‘ಭೂತ’ವನ್ನು ಓದುತ್ತಾ ಭವಿಷ್ಯವನ್ನು ಬರೆಯೋಣ! ನಮ್ಮ ಮುತ್ತಜ್ಜಿಗೆ ಅ ಆ ಇ ಈ ಬರೆಯಲು ಬರುತ್ತಿರಲಿಲ್ಲ. ಅ, ಆ, ಇ, ಈ, ಎ ಬಿ ಸಿ ಡಿ – ಎರಡೂ ಓದಲು-ಬರೆಯಲು ಬರುತ್ತಿದ್ದ ನಮಗೆ ಅಂಗಳದಲ್ಲಿದ್ದ ನೂರಕ್ಕೂ ಹೆಚ್ಚಿನ ಹೂ-ಹಣ್ಣಿನ ಗಿಡಗಳ ಹೆಸರು ಗೊತ್ತಿರಲಿಲ್ಲ. ಓದು ಬರಹ ಬಾರದ ನಮ್ಮ ಮುತ್ತಜ್ಜಿ ಅವುಗಳ ಹೆಸರೆಲ್ಲವನ್ನೂ, ತಮ್ಮ ಮಸುಕಾದ ದೃಷ್ಟಿಯಿಂದ ನೋಡಿ, ಕೆಲವೊಮ್ಮೆ ಮುಟ್ಟಿ, ಎಲೆಯನ್ನು ಪರೀಕ್ಷಿಸಿ ಇದು ‘ಇಂಥದ್ದೇ’ ಎಂದು ಹೇಳಿಬಿಡುತ್ತಿದ್ದರು! ‘ಅಕ್ಷರತೆ’ ಎಂದರೆ ಏನು? ಏಕಾಗಿ ನಾವು ಅಕ್ಷರ ಕಲಿಯಬೇಕು? ಅಕ್ಷರತೆಗೂ ಶಿಕ್ಷಣಕ್ಕೂ ಇರುವ ಅಂತರ ಕಿರಿದಾಗಬೇಕಾದ ಅಗತ್ಯವಿದೆಯೇ? ಯುನೆಸ್ಕೋ ಸಂಸ್ಥೆ ಜಗತ್ತಿನಾದ್ಯಂತ ವಿಶ್ವ ಸಾಕ್ಷರತಾ ದಿನವನ್ನು 50 ವರ್ಷಗಳಿಂದ ನಡೆಸುತ್ತಲೇ ಇದೆ. ಜೀವನಪೂರ್ತಿ ಲಿಂಗ-ವರ್ಗ-ವರ್ಣ- ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ‘ಅಕ್ಷರಸ್ಥ’ರಾಗಬೇಕೆಂದು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ. ಶಾಲೆಯನ್ನು ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಆಗ್ನೇಯ ಏಷ್ಯಾ ಪ್ರಾಂತ್ಯಕ್ಕೇ ವಿಶೇಷಾಗಿ ‘ಮೀನಾ’ ಎಂಬ ಹುಡುಗಿಯ ಪರಿಕಲ್ಪನೆಯನ್ನು ಹುಟ್ಟುಹಾಕಿದೆ. ಆಕೆಯ ‘ಕಾಮಿಕ್ಸ್’ಗಳು ಹಳ್ಳಿಹಳ್ಳಿಗಳಲ್ಲಿ ಇಂದು ಬಾಲಕಿಯರನ್ನು ಮರಳಿ ಶಾಲೆಗೆ ಕರೆತರಲು ಕಾರಣವಾಗಿದೆ. ಯುನೆಸ್ಕೋದ ಪ್ರಕಾರ ಅಕ್ಷರತೆ ಎನ್ನುವುದು ಇಂದಿನ ಎಲ್ಲ ಕ್ಷೇತ್ರಗಳಲ್ಲಿಯೂ ಮಾನವ ಸಬಲೀಕರಣಕ್ಕೆ ಪ್ರಮುಖವಾದ ಸಾಧನ. ನಮ್ಮ ವಿದ್ಯಾಭ್ಯಾಸ ಪ್ರಾಯೋಗಿಕವಾಗಿ ಜೀವನಕ್ಕೆ ಉಪಯುಕ್ತವಾದ ಕೌಶಲವಾಗಿ ಬದಲಾದರೆ ಯುನೆಸ್ಕೋದ ಆಶಯದಂತೆ ಅಕ್ಷರತೆ ಸಬಲೀಕರಣಕ್ಕೆ ಕಾರಣವಾದೀತು.ಆದರೆ ನಿಜಸ್ಥಿತಿ ಹಾಗಿಲ್ಲ. ಉದಾಹರಣೆಗೆ, ಆರೋಗ್ಯದ ಕುರಿತ ಸಂಶೋಧನೆಗಳಲ್ಲಿ ಯಾವುದೇ ರೋಗದ ಅಂಕಿ–ಅಂಶಗಳನ್ನು ತೆಗೆದುಕೊಂಡರೂ, ವಿದ್ಯಾಭ್ಯಾಸದ ಮಟ್ಟ ಹೆಚ್ಚಿದಷ್ಟೂ ಆರೋಗ್ಯದ ಗುಣಮಟ್ಟವು ಹೆಚ್ಚುವುದನ್ನು ರೋಗದ ಸಾಧ್ಯತೆ ಕಡಿಮೆಯಾಗುವುದನ್ನು ತೋರಿಸಿದ್ದವು. ಆದರೆ ಇತ್ತೀಚಿನ ಸಂಶೋಧನೆಗಳು ವಿದ್ಯಾಭ್ಯಾಸಕ್ಕೂ ಆರೋಗ್ಯದ ಬಗೆಗಿನ ಅರಿವಿಗೂ ಇರುವ ಅಂತರವನ್ನೇ ಎತ್ತಿ ತೋರಿಸುತ್ತವೆ. ವೈದ್ಯರಿಗೇ ಅಚ್ಚರಿಯೆನಿಸುವಂತೆ, ಹಳ್ಳಿಯ ಅನಕ್ಷರಸ್ಥ ಗ್ರಾಮೀಣ ಜನರು ಚಿಕಿತ್ಸೆಯನ್ನು ಸರಿಯಾಗಿ ತೆಗೆದುಕೊಳ್ಳುವಂತೆ, ಕಾಯಿಲೆಯನ್ನು ಒಪ್ಪಿಕೊಂಡು, ತಾನು ಮಾಡಬೇಕಾದ ಪ್ರಯತ್ನವನ್ನು ಮಾಡುವಂತೆ ಪಟ್ಟಣದ ‘ಸುಶಿಕ್ಷಿತರು’ ಮಾಡುವುದಿಲ್ಲ! ಇಂಥ ಉದಾಹರಣೆಗಳು ನಮ್ಮ ಶಾಲಾಶಿಕ್ಷಣ ನಿಜವಾದ ಅರ್ಥದಲ್ಲಿ ನಮ್ಮನ್ನು ಸ್ವಾವಲಂಬಿಗಳಾಗುವಂತೆ, ಗುಣಮಟ್ಟದ ಜೀವನ ನಡೆಸುವಂತೆ ಸಿದ್ಧಪಡಿಸುತ್ತಿದೆಯೇ ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ಯುನೆಸ್ಕೋದ ಈ ಬಾರಿಯ ‘ವಿಶ್ವ ಸಾಕ್ಷರತಾ ದಿನ’ ವಿಶೇಷ. ಸೆಪ್ಟೆಂಬರ್ 8ರ ಈ ಬಾರಿಯ ವಿಶ್ವಸಾಕ್ಷರತಾ ದಿನ ಯುನೆಸ್ಕೋದ ಈ ಪ್ರಯತ್ನದ ‘50’ರ ಸಂಭ್ರಮ. ಆದರೆ ವಿಶೇಷ ‘50’ರ ಸಂಭ್ರಮದಿಂದಲ್ಲ – ಯುನೆಸ್ಕೋ ಆಚರಿಸುತ್ತಿರುವ ಧ್ಯೇಯದಿಂದ: , - ‘ಭೂತವನ್ನು ಓದುತ್ತಾ, ಭವಿಷ್ಯವನ್ನು ಬರೆಯುವ’ ಗುರಿಯಿಂದ. ನಮ್ಮ ಅಜ್ಜ-ಅಜ್ಜಿಯರು ಓದು-ಬರಹ ಗೊತ್ತಿರದಿದ್ದರೂ ನೂರಾರು ಶ್ಲೋಕ, ಜನಪದ ಹಾಡುಗಳನ್ನು ಬಲ್ಲವರು. ಇಂಥ ಕೌಶಲಗಳನ್ನು ಬೆಳೆಸುವುದು ಇಂದಿನ ಶಿಕ್ಷಣ ಕ್ರಮದಲ್ಲಿ ಎಷ್ಟು ನಡೆಯುತ್ತಿದೆ? ಶಾಲಾ ಶಿಕ್ಷಣಕ್ರಮದಲ್ಲಿ ಏಕಾಏಕಿ ಬದಲಾವಣೆಗಳು ಸುಲಭ ಸಾಧ್ಯವಲ್ಲ. ಆದರೆ ‘ಮೌಖಿಕ ಸಂಸ್ಕೃತಿ’ಯನ್ನು ಉಳಿಸಿ ಬೆಳೆಸಬೇಕಾದ್ದು ಅಪ್ಪ-ಅಮ್ಮಂದಿರು ತಮ್ಮ ಮಕ್ಕಳಿಗೆ ನೀಡಬಹುದಾದ ಅನೌಪಚಾರಿಕ ಶಿಕ್ಷಣದ ಮೂಲಕ. ತಂತ್ರಜ್ಞಾನಕ್ಕೆ ನಾವು ನೀಡುವ ಸಮಯವನ್ನು ಕಿಂಚಿತ್ತಾದರೂ ಕಡಿಮೆ ಮಾಡಿ, ಇತರರ ಬಳಿ ಬೆರೆತು, ನೋಡಿ-ಮಾಡಿ ಕಲಿಯುವ ಸಂಸ್ಕೃತಿ ಹೆಚ್ಚಬೇಕಿದೆ. ಶಾಲೆಯಲ್ಲಿ ಕಲಿತದ್ದನ್ನು ಪ್ರಯೋಗಿಸಿ ನೋಡುವ, ಜೀವನವನ್ನು ಅದರ ಮೂಲಕ ಬದಲಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಬೇಕಿದೆ. ನಮ್ಮ ಹಿರಿಯರ ಭೂತಕಾಲವನ್ನು ಓದುತ್ತಲೇ, ಅದರಿಂದ ಸ್ಫೂರ್ತಿ ಪಡೆಯುತ್ತಲೇ, ನಮ್ಮ ಮಕ್ಕಳ ಭವಿಷ್ಯವನ್ನು ಬರೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.