ಪಿಯು ನಂತರ ಮುಂದೇನು..? ಮತ್ತೆ ಪ್ರಶ್ನೆಪತ್ರಿಕೆ ಬಹಿರಂಗದಂತಹ ಎಡವಟ್ಟುಗಳು ಆಗದಿದ್ದರೆ, ಈ ವೇಳೆಗೆ ಪರೀಕ್ಷೆ ಮುಗಿದಿರಬೇಕಿತ್ತು. ಪರೀಕ್ಷೆ ಫಲಿತಾಂಶಗಳ ನಡವೆಯೇ ಸಣ್ಣದೊಂದು ಆತಂಕ ಕಾಡುತ್ತಲೇ ಇರುತ್ತದೆ. ‘ಪಿಯು ಮುಗಿಯಿತು ಮುಂದೇನು?’ ಈ ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಅಲ್ಲದೆ, ಕೋರ್ಸ್‌ಗಳ ಆಯ್ಕೆ, ಮಾನ್ಯತೆ, ಅನುಮೋದಿತ ಪಠ್ಯಕ್ರಮ, ಶಿಕ್ಷಣ ಸಂಸ್ಥೆಯ ಗುಣಮಟ್ಟ, ಫಲಿತಾಂಶಗಳ ಕುರಿತು ಎಚ್ಚರವಹಿಸಬೇಕಾಗುತ್ತದೆ. ಅಂಕಗಳನ್ನು ಗಳಿಸಿದವರಿಗೆ ಏನು ಓದಬೇಕು ಎಂಬ ಗೊಂದಲ ಕಡಿಮೆ. ಎಲ್ಲಿ ಓದಬೇಕು ಎಂಬ ಆಯ್ಕೆಯ ಬಗ್ಗೆ ಗೊಂದಲವಿರುತ್ತದೆ. ಆದರೆ ಅಂಕಗಳು ಕಡಿಮೆ ಬಂದಲ್ಲಿ? ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿ ಪರಿಗಣಿಸಿ: ಪಿಯುಸಿ ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ. ಈ ಹಂತದ ಪರೀಕ್ಷಾ ಫಲಿತಾಂಶ ವಿದ್ಯಾರ್ಥಿಗಳ ಶೈಕ್ಷಣಿಕ, ವೃತ್ತಿ ಭವಿಷ್ಯ ‘ಏನಾಗಬೇಕು?’ ಎಂಬುದನ್ನು ನಿರ್ಧರಿಸುತ್ತದೆ. ಹೀಗಾಗಿ, ಈ ಅವಧಿಯಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ, ಆಸಕ್ತಿ, ಅಭಿರುಚಿ ಹಾಗೂ ಅಗತ್ಯವನ್ನು ಆಧರಿಸಿ ಸರಿಯಾದ ಕೋರ್ಸ್‌ಗಳನ್ನು ಆಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮರ್ಪಕ ನಿರ್ಣಯ ಕೈಗೊಳ್ಳಬೇಕಾದುದು ಅತ್ಯಗತ್ಯ. ಒಂದು ವೇಳೆ ಈ ಹಂತದಲ್ಲಿ ಯಾವುದೋ ಒತ್ತಡ, ಪೂರ್ವಗ್ರಹ ಅಥವಾ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಣಯ ಕೈಗೊಂಡರೆ ಜೀವನವಿಡೀ ಪರಿತಪಿಸ ಬೇಕಾಗುತ್ತದೆ. ಏನೋ ಆಗಬೇಕಾದವರು ಮತ್ತಿನ್ನೇನೋ ಆಗಿ ಆಸಕ್ತಿ, ಅಭಿರುಚಿ, ಅಗತ್ಯ ಹಾಗೂ ಸಾಮರ್ಥ್ಯಕ್ಕೆ ವಿರುದ್ಧವಾಗಿ ಅನಿವಾರ್ಯದಲ್ಲಿ ಬದುಕಬೇಕಾಗುತ್ತದೆ. ಪಿಯು ನಂತರದ ಅವಕಾಶಗಳು: ಪಿಯು ಅಧ್ಯಯನದಲ್ಲಿ ಆಯ್ಕೆ ಮಾಡಿಕೊಂಡ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವೃತ್ತಿ ಆಯ್ಕೆಯ ಕುರಿತು ಸಾಕಷ್ಟು ಅವಕಾಶಗಳಿವೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇನು ಮಾಡಬಹುದು? ಎಂಜಿನಿಯರಿಂಗ್ ಕ್ಷೇತ್ರದ ಅವಕಾಶಗಳು: ಪಿಯುಸಿ ವಿಜ್ಞಾನ ತರಗತಿಯಲ್ಲಿ ಸಾಮಾನ್ಯವಾಗಿ ಪಿಸಿಎಂಬಿ ಕಾಂಬಿನೇಷನ್ ಇರುತ್ತದೆ. ಪಿಸಿಎಂ/ಪಿಎಂಇ ವಿಭಾಗದಲ್ಲಿ ಆಸಕ್ತಿ ಇರುವ ಅಥವಾ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳು ‘ಎಂಜಿನಿಯರಿಂಗ್’ ಕ್ಷೇತ್ರವನ್ನು ಆಯ್ದುಕೊಂಡರೆ ಸಾಕಷ್ಟು ಆಯ್ಕೆ ಹಾಗೂ ಅವಕಾಶಗಳಿವೆ. ಸಾಂಪ್ರದಾಯಿಕವಾದ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಆಟೊಮೊಬೈಲ್, ಕಂಪ್ಯೂಟರ್, ಆರ್ಕಿಟೆಕ್ಟ್ ವಿಭಾಗಗಳಲ್ಲದೇ, ಸಮಕಾಲೀನ ಅವಧಿಯಲ್ಲಿ ಬೇಡಿಕೆ ಇರುವ ಉದ್ಯೋಗಾವಕಾಶ ಒದಗಿಸುವ ಹೊಸ ಕೋರ್ಸ್‌ ಎಂಜಿನಿಯರಿಂಗ್‌ನಲ್ಲಿ ಪರಿಚಯಿಸಲಾಗಿದೆ. ಇವುಗಳಲ್ಲದೆ, ಏರೋಸ್ಪೇಸ್ (ಅಂತರೀಕ್ಷ ತಂತ್ರಜ್ಞಾನ), ಎರೋನಾಟಿಕ್ಸ್‌ (ವೈಮಾನಿಕ ತಂತ್ರಜ್ಞಾನ), ಕೃಷಿ ತಂತ್ರಜ್ಞಾನ, ಜೀವ– ರಸಾಯನ ತಂತ್ರಜ್ಞಾನ, ಜೀವ– ವೈದ್ಯಕೀಯ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಜೈವಿಕ ಉಪಕರಣ ತಂತ್ರಜ್ಞಾನ, ಜೈವಿಕ ಮಾಹಿತಿ ತಂತ್ರಜ್ಞಾನ, ಪ್ರಸಾರ ತಂತ್ರಜ್ಞಾನ, ಸೆರಾಮಿಕ್ (ಪಿಂಗಾಣಿ / ಜೇಡಿಮಣ್ಣು ನಿರ್ಮಾಣ), ರಾಸಾಯನಿಕ ತಂತ್ರಜ್ಞಾನ, ಒಳಾಂಗಣ / ಹೊರಾಂಗಣ ನಿರ್ಮಾಣ ತಂತ್ರಜ್ಞಾನ, ಅಭಿಯಾಂತ್ರಿಕ ನಿರ್ವಹಣೆ, ಪರಿಸರ ವಿಜ್ಞಾನ, ಆಹಾರ ಸುರಕ್ಷೆ ಹಾಗೂ ತಂತ್ರಜ್ಞಾನ, ಫೈರ್ ಅಂಡ್ ಸೇಫ್ಟಿ, ಕೈಗಾರಿಕಾ ತಂತ್ರಜ್ಞಾನ, ಸಾಮಗ್ರಿ ನಿರ್ಮಾಣ, ಚಮ್ಮಾರಿಕೆ ತಂತ್ರಜ್ಞಾನ, ಸಮುದ್ರಯಾನ ತಂತ್ರಜ್ಞಾನ, ಗಣಿಗಾರಿಕೆ, ಅತಿ ಸೂಕ್ಷ್ಮ (ನ್ಯಾನೋ) ತಂತ್ರಜ್ಞಾನ, ಮುದ್ರಣ ತಂತ್ರಜ್ಞಾನ, ಪ್ಲಾಸ್ಟಿಕ್ ಮತ್ತು ಪಾಲಿಮರ್ ಉತ್ಪನ್ನ ತಂತ್ರಜ್ಞಾನ, ಹೆದ್ದಾರಿ ನಿರ್ಮಾಣ– ನಿರ್ವಹಣಾ ತಂತ್ರಜ್ಞಾನ, ರಬ್ಬರ್ ತಂತ್ರಜ್ಞಾನ, ಅನಿಮೇಶನ್ ತಂತ್ರಜ್ಞಾನ, ವಂಶವಾಹಿನಿ ತಂತ್ರಜ್ಞಾನ, ಟೆಲಿಕಮ್ಯುನಿಕೇಶನ್ ದೂರಸಂವಹನ ತಂತ್ರಜ್ಞಾನ, ಜವಳಿ ತಂತ್ರಜ್ಞಾನ... ಇವುಗಳಲ್ಲಿ ತಮ್ಮ ಆಸಕ್ತಿ, ಅಗತ್ಯಕ್ಕೆ ಅನುಗುಣವಾದ ಕೋರ್ಸ್ ಅನ್ನು ವಿದ್ಯಾರ್ಥಿಗಳು ಅಧ್ಯಯನಕ್ಕೆ ಆಯ್ದುಕೊಳ್ಳಬಹುದು. ಡಿಪ್ಲೊಮಾಕ್ಕೂ ಇದೆ ಅವಕಾಶ: ಈ ಮೇಲೆ ಉಲ್ಲೇಖಿಸಿದ ವಿಭಾಗಗಳಲ್ಲಿ ಎಂಜಿನಿಯರಿಂಗ್‌ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಡಿಪ್ಲೊಮಾ ಕೋರ್ಸ್‌ ಮಾಡಿಕೊಳ್ಳಲು ಕೂಡ ಅವಕಾಶವಿದೆ. ಡಿಪ್ಲೊಮಾ ನಂತರವೂ ಉತ್ತಮ ಉದ್ಯೋಗಾವಕಾಶಗಳಿವೆ. ವೈದ್ಯಕೀಯ ಕ್ಷೇತ್ರದ ಅವಕಾಶಗಳು: ಪಿಯುಸಿ ವಿಜ್ಞಾನ ತರಗತಿಯಲ್ಲಿ ಪಿಸಿಬಿ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಹೆಚ್ಚಿನ ಅಂಕ ಗಳಿಸಿದ್ದರೆ ಅಂಥವರಿಗೆ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಅಲೊಪಥಿ ವೈದ್ಯಕೀಯ (ಎಂಬಿಬಿಎಸ್) ವಿಭಾಗದಲ್ಲಿ ಸಾಮಾನ್ಯ ವೈದ್ಯಕೀಯ ವಿಭಾಗ ಸೇರಿದಂತೆ ಆಸಕ್ತಿಗೆ ಅನುಗುಣವಾಗಿ ವಿವಿಧ ‘ಸ್ಪೆಶಾಲಿಟಿ’ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ, ಹೋಮಿಯೋಪಥಿ (ಬಿಎಚ್‌ಎಂಎಸ್), ಆಯುರ್ವೇದ (ಬಿಎಎಂಸ್), ದಂತವಿಜ್ಞಾನ (ಬಿಡಿಎಸ್), ಯುನಾನಿ (ಬಿಯುಎಸ್) ವಿಭಾಗದಲ್ಲಿ ಪದವಿ ಪಡೆಯಲು ಅವಕಾಶವಿದೆ. ಅರೆ ವೈದ್ಯಕೀಯ ಕ್ಷೇತ್ರದ ಅವಕಾಶಗಳು: ವಿಭಾಗದ ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಆಡಿಯೋಲಾಜಿ, ಆಕ್ಯುಪೇಶನಲ್ ಥೆರಪಿ, ಆಪ್ಟೋಮೆಟ್ರಿ ಅಂಡ್ ಆಪ್ಥಲೆಮಿಕ್ ಟೆಕ್ನಾಲಜಿ, ಪ್ರೊಸ್ಥೆಟಿಕ್ಸ್ ಅಂಡ್ ಆರ್ಥಟಿಕ್ಸ್, ನ್ಯೂಟ್ರೀಶಿಯನ್ ಅಂಡ್ ಡಯಾಟಿಕ್ಸ್, ಕೌನ್ಸಿಲಿಂಗ್‌ ಮುಂತಾದ ಕೋರ್ಸ್‌ಗಳನ್ನು ಸೇರಬಹುದು. ವೈದ್ಯಕೀಯಕ್ಕೆ ಸಂಬಂಧಿಸಿದ ಇಸಿಜಿ ಟೆಕ್ನಿಷಿಯನ್, ಎಕ್ಸರೇ ಟೆಕ್ನಿಷಿಯನ್, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯೇಶನಲ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (ಎಂಎಲ್‌ಟಿಸಿ), ಪೆಥಾಲಾಜಿ, ರೆಸ್ಪಿರೇಟರಿ ಥೆರಪಿಸ್ಟ್, ಸೊನೋಗ್ರಾಫಿ ಟೆಕ್ನಾಲಜಿ, ಆಪರೇಶನ್ ಥೇಟರ್ ಅಸಿಸ್ಟೆಂಟ್, ನ್ಯಾಚುರೋಪಥಿ, ಯೋಗ ಚಿಕಿತ್ಸೆ, ಅಕ್ಯುಪ್ರೆಷರ್ ಮತ್ತು ಅಕ್ಯುಪಂಕ್ಚರ್ ಚಿಕಿತ್ಸೆ ಮುಂತಾದ ಕೋರ್ಸ್‌ಗಳಿಗೂ ಸೇರಬಹುದು. ಪಶುವೈದ್ಯಕೀಯ ವಿಜ್ಞಾನದಲ್ಲೂ (ವೆಟರ್ನರಿ ಸೈನ್ಸ್) ಪದವಿ ಪಡೆಯಬಹುದು. ಅಲ್ಲದೆ, ಜೀವ– ರಸಾಯನ ತಂತ್ರಜ್ಞಾನ, ಜೀವ– ವೈದ್ಯಕೀಯ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಜೈವಿಕ ಉಪಕರಣ ತಂತ್ರಜ್ಞಾನ, ಜೈವಿಕ ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳನ್ನು ಆಯ್ದುಕೊಳ್ಳಬಹುದು. ಸಾಮಾನ್ಯ ಕೋರ್ಸ್‌ಗಳು: ಎಂಜಿನಿಯರಿಂಗ್, ಡಿಪ್ಲೊಮಾ, ವೈದ್ಯಕೀಯ, ಅರೆವೈದ್ಯಕೀಯ ಕ್ಷೇತ್ರಗಳನ್ನು ಹೊರತುಪಡಿಸಿ, ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಬಿ.ಎಸ್ಸಿ (ಪಿಸಿಎಂ, ಸಿಬಿಝಡ್, ಅಗ್ರಿ), ಬಿ.ಎಸ್ಸಿ–ಇಡಿ, ಮತ್ಸ್ಯೋದ್ಯಮ ತಂತ್ರಜ್ಞಾನ, ಆಹಾರ ತಂತ್ರಜ್ಞಾನ– ತಯಾರಿಕೆ ಮುಂತಾದ ಸಾಮಾನ್ಯ ಪದವಿ ಕೋರ್ಸ್‌ಗಳಿಗೂ ಸೇರಬಹುದು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಡಿ.ಇಡಿ ಕೋರ್ಸ್‌ ಕೂಡ ಆಯ್ದುಕೊಳ್ಳಬಹುದು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೇನು ಮಾಡಬಹುದು? ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಬ್ಯಾಂಕಿಂಗ್, ವಾಣಿಜ್ಯ, ವ್ಯವಹಾರ, ನಿರ್ವಹಣೆ, ಉದ್ಯಮಗಳಿಗೆ ಸಂಬಂಧಿಸಿದ ಕೋರ್ಸ್‌ಗಳಿಗೆ ಸೇರಬಹುದು. ಬಿ.ಕಾಂ, ಬಿಬಿಎ, ಬಿಸಿಎ, ಬಿ.ಕಾಂ–ಎಲ್‌ಎಲ್‌ಬಿ ಇತ್ಯಾದಿ ಪದವಿಗಳಿಗೆ ಸೇರಬಹುದು. ಅಲ್ಲದೆ, ಈಚೆಗೆ ಲೆಕ್ಕಪತ್ರ, ವಿಮೆ, ಹೂಡಿಕೆ, ಬಂಡವಾಳ ಹೂಡಿಕೆ, ನಿರ್ವಹಣೆ, ಹಣಕಾಸು, ಕಂಪೆನಿ ಸೆಕ್ರೆಟರಿ (ಸಿ.ಎಸ್), ಅರ್ಥಶಾಸ್ತ್ರ ಇತ್ಯಾದಿ ವಿಭಾಗಗಳಿಗೆ ಸಂಬಂಧಿಸಿ ಪ್ರತ್ಯೇಕ ಕೋರ್ಸ್‌ಗಳು ಲಭ್ಯವಿದ್ದು ಆಸಕ್ತಿಗೆ ಅನುಗುಣವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಲಾ ವಿಭಾಗದ ವಿದ್ಯಾರ್ಥಿಗಳಿಗಿರುವ ಅವಕಾಶಗಳು ಕಲಾ ವಿಭಾಗ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಭಾಷೆ, ಸಾಹಿತ್ಯ, ಇತಿಹಾಸ, ಪ್ರಾಕ್ತನಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಭೂಗೋಳಶಾಸ್ತ್ರ, ಮಾನವಿಕ ಶಾಸ್ತ್ರ, ಸಾರ್ವಜನಿಕ ಆಡಳಿತ, ಗ್ರಂಥಾಲಯ ವಿಜ್ಞಾನ... ಈ ಯಾವುದೇ ವಿಷಯದ ಕಾಂಬಿನೇಷನ್‌ ಆಯ್ದುಕೊಂಡು ಕಲಾ ಪದವಿ (ಬಿ.ಎ) ಪಡೆಯಬಹುದು. ಬಿ.ಎ–ಎಲ್ಎಲ್‌ಬಿ, ಬಿ.ಎ–ಇಡಿ, ಡಿ.ಇಡಿ... ಇತ್ಯಾದಿ ಕೋರ್ಸ್‌ಗಳಿಗೆ ಸೇರಲು ಕೂಡ ಅವಕಾಶವಿದೆ. ಇತರ ಕೋರ್ಸ್‌ಗಳು: ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಗೃಹವಿಜ್ಞಾನ, ಕೃಷಿ, ತೋಟಗಾರಿಕೆ, ಲಲಿತಕಲೆ, ಫ್ಯಾಷನ್ ಡಿಸೈನಿಂಗ್, ಬಹುಮಾಧ್ಯಮ ತರಬೇತಿ, ಚಲನಚಿತ್ರ ನಿರ್ಮಾಣ, ಅನಿಮೇಶನ್, ಆಭರಣ ವಿನ್ಯಾಸ, ಜಾಹೀರಾತು ನಿರ್ಮಾಣ, ಸಾರ್ವಜನಿಕ ಸಂಪರ್ಕ, ಪ್ರವಾಸೋದ್ಯಮ, ಹೋಟೆಲ್‌ ಮ್ಯಾನೇಜ್‌ಮೆಂಟ್, ವಿಪತ್ತು ನಿರ್ವಹಣೆ, ಬ್ಯುಟಿಷಿಯನ್, ಫ್ಯಾಷನ್ ಡಿಸೈನಿಂಗ್, ಸಂಗೀತ, ಪ್ರದರ್ಶಕ ಕಲೆ, ಆಹಾರ ತಂತ್ರಜ್ಞಾನ, ಕೌಶಲ ನಿರ್ವಹಣೆ, ಕಂಪ್ಯೂಟರ್ ತರಬೇತಿ... ಇತ್ಯಾದಿ ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಸಿಸಬಹುದು. ಇವುಗಳಲ್ಲಿ ಕೆಲ ಕೋರ್ಸ್‌ಗಳು ಎಸ್ಎಸ್ಎಲ್‌ಸಿ ಆಧರಿತವಾಗಿದ್ದು, ಆ ಕೋರ್ಸ್‌ಗಳನ್ನು ಪಿಯುಸಿ ಫೇಲಾದವರು ಕೂಡ ಅಭ್ಯಸಿಸಬಹುದು. ಫೇಲ್‌ ಆದವರಿಗೂ ಉಂಟು ಅವಕಾಶ! ಪಿಯುಸಿ ಫೇಲಾದವರಿಗೂ ಸಾಕಷ್ಟು ಅವಕಾಶಗಳಿವೆ. ಎಸ್ಎಸ್ಎಲ್‌ಸಿ ಫಲಿತಾಂಶ ಆಧರಿತ ವಿವಿಧ ಡಿಪ್ಲೊಮಾ ಕೋರ್ಸ್‌ಗಳು, ಕೆಲ ಸರ್ಕಾರಿ ಸಂಸ್ಥೆಗಳು ಸೇರಿ ರುಡ್‌ಸೆಟ್‌ ಮತ್ತಿತರ ಖಾಸಗಿ ಸಂಸ್ಥೆಗಳು, ಎನ್‌ಜಿಒಗಳು ಒದಗಿಸುವ ಡೇರಿ ತಂತ್ರಜ್ಞಾನ ಹಾಗೂ ಎರೆಹುಳು ಗೊಬ್ಬರ ತಯಾರಿಕೆ, ತೋಟಗಾರಿಕಾ ತರಬೇತಿ, ಬೇಕರಿ ಉತ್ಪನ್ನಗಳ ತಯಾರಿ, ಆಹಾರ ಉತ್ಪನ್ನಗಳ ತಯಾರಿ, ಹೊಲಿಗೆ, ಎಂಬ್ರಾಯಿಡರಿ, ಫ್ಯಾಬ್ರಿಕ್ ಪೇಂಟಿಂಗ್, ಫೊಟೋಗ್ರಫಿ, ವಿಡಿಯೊಗ್ರಫಿ, ಇನ್ವರ್ಟರ್– ಯುಪಿಎಸ್ ರಿಪೇರಿ, ಉಡುಪು– ವಿನ್ಯಾಸ, ಬೈಕ್, ಆಟೊ, ಕಾರು ಹಾಗೂ ಬೃಹತ್ ವಾಹನಗಳ ರಿಪೇರಿ, ತಯಾರಿಕೆ ಹಾಗೂ ನಿರ್ವಹಣೆ, ಟಿವಿ– ಡಿವಿಡಿ– ಕಂಪ್ಯೂಟರ್– ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ, ಹಾರ್ಡ್‌ವೇರ್– ಸಾಫ್ಟ್‌ವೇರ್‌ ನೆಟ್‌ವರ್ಕಿಂಗ್, ಕಂಪ್ಯೂಟರ್ ತರಬೇತಿ... ಹೀಗೆ ಹಲವಾರು ಕೋರ್ಸ್‌ಗಳಿಗೆ ಪಿಯುಸಿ ಫೇಲಾದವರು ಕೂಡ ಸೇರಬಹುದು. ಇದಲ್ಲದೆ, ಆಸಕ್ತರು ಎನ್‌ಐಒಎಸ್ (ನ್ಯಾಶನಲ್‌ ಇನ್‌ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್) ಮೂಲಕ ಅಧ್ಯಯನ ಮುಂದುವರಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.