ಅಸಹಾಯಕರಿಗೆ ಮಾರ್ಗದರ್ಶಿ ಸಮಾಜದ ಎಲ್ಲ ಸಮುದಾಯಗಳು ಸೌಖ್ಯದಿಂದರಬೇಕು ಎಂಬುದು ಸಂವಿಧಾನದ ಆಶಯ. ಮಹಿಳೆಯರು, ಹಿಂದುಳಿದವರು, ತುಳಿತಕ್ಕೆ ಒಳಗಾದವರು, ಕೈಲಾಗದವರ ಶ್ರೇಯೋಭಿವೃದ್ಧಿ ನಿಜಾರ್ಥದಲ್ಲಿ ದೇಶದ ಅಭಿವೃದ್ಧಿಯ ಸಂಕೇತ. ಆದರೆ, ಇಂದು ನಾನಾ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಬದುಕಿನ ಉದ್ದೇಶ ಮತ್ತು ಸಂವಿಧಾನದ ಆಶಯ ಅರ್ಥೈಸಿಕೊಂಡ ಕೆಲವರು ತಮ್ಮ ಮಿತಿಯಲ್ಲಿ ದಮನಿತರು, ಅಸಹಾಯಕರಿಗೆ ನೆರವಾಗುತ್ತಿದ್ದಾರೆ. ಇಂಥವರಲ್ಲಿ ಕಲಬುರ್ಗಿಯ ಸಂತೋಷ ಮೆಟಗಾರ ಸಹ ಒಬ್ಬರು. ಮಾರ್ಗದರ್ಶಿ ತರಬೇತಿ ಕೇಂದ್ರ ಆರಂಭಿಸಿರುವ 36 ವರ್ಷದ ಸಂತೋಷ, ಕೆಎಎಸ್‌, ಬ್ಯಾಂಕಿಂಗ್‌ ಪರೀಕ್ಷೆ, ಎಸ್‌ಡಿಎ, ಎಫ್‌ಡಿಎ, ಪಿಎಸ್‌ಐ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರಮುಖವಾದ ಮಾರ್ಗದರ್ಶಿ ತರಬೇತಿ ಕೇಂದ್ರದಲ್ಲಿ ವಿಧವೆಯರು, ಅಂಧರು, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ ಉಚಿತವಾಗಿ ಕೆಎಎಸ್‌ ಮತ್ತು ಅದರ ಕೆಳಗಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಏಳು ತಿಂಗಳು ತರಬೇತಿ ನೀಡಲಾಗುತ್ತಿದೆ. ಜೊತೆಗೆ ಉಚಿತವಾಗಿ ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ. ಗ್ರಂಥಾಲಯ ಮತ್ತು ವೈಫೈ ವ್ಯವಸ್ಥೆಯನ್ನೂ ಮಾಡಲಾಗಿದೆ. ಐದು ವರ್ಷಗಳಿಂದ ಈ ಸೌಲಭ್ಯವನ್ನು ನೀಡುತ್ತಿದ್ದಾರೆ. ಆದರೆ ಹೆಚ್ಚಿನ ಮಂದಿ ಬಳಸಿಕೊಳ್ಳುತ್ತಿಲ್ಲ ಎಂಬ ಬೇಸರ ಅವರಿಗೆ. ‘ಹಣ ಮಾಡುವುದು ಜೀವನದ ಗುರಿಯಲ್ಲ. ನಮ್ಮ ಮಿತಿಯಲ್ಲಿ ಅಸಹಾಯಕರಿಗೆ ಸಹಾಯ ಮಾಡಬೇಕೆಂಬುದು ನಾನು ನಂಬಿರುವ ತತ್ವ. ರಾಜ್ಯದ ಯಾವುದೇ ಮೂಲೆಯಿಂದ ಅಂಗವಿಕಲರು, ವಿಧವೆಯರು ಮತ್ತು ಮಾಜಿ ಸೈನಿಕರು ಬಂದರೂ ಅವರಿಗೆ ಉಚಿತ ತರಬೇತಿ ನೀಡಲಾಗುವುದು. ಇದರ ಜೊತೆಗೆ ಹತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಮಾರ್ಗದರ್ಶಿ ತರಬೇತಿ ಕೇಂದ್ರದ ಗೌರವ ಅಧ್ಯಕ್ಷ ಸಂತೋಷ ಮೆಟಗಾರ. ‘ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುವವರಿಗೆ ಸಾಧನೆಯ ಹಸಿವಿರುತ್ತದೆ. ಅವರಿಗೆ ಅವಕಾಶ ಬೇಕಿರುತ್ತದೆಯಷ್ಟೆ. ಇಂಥವರು ಸರ್ಕಾರಿ ಸೇವೆ ಸೇರಿದರೆ ಇನ್ನಷ್ಟು ಉತ್ತಮ ಕೆಲಸಗಳಾಗುತ್ತವೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಅವರು. ‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಒಂದೆಡೆಯಾದರೆ, ಇಂಗ್ಲಿಷ್‌ ದೊಡ್ಡ ಸಮಸ್ಯೆ ಎನ್ನುವಂತೆ ಇಲ್ಲಿನ ವಿದ್ಯಾರ್ಥಿಗಳು ಭಾವಿಸುತ್ತಾರೆ. ಇದರಿಂದಾಗಿ ಅವರು ದೊಡ್ಡ ಕನಸು ಕಾಣುವುದನ್ನೇ ನಿಲ್ಲಿಸಿದ್ದಾರೆ. ಮೀಸಲಾತಿ ಮತ್ತು ಸೌಲಭ್ಯ ಇದ್ದರೂ ಅದನ್ನು ಬಳಸಿಕೊಳ್ಳುತ್ತಿಲ್ಲ. ಈ ಸಂಸ್ಕೃತಿಯನ್ನು ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಬೆಳೆಸಬೇಕು. ಆದರೆ, ಬಹುತೇಕ ಕಡೆ ಶಿಕ್ಷಕರ ಕೊರತೆಯಿದೆ’ ಎನ್ನುತ್ತಾರೆ ಅವರು. ಸಂತೋಷ ಅವರ ಸಂಪರ್ಕಕ್ಕೆ: ಮೊ. 9964205097 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.