ಕಾಟಾಚಾರವಾಗದಿರಲಿ ಕ್ರೀಡೆ...! ಭಾರತ ವಿಶ್ವಮಟ್ಟದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೊಡ್ಡ ರಾಷ್ಟ್ರ. ಇಲ್ಲಿ ಮಾನವ ಸಂಪನ್ಮೂಲಕ್ಕೆ ಬರವಿಲ್ಲ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆಣಸಬಲ್ಲ ಕ್ರೀಡಾಪಟುಗಳಿಗೆ ಬರವಿದೆ. ಅಂಥ ಕ್ರೀಡಾಪಟುಗಳನ್ನು ತಯಾರಿಸುವ ದೈಹಿಕ ಶಿಕ್ಷಣ, ಮಾರ್ಗದರ್ಶನಕ್ಕೆ ಬರವಿದೆ. ನಮ್ಮ ನೆರೆಯ ರಾಷ್ಟ್ರ ಚೀನಾ ಜನಸಂಖ್ಯೆಯಲ್ಲಿ ಮಾತ್ರ ನಂ.1 ಅಲ್ಲ. ಕ್ರೀಡೆಯಲ್ಲೂ ನಂ.1 ಆಗುವತ್ತ ಮುನ್ನಡೆದಿದೆ. ಹೆಸರೇ ಕೇಳಿರದ ಚಿಕ್ಕ ರಾಷ್ಟ್ರಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ರಾಷ್ಟ್ರದ ಕೀರ್ತಿ ಹೆಚ್ಚಿಸುತ್ತಾರೆ. ಆದರೆ, ಭಾರತಕ್ಕೇನಾಗಿದೆ? ಕ್ರಿಕೆಟ್ ಹೊರತುಪಡಿಸಿ ಇನ್ನುಳಿದ ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕೆ ನಿಯಮಿತವಾಗಿ ಉತ್ತಮ ಸಾಧನೆ ತೋರಲು ಸಾಧ್ಯವಾಗುತ್ತಿಲ್ಲ, ಎಂಬ ಪ್ರಶ್ನೆಗಳು ಕಾಡದೇ ಇರುವುದಿಲ್ಲ. ಈ ಪ್ರಶ್ನೆಗಳಿಗೆ ಉತ್ತರವಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ. ಕ್ರೀಡೆಗೆ ಕೊನೆಯ ಆದ್ಯತೆ: ನಮ್ಮ ದೇಶದಲ್ಲಿ ದೈಹಿಕ ಶಿಕ್ಷಣವನ್ನು ತೃತೀಯ ದರ್ಜೆಯ ಶಿಕ್ಷಣವೆಂದು ಪರಿಗಣಿಸಲಾಗಿದೆ. ಪಠ್ಯಕ್ಕೆ ಮೊದಲ ಆದ್ಯತೆ, ನಂತರ ಸಾಂಸ್ಕೃತಿಕ ಚಟುವಟಿಕೆಗಳ ಸರದಿ, ನಂತರ ಯಾರಾದರೂ ಸ್ವಯಂ ಆಸಕ್ತಿ ತೋರಿದರೆ ಕ್ರೀಡೆ... ಹೀಗೆ, ನಮ್ಮ ಶಾಲೆಗಳಲ್ಲಿರುವ ಸರಣೀಕೃತ ಆದ್ಯತೆಯಲ್ಲಿ ದೈಹಿಕ ಶಿಕ್ಷಣಕ್ಕೆ ಕೊನೆಯ ಸ್ಥಾನ ನೀಡಲಾಗಿದೆ. ಇಂದಿಗೂ ಅದೆಷ್ಟೋ ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಕೆಲವೆಡೆ ಬರೀ ದಾಖಲೆಗಳಲ್ಲಿ ಮಾತ್ರ ಮೈದಾನವಿದೆ. ಅಲ್ಲದೆ, ಕೆಲವು ಶಾಲೆಗಳು ಮೊದಲ, ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಮೈದಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದು ಶಾಲಾಕಾಲೇಜು ಸ್ಥಾಪನೆಗೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಮೈದಾನ ಇರುವುದು ಕಡ್ಡಾಯ ಎಂದಿದ್ದರೂ, ಅದನ್ನು ಕಡೆಗಣಿಸಲಾಗಿದೆ. ಈ ಕಡೆಗಣನೆಯಲ್ಲಿ ಪೋಷಕರು, ಶಿಕ್ಷಣ ಇಲಾಖೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪಾತ್ರವೂ ಇದೆ. ದೈಹಿಕಶಿಕ್ಷಣವೂ ಇಲ್ಲ, ಶಿಕ್ಷಕರೂ ಇಲ್ಲ! ನಮ್ಮ ಬಹುತೇಕ ಶಾಲಾಕಾಲೇಜುಗಳ ವೇಳಾಪಟ್ಟಿಯಲ್ಲಿ ದೈಹಿಕ ಶಿಕ್ಷಣವನ್ನು ಕೈಬಿಡಲಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿ ಅವಕಾಶಕ್ಕೆ ಹುಡುಕಿಕೊಂಡು ಬಂದರೂ ಅವರಿಗೆ ಅವಕಾಶ ಸಿಗುವುದಿಲ್ಲ. ಸರ್ಕಾರ ಈಚೆಗೆ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ (ಬಿ.ಪಿ.ಇಡಿ.) ನೇಮಕಾತಿಯನ್ನೇ ಮಾಡಿಕೊಂಡಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಸಿ.ಪಿ.ಇಡಿ. ಶಿಕ್ಷಕರ ನೇಮಕಾತಿಯನ್ನು ಕೈಬಿಟ್ಟು ಅದೆಷ್ಟೋ ವರ್ಷಗಳಾಗಿವೆ. ಖಾಸಗಿ ಶಾಲಾಕಾಲೇಜುಗಳಲ್ಲೂ ಇದೇ ಪರಿಸ್ಥಿತಿ ಇದೆ. ಇಂಥ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಗುವುದಾದರೂ ಹೇಗೆ ? ವಿದೇಶಗಳಲ್ಲಿ ಕಡ್ಡಾಯ: ಅಮೆರಿಕ, ಇಂಗ್ಲೆಂಡ್, ರಷ್ಯಾ, ಆಸ್ಟ್ರೇಲಿಯಾ, ಕೋರಿಯಾದಂತಹ ರಾಷ್ಟ್ರಗಳಲ್ಲಿ ದೈಹಿಕಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಶಾಲಾಪೂರ್ವ ಹಂತದಲ್ಲಿ ದಿನಕ್ಕೆ 30 ನಿಮಿಷ, 4ರಿಂದ 6 ವರ್ಷಗಳ ಅವಧಿಯಲ್ಲಿ ವಾರಕ್ಕೆ ಕನಿಷ್ಠ 3 ಗಂಟೆ, 7ರಿಂದ 10 ವರ್ಷದವರಗೆ ವಾರಕ್ಕೆ ಕನಿಷ್ಠ 4 ಗಂಟೆ, 11ರಿಂದ 16 ವರ್ಷದವರಗೆ ವಾರಕ್ಕೆ ಕನಿಷ್ಠ 5 ಗಂಟೆ ದೈಹಿಕಶಿಕ್ಷಣ ನೀಡಲೇಬೇಕು ಎಂಬ ನಿಯಮ ರೂಪಿಸಲಾಗಿದೆ. ನಮ್ಮಲ್ಲೂ ಇದೇ ರೀತಿಯ ನಿಯಮವಿದ್ದರೂ ಅದು ಕಡ್ಡಾಯವಾಗಿಲ್ಲ. ಸಾಮರ್ಥ್ಯದ ಸದ್ಬಳಕೆಯಾಗಬೇಕು: ಕ್ರೀಡಾಸಕ್ತಿ ಹೊಂದಿರುವ ಮಕ್ಕಳಿಗೆ ‘ಆಟ–ಗೀಟ ಎಲ್ಲ ಬಿಟ್ಟುಬಿಡು, ಓದಿನತ್ತ ಗಮನ ಕೊಡು’ ಎಂದು ಶಿಕ್ಷಕ ಹಾಗೂ ಪೋಷಕರು ಪ್ರತಿದಿನ ಉಪದೇಶ ಮಾಡುತ್ತಾರೆ. ಗಾಗಿಯೇ ನಮ್ಮ ಮಕ್ಕಳು ಈಚೆಗೆ ಮೊಬೈಲ್, ಕಂಪ್ಯೂಟರ್, ಇಂಟರ್‌ನೆಟ್, ಟಿವಿ ಗೀಳಿಗೆ ಅಂಟಿಕೊಂಡು ಕೋಣೆಯ ಕೂಸುಗಳಾಗಿ ಕೊಳೆಯುತ್ತಿದ್ದಾರೆ. ಅಂತರ್ಮುಖಿಗಳಾಗಿ ಬದಲಾಗುತ್ತಿದ್ದಾರೆ. ಅಪರಾಧಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿನ ಸಾಮರ್ಥ್ಯ ಧನಾತ್ಮಕವಾಗಿ ಬಳಕೆಯಾಗಬೇಕು. ಅಂದಾಗ ಅದು ವೃದ್ಧಿಸುತ್ತದೆ. ಈ ರೀತಿಯ ಸಾಮರ್ಥ್ಯದ ಸದ್ಬಳಕೆ ದೈಹಿಕಶಿಕ್ಷಣದಿಂದ ಸಾಧ್ಯ. ದೈಹಿಕಶಿಕ್ಷಣದಿಂದ ಹಲವು ಲಾಭಗಳು: ದೈಹಿಕಶಿಕ್ಷಣ ಮತ್ತು ಕ್ರೀಡೆಯಿಂದ ದೈಹಿಕ ಕ್ಷಮತೆ, ಚಲನಶೀಲತೆ, ಆರೋಗ್ಯ, ಒತ್ತಡದಿಂದ ಮುಕ್ತಿ, ನಾಯಕತ್ವ, ಸಹಕಾರ, ಮಾನಸಿಕ ಸದೃಢತೆ, ನಿರ್ಣಯ ಕೈಗೊಳ್ಳುವಿಕೆ, ಗುರಿ ನಿರ್ಧರಿಸುವಿಕೆ, ಆತ್ಮವಿಶ್ವಾಸ, ಆಸಕ್ತಿ, ಅವಧಾನ, ಕ್ರೀಡಾಸ್ಫೂರ್ತಿ, ಸಂಘಜೀವನ, ತಂಡ ಮನೋಭಾವ, ಗೆಲ್ಲುವ ಛಲ, ಸ್ವಯಂ ಶಿಸ್ತು, ತಾಳ್ಮೆ, ಪ್ರಾಮಾಣಿಕತೆ ಮುಂತಾದ ಗುಣಗಳು ವೃದ್ಧಿಸುತ್ತವೆ. ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಎಂಬುದನ್ನು ಮನಗಂಡೇ ನಮ್ಮಲ್ಲಿ ‘ಆರೋಗ್ಯ ಮತ್ತು ದೈಹಿಕ ಶಿಕ್ಷಣ’ ಎಂಬ ಜಂಟಿ ಪರಿಕಲ್ಪನೆ ನೀಡಲಾಗಿದೆ. ಆದರೆ, ಇದು ಬರಿ ಪರಿಕಲ್ಪನೆಯಾಗಿ ಮಾತ್ರ ಉಳಿದಿದೆ, ಅನುಷ್ಠಾನವಾಗಿ ಅಲ್ಲ. ನಿಲುವು ಬದಲಿಸಬೇಕು: ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ದೈಹಿಕ ಶಿಕ್ಷಣದತ್ತ ತಮ್ಮ ನಿಲುವು ಬದಲಿಸಿಕೊಂಡು ಕ್ರೀಡೆಯನ್ನೂ ಗಂಭೀರವಾಗಿ ಪರಿಗಣಿಸಿದರೆ, ಭಾರತ ಕ್ರೀಡೆಯಲ್ಲೂ ಮಿಂಚುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಈ ಅಂಶಗಳನ್ನು ಪರಿಗಣಿಸಬಹುದು. * ಪ್ರತಿ ಶಾಲೆಯಲ್ಲೂ ದೈಹಿಕಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಕಡ್ಡಾಯವಾಗಿರಬೇಕು. * ಗ್ರಾಮೀಣ ಭಾಗದ, ಗುಡ್ಡಗಾಡು ಪ್ರದೇಶಗಳ ಬುಡಕಟ್ಟು ಜನಾಂಗದ ಮಕ್ಕಳಲ್ಲಿ ದೈಹಿಕ ಸಕ್ಷಮತೆ ಹೆಚ್ಚಿರುತ್ತದೆ. ಅಂಥ ಮಕ್ಕಳನ್ನು ಗುರುತಿಸಬೇಕು. ಅವರಿಗೆ ಉತ್ತಮ ತರಬೇತಿ ನೀಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. * ಕ್ರೀಡಾಪಟುಗಳ ಆಯ್ಕೆಯಲ್ಲಿ ಲಾಬಿ ಸಲ್ಲ, ಯಾವುದೇ ಪೂರ್ವಗ್ರಹ, ಒತ್ತಡವಿಲ್ಲದೆ, ನೈಜ ಪ್ರತಿಭೆಯನ್ನು ಗುರುತಿಸಿ, ಅವಕಾಶ ಕೊಡಬೇಕು. * ಈಗಿರುವ ಕ್ರೀಡಾಶಾಲೆ ಮತ್ತು ವಸತಿನಿಲಯಗಳನ್ನು ಮೇಲ್ದರ್ಜೆಗೇರಿಸಿ, ಉತ್ತಮವಾಗಿ ನಿರ್ವಹಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಶಾಲೆ, ವಸತಿನಿಲಯಗಳನ್ನು ಸ್ಥಾಪಿಸಬೇಕು. * ಕ್ರಿಕೆಟ್ ಒಂದೇ ಕ್ರೀಡೆ ಅಲ್ಲ ಎಂಬುದನ್ನು ಮನಗಾಣಬೇಕು. ಇತರ ಗುಂಪು, ವೈಯಕ್ತಿಕ, ಗ್ರಾಮೀಣ, ಜನಪದ ಕ್ರೀಡೆ, ಕಸರತ್ತುಗಳಿಗೂ ಆದ್ಯತೆ ನೀಡಬೇಕು. * ಕ್ರೀಡಾ ಸಾಧಕರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಸಹಾಯಧನ, ಮತ್ತಿತರ ಗೌರವ, ಸೌಕರ್ಯ, ಅವಕಾಶಗಳನ್ನು ಒದಗಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.