಬೇತಿ ನೀಡಲಾಗುತ್ತದೆ. ಪಠ್ಯದಾಚೆಗಿನ ವಿಷಯದ ಕಲಿಕೆ: ಪಠ್ಯಕ್ರಮದ ವಿಷಯಗಳ ಬೋಧನೆಗೆ ಆದ್ಯತೆ ಆದರೂ ಅದರಾಚೆಗಿನ ವಿಷಯಗಳನ್ನೂ ಕಲಿಸಲಾಗುತ್ತದೆ. ಅಲ್ಲದೆ ಬೇಸಿಗೆ ಮತ್ತು ಚಳಿಗಾಲದ ಶಿಬಿರಗಳನ್ನು ಆಯೋಜಿಸಿ, ಆಸಕ್ತರಿಗೆಲ್ಲ ಅವಕಾಶ ಕಲ್ಪಿಸಲಾಗುತ್ತದೆ. ‘ಪಠ್ಯದ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಸುವ ಪ್ರಯತ್ನ ನಮ್ಮದು. ವಿದ್ಯಾರ್ಥಿ ಎಷ್ಟರ ಮಟ್ಟಿಗೆ ಕಲಿತಿದ್ದಾನೆ ಎಂಬುದನ್ನು ಮೌಲ್ಯಮಾಪನ ಸಹ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರಿಗೂ ವರದನಾವಾಗಿದೆ. ಅವರೂ ಬಂದು ಈ ಕೇಂದ್ರದ ಪ್ರಯೋಜನ ಪಡೆಯುತ್ತಿದ್ದಾರೆ’ಎನ್ನುತ್ತಾರೆ ಕೇಂದ್ರದ ಶಿಕ್ಷಕ ಸುರೇಶ. ಏಕಸ್ ಪ್ರತಿಷ್ಠಾನ ಈ ವಿಜ್ಞಾನ ಕೇಂದ್ರದ ನಿರ್ಮಾಣದ ಜತೆಗೆ ಅದರ ನಿರ್ವಹಣೆಗೆ ತಗುಲುವ ವೆಚ್ಚವನ್ನೂ ಭರಿಸುತ್ತಿದೆ. ಅಗಸ್ತ್ಯ ಪ್ರತಿಷ್ಠಾನ ವಿಜ್ಞಾನ ತಂತ್ರಜ್ಞಾನ ಕೇಂದ್ರದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ವೆಚ್ಚವನ್ನು ಏಕಸ್ಸಂಸ್ಥೆಯೇ ಭರಿಸುತ್ತಿದೆ. ಇಲ್ಲಿ ಐದು ಮಂದಿ ಪೂರ್ಣಕಾಲಿಕ ಶಿಕ್ಷಕರು ಇಲ್ಲಿದ್ದಾರೆ. ಸುಸಜ್ಜಿತ ಗ್ರಂಥಾಲಯವಿದ್ದು, ವಿಜ್ಞಾನ ಪುಸ್ತಕಗಳ ಭಂಡಾರವೇ ಇದೆ. ‘ಶಾಲೆಯಲ್ಲಿ ಓದಿದ ವಿಜ್ಞಾನ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶ ಸಿಕ್ಕಿದೆ. ಅಲ್ಲಿ ಕೇಳಿದಾಗ ಅರ್ಥವಾಗದ ವಿಷಯ ಸಹ ಇಲ್ಲಿ ಪ್ರಯೋಗ ಮಾಡಿ ನೋಡಿದಾಗ ಸುಲಭವಾಗಿ ತಲೆಗೆ ಹೋಗುತ್ತದೆ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ, ಅದೇ ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸುಪ್ರಿಯಾ ಜೇಡರ್. ಒಟ್ಟಾರೆ ಹಿರಿಯ ವಿದ್ಯಾರ್ಥಿಯೊಬ್ಬರ ಆಸಕ್ತಿ ಮತ್ತು ತಾನು ಓದಿದ ಶಾಲೆಯ ಮೇಲಿನ ಅಕ್ಕರೆಯಿಂದಾಗಿ ಕೆಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಪಾಠ ಕೇಳುವ ಅವಕಾಶ ಲಭ್ಯವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.