‘ಸ್ವೀಟ್ ಹೋಂ’ನಿಂದ ದೂರ ಇರಬೇಕಾದಾಗ...! ‘ಹೋಂ’ ಎಂಬ ಶಬ್ದ ಕೇಳಿದರೂ ಮನಸ್ಸು ಭಾವುಕವಾಗುತ್ತದೆ. ‘ಮನೆ’ ಎನ್ನುವಂಥದ್ದು ಕೇವಲ ಒಂದು ಕಟ್ಟಡ ಅಲ್ಲ. ಹೊರಗಿನ ಜಗತ್ತಿನಲ್ಲಿ ಏನೇ ಮುಸುಕು ಹಾಕಿಕೊಂಡಿದ್ದರೂ, ಮನೆಯೆಂಬುದು ನಾವು ನಾವಾಗಿರುವ ಸ್ಥಳ, ಸುರಕ್ಷೆಯ ಭಾವನೆ ತಂದುಕೊಡುವ ಬೆಚ್ಚನೆಯ ಗೂಡು. ಅದಕ್ಕೆ ತಾನೇ, ‘ಹೋಂ ಸ್ವೀಟ್‌ ಹೋಂ’ ಎನ್ನುವುದು. ಇಂತಹ ಮನೆಯನ್ನು ಬಿಟ್ಟು ಹೊರಗಿರಬೇಕಾದ ಪರಿಸ್ಥಿತಿ ಬಂದರೆ? ಹೌದು, ಬಾಲ್ಯ ಕಳೆದು, ಹರೆಯದ ಏರುಪೇರುಗಳೊಂದಿಗೆ ಗುದ್ದಾಡಿ, ಗೆದ್ದು, ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದು ಮುಂದಿನ ಓದಿಗಾಗಿ ಹಾಸ್ಟೆಲ್ ಸೇರುವ ಸಮಯ. ಥಟ್ಟನೆ ‘ಹೋಂಸಿಕ್‌ನೆಸ್’ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವು ಮಕ್ಕಳು ಪ್ರೌಢಶಾಲೆಯ ಸಮಯದಲ್ಲೇ ಹಾಸ್ಟೆಲ್ ಸೇರಬಹುದು. ಮುಂದಿನ ಓದಿಗಾಗಿ, ಜೀವನಕ್ಕಾಗಿ ಮನೆಯಿಂದ ಹೊರಹೋಗುವುದು ಬೆಳವಣಿಗೆಯ ಒಂದು ಮೈಲುಗಲ್ಲೇ. ಆದರೆ ವಿದ್ಯಾಭ್ಯಾಸದ ಸಮಯದಲ್ಲೇ ಹಾಸ್ಟೆಲ್ ಸೇರಬೇಕಾದಾಗ, ಹೋಂ ಸಿಕ್‌ನೆಸ್ ಎಲ್ಲರಿಗೂ ಕಾಡುತ್ತದೆ. ಕೆಲವರಿಗೆ ಇದು ಅತಿಯಾಗಿ, ಸಮಸ್ಯೆಯೂ ಆಗಬಹುದು. ‘ಹೋಂ ಸಿಕ್‌ನೆಸ್’ ಎಂದರೇನು? ಮನೆ/ಕುಟುಂಬದವರಿಂದ ದೂರ ಇರಬೇಕಾದ ಸಂದರ್ಭಗಳಲ್ಲಿ ಅಥವಾ ದೂರ ಇರಬೇಕಾದ ಯೋಚನೆಗಳಿಂದ ಉಂಟಾಗುವ ಆತಂಕ/ ಬೇಸರ/ ಭಾವನೆಗಳಿಗೆ ‘ಹೋಂ ಸಿಕ್‌ನೆಸ್’ ಎನ್ನಬಹುದು. ಮನೆಯ ಪರಿಸರದ ಬಗ್ಗೆ, ತಂದೆ-ತಾಯಿಯ ಬಗ್ಗೆ, ಪ್ರೀತಿಪಾತ್ರರ ಬಗ್ಗೆ, ಮನೆಯ ಅಡುಗೆಯ ಬಗ್ಗೆ, ಮನೆಗೆ ವಾಪಾಸಾಗುವ ಬಗ್ಗೆ ಮತ್ತೆ ಮತ್ತೆ ನೆನಪುಗಳು ಕಾಡುತ್ತವೆ. ಕೆಲವು ಬಾರಿ, ‘ಹೋಂಸಿಕ್‌ನೆಸ್’ನಿಂದಾಗಿ ವರ್ತನಾ ಸಮಸ್ಯೆಗಳು, ನಿದ್ರಾ–ಆಹಾರ ಸಮಸ್ಯೆಗಳಲ್ಲದೆ ದೈಹಿಕ ಸಮಸ್ಯೆಗಳೂ ಕಾಣಿಸಬಹುದು. ವರ್ಷಗಟ್ಟಲೆ, ಕುಟುಂಬದವರೊಂದಿಗೆ ಒಟ್ಟಿಗೆ ಊಟ ಮಾಡಿ, ಕಷ್ಟಸುಖಗಳನ್ನು ಹಂಚಿಕೊಂಡು ಇದ್ದು, ಥಟ್ಟನೆ ಈ ಮನೆ/ಪ್ರೀತಿಪಾತ್ರರಿಂದ ದೂರ ಇರಬೇಕಾದ ಪರಿಸ್ಥಿತಿ ಬಂದಾಗ, ಅಲ್ಲ, ಅಂಥ ಯೋಚನೆ ಬಂದರೂ ಎಂಥವರಿಗೂ ‘ಹೋಂಸಿಕ್‌ನೆಸ್’ ಸ್ವಲ್ಪಮಟ್ಟಿಗೆ ಆಗುವುದು ಸಹಜ. ಅಧ್ಯಯನಗಳ ಪ್ರಕಾರ ಶೇ. 80-90ರಷ್ಟು ಹಾಸ್ಟೆಲ್‌ನಲ್ಲಿರುವ ಮಕ್ಕಳಲ್ಲಿ ಹೋಂಸಿಕ್‌ನೆಸ್ ಪ್ರಾರಂಭದ ಹಂತದಲ್ಲಿ ಕಾಣಿಸಿಕೊಂಡರೂ ಬಹಳಷ್ಟು ಮಂದಿ ಕೆಲವೇ ದಿನಗಳಲ್ಲಿ ಹಾಸ್ಟೆಲ್‌ಗೆ ಹೊಂದಿಕೊಳ್ಳುತ್ತಾರೆ. ಶೇ. 2-3ರಷ್ಟು ಮಕ್ಕಳಲ್ಲಿ ಮಾತ್ರ ‘ಹೋಂಸಿಕ್‌ನೆಸ್’ನಿಂದಾಗಿ ಸಮಸ್ಯೆಗಳು ಆಗಬಹುದು. ಸಾಮಾನ್ಯವಾಗಿ ಹಾಸ್ಟೆಲ್ ಸೇರುವ ಎಲ್ಲ ಮಕ್ಕಳಲ್ಲೂ ‘ಹೋಂಸಿಕ್‌ನೆಸ್’ ಇದ್ದರೂ, ಇದು ಯಾಕೆ ಕೆಲವು ಮಕ್ಕಳಲ್ಲಿ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ತಿಳಿಯಲು ಅಧ್ಯಯನಗಳು ನಡೆದಿವೆ. ಹಿಂದಿನ ಅನುಭವ ಈಗಾಗಲೇ ಮನೆಯಿಂದ/ಕುಟುಂಬದವರಿಂದ ಬೇರೆಯಾಗಿ ಇದ್ದ ಅನುಭವ ಇದ್ದರೆ, ‘ಹೋಂಸಿಕ್‌ನೆಸ್’ ಅಷ್ಟಾಗಿ ಸಮಸ್ಯೆಯಾಗಲಿಕ್ಕಿಲ್ಲ. ನಕಾರಾತ್ಮಕ ಧೋರಣೆ: ವಿದ್ಯಾರ್ಥಿಗಳು ತಾವು ಮುಂದೆ ಸೇರಲಿರುವ ಸಂಸ್ಥೆ/ಹಾಸ್ಟೆಲ್ ಬಗ್ಗೆ ಮುಂಚಿನಿಂದಲೇ ನಕಾರಾತ್ಮಕ ಧೋರಣೆ/ಅ ಭಿಪ್ರಾಯ ಹೊಂದಿರುವುದು, ಕೂಡ ಹೋಂಸಿಕ್‌ನೆಸ್ ಹೆಚ್ಚಿಸಬಹುದು. ವ್ಯಕ್ತಿತ್ವ: ಕೆಲವು ರೀತಿಯ ಸ್ವಭಾವಗಳಿರುವ ಮಕ್ಕಳಲ್ಲಿ/ ವ್ಯಕ್ತಿಗಳಲ್ಲಿ ಹೋಂಸಿಕ್‌ನೆಸ್ ಜಾಸ್ತಿ. ಉದಾಹರಣೆಗೆ, ಆತಂಕಕಾರಿ-ಚಂಚಲ ಸ್ವಭಾವದ ಮಕ್ಕಳಿಗೆ ‘ಹೋಂಸಿಕ್‌ನೆಸ್’ ಸಮಸ್ಯೆಯಾಗಬಹುದು. ಕೌಟುಂಬಿಕ ಅಂಶಗಳು: ಪೋಷಕರ/ಹಿರಿಯರ ಒತ್ತಾಯಕ್ಕೆ ಮಣಿದು ಹಾಸ್ಟೆಲ್ ಸೇರಬೇಕಾದಾಗ, ಹೋಂಸಿಕ್‌ನೆಸ್ ಹೆಚ್ಚು. ಹಾಗೆಯೇ, ಹಾಸ್ಟೆಲ್ ಸೇರುವುದಕ್ಕೆ ಮುಂಚೆ ‘ನಿನ್ನ ಬಿಟ್ಟು ನಾನು ಹೇಗಿರಲಿ? ಅಲ್ಲಿ ಊಟಕ್ಕೆ ಏನು ಮಾಡ್ತೀಯೋ ಏನೋ?’ ಎಂಬಂತಹ ಪೋಷಕರ ಮಾತುಗಳು ಕೂಡ ಹೋಂಸಿಕ್‌ನೆಸ್ಸನ್ನು ಜಾಸ್ತಿ ಮಾಡುತ್ತವೆ. ಕಡಿಮೆ ಮಾಡುವ ಬಗೆ ‘ಹೋಂಸಿಕ್‌ನೆಸ್’ ಕಡಿಮೆ ಮಾಡಿಕೊಳ್ಳುವಲ್ಲಿ ಈ ಸಲಹೆಗಳು ಸಹಾಯಕ: ಸ್ನೇಹಿತರೊಂದಿಗೆ ಆಟ, ಹರಟೆಯಂಥ ಇಷ್ಟವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕುಟುಂಬದವರಿಗೆ ಪತ್ರ ಬರೆಯಿರಿ. ಮೊಬೈಲ್/ ಇಂಟರ್‌ನೆಟ್ ಕಾಲವಾದ ಈಗ, ಪತ್ರ ಬರೆಯುವವರು ವಿರಳವಾದರೂ, ಪತ್ರ ಬರೆಯುವುದರಿಂದ ಮನಸ್ಸಿನ ಭಾವನೆಗಳನ್ನು ಹೊರಹಾಕುವುದು ಸುಲಭ ಎಂದು ತಿಳಿದಿರಲಿ. ಪ್ರೀತಿಪಾತ್ರರ ಭಾವಚಿತ್ರಗಳು ನಿಮ್ಮ ಬಳಿ ಇರಲಿ. ಶಾಲಾ-ಕಾಲೇಜುಗಳಲ್ಲಿ, ಕೌನ್ಸಿಲರ್‌ಗಳಿದ್ದರೆ, ಅವರಿಂದ ಸಹಾಯ ತೆಗೆದುಕೊಳ್ಳಿ. ಆಶಾದಾಯಕವಾಗಿ, ಅಂದರೆ ಹಾಸ್ಟೆಲ್‌ನಲ್ಲಿ ಇರುವುದರಿಂದ ಆಗುವ ಲಾಭಗಳ ಕುರಿತು ಯೋಚಿಸಿ (ಉದಾ: ಹಾಸ್ಟೆಲ್‌ನಲ್ಲಿರುವುದರಿಂದ, ಸ್ನೇಹಿತರು ಹೆಚ್ಚಾಗಿ ಸಿಗುವ ಸಾಧ್ಯತೆ). ಮನೆಯವರ ಬಗ್ಗೆ ಯೋಚನೆಗಳು ಕಾಡುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಪೋಷಕರು ನಿಮಗೆ ಯಾವ ರೀತಿ ಸಾಂತ್ವನ ಹೇಳುತ್ತಿದ್ದರು ಎಂದು ಊಹಿಸಿಕೊಳ್ಳಿ. ಅದು ಸಮಾಧಾನವೆನಿಸೀತು. ಒಂದು ಕ್ಯಾಲೆಂಡರ್ ತೆಗೆದುಕೊಂಡು ಮನೆಗೆ ಹೋಗಲು ಎಷ್ಟು ದಿನಗಳಿವೆಯೆಂದು ಗುರುತು ಹಾಕಿಕೊಳ್ಳಿ. ಹಾಸ್ಟೆಲ್ ಸೇರುವ ನಿರ್ಧಾರದಲ್ಲಿ, ಮಕ್ಕಳ ಪಾಲೂ ಇರಲಿ. ಅವರೊಂದಿಗೆ ಕುಳಿತು, ಹಾಸ್ಟೆಲ್‌ನಲ್ಲಿ ಇರಬೇಕಾದ ಸಂದರ್ಭದ ಬಗ್ಗೆ ಸಮಾಲೋಚಿಸಿ. ಮಕ್ಕಳಿಗೆ ಇದರ ಬಗ್ಗೆ ಶಿಕ್ಷಣ ನೀಡಿ; ‘ಹೋಂಸಿಕ್‌ನೆಸ್ ಎನ್ನುವುದು ಎಲ್ಲರಿಗೂ ಆಗುವುದು ಸಹಜ. ಇದು ಮನೆ/ಕುಟುಂಬದವರ ಬಗ್ಗೆ ಪ್ರೀತಿ ಇರುವುದನ್ನು ತೋರಿಸುತ್ತದೆ, ಅಷ್ಟೇ! ಆದರೆ ಸಂತಸದ ಸಂಗತಿಯೆಂದರೆ ನೀವು ಸರಿಯಾಗಿ ನಿಭಾಯಿಸಿದರೆ, ಇದು ಕೆಲವೇ ದಿನಗಳಲ್ಲಿ ಕಡಿಮೆಯಾಗಿ, ಹೊಸ ಪರಿಸರಕ್ಕೆ ಹೊಂದಾಣಿಕೆಯಾಗುತ್ತೀರಾ’. ಹಾಸ್ಟೆಲ್ ಸೇರುವ ಮುಂಚೆ ಎರಡು-ಮೂರು ದಿನಗಳ ಮಟ್ಟಿಗಾದರೂ ಮನೆ/ಪೋಷಕರಿಂದ ದೂರವಿದ್ದು ಅಭ್ಯಾಸ ಮಾಡಿಕೊಳ್ಳಿ. ಪೋಷಕರು ಮಕ್ಕಳೊಂದಿಗೆ ಸಕಾರಾತ್ಮಕ ವಾಗಿಯೇ ಮಾತನಾಡಬೇಕು. ಮಕ್ಕಳನ್ನು ಬಿಟ್ಟಿರಬೇಕಾದರೆ ಆಗುವ ನೋವನ್ನು ಹೇಳಿಕೊಳ್ಳಬಾರದು. ಒಟ್ಟಿನಲ್ಲಿ ಹೋಂಸಿಕ್‌ನೆಸ್ ಎನ್ನುವುದು ವಯಸ್ಸಿನ ಭೇದಭಾವವಿಲ್ಲದೇ ಎಲ್ಲರಲ್ಲೂ ಕಾಣಿಸಬಹುದು. ಸರಿಯಾದ ಪೂರ್ವ ತಯಾರಿ, ಹಾಸ್ಟೆಲ್‌ನಲ್ಲಿರುವ ಸಂದರ್ಭದಲ್ಲಿ ಕೆಲವು ಚಟುವಟಿಕೆಗಳು, ಸಕಾರಾತ್ಮಕ ಯೋಚನಾ ಶೈಲಿಗಳಿಂದ ಸಮಸ್ಯೆಯಾಗುವುದನ್ನು ತಡೆಯಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.