ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನಸಂಸ್ಥೆ ಮಾರ್ಚ್‌ 20ರ ಪ್ರಕಟವಾಗಿದ್ದ ‘ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನಸಂಸ್ಥೆ’ ಈ ಲೇಖನದ ಬಗ್ಗೆ ಪ್ರತಿಕ್ರಿಯೆ. ಈ ಲೇಖನದಲ್ಲಿ ಎರಡು ತಪ್ಪು ಗ್ರಹಿಕೆಗಳಿವೆ. ಮೊದಲನೆಯದು: ಸ್ವಾಮಿ ವಿವೇಕಾನಂದರ ಆಣತಿಯಂತೆ ಜೆ. ಎನ್. ಟಾಟಾರವರು ಈ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು ಎನ್ನುವುದು. ಇದಕ್ಕೆ ಯಾವ ಆಧಾರಗಳೂ ಇಲ್ಲ. ಶಿಸ್ತು–ಸಂಯಮಗಳ ಕುರಿತು ವಿವೇಕಾನಂದರಿಗೆ ಬರೆದಿರುವ ಪತ್ರದಲ್ಲಿ (ನವೆಂಬರ್ 23, 1898: ಇದರ ಮೂಲಪ್ರತಿ ಇನ್ನೂ ಲಭ್ಯ) ಟಾಟಾರವರು ಈ ಸಂಶೋಧನಾ ಸಂಸ್ಥೆ ಸ್ವಪ್ರೇರಿತವಾದದ್ದು ಎಂದು ನಿಸ್ಸಂದೇಹವಾಗಿ ಉಲ್ಲೇಖಿಸಿದ್ದಾರೆ. ವಿವೇಕಾನಂದರಿಗೂ ಈ ಸಂಸ್ಥೆಯ ಸ್ಥಾಪನೆಗೂ ಯಾವ ಸಂಬಂಧವೂ ಇಲ್ಲ. ಈ ಸಂಸ್ಥೆಗೆ ಬೇಕಾದ ಜಮೀನನ್ನೂ ಸಹಾಯಧನವನ್ನೂ 1899-1900ರಲ್ಲಿ ಕೊಡಲು ಒಪ್ಪಿದವರು ಆಗಿನ ಮಹಾರಾಣಿಯವರು ಮತ್ತು ದಿವಾನ್ ಶೇಷಾದ್ರಿ ಅಯ್ಯರ್ (ನಾಲ್ವಡಿ ಕೃಷ್ಣರಾಜ ಒಡೆಯರ್ ಸಿಂಹಾಸನಾರೂಢರಾದದ್ದು 1902ರಲ್ಲಿ). ‌ಎರಡನೆಯದು: ಸಿ.ವಿ. ರಾಮನ್‌ರವರು ಪ್ರಖ್ಯಾತ ಸಂಶೋಧನೆ ಮಾಡಿದ್ದು ಕೋಲ್ಕತ್ತದಲ್ಲಿರುವ ‘ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್’ ಎಂಬ ಸಂಸ್ಥೆಯಲ್ಲಿ. ಈ ವಿಶ್ವವಿಖ್ಯಾತ ಸಂಶೋಧನೆಯನ್ನು ಅವರು ಪ್ರಕಟಿಸಿದ್ದು ಫೆಬ್ರುವರಿ 28, 1928ರಲ್ಲಿ. ರಾಮನ್ ಅವರಿಗೆ ನೊಬೆಲ್ ಪಾರಿತೋಷಕ ಬಂದದ್ದು 1930ರಲ್ಲಿ. 1933 ರಲ್ಲಿ ಭಾರತೀಯ ವಿಜ್ಞಾನಸಂಸ್ಥೆಗೆ ನಿರ್ದೇಶಕರಾಗಿ ಬೆಂಗಳೂರಿಗೆ ಬಂದರು. ಇಲ್ಲಿ ಪ್ರಪ್ರಥಮವಾಗಿ ಭೌತವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿದರು. –ಬಿ.ವಿ. ಸುಬ್ಬರಾಯಪ್ಪ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.