ಶಾಲೆಯಲ್ಲೇ ಮಗುವಿನ ಸಮಾಜ ಮಾನವ ಮೂಲತಃ ಸಂಘಜೀವಿ. ಸಮೂಹದಲ್ಲಿ ಜೀವಿಸುವುದು, ಗುಂಪಿನಲ್ಲಿ ಒಂದಾಗುವುದು - ಇವು ಸಹಜ ಲಕ್ಷಣಗಳು. ಹೀಗೆ ಸಮೂಹದಲ್ಲಿ ಒಂದಾಗಿ ಅದರ ನಿಯಮ, ರೀತಿ, ನೀತಿ, ಸಂಸ್ಕೃತಿಗಳನ್ನು ಅರಿತು ಬಾಳುವುದು ಮತ್ತು ಇತರರನ್ನು ಬಾಳಗೊಡುವುದು ‘ಸಾಮಾಜೀಕರಣ’ ಎನ್ನಿಸಿಕೊಳ್ಳುತ್ತದೆ. ‘ಸಾಮಾಜೀಕರಣ’ ಒಂದು ಬಹುಮುಖ ಪ್ರಕ್ರಿಯೆ. ಇದು ಜನ್ಮಜಾತವಾಗಿ ಬರುವ ಗುಣವಲ್ಲ; ಕುಟುಂಬ, ಸಂಬಂಧಿಗಳು, ಗೆಳೆಯರ ಬಳಗ, ತರಗತಿ, ಶಾಲೆ, ಸಮಾಜ, ಪರಿಸರ, ಸಂಘ– ಸಂಸ್ಥೆಗಳ ಒಡನಾಟದಲ್ಲಿ ನಡೆಸುವ ಅಂತರಾನುಕ್ರಿಯೆಯಿಂದ ಒಂದು ಮಗು ‘ಸಾಮಾಜೀಕೃತ’ಗೊಳ್ಳುತ್ತದೆ. ಕುಟುಂಬ ಸಾಮಾಜೀಕರಣದ ಮೊದಲ ನಿಯೋಗವೆನಿಸಿದರೂ ಮಗುವಿನ ನಿಜವಾದ ವ್ಯಕ್ತಿತ್ವ ರೂಪುಗೊಳ್ಳುವುದು, ಅದು ಬಹುಮುಖ ಸಾಮಾಜಿಕ ಆಯಾಮವನ್ನು ರೂಢಿಸಿಕೊಳ್ಳುವುದು ಶಾಲೆಯಲ್ಲಿ. ಮಗು ಶಾಲೆಯ ಸಂಘಂಟಿತ ವಾತಾವರಣದಲ್ಲಿ ಔಪಚಾರಿಕ ಶಿಕ್ಷಣವನ್ನು ಆರಂಭಿಸುವ ಮೊದಲು ಕುಟುಂಬ ವ್ಯಾಪ್ತಿಯಲ್ಲಿ ನಿಗದಿತ ಪ್ರಮಾಣದ ‘ಸಾಮಾಜೀಕರಣ’ ಹೊಂದಿರುತ್ತದೆ. ಇಲ್ಲಿ ಸಾಮಾಜೀಕರಣ ವೈಯಕ್ತಿಕ, ಕೌಟುಂಬಿಕ ಸಂಬಂಧಗಳನ್ನು ಅರಿಯುವುದಕ್ಕೆ ಸೀಮಿತವಾಗಿರುತ್ತದೆ. ಆದರೆ, ಮಗು ಶಾಲೆಗೆ ಕಾಲಿಟ್ಟ ನಂತರ ಸಮಾಜಕ್ಕೆ, ಪೂರ್ಣ ಪ್ರಮಾಣದ ಸಾಮಾಜೀಕರಣಕ್ಕೆ ತೆರೆದುಕೊಳ್ಳುತ್ತದೆ. ಶಾಲೆಯಲ್ಲಿ ‘ಸಾಮಾಜೀಕರಣ’ * ಮಗು ಶಾಲೆಯಲ್ಲಿ ಕೌಟುಂಬಿಕ ಸಂಬಂಧಗಳನ್ನು ಮೀರಿ, ಸಹಪಾಠಿಗಳು, ಶಿಕ್ಷಕರು, ಹಿರಿಯ– ಕಿರಿಯ ಸ್ನೇಹಿತರು, ಶಾಲಾ ಸಿಬ್ಬಂದಿ, ಶಿಕ್ಷಣಾಧಿಕಾರಿಗಳು - ಹೀಗೆ ಹಲವು ಜನರೊಂದಿಗೆ ಬೆರೆಯುತ್ತದೆ. * ಶಾಲೆಯ ಚಟುವಟಿಕೆ, ವೇಳಾಪಟ್ಟಿಯಂತೆ ಪಠ್ಯ, ಪಠ್ಯೇತರ ಹಾಗೂ ಸಹಪಠ್ಯ ಚಟುವಟಿಕೆಗಳ ಮೂಲಕ ಆರಂಭವಾಗಿ ಮಗುವಿನಲ್ಲಿ ಮೂಲ ಜ್ಞಾನಾತ್ಮಕ, ಭಾವನಾತ್ಮಕ, ಚಾಲನಾತ್ಮಕ, ಭಾಷಾ ಸಾಮರ್ಥ್ಯ, ಗಣೀತಿಯ ಕೌಶಲ, ಬುದ್ಧಿಶಕ್ತಿ ಕೌಶಲಗಳನ್ನು ಬೆಳೆಸಲಾಗುತ್ತದೆ. * ಶಾಲೆಯಲ್ಲಿಯೇ ಮಗುವಿಗೆ ಲಿಂಗವಿಭಿನ್ನತೆ ಹಾಗೂ ಅದಕ್ಕೆ ಸಂಬಂಧಿಸಿದ ಜವಾಬ್ದಾರಿಗಳ ಸ್ಪಷ್ಟ ಅರಿವು ಉಂಟಾಗುತ್ತದೆ. ಮಗುವಿನ ಮಾನಸಿಕ ಪರಿಧಿ ಹೆಚ್ಚಿ ಸಮಾಜದಲ್ಲಿ ತನ್ನ ಪಾತ್ರವೇನು? ಎಂದು ಅರಿಯಲು ಪ್ರಯತ್ನಿಸುತ್ತದೆ. * ಶಾಲಾ ವರ್ತನೆಗೆ ಶಿಸ್ತಿನ ಚೌಕಟ್ಟನ್ನು ಹಾಕಿ, ಮಗುವಿನಲ್ಲಿ ಮೌಲ್ಯಗಳು, ನೈತಿಕತೆಯ ಅರಿವನ್ನು ಉಂಟುಮಾಡುತ್ತದೆ. ಮಗು ಶಿಸ್ತು, ಸಂಯಮ, ಬದ್ಧತೆಯಿಂದ ನಡೆದುಕೊಳ್ಳಲು, ಅಪೇಕ್ಷಿತ ಮನೋಧೋರಣೆ, ಹವ್ಯಾಸಗಳನ್ನು ರೂಢಿಸಲು ಇದು ಪೂರಕವಾಗಿರುತ್ತದೆ. * ವಸ್ತು, ವಿಷಯ, ವಿಚಾರಗಳ ಹಂಚಿಕೆಯ ಪರಿಕಲ್ಪನೆಯನ್ನು ಮಗು ಕಲಿಯುವುದು ಶಾಲೆಯಲ್ಲಿಯೇ. ತಾನು ತಂದಿರುವ ತಿಂಡಿ, ಬರೆದಿರುವ ನೋಟ್ಸ್‌, ಪೆನ್ನು, ಪೆನ್ಸಿಲ್‌, ನೀರು, ಕೊಡೆ... ಇತ್ಯಾದಿ ವಸ್ತುಗಳನ್ನು, ತನ್ನ ಭಾವನೆ, ಅಭಿಪ್ರಾಯಗಳನ್ನು ತನ್ನ ಸಹಪಾಠಿಗಳೊಂದಿಗೆ, ಶಿಕ್ಷಕರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕಾರ, ಸಹಬಾಳ್ವೆ, ಸಮನ್ವಯ ಗುಣಗಳನ್ನು ಬೆಳೆಸಿಕೊಳ್ಳುತ್ತದೆ. * ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳ ಆಚರಣೆಯ ಮೂಲಕ ಮಕ್ಕಳಲ್ಲಿ ವೈವಿಧ್ಯದಲ್ಲಿ ಏಕತೆ, ಸಾಮರಸ್ಯ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಶಾಲೆ ವೃದ್ಧಿಸುತ್ತದೆ. * ಶಾಲೆ ಸಂಘಟಿಸುವ ಪಠ್ಯ, ಪಠ್ಯೇತರ ಸಹಪಠ್ಯ ಚಟುವಟಿಕೆಗಳು, ಶಿಬಿರ, ಪ್ರವಾಸ, ವನಭೋಜನ, ಸಭೆ, ಸಮಾರಂಭ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು... ಇತ್ಯಾದಿ ಸಾಮುದಾಯಿಕ ಚಟುವಟಿಕೆಗಳಲ್ಲಿ ಮಗು ಪಾಲ್ಗೊಳ್ಳುವ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಅರಿತುಕೊಳ್ಳಲು, ತಾನೂ ಕೂಡ ಸಮಾಜದ ಒಂದು ಭಾಗ ಎಂದು ಪರಿಭಾವಿಸಿ, ತನ್ನತನ ಗುರುತಿಸಿಕೊಳ್ಳಲು, ತನ್ನತನವನ್ನು ಅಭಿವ್ಯಕ್ತಿಸಲು ಸಮರ್ಥವಾಗುತ್ತದೆ. ತನ್ನತನ ಅರಿತುಕೊಳ್ಳುವುದು, ಅಭಿವ್ಯಕ್ತಿಸುವುದು ಮಗುವಿನ ವ್ಯಕ್ತಿತ್ವಕ್ಕೆ ಬುನಾದಿಯಾಗುತ್ತದೆ. ಹೀಗೆ, ಸಾಮಾಜೀಕರಣದ ವಿವಿಧ ಆಯಾಮಗಳ ಕಲಿಯುವಿಕೆ, ಅರಿಯುವಿಕೆ, ರೂಢಿಸಿಕೊಳ್ಳುವಿಕೆಯಲ್ಲಿ ಮಗು, ಬಾಲ್ಯಾವಸ್ಥೆ, ಕೌಮಾರ್ಯಾವಸ್ಥೆಯನ್ನು ದಾಟಿ ಪ್ರೌಢಾವಸ್ಥೆಗೆ ಕಾಲಿಡುವವರೆಗೆ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಮೂಲಕ ಮುಂದುವರಿಯುತ್ತದೆ. ಮಗು ಪ್ರೌಢಾವಸ್ಥೆ ತಲುಪಿ ತನ್ನ ಜೀವನಕ್ಕೆ ಸಂಬಂಧಿಸಿದ ನಿರ್ಣಯ, ಆಯ್ಕೆಗಳಲ್ಲಿ ಸ್ವಾವಲಂಬಿಯಾದಾಗ ಸಾಮಾಜೀಕರಣ ಪ್ರಕ್ರಿಯೆ ಪೂರ್ಣವಾದಂತಾಗುತ್ತದೆ. ಪೋಷಕರು, ಶಿಕ್ಷಕರ ಪಾತ್ರವೇನು? ಮಗುವಿನ ವ್ಯಕ್ತಿತ್ವ ರೂಪಣೆಯ ಜವಾಬ್ದಾರಿ ಪೋಷಕರು (ಕುಟುಂಬ) ಹಾಗೂ ಶಿಕ್ಷಕರು (ಶಾಲೆ) ಇಬ್ಬರಿಗೂ ಸೇರಿದೆ. ಮಗು ಚಟುವಟಿಕೆಯುತವಾಗಿರುವ ದಿನದ ಹೆಚ್ಚಿನ ಅವಧಿಯನ್ನು ಮನೆಗಿಂತ ಹೆಚ್ಚಾಗಿ ಶಾಲೆಯಲ್ಲಿಯೇ ಕಳೆಯುತ್ತದೆ. ಮನೆಗೆ ಬಂದ ನಂತರವೂ ಪೋಷಕರು ಮಗುವಿನ ಜೊತೆ ಶಾಲಾ ಸಂಬಂಧಿತ ವಿಷಯಗಳನ್ನೇ ಚರ್ಚಿಸುತ್ತಾರೆ. ನಂತರವೂ ಹೋಂವರ್ಕ್ ರೂಪದಲ್ಲಿ ಶಾಲಾ ಚಟುವಟಿಕೆಯೇ ಮುಂದುವರಿಯುತ್ತದೆ. ಹೀಗಾಗಿ, ಪೋಷಕರಿಗಿಂತಲೂ ಶಿಕ್ಷಕರ ಮೇಲೆಯೇ ಮಗುವಿನ ಜವಾಬ್ದಾರಿ ತುಸು ಹೆಚ್ಚು ಎಂದು ಹೇಳಬಹುದು. * ಮಗುವು ಸಾಮಾಜೀಕರಣ ಹೊಂದುವ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ವಿಧಿಸುವ ಅತಿಯಾದ ನಿರ್ಬಂಧಗಳು ಅಡ್ಡಿಯಾಗಬಾರದು. ಕೋಣೆಯ ಕೂಸು ಕೊಳೆಯುತ್ತದೆ – ಎಂಬುದು ನೆನಪಿರಲಿ. * ಮಗುವನ್ನು ಇತರ ಮಕ್ಕಳೊಂದಿಗೆ ಬೆರೆಯಲು, ಅವರೊಡನೆ ಆಟವಾಡಲು, ಊಟ ಮಾಡಲು, ಅಧ್ಯಯನ ಮಾಡಲು ಅನುವು ಮಾಡಿಕೊಡಬೇಕು. * ಸಾಧ್ಯವಾದಷ್ಟು ಮಕ್ಕಳನ್ನು ಟಿವಿ, ಮೊಬೈಲ್, ಕಂಪ್ಯೂಟರ್‌ಗಳಿಂದ ದೂರವಿಟ್ಟು ಹೊರಗಡೆ ಸುತ್ತಾಡಿಸಬೇಕು. ಸುತ್ತಲಿನ ಪರಿಸರ, ಸ್ಥಳಗಳನ್ನು ಪರಿಚಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. * ಧಾರ್ಮಿಕತೆ, ಜಾತಿಯ ಕಟ್ಟಳೆ ಮೀರಿ ಮಕ್ಕಳಿಗೆ ಸಾಮರಸ್ಯ, ಸಮನ್ವಯತೆಯ ಪಾಠ ಕಲಿಸಬೇಕು. * ರಾಷ್ಟ್ರೀಯ ದಿನಾಚರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿ ಮಕ್ಕಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತಿಯನ್ನು ಬೆಳೆಸಬೇಕು. * ಸಾಮುದಾಯಿಕ ಚಟುವಟಿಕೆಗಳು, ಸಮಾಜಸೇವೆಯಲ್ಲಿ ಪಾಲ್ಗೊಳ್ಳಲು ಮಗುವಿಗೆ ಅವಕಾಶ ಒದಗಿಸಬೇಕು. ಇದರಿಂದ ಮಗುವಿನಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡುತ್ತದೆ. * ಶಿಕ್ಷಕರು ಹಾಗೂ ಪೋಷಕರು ಮಗುವಿಗೆ, ಬಾಲ್ಯಾವಸ್ಥೆ, ಕೌಮಾರ್ಯಾವಸ್ಥೆಯಲ್ಲಿ ಆಯಾ ವಯೋಮಾನಕ್ಕೆ ಅನುಗುಣವಾದ ಉತ್ತಮ ಮಾರ್ಗದರ್ಶನ ನೀಡಿ, ಸ್ವಯಂ ಮಾದರಿಯಾಗಿ ಮಕ್ಕಳನ್ನು ಸಾಮಾಜೀಕೃತಗೊಳಿಸಬೇಕು. * ಮಗುವಿನಲ್ಲಿ ಸಮಸ್ಯಾತ್ಮಕ ವರ್ತನೆ ಕಂಡುಬಂದರೆ, ಶಿಕ್ಷಕರು, ಪೋಷಕರು ಮಗುವಿನ ಜೊತೆ ಸಮಾಲೋಚನೆ ನಡೆಸಿ, ಸಮಸ್ಯೆ ಪರಿಹರಿಸಲು ಆದ್ಯತೆ ನೀಡಬೇಕು. ಅಗತ್ಯ ಬಿದ್ದರೆ, ಆಪ್ತಸಮಾಲೋಚಕರು, ಮನೋವೈದ್ಯರ ನೆರವು ಪಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.