ವಿದ್ಯೆಯಿಂದ ವಿನಯ ಬರಲಿ ವಿದ್ಯೆಯು ವಿನಯವನ್ನು ಕೊಡುತ್ತದೆ - ಎಂಬ ಹೇಳಿಕೆಯನ್ನು ಅನೇಕರು ಹೇಳುವುದನ್ನು ಕೇಳಿದ್ದೇವೆ. ಹಾಗೆಯೇ ಆ ಹೇಳಿಕೆಯನ್ನು ವಿರೋಧಿಸುವವರೂ ಈಚೆಗೆ ಹೆಚ್ಚಾಗುತ್ತಿದ್ದಾರೆ. ವಿದ್ಯಾವಂತರಲ್ಲಿ ವಿನಯವಿಲ್ಲದವರು ಹೆಚ್ಚಾದ ಹಾಗೆಲ್ಲಾ ಈ ಹೇಳಿಕೆಗೆ ವಿರೋಧಿಗಳು ಸಹಜವಾಗಿಯೇ ಹೆಚ್ಚಾಗುತ್ತಾರೆ! ವಿನಯವೇ ವಿದ್ಯೆಗೆ ಭೂಷಣ - ಎಂಬ ಹೇಳಿಕೆಯನ್ನು ಎಲ್ಲರೂ ಅನುಮೋದಿಸುತ್ತಾರೆ. ಆದರೆ ವಿದ್ಯೆಯು ವಿನಯವನ್ನು ಕೊಡುತ್ತದೆಂಬುದನ್ನು ಅವರು ಒಪ್ಪುವುದಿಲ್ಲ. ಅವರ ವಿರೋಧಕ್ಕೆ ಕಾರಣ ವಿದ್ಯಾವಂತರಲ್ಲಿ ಎದ್ದುಕಾಣುವ ಉದ್ಧಟತನ. ಇನ್ನೊಂದು ರೀತಿಯಿಂದಲೂ ಈ ವಿರೋಧವನ್ನು ವ್ಯಕ್ತಪಡಿಸಬಹುದು. ವಿದ್ಯಾವಂತರಲ್ಲದ ಅನೇಕರೂ ವಿನಯವಂತರಾಗಿರುತ್ತಾರೆ. ವಿದ್ಯೆಯಿಲ್ಲದೆ ಅವರಿಗೆ ವಿನಯ ಬಂದದ್ದಾದರೂ ಹೇಗೆ? ಈ ಎಲ್ಲ ಗೊಂದಲಗಳ ಮೂಲವಿರುವುದು ವಿದ್ಯೆ ಎಂಬ ಪದದ ವ್ಯಾಖ್ಯೆ ನೀಡುವ ಕ್ರಮದಲ್ಲಿ ಎಂಬುದನ್ನು ಗಮನಿಸಬೇಕು. ಶಾಲೆಯಲ್ಲಿ ಪಾಠ ಕಲಿತು ಅಂಕಗಳಿಸುವ ಜಾಣ್ಮೆಯೇ ವಿದ್ಯೆ ಎಂದು ಭಾವಿಸಿ ನಾವು ಅರ್ಥೈಸುತ್ತೇವೆ. ಶಾಲೆಯಲ್ಲಿ ಆಗುತ್ತಿರುವುದು ವಿದ್ಯಾಭ್ಯಾಸವಲ್ಲ. ವಾಕ್ಯಗಳ ವರ್ಗಾವಣೆ. ವಿದ್ಯೆಯಾಗಿದ್ದರೆ, ವಿದ್ಯೆಯ ಅಭ್ಯಾಸವಾಗಿದ್ದರೆ - ಆ ಮಾತೇ ಬೇರೆಯಾಗಿರುತ್ತಿತ್ತು. ಶಾಲಾಕಲಿಕೆಯಲ್ಲಿ ವಿನಯ ಬರಲು ಅವಕಾಶವಿಲ್ಲವೆ? ಇದೆ. ಆದರೆ ಕಲಿಕೆಯನ್ನು ಕೈಗೊಳ್ಳುವ ಕ್ರಮವನ್ನು ಅದು ಅವಲಂಬಿಸಿರುತ್ತದೆ. ನಾವು ಹೆಚ್ಚು ತಿಳಿದ ಹಾಗೆಲ್ಲಾ ನಮ್ಮ ದಡ್ಡತನದ ಅರಿವು ಆಗುತ್ತಾ ಹೋಗುತ್ತದೆ - ಎಂದು ಬರ್ಟ್ರಂಡ್ ರಸೆಲ್ ಹೇಳುತ್ತಾರೆ. ಹೀಗಾಗಬೇಕಿದ್ದರೆ ಕಲಿಯುವ ಮೊದಲು ನಮಗಿದ್ದ ತಪ್ಪು ಕಲಿಕೆಗೂ ಕಲಿತ ನಂತರದ ಸ್ಪಷ್ಟ ನಿಲುವಿಗೂ ಹೋಲಿಸಬೇಕಾಗುತ್ತದೆ. ಆದರೆ, ಇದರ ಬದಲು ನನ್ನ ತಿಳಿವಳಿಕೆಯೆಂದರೆ ನಾನೇ; ಉಳಿದವರಿಗೆ ಈ ತಿಳಿವಳಿಕೆ ಇಲ್ಲ - ಎಂದು ಭಾವಿಸತೊಡಗಿದರೆ ತನಗೇ ತುತ್ತುರಿ ಇದೆಯೆಂದ, ಬೇರಾರಿಗೂ ಅದು ಇಲ್ಲವೆಂದ - ಕಸ್ತೂರಿಯ ರೀತಿಯಲ್ಲಿ ಅದು ಅವಿನಯಕ್ಕೆ ದಾರಿ ಮಾಡಿಕೊಡುತ್ತದೆ. ಕಲಿಕೆಯ ಮೌಲ್ಯಮಾಪನದಲ್ಲಿ ಅಂಕವನ್ನು ಗಳಿಸಿದ ವಿದ್ಯಾರ್ಥಿಯಂತೂ/ಅವನ ಪೋಷಕರಂತೂ ಈ ಭಾವನೆಯನ್ನು ಮತ್ತಷ್ಟು ರೂಢಿಸಿಕೊಳ್ಳುತ್ತಾರೆ. ಹೆಚ್ಚು ಅಂಕ ಗಳಿಸಿದ ಹೆಮ್ಮೆ ವಿನಯವನ್ನು ಹಾಳಾಗಿಸಿದರೆ ಏನಾಶ್ಚರ್ಯ! ಅವಿದ್ಯಾವಂತರ ಪೈಕಿ ತಮ್ಮ ಅವಿದ್ಯೆಯ ಅರಿವು ಇರುವವರು ಸಹಜವಾಗಿಯೇ ವಿನಯವಾಗಿರುತ್ತಾರೆ. ಏಕೆಂದರೆ ವಿನಯ ಉಂಟಾಗುವುದು ಅವರ ಇತಿಮಿತಿಯ ಜಾಗ್ರತೆಯಿಂದಾಗಿ. (ಅವಿದ್ಯಾವಂತರೂ ಆಟದಲ್ಲೋ, ಸಿರಿವಂತಿಕೆಯಲ್ಲೋ ಮುಂದಾದರೆ ಶಾಲಾ ಕಲಿಕೆಯನ್ನು ಹೀಗಳೆಯುವ ಉದ್ಧಟತನ ತೋರಿಸುವುದುಂಟು). ಶಾಲೆಗೆ ಹೋಗಿಯೂ, ಅಂಕಗಳಿಸಿಯೂ ವಿನಯವನ್ನು ಉಳಿಸಿಕೊಂಡ ಮಹನೀಯರನೇಕರು ಇದ್ದಾರೆ. ಆ ಮಾದರಿಗಳು ನಮ್ಮ ಮಕ್ಕಳಲ್ಲಿ ವಿನಯವನ್ನು ಉಂಟುಮಾಡುವಂತೆ ಮಾಡುವುದು ಹೇಗೆ? ‘ತಾನು ಕಲಿತ ವಿಷಯವನ್ನು ನಿರೂಪಿಸಿದ ಸತ್ಯಶೋಧಕರು ವೈಯಕ್ತಿಕ ಸುಖಾಭಿಲಾಷೆಯನ್ನು ತ್ಯಾಗಮಾಡಿ ದುಡಿದವರು; ತಾವು ಕಂಡ ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಜನರ ವಿರೋಧವನ್ನು ಲೆಕ್ಕಿಸದೆ ಸತ್ಯದ ಪ್ರತಿಪಾದನೆ ಮಾಡಿದ ಪ್ರಾತಃಸ್ಮರಣೀಯರು. ಅವರು ರೂಪಿಸಿದ ಸತ್ಯವನ್ನು ನನ್ನ ಕಲಿಕೆಯಾಗಿಸಿ ರೂಢಿಸುವಲ್ಲಿ ಅಧ್ಯಾಪಕರ ಪರಿಶ್ರಮವಿದೆ. ಸಮಾಜದ ಪೋಷಣೆ ಹಾಗೂ ಕುಟುಂಬದ ಬೆಂಬಲದಿಂದಾಗಿಯೇ ನಾನು ಅಂಕಗಳಿಸಿದ್ದೇನೆ’ - ಎಂಬ ಭಾವನೆ ವಿದ್ಯಾರ್ಥಿಗೆ ಬಂದಲ್ಲಿ, ಅಂಕಗಳನ್ನು ಗಳಿಸುವ ಸಾಧನೆಯ ನಂತರವೂ ಆತ ವಿನಯಶಾಲಿಯಾಗಿರಬಲ್ಲ. ಆದರೆ ಗಮನಿಸಿ, ಈ ಭಾವನೆ ತಂತಾನೆ ಬರುವುದಿಲ್ಲ. ಈ ಭಾವನೆಯನ್ನು ನೆನಪಿಸುವ ಕಾರ್ಯವನ್ನು ಪೋಷಕರಾಗಲೀ, ಶಾಲೆಗಳಾಗಲೀ ಸಮಾಜವಾಗಲೀ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪದವಿ/ವಿದ್ಯೆ ಗಳಿಕೆಯಾಗಿ ಅಹಮಿಕೆಯಾಗಿ ಅನುವಾದಗೊಂಡರೆ ಅದು ಸಹಜವಾಗಿಯೇ ಇದೆ. ವಿದ್ಯಾ ದದಾತಿ ವಿನಯಮ್ – ಎಂಬ ಶ್ಲೋಕವನ್ನು ಬರೆದವರ ಭಾವನೆಯಲ್ಲಿದ್ದ ವಿದ್ಯೆ ಈ ಬಗೆಯ ಶಾಲಾ ಕಲಿಕೆಯಲ್ಲ ಎಂಬುದನ್ನು ಮರೆಯುವಂತಿಲ್ಲ. ನಾನು, ನನ್ನದು ಎಂಬ ಭಾವನೆ ಅವಿದ್ಯೆ. ಈ ಭ್ರಮೆ ನಮಗೆ ಅನೇಕ ಭಾವಗಳನ್ನು ತಂದುಕೊಡುವುದು. ನಾನೇ ನನ್ನ ಕೆಲಸಗಳನ್ನು ಮಾಡಿದೆ, ಎಂಬುದು ಕರ್ತೃತ್ವ ಭ್ರಾಂತಿ (ಓದಿ ನಾನು ಅಂಕಗಳಿಸಿದ್ದೇನೆಂಬುದೂ ಅದೇ ಬಗೆಯ ಭ್ರಾಂತಿ). ನಾನು ಮಾಡಿದ ಕೆಲಸದ ಫಲವನ್ನು ನಾನೇ ಅನುಭವಿಸುತ್ತೇನೆ ಎಂಬುದು ಭೋಕ್ತೃತ್ವ ಭ್ರಾಂತಿ. ನಶ್ವರವಾದ ಈ ಜಗತ್ತನ್ನು ನನ್ನ ಅಸ್ತಿತ್ವವನ್ನು ಶಾಶ್ವತವೆಂದು ಭಾವಿಸುವುದು ಅವಿದ್ಯೆಯ ಇನ್ನೊಂದು ಮುಖ. ಜಗತ್ತಿನ ಪ್ರತಿಯೊಂದು ಸುಖದ ಹಿಂದೆಯೂ ಅನೇಕ ಪಟ್ಟು ಹೆಚ್ಚು ದುಃಖ ಇದೆ ಎಂಬ ಅರಿವಿಲ್ಲದಿರುವುದು ಅವಿದ್ಯೆ. ನಾನು ಬೇಕೆಂದು ಬಯಸುವ, ನನ್ನದೆಂದು ಭ್ರಮಿಸಿರುವ ಯಾವುದೂ ನನ್ನ ಆತ್ಮದ ಅಗತ್ಯವಲ್ಲ (ಅನಾತ್ಮ) ಎಂಬುದನ್ನು ಮರೆತಿರುವುದು ಅವಿದ್ಯೆ. ಶಿಕ್ಷಣ ಎಂದರೆ ಸಮಗ್ರ ವ್ಯಕ್ತಿತ್ವದ ಅಭಿವ್ಯಕ್ತಿ ವಿದ್ಯಾ ದದಾತಿ ವಿನಯಮ್ವಿ ನಯಾತ್ ಯಾತಿ ಪಾತ್ರತಾಮ್ | ಪಾತ್ರತ್ವಾತ್ ಧನಮಾಪ್ನೋತಿ ಧನಾದ್ಧರ್ಮಂ ತತಃ ಸುಖಮ್ || ‘ವಿದ್ಯೆಯು ವಿನಯವನ್ನು ಕೊಡುತ್ತದೆ; ವಿನಯವು ಅರ್ಹತೆಯನ್ನು ಒದಗಿಸುತ್ತದೆ; ಅರ್ಹತೆಯು ಸಂಪಾದನೆಯನ್ನು ತಂದುಕೊಡುತ್ತದೆ; ಹಣಸಂಪಾದನೆಯಿಂದ ಸರಿಯಾದ ದಾರಿಯೂ, ಅದರಿಂದ ಸುಖವೂ ಸಿಗುತ್ತದೆ.’ ಇದು ವಿದ್ಯೆ – ಎಂದರೆ ಶಿಕ್ಷಣ – ನಮ್ಮ ಜೀವನವನ್ನು ಕಟ್ಟಿಕೊಡುವ ಕ್ರಮ. ‘ಶಿಕ್ಷಣವೇ ಗುರಿಯಲ್ಲ; ಅದು ಬದುಕನ್ನು ರೂಪಿಸುವ ಮಾರ್ಗವಷ್ಟೆ.’ ಇದು ಶಿಕ್ಷಣವನ್ನು ಕುರಿತು ಬಹುಪಾಲು ಶ್ರೇಷ್ಠ ಚಿಂತಕರ ಒಕ್ಕೊರಲಿನ ಮಾತು. ಆದರೆ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣದ ಪರಿಭಾಷೆಯೂ ಬದಲಾಗಿದೆ. ಅಕ್ಷರದ ಅಹಂಕಾರಕ್ಕೆ ಇಂದಿನ ಶಿಕ್ಷಣಪದ್ಧತಿ ತುತ್ತಾಗಿದೆ. ಹೀಗಾಗಿ ಶಿಕ್ಷಣ ಎಂದರೆ ವಿನಯದ ಸಂಪಾದನೆ ಎಂಬ ಮಾತು ಈಗ ದೂರವಾಗಿದೆ. ಪದವಿ ಪಡೆಯುವುದಷ್ಟೆ ಶಿಕ್ಷಣದ ಉದ್ದೇಶ ಎಂಬ ಧೋರಣೆ ಬಲವಾಗಿದೆ; ಹಣಸಂಪಾದನೆಯಷ್ಟೆ ಪದವಿಯ ಗುರಿ ಎಂಬ ಮನೋಧರ್ಮ ದಟ್ಟವಾಗಿದೆ.ಶಿಕ್ಷಣ ಎಂದರೆ ಸಮಗ್ರ ವ್ಯಕ್ತಿತ್ವದ ಅಭಿವ್ಯಕ್ತಿ. ಇದರಲ್ಲಿ ತನ್ನ ಸುಖದ ಜೊತೆಯಲ್ಲಿ ಇತರರ ಹಿತವನ್ನೂ ಕಾಪಾಡುವ ಎಚ್ಚರವಿರುತ್ತದೆ. ಸಮಾಜದೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸುವುದೂ ಶಿಕ್ಷಣದ ಉದ್ದೇಶವಾಗಿರಬೇಕು. **** ಈ ಅವಿದ್ಯೆಯಿಂದ ಹೊರಬರುವುದೇ ವಿದ್ಯೆ. ಆದರೆ ಶಾಲಾ ಕಲಿಕೆ ಈ ಬಗೆಯ ಅವಿದ್ಯೆಯ ಬಗ್ಗೆ ಚರ್ಚಿಸುವುದೇ ಇಲ್ಲ; ಅಷ್ಟೇ ಅಲ್ಲ ಅನೇಕ ಸಂದರ್ಭಗಳಲ್ಲಿ ಈ ಬಗೆಯ ಅವಿದ್ಯೆಗೆ ಮಾರಕವಾಗಿಯೂ ಇದೆ. ಇಂತಹ ಶಾಲೆಯ ವಿದ್ಯೆ ವಿನಯ ತಂದುಕೊಟ್ಟೀತಾದರೂ ಹೇಗೆ? ನಿತ್ಯಾನಿತ್ಯ-ವಿವೇಕವನ್ನು ಕಲಿಸುವುದರ ಜೊತೆಗೆ ಬದುಕಿನ ಪಾಠಗಳನ್ನು ಕಲಿಸದಿದ್ದರೆ ಅವಿನಯ ಹೋಗುವುದಾದರೂ ಹೇಗೆ? (ಲೇಖಕರು ವಿಜ್ಞಾನಲೇಖಕರು, ಸಂವಹನತಜ್ಞರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.