ಕಲಿಕೆಯ ಗತಿಶೀಲತೆ ಪತ್ರಿಕಾ ಸಂಪಾದಕನಾಗಿ ಕೇವಲ ಓದುಗರನ್ನು ತಣಿಸಿದರೆ ನನಗೆ ಸಮಾಧಾನ ಆಗುತ್ತಿರಲಿಲ್ಲ. ಲೇಖನ ಬರೆಯುವವರನ್ನು ಬೆಳೆಸಬೇಕು ಎಂಬ ಒತ್ತಾಸೆ ನನ್ನನ್ನು ಬಾಧಿಸುತ್ತಿತ್ತು. ಹಾಗೆಯೇ ಅಧ್ಯಾಪಕವೃತ್ತಿಯಲ್ಲೂ ಕೇವಲ ಶ್ರೋತ್ರೀಯರಾದ ವಿದ್ಯಾರ್ಥಿಗಳು ವಿನಯ-ವಿಧೇಯತೆಯಿಂದ ಇದ್ದರೂ, ಅವರಿಗಿಂತಲೂ ಪ್ರಶ್ನೆ ಕೇಳಿ ಕೆಣಕುವ ತುಂಟರೇ ನನಗೆ ಆತ್ಮೀಯರಾಗಿರುತ್ತಿದ್ದರು. ಹಾಗೆ ಯಾರೂ ನನ್ನನ್ನು ಸಮೀಪಿಸಿ ಪ್ರಶ್ನೆ ಕೇಳದೇ ಹೋದರೆ, ಮುಂದಿನ ತರಗತಿಯಲ್ಲಿ ನಿರೂಪಣಾ ವಿಧಾನವನ್ನೇ ಬದಲಿಸಿಕೊಳ್ಳುತ್ತಿದ್ದೆ. ಸೃಜನಶೀಲತೆಯ ಪ್ರಮುಖ ಲಕ್ಷಣವೆಂದರೆ – ಬಹುಪ್ರತಿಕ್ರಿಯೆ ( ). ಆದರೆ ಇಂದಿನ ವಿದ್ಯಾಭ್ಯಾಸದಲ್ಲಿ ಅಂಕಗಳಿಕೆಗೆ ಒತ್ತು ಅಧಿಕವಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಪೂರಕವಾದ ಏಕ (ಏಕೈಕ ಎನ್ನಲೂಬಹುದು) ಪ್ರತಿಕ್ರಿಯೆಗೆ ಬದ್ಧರಾಗಿರುವಂತೆ ನೋಡುಕೊಳ್ಳಲಾಗುತ್ತಿದೆ. ಆದರೆ ಕಲಿಕೆಯ ಈ ಕ್ರಮದಲ್ಲಿ ಅನೇಕ ತೊಂದರೆಗಳು ಆಗುತ್ತಿವೆ. ಹೊಸದೊಂದು ಸಂದರ್ಭದಲ್ಲಿ ಆಲೋಚಿಸಿ ಅನ್ವಯಿಸುವ ಗುಣ/ಸಾಮಾರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿಲ್ಲ. ಕಲಿಕೆಯ ಏಕತಾನತೆ ಅವರನ್ನು ‘ನೀರಸ ಕಲಿಕೆ’ಯ ಹಗ್ಗದಿಂದ ಬಂಧಿಸಿಬಿಟ್ಟಿದೆ! ಕಲಿಕೆ ಯಾವಾಗಲೂ ಸಂತಸದಾಯಕವೇ. ಅದು ಮೊದಲಾಗುವುದು ಮನೆಯಲ್ಲಿ, ಮಗು ತಾನು ಬೆಳೆಯುವಾಗ ಆದ ಅನುಭವಗಳನ್ನು, ಪ್ರಶ್ನಿಸುತ್ತಾ ತಾನೇನು ಮಾಡಬೇಕೆಂಬುದನ್ನು ಅನುಕರಿಸುತ್ತಾ ಅನುಸರಿಸುತ್ತಾ ಕಲಿಯಲು ಮೊದಲು ಮಾಡುತ್ತದೆ. ಅದರ ಅರಿವು ಅನುವಾದ ಶಿಸ್ತಿನ ಚೌಕಟ್ಟಿಗೆ ಬರುವುದು ಶಾಲಾ ಕಲಿಕೆಯ ಮೂಲಕ. ಈ ಶಿಸ್ತು ರೂಪಿಸುವಾಗ ಮಗುವಿನ ಸ್ವಚ್ಛಂದತೆಗೆ ಅಡ್ಡ ಬರುವುದು ಸಹಜ. ಅದು ವೇದನೆಯ ಸಂಗತಿ. ಆದರೆ ಆ ವೇದನೆಯನ್ನು ಮರೆಸಿ ಮುದಗೊಳಿಸಲು ಶಿಕ್ಷಣದ ಚೌಕಟ್ಟಿನಲ್ಲಿಯೇ ವಿಶೇಷ ಅವಕಾಶಗಳುಂಟು ಆದರೆ ಪರೀಕ್ಷೆಯ ಆತಂಕ. ಈ ಸಾಧ್ಯತೆಗೆ ಮುಸುಕೆಳೆದುಬಿಡುತ್ತದೆ! ಶಾಲಾಕಲಿಕೆ ಅದೆಷ್ಟೇ ಪರಿಪೂರ್ಣತೆಯತ್ತ ಸಾಗಿದರೂ, ಕಲಿಕೆ ಪೂರ್ಣ ಆಗುವುದು ವಿದ್ಯಾರ್ಥಿಯ ನಿಸರ್ಗ/ ಸಮಾಜದೊಡನೆ ಒಡನಾಡಿದಾಗ ಆದ ಸ್ವಾನುಭವದ ಅಂಶಗಳಿಗೆ ಕಲಿಕೆಯನ್ನು ಅನ್ವಯ ಮಾಡಿದಾಗಲೆ? ಹಾಗೆ ಅನ್ವಯ ಮಾಡುವ ಕ್ರಮವನ್ನು ತರಗತಿಗಳಲ್ಲಿ ಕಲಿಸುವ ಸಲುವಾಗಿಯೇ ಸಮಸ್ಯಾ ಪೂರ್ಣಕ್ರಮದಲ್ಲಿ ಬೋಧಿಸಲು ಒತ್ತು ನೀಡಲಾಗುತ್ತಿದೆ. ಪಠ್ಯಪುಸ್ತಕದಲ್ಲಿ ಪರಿಕಲ್ಪನೆಗಳನ್ನು ಪರಿಚಯಿಸುವಾಗಲೂ ಸಮಸ್ಯೆಯಿಂದ ಪ್ರಾರಂಭಿಸಿ ಪರಿಸಮಾಪ್ತಿಯನ್ನು ದೈನಂದಿನ ಅನುಭವಕ್ಕೆ ವಿಸ್ತರಿಸಿ ಕೈಗೊಳ್ಳಲಾಗುತ್ತದೆ! ಸಕ್ಕರೆ ಕೈಗಾರಿಕೆ ಕುರಿತು ಬೋಧನೆ ಮಾಡುವಾಗ, ಸಕ್ಕರೆ ಬಳಕೆಗೆ ಬರುವ ಮೊದಲು ಜನರು ಸಿಹಿಗಾಗಿ ಏನು ಮಾಡುತ್ತಿದ್ದರು? ಬೆಲ್ಲ ತಯಾರಿ ಬಳಕೆಯಲ್ಲಿತ್ತು; ಅದಕ್ಕೂ ಮೊದಲು ಜೇನುತುಪ್ಪವನ್ನು ಒಣಗಿಸಿ ‘ಶರ್ಕರ’ವಾಗಿ ಬಳಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡುವುದು ಅಗತ್ಯ. ಇದು ಮಕ್ಕಳ ಕುತೂಹಲ ತಣಿಸುವುದರ ಜೊತೆಗೆ ಜೀವನಶ್ರದ್ಧೆಯನ್ನು ಮೂಡಿಸಬಲ್ಲದು. ಸಿಹಿಯ ವಸ್ತುಗಳು ನಿಸರ್ಗದಲ್ಲಿ ಲಭ್ಯವಿದ್ದರೂ ಅವು ನೀರಿನ ಸಂಪರ್ಕವಿದ್ದಾಗ ಹುದುಗಿ ಹುಳಿಯಾಗುವುದರಿಂದ ಆ ಪದಾರ್ಥ ಹಾಳಾಗುತ್ತಿತ್ತು. ಆದ್ದರಿಂದ ಸಿಹಿಕಾರಕವನ್ನು ನಿರ್ಜಲಗೊಳಿಸಿ ಬೆಲ್ಲ/ ಒಣಗಿಸಿದ ಜೇನು ತಯಾರಿಸಲಾಗುತ್ತಿತ್ತು. ಮತ್ತೆ ಅದನ್ನು ಆಕರ್ಷಕಗೊಳಿಸುವ ಪ್ರಯತ್ನವಾಗಿ ನಿರ್ವರ್ಣಗೊಳಿಸಿ ಸಕ್ಕರೆ ತಯಾರಿಸಲಾಗುತ್ತಿದೆ ಎಂಬುದು ವಿಜ್ಞಾನದ ಮಾಹಿತಿಯಲ್ಲದೆ ಹೋದರೂ ಪೂರಕ ಮಾಹಿತಿ. ಈ ಪೂರಕ ಮಾಹಿತಿಯಿಂದಾಗಿ ವಿಜ್ಞಾನವು ಸಾಮಾಜೀಕರಣಗೊಳ್ಳಲು ಸಾಧ್ಯ. ಹೀಗೆಯೇ, ಕಲಿಸುವ ವಿಷಯಗಳು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಅಂತಿಮ ಗುರಿಯಲ್ಲ; ಪ್ರಾರಂಭಿಕ ಕರ್ತವ್ಯ. ಆದರೆ ಅದು ಅಲ್ಲಿಗೇ ನಿಲ್ಲದೆ ಆಲೋಚನೆಗೆ ಎಡೆ ಮಾಡಿಕೊಡಬೇಕು. ಆಗ ಕಲಿಕೆಯ ಸಾಮಾಜೀಕರಣ ಆಗುತ್ತದೆ. ಈ ಸಾಮಾಜೀಕರಣ ಕೌಶಲವನ್ನು ಮಕ್ಕಳಲ್ಲಿ ರೂಢಿಸುವುದು ಎಲ್ಲ ಕಲಿಕೆಗೂ ಅಗತ್ಯವಾದದ್ದು! ಮಾಹಿತಿ ಕೇಂದ್ರಿತ ಕಲಿಕೆ, ಮಾನವ ಕೇಂದ್ರಿತವಾಗಿ, ಸಮುದಾಯ ಕೇಂದ್ರಿತವಾಗಿ, ನಿಸರ್ಗಕೇಂದ್ರಿತವಾಗಿ ಹದಗೊಂಡಾಗಲೇ ದೋರೆಗಾಯಿಯಾಗಿದ್ದ ಕಲಿಕೆ ಪರಿಪಕ್ವವಾದ ಹಣ್ಣಾಗಬಹುದೆಂದು ಹೇಳಬಹುದು. ಆಗ ಕಲಿಕೆಯ ಸವಿ ಹಾಗೂ ಸಾರ್ಥಕತೆಯ ಸಾಧನೆ ಆಗುತ್ತದೆ. ಇದು ಆಗಬೇಕಾದರೆ, ವಿದ್ಯಾರ್ಥಿಗಳು/ ಅಧ್ಯಾಪಕರು ಅರಳಿದ ಕಣ್ಣುಗಳಿಂದ ಸಾಮಾಜಿಕ/ ನೈಸರ್ಗಿಕ/ ದೈನಂದಿನ ವಿದ್ಯಮಾನಗಳನ್ನು ಗಮನಿಸುತ್ತಾ ಶಾಲೆಯಲ್ಲಿ ಚರ್ಚೆಯಾಗುವ ಪರಿಕಲ್ಪನೆಗಳೊಂದಿಗೆ ತಳುಕು ಹಾಕಬಹುದಾದ ಪ್ರಯತ್ನವನ್ನು ಮಾಡಬೇಕು – ಆಗ ಮಾತ್ರ ಇದು ಸಾಧ್ಯ. ಪುಸ್ತಕದಾಚೆಗೆ ಪರಿಸರಿಸಿದಾಗ ಕಲಿಕೆ ಪಕ್ವವಾದೀತು. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದಲೂ ಈ ಪ್ರಯತ್ನ ಪ್ರಮುಖವೆನಿಸುತ್ತದೆ. ದೈನಂದಿನ ಅನುಭವಗಳಿಗೆ ಅನ್ವಯಿಸಿ ಅರ್ಥೈಸುವ ಪ್ರಶ್ನೆಗಳಿಗೆ ಇಂತಹ ಪರೀಕ್ಷೆಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ಅಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರವು ನೇರವಾಗಿ ಪಠ್ಯಪುಸ್ತಕದಲ್ಲಿ ದೊರೆಯುವುದಿಲ್ಲ. ಉತ್ತರಕ್ಕೆ ಬೇಕಾದ ಸುಳಿವು ಮಾತ್ರ ಸಿಕ್ಕೀತು. ಹತ್ತನೆಯ ತರಗತಿಯ ವಿಜ್ಞಾನ ಪ್ರಶ್ನಪತ್ರಿಕೆಯಲ್ಲಿ ಆನ್ವಯಿಕ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆಯೆಂದು ಅಧ್ಯಾಪಕರು ದೂರುತ್ತಿರುವುದು ಕಂಡುಬಂದಿದೆ. ಈ ಪ್ರಶ್ನೆಗಳ ಉದ್ದೇಶ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದಲ್ಲ ಬದಲಾಗಿ, ಮಕ್ಕಳನ್ನು ಸ್ಪರ್ಧಾಪರೀಕ್ಷೆಗಳಿಗೆ ಸಜ್ಜುಗೊಳಿಸುವುದೇ ಆಗಿದೆ!ಅದು ಮಕ್ಕಳಿಗೆ ಕಷ್ಟವಾಗದಿರುವಂತೆ ಮಾಡಲು ಅಧ್ಯಾಪಕರು ಮನಸ್ಸು ಮಾಡಬೇಕು. ಪಾಠ ಮಾಡುವಾಗ ಈ ಬಗೆಯ ಅನ್ವಯಗಳನ್ನು ಮಾಡಿ ತೋರಿಸಬೇಕು. ಅಲ್ಲದೆ 4 ಮತ್ತು 9ನೇ ತರಗತಿಯ ಪ್ರಶ್ನಪತ್ರಿಕೆಗಳಲ್ಲೂ ಆನ್ವಯಿಕ ಪ್ರಶ್ನೆಗಳನ್ನು ಹಾಕಿ ಅವರನ್ನು ಸಜ್ಜು ಗೊಳಿಸಿದ್ದಾದರೆ ಆಗ ಅವರು ಮಾನಸಿಕವಾಗಿ ಆ ಬಗೆಯ ಪ್ರಶ್ನೆಗಳಿಗೆ ಸಿದ್ಧವಾಗುತ್ತಾರೆ. ಜಾಗತಿಕವಾಗಿ ಏಕೀಕೃತ ಕ್ರಮವಾಗಿಸಲು, ಸಾಮಾಜಿಕ ಬದಲಾವಣೆಗೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಪಠ್ಯಪುಸ್ತಕಗಳು, ಬೋಧನಾಕ್ರಮಗಳು, ಪ್ರಶ್ನಪತ್ರಿಕೆಯ ಸ್ವರೂಪ – ಎಲ್ಲವೂ ನವೀಕರಣಗೊಳ್ಳುವುದು ಸಹಜ ಹಾಗೂ ಅನಿವಾರ್ಯ. ಅಧ್ಯಾಪಕವೃತ್ತಿ ಗತಿಶೀಲವಾದದ್ದು. ಆದ್ದರಿಂದ ಬದಲಾವಣೆಗೆ ಒಗ್ಗಿಕೊಳ್ಳುವ ನಮ್ರತೆ ಈ ವೃತ್ತಿಗೆ ಮೂಲಭೂತ ಅಗತ್ಯ. ಒಮ್ಮೆ ಕಲಿತದ್ದನ್ನೇ ಪುನರಾವರ್ತನೆ ಮಾಡುವ ಕೆಲಸವೇ ಬೇರೆ. ಆದರೆ ಅಧ್ಯಾಪಕ/ ವೈದ್ಯ/ ವಕೀಲ ಮೊದಲಾದ ವೃತ್ತಿಗಳು ನಿರಂತರ ಎಚ್ಚರಿಕೆಯಿಂದ ಗಮನಿಸುತ್ತಾ ಮುಂದುವರಿಯಬೇಕಾದ ವೃತ್ತಿಗಳು. ಮಾಹಿತಿ, ನಿರೂಪಣಾ ಶೈಲಿ, ಪ್ರಶ್ನೆಗಳನ್ನು ರೂಪಿಸುವಿಕೆ – ಎಲ್ಲವೂ ನವೀಕರಣವಾಗಬೇಕಾದವು. ಕವಿತೆ ನಿಚ್ಚಂ ಪೊಸದು, ಅರ್ಣವದ ವೋಲ್‌ ಅತಿ ಗಂಭೀರಂ – ಪಂಪ (ಕವಿತೆ ನಿತ್ಯವೂ ಹೊಸದು ಸಮುದ್ರದ ಹಾಗೆ ಗಂಭೀರ) ಎಂದ ಮಾತು ಈ ವೃತ್ತಿಗಳಿಗೂ ಅನ್ವಯಿಸುತ್ತದೆ. ರಾಬರ್ಟ್‌ ಫ್ರಾಸ್ಟ್ ಕವಿ, ಕವಿತೆಯೆನ್ನುವುದು ಘನೀಭವಿಸಿದ ಆಲೋಚನೆಯಲ್ಲ. ಆಲೋಚನೆಗೆ ತೊಡಗಲು ಕೆಣಕುವ/ ಪ್ರೇರೇಸುವ ಪ್ರಯತ್ನ ಎಂದು ಹೇಳಿದ್ದುಂಟು. ಬೋಧನೆಯೂ ಆಲೋಚನೆಗೆ ಪ್ರೇರಣೆ. ನೆನಪಿಟ್ಟುಕೊಂಡು ಅದೇ ಶಬ್ದದಲ್ಲಿ ಬರೆಯುವ ವ್ಯಾಖ್ಯೆ ಇಂದಿನ ಶಿಕ್ಷಣದಲ್ಲಿ ಅಪ್ರಸ್ತುತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.