ರಜೆಯ ‘ಓದು’ ಹೊರೆಯೋ– ವರವೋ? ವರ್ಷದುದ್ದಕ್ಕೂ ಶಾಲೆ – ಕಾಲೇಜು ಎಂದು ಓಡಾಡುವ ವಿದ್ಯಾರ್ಥಿಗಳು ಇಷ್ಟಪಟ್ಟೋ ಅಥವಾ ಪಾಲಕರ ಇಚ್ಛೆಯಂತೆಯೋ ಬೇಸಿಗೆ ಅವಧಿಯ ‘ರಜಾ ತರಗತಿ’ಗೆ ಸೇರುತ್ತಾರೆ. ಇದರಿಂದಾಗುವ ಲಾಭ – ನಷ್ಟಗಳೇನು? ಈ ತರಗತಿಗಳು ವಿದ್ಯಾರ್ಥಿಗಳಿಗೆ ವರವೋ ಅಥವಾ ಹೊರೆಯೋ? ಎಂಬ ವಿಶ್ಲೇಷಣೆ ಇಲ್ಲಿದೆ. ‘ನನ್ನ ಮಗ / ಮಗಳನ್ನು ಮಂಗಳೂರು / ಬೆಂಗಳೂರು / ಮೈಸೂರು /ತುಮಕೂರು/ಧಾರವಾಡದಲ್ಲಿರುವ ಪ್ರತಿಷ್ಠಿತ ಟ್ಯುಟೋರಿಯಲ್ಸ್‌ನ ‘ವೆಕೇಶನ್ಸ್‌ ಕೋರ್ಸ್’ಗೆ ಸೇರಿಸಿದ್ದೇನೆ’ ಎಂದು ಹೇಳಿಕೊಳ್ಳುವುದೇ ಕೆಲ ಪೋಷಕರಿಗೆ ಪ್ರತಿಷ್ಠೆಯ ವಿಷಯ. ಅದರಲ್ಲೂ ವಿಶೇಷವಾಗಿ 9 ಮತ್ತು 11ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳನ್ನು ‘ರಜಾ ತರಗತಿ’ಗೆ ಸೇರಿಸುವುದು ಈಚಿನ ವಾಡಿಕೆಯಾಗಿದೆ. 10 ಮತ್ತು 12ನೇ ತರಗತಿಗಳು ನಿರ್ಣಾಯಕ ಎಂಬ ಅಂಶ ಇದಕ್ಕೆ ಕಾರಣ. ದುಡ್ಡಿರುವ ಪೋಷಕರೂ ಪ್ರತಿ ವರ್ಷವೂ ಮಕ್ಕಳನ್ನು ರಜಾ ಅವಧಿಯ ತರಗತಿಗೆ ಸೇರಿಸುತ್ತಾರೆ! ‘ರಜಾ ತರಗತಿ’ಯ ಅನುಕೂಲಗಳು ಮುಂದಿನ ತರಗತಿಯ ಪಠ್ಯಕ್ರಮ ಪರಿಚಯ: ‘ರಜಾ ಅವಧಿಯ ತರಗತಿ’ ಸೇತುಬಂಧದ ಅವಧಿಯಾಗಿರುತ್ತದೆ. ಇಲ್ಲಿ ಮುಂದಿನ ತರಗತಿಯ ಪಠ್ಯಕ್ರಮವನ್ನು ಪರಿಚಯಿಸಲಾಗುತ್ತದೆ. ತಿಂಗಳು– ಎರಡು ತಿಂಗಳ ಅವಧಿಯಲ್ಲಿ ಇಡೀ ಪಠ್ಯಕ್ರಮವನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಯಲ್ಲಿ ಯಾವ ಪಾಠ ಮಹತ್ವದ್ದು? ಎಂಬ ತಿಳಿವಳಿಕೆ ಮೂಡುತ್ತದೆ. ಪರೀಕ್ಷಾ ಮಾರ್ಗದರ್ಶನ: ‘ರಜಾ ಅವಧಿಯ ತರಗತಿ’ಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಆಧಾರವಾಗಿಟ್ಟುಕೊಂಡು ಬೋಧನೆ ಮಾಡುವುದರಿಂದ ಪರೀಕ್ಷಾ ದೃಷ್ಟಿಯಿಂದ ಮಹತ್ವದ ಅಂಶಗಳ ಮೇಲೆ ನಿಗಾವಹಿಸಲು ಅನುಕೂಲವಾಗುತ್ತದೆ. ವ್ಯಕ್ತಿಗತ ಕಾಳಜಿಗೆ ಅವಕಾಶ: ರಜಾ ಅವಧಿಯ ತರಗತಿಯಲ್ಲಿ ತರಗತಿಯ ಗಾತ್ರ ಚಿಕ್ಕದಾಗಿದ್ದು, ಕಡಿಮೆ ವಿದ್ಯಾರ್ಥಿಗಳಿರುತ್ತಾರೆ. ಹೀಗಾಗಿ, ಪ್ರತಿ ವಿದ್ಯಾರ್ಥಿಯ ಕುರಿತು ವ್ಯಕ್ತಿಗತ ಮಾರ್ಗದರ್ಶನಕ್ಕೆ ಇಲ್ಲಿ ಹೆಚ್ಚಿನ ಅವಕಾಶ ಇರುತ್ತದೆ. ನೋಟ್ಸ್ ಲಭ್ಯತೆ: ರಜಾ ಅವಧಿಯ ತರಗತಿ ನಡೆಸುವ ಬಹುತೇಕ ಟ್ಯಟೋರಿಯಲ್ಸ್‌ಗಳು ಆಯಾ ವಿಷಯ ಸಂಬಂಧಿತ ತಜ್ಞರು ಸಿದ್ಧಪಡಿಸಿದ ‘ನೋಟ್ಸ್’ ಅನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು. ಶಾರ್ಟ್‌ಕಟ್ ಕಲಿಕೆ: ಕಡಿಮೆ ಅವಧಿಯಲ್ಲಿ ಇಡೀ ಪಠ್ಯಕ್ರಮವನ್ನು ಬೋಧಿಸುವ ಒಪ್ಪಂದ ಇರುವುದರಿಂದ ಈ ತರಗತಿಗಳಲ್ಲಿ ‘ಶಾರ್ಟ್‌ಕಟ್ ಕಲಿಕಾ ವಿಧಾನ’ ಅನುಸರಿಸಲಾಗುತ್ತದೆ. ಸಹಸಂಬಂಧ, ಸರಳೀಕರಣ, ಸಂಕ್ಷೇಪಾಕ್ಷರ ಮುಂತಾದ ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗುತ್ತದೆ. ಅಧ್ಯಯನ ಪ್ರವೃತ್ತಿಯ ಮುಂದುವರಿಕೆ: ರಜಾ ಅವಧಿಯಲ್ಲೂ ಪಠ್ಯ, ತರಗತಿ, ಕಲಿಕೆಯತ್ತ ಗಮನ ಕೇಂದ್ರೀಕರಿಸುವುದರಿಂದ ವಿದ್ಯಾರ್ಥಿಗಳಲ್ಲಿ ‘ಅಧ್ಯಯನ ಪ್ರವೃತ್ತಿ’ ಮುಂದುವರಿಯುತ್ತದೆ. ಹೊರೆಯಾಗುವ ಸಾಧ್ಯತೆ ಕೆಲ ಪೋಷಕರು ಅತಿಯಾದ ನಿರೀಕ್ಷೆಯೊಂದಿಗೆ ತಮ್ಮ ಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ರಜಾ ಅವಧಿ ತರಗತಿಗೆ ಸೇರಿಸಿ, ‘ಸಂಕಷ್ಟ’ಕ್ಕೆ ನೂಕುತ್ತಾರೆ. ಹೀಗಾಗಿ, ಮಕ್ಕಳಿಗೆ ಇದು ಹೊರೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ನೈಜ ತರಗತಿಗೆ ಪರ್ಯಾಯವಲ್ಲ: ಒಂದೆರಡು ತಿಂಗಳ ರಜಾ ಅವಧಿಯ ತರಗತಿ ಖಂಡಿತವಾಗಿ ‘ನೈಜ ತರಗತಿ’ಗೆ ಪರ್ಯಾಯವಲ್ಲ. 10 ತಿಂಗಳ ಅವಧಿಯಲ್ಲಿ ಕ್ರಮಬದ್ಧವಾಗಿ ಮಾಡುವ ಬೋಧನೆ, ಅಧ್ಯಯನ, ಪ್ರಾಯೋಗಿಕ ಅರಿವು, ಸೈದ್ಧಾಂತಿಕ ಒಳನೋಟ, ಸ್ನೇಹಿತರ ಒಡನಾಟ, ಗುರು– ಶಿಷ್ಯರ ಸಂಬಂಧ, ನೈಜ ಶಾಲಾ– ಕಾಲೇಜು ವಾತಾವರಣ, ಮನರಂಜನೆ, ಪಠ್ಯೇತರ ಚಟುವಟಿಕೆ... ಇವೆಲ್ಲ ರಜಾ ಅವಧಿಯ ತರಗತಿಯಲ್ಲಿ ಸಿಗುವುದಿಲ್ಲ. ಯಾಂತ್ರಿಕ ಕಲಿಕೆ: ಎರಡು ತಿಂಗಳಲ್ಲಿ ಇಡೀ ಪಠ್ಯಕ್ರಮವನ್ನು ಮುಗಿಸುವ ಭರದಲ್ಲಿ ರಜಾ ಅವಧಿಯ ಅಧ್ಯಯನ ‘ಯಾಂತ್ರಿಕ’ವಾಗಿರುತ್ತದೆ. ಹೀಗಾಗಿ, ಅಲ್ಲಿ ಸೃಜನಶೀಲತೆ, ವೈವಿಧ್ಯಮಯ ಚಿಂತನೆಗೆ ಅವಕಾಶವಿರುವುದಿಲ್ಲ. ಎಲ್ಲರಿಗೂ ಸರಿ ಹೊಂದುವುದಿಲ್ಲ: ಎಲ್ಲ ವಿದ್ಯಾರ್ಥಿಗಳ ಕಲಿಕೆ, ಗ್ರಹಿಕೆ, ಸ್ಮರಣೆ ಹಾಗೂ ಧಾರಣ ಸಾಮರ್ಥ್ಯ ಒಂದೇ ರೀತಿಯಾಗಿರುವುದಿಲ್ಲ. ಹೀಗಾಗಿ, ರಜಾ ಅವಧಿಯ ತರಗತಿಯಲ್ಲಿ ಜಾಣ ವಿದ್ಯಾರ್ಥಿಗಳು ಹೆಚ್ಚಿನ ವಿಷಯ ಗ್ರಹಿಸಿಕೊಂಡರೆ, ಸರಾಸರಿ ಸಾಮರ್ಥ್ಯದ ವಿದ್ಯಾರ್ಥಿಗಳು ತಕ್ಕಮಟ್ಟಿಗೆ ಗ್ರಹಿಸಿಕೊಳ್ಳಬಹುದು. ಸರಾಸರಿಗಿಂತ ಕೆಳಮಟ್ಟದವರು ಏನನ್ನೂ ಗ್ರಹಿಸದೇ ಇರಬಹುದು. ಅತಿ ಆತ್ಮವಿಶ್ವಾಸ ಕಾಡಬಹುದು: ರಜಾ ಅವಧಿಯಲ್ಲಿಯೇ ಮುಂದಿನ ವರ್ಷಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಪರಾಮರ್ಶಿಸುವುದರಿಂದ ‘ನಾನು ಎಲ್ಲವನ್ನೂ ಮುಂಚಿತವಾಗಿಯೇ ಓದಿಕೊಂಡಿದ್ದೇನೆ’ ಎಂಬ ಅತಿ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಕಾಣಬಹುದು. ಇದರಿಂದ ಅವರು ನಿರ್ಣಾಯಕ ಅವಧಿಯಲ್ಲಿ ಅಧ್ಯಯನವನ್ನು ನಿರ್ಲಕ್ಷಿಸಬಹುದು. ಏಕತಾನತೆ: ಅದೇ ನಾಲ್ಕು ಗೋಡೆಯ ಮಧ್ಯದ ತರಗತಿ, ಪಾಠ ಮಾಡುವ ಮೇಷ್ಟ್ರು, ಓದು, ಬರಹ, ಪೆನ್ನು, ಪೆನ್ಸಿಲ್, ಪುಸ್ತಕ, ನೋಟ್ಸ್... ಇದರಿಂದ ವಿದ್ಯಾರ್ಥಿಗಳಲ್ಲಿ ಒತ್ತಡ ಹೆಚ್ಚಿ ಏಕತಾನತೆ ಉಂಟಾಗಬಹುದು. ಹೀಗಾಗಿ, ಅವರು ಲೋಕಜ್ಞಾನದ ಕೊರತೆಯಿಂದ ಬರೀ ‘ಪುಸ್ತಕದ ಹುಳು’ ಆಗಬಹುದು. ಆರ್ಥಿಕ ಹೊರೆ: ಶಾಲಾ– ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ಸೇರಿ ‘ಮತ್ತಿತರ ಶುಲ್ಕ’ಗಳನ್ನು ಭರಿಸಿ, ಹೈರಾಣಾದ ಪೋಷಕರು ರಜಾ ಅವಧಿಯ ತರಗತಿಗೆ ಹೆಚ್ಚುವರಿ ಶುಲ್ಕ ಭರಿಸಬೇಕಾಗುವುದರಿಂದ ಅವರಿಗೆ ಆರ್ಥಿಕ ಹೊರೆ ಹೆಚ್ಚುತ್ತದೆ. ರಜೆಗೆ ಖೋತಾ: ವರ್ಷವಿಡೀ ಅಧ್ಯಯನ, ಪರೀಕ್ಷೆಯ ಒತ್ತಡದಲ್ಲಿ ಬಳಲಿರುವ ವಿದ್ಯಾರ್ಥಿಗಳು ಒತ್ತಡದಿಂದ ಹೊರಬಂದು ಪುನಃಶ್ಚೇತನ ಪಡೆಯಲು ರಜೆ ಸಹಕರಿಸುತ್ತದೆ. ಆದರೆ, ರಜಾ ಅವಧಿಯ ತರಗತಿಗಳು ಈ ರಜೆಯನ್ನು ಕಸಿಯುತ್ತವೆ. ಇದು ಮಕ್ಕಳಲ್ಲಿ ಅಸಹಜತೆಗೆ ದಾರಿ ಮಾಡಿಕೊಡಬಹುದು. ಅಭದ್ರತಾ ಭಾವ: ಲಭ್ಯ ಇರುವ ರಜೆಯ ಅವಧಿಯಲ್ಲೂ ಅಧ್ಯಯನ ನಿರತರಾಗುವುದರಿಂದ ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ, ಸಂಬಂಧಿಗಳೊಂದಿಗೆ ಬೆರೆಯಲು ಹೆಚ್ಚಿನ ಅವಕಾಶ ಲಭಿಸುವುದಿಲ್ಲ. ಇದು ಮಕ್ಕಳಲ್ಲಿ ಅಭದ್ರತಾ ಭಾವಕ್ಕೆ ಕಾರಣವಾಗಬಹುದು. ಲಾಭಕ್ಕಾಗಿ ‘ದಂಧೆ’ ಆಗಬಾರದು ರಜಾ ಅವಧಿ ತರಗತಿಯ ಅಗತ್ಯ, ಅನಿವಾರ್ಯತೆ, ಮತ್ತು ಜವಾಬ್ದಾರಿಗಳನ್ನು ಪರಿಗಣಿಸಿದರೆ, ‘ವಿದ್ಯಾರ್ಥಿ– ಪೋಷಕರು– ಬೋಧಕರು– ಸಮಾಜ’ ಈ ನಾಲ್ಕು ಆಯಾಮಗಳ ಪಾತ್ರ ಹಾಗೂ ಬದ್ಧತೆ ಮುಖ್ಯವೆನಿಸುತ್ತದೆ. ಕೆಲ ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಮೋಜು– ಮಸ್ತಿ ಇರಬೇಕು ಎಂದು ‘ಛೇಂಜ್‌’ ಬಯಸಿ ರಜಾ ಅವಧಿಯ ತರಗತಿಗೆ ಸೇರಿದರೆ, ಕೆಲ ಪೋಷಕರು ರಜೆಯಲ್ಲಿ ಮಕ್ಕಳ ಕಿರಿ–ಕಿರಿ ತಪ್ಪಿದರೆ ಸಾಕು ಎಂದು ಅವರನ್ನು ರಜಾ ಅವಧಿಯ ತರಗತಿಗೆ ಸೇರಿಸುತ್ತಾರೆ. ಕೆಲ ಬೋಧಕರು ಕೇಳಿದಷ್ಟು ಹಣ ಭರಿಸುವ ಸಾಮರ್ಥ್ಯ ಇರುವ ಪೋಷಕರ ಮಕ್ಕಳಿಗೆ ‘ಆದ್ಯತೆ’ಯ ಮೇರೆಗೆ ಪ್ರವೇಶ ನೀಡುತ್ತಾರೆ. ಸುತ್ತಲೂ ವಾಸವಾಗಿರುವ ನಿವಾಸಿಗಳು (ಸಮಾಜ) ಬಾಡಿಗೆಗೆ ನೀಡಲು ಇರುವ ‘ಕಿಷ್ಕಿಂಧೆ’ಯಲ್ಲೇ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು, ಪಿ.ಜಿ ತೆರೆಯಲು, ಮೆಸ್‌ ಸ್ಥಾಪಿಸಲು ಯೋಚಿಸುತ್ತಾರೆ. ಹೀಗೆ ಪ್ರತಿಯೊಬ್ಬರೂ ತಮ್ಮ ಲಾಭ– ಸ್ವಾರ್ಥಕ್ಕಾಗಿ ರಜಾ ಅವಧಿ ತರಗತಿಯನ್ನು ಬಳಸಿಕೊಂಡರೆ ಅದರಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಈಚೆಗೆ ಕೆಲ ಟ್ಯುಟೋರಿಯಲ್ಸ್‌ನವರು ತಮ್ಮ ‘ಪ್ರತಿಷ್ಠೆ’ ಹೆಚ್ಚಿಸಿಕೊಳ್ಳಲು ಪರೀಕ್ಷಾ ಅಕ್ರಮದಲ್ಲಿ ತೊಡಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಅರಿತು ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.