ಪರಿಸರ ಸ್ನೇಹಿ ಅಕ್ಕಿ ಒಣಗಿಸುವ ಯಂತ್ರ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ರೈತರ ಮೊಗದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಈ ಸಂತಸದ ಜೊತೆಯಲ್ಲೇ ಬೇಸಿಗೆ ಫಸಲಿನ ಸಂರಕ್ಷಣೆ ಬಗ್ಗೆಯೂ ರೈತರಲ್ಲಿ ಆತಂಕ ಎದುರಾಗಿರುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಭತ್ತ ಅಥವಾ ಅಕ್ಕಿಯನ್ನು ಒಣಗಿಸಲು ರೈತರು ಪರದಾಡುತ್ತಿರುತ್ತಾರೆ. ರೈತರ ಈ ಸಮಸ್ಯೆಗೆ ಪರಿಹಾರವೆಂಬಂತೆ ಬೆಂಗಳೂರಿನಲ್ಲಿರುವ ಎಂ.ಎಸ್‌. ರಾಮಯ್ಯ ತಾಂತ್ರಿಕ ವಿದ್ಯಾಲಯದ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಅಕ್ಕಿ ಒಣಗಿಸುವ ಯಂತ್ರವನ್ನು ಕಂಡುಹಿಡಿದಿದ್ದಾರೆ. ಪ್ರಾಧ್ಯಾಪಕರಾದ ಕೆ.ಎ. ಬದರಿನಾರಾಯಣ್ ಹಾಗೂ ರಾಮಶಿವ ಕಿರಣ್‌ರೆಡ್ಡಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಜೈದೀಪ್‌ ಸಿಂಗ್‌, ಚೇತನ್‌, ರಿಯಾ, ಅಭಿಷೇಕ್‌ ಮೂರು ತಿಂಗಳು ಶ್ರಮವಹಿಸಿ ಅಕ್ಕಿ ಒಣಗಿಸುವ ಯಂತ್ರವನ್ನು ಆವಿಷ್ಕರಿಸಿದ್ದಾರೆ. ಅಕ್ಕಿ ಉತ್ಪಾದನೆಯಲ್ಲಿ ಚೀನಾದ ನಂತರದ ಸ್ಥಾನ ಭಾರತದ್ದೇ. ಪ್ರತಿ ವರ್ಷ ಸುಮಾರು 150 ದಶಲಕ್ಷ ಟನ್ನಿನಷ್ಟು ಅಕ್ಕಿಯನ್ನು ಭಾರತ ಉತ್ಪಾದಿಸುತ್ತಿದೆ. ಸಾಕಷ್ಟು ಬಾಸುಮತಿ ಅಕ್ಕಿಯನ್ನು ಉತ್ಪಾದನೆ ಮಾಡಲಾಗುತ್ತಿದ್ದರೂ, ಅವೈಜ್ಞಾನಿಕ ಪದ್ಧತಿಯಲ್ಲಿ ಒಣಗಿಸುವುದರಿಂದ ಶೇ. 17ರಷ್ಟು ಉತ್ಪನ್ನ ಹಾಳಾಗುತ್ತಿದೆ. ಸರಿಯಾದ ವಿಧಾನವನ್ನು ಅನುಸರಿಸಿದ್ದೇ ಆದರೆ ಅನವಶ್ಯಕವಾಗಿ ಅಕ್ಕಿ ಹಾಳಾಗುವುದನ್ನು ತಪ್ಪಿಸಬಹುದು; ಆಗ ಅದು ಜನರನ್ನು ತಲುಪಿ ರೈತನ ದುಡಿಮೆಯೂ ಸಾರ್ಥಕವಾಗುತ್ತದೆ. ಅಕ್ಕಿಯನ್ನು ಒಣಗಿಸಲೆಂದೇ ಇದೀಗ ಸಮತಟ್ಟಾದ ಒಣಗಿಸುವಿಕೆ ಯಂತ್ರವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಅಕ್ಕಿಯಲ್ಲಿರುವ ಶೇ. 15ರಷ್ಟು ತೇವಾಂಶವನ್ನು ಆರರಿಂದ ಎಂಟು ಗಂಟೆಗಳಲ್ಲಿ ಹೀರಿಕೊಂಡು ಅನವಶ್ಯಕವಾಗಿ ಅಕ್ಕಿ ಹಾಳಾಗುವುದನ್ನು ತಡೆಯುತ್ತದೆ. ರೈತರಿಗೆ ಸುಲಭವಾಗಿ ದೊರೆಯುವ ಸೌದೆ ಮತ್ತು ಭತ್ತದ ಹೊಟ್ಟಿನಿಂದ ಈ ಯಂತ್ರವನ್ನು ಚಾಲನೆ ಮಾಡಬಹುದಾಗಿದೆ. ಪರಿಸರ ಸ್ನೇಹಿಯಾಗಿರುವ ಈ ಯಂತ್ರವನ್ನು ವಿದ್ಯುತ್‌ನಿಂದಲೂ ಚಲಾಯಿಸಬಹುದೆಂದು ಜೈದೀಪ್‌ ಸಿಂಗ್‌ ಹೇಳುತ್ತಾರೆ. ‘ಒಂದು ಟನ್‌ ಪ್ರಮಾಣದ ಅಕ್ಕಿಯನ್ನು ಎಂಟು ಗಂಟೆ ಅವಧಿಯಲ್ಲಿ ಒಂದೇ ಬಾರಿಗೆ ಒಣಗಿಸಬಹುದು. ಇದಕ್ಕೆ ರೈತನಿಗೆ ತಗಲುವ ಖರ್ಚು ಕೂಡ ಕಡಿಮೆ ಇರುತ್ತದೆ. ಇದನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು’ ಎನ್ನುತ್ತಾರೆ ಯಂತ್ರವನ್ನು ಕಂಡುಹಿಡಿದಿರುವ ವಿದ್ಯಾರ್ಥಿಗಳು. ಈ ಯಂತ್ರದ ತೂಕ 500 ಕೆ.ಜಿ. ಇದನ್ನು ರೈತರು ತಮ್ಮ ಜಮೀನಿನ ಒಂದು ಮೂಲೆಯಲ್ಲಿ ಸ್ಥಿರವಾಗಿ ಜೋಡಿಸಬಹುದು. ‘ಅಕ್ಕಿ ಒಣಗಿಸುವ ಯಂತ್ರದ ಆವಿಷ್ಕಾರಕ್ಕಾಗಿ ಒಟ್ಟು 30 ಸಾವಿರ ರೂಪಾಯಿ ಖರ್ಚಾಗಿದ್ದು, ಸರ್ಕಾರ ಹಾಗೂ ಖಾಸಗಿ ಕಂಪೆನಿಗಳು ಹಣಕಾಸಿನ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಈ ಯಂತ್ರವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು ಜೈದೀಪ್‌ ಸಿಂಗ್‌ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.