ಮಕ್ಕಳ ಬದುಕಿಗೆ ದಾರಿದೀಪವಾಗೋಣ ಇತ್ತೀಚಿನ ದಿನಗಳಲ್ಲಿ ಪರ್ಸನಾಲಿಟಿ ಡೆವೆಲಪ್‌ಮೆಂಟ್ ಮತ್ತು ಕರಿಯರ್ ಡೆವೆಲಪ್‌ಮೆಂಟ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಮೊದಲೆಲ್ಲ ಹೀಗಿರಲಿಲ್ಲ, ಈಗೇಕೆ ಜನರು ಪರ್ಸನಾಲಿಟಿ ಕುರಿತು ಇಷ್ಟು ತಲೆ ಕೆಡೆಸಿಕೊಳ್ಳುತ್ತಿದ್ದಾರೆ – ಎಂದು ಅನೇಕ ಸಾರಿ ಅನಿಸಿದ್ದುಂಟು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಬೇಕಾದರೆ ಪಾಲಕರಾದವರು ಏನು ಮಾಡಬೇಕೆಂದು ಪ್ರಶ್ನಿಸಿಕೊಂಡಿದ್ದೂ ಉಂಟು. ಈ ಪ್ರಶ್ನೆಗಳ ಬೆನ್ನು ಹತ್ತಿ ಹೋದಾಗ ದೊರೆತ ಕೆಲವು ಟಿಪ್ಸ್ ಇಲ್ಲಿವೆ ನೋಡಿ. ಪರ್ಸನಾಲಿಟಿ ಎಂದರೇನು? ನಮ್ಮಲ್ಲಿ ಬಹಳಷ್ಟು ಜನರು ಪರ್ಸನಾಲಿಟಿ (ವ್ಯಕ್ತಿತ್ವ) ಎಂದರೆ ನಾವು ಇತರರಿಗೆ ಹೇಗೆ ಕಾಣಿಸುತ್ತೇವೆಯೋ ಅದು ಅಥವಾ ನಮ್ಮ ‘ಅಪಿಯರನ್ಸ್್’ ಎಂದು ತಿಳಿದುಕೊಂಡಿದ್ದಾರೆ. ಆದರೆ ಪರ್ಸನಾಲಿಟಿ ಎನ್ನುವುದು ವಿಶಾಲ ಅರ್ಥವನ್ನು ಹೊಂದಿದೆ. ಪರ್ಸನಾಲಿಟಿ ಎಂಬುದು ವ್ಯಕ್ತಿಗತ ಸ್ಥಿತಿ ಅಥವಾ ವ್ಯಕ್ತಿಯ ಗುಣಾತ್ಮಕತೆ ಎಂದು ಶಬ್ದಕೋಶ ಹೇಳುತ್ತದೆ. ಇದು ನಮ್ಮ ನಡೆ ನುಡಿ ಕೌಶಲ ಆಸಕ್ತಿ ಕೃತಿಯನ್ನು ಒಳಗೊಂಡಿರುತ್ತದೆ. ಎಂದರೆ ಇದು ಒಬ್ಬ ವ್ಯಕ್ತಿಯ ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ನಡೆಯನ್ನು ಒಳಗೊಂಡಿರುತ್ತದೆ. ನಾವೇನು ಮಾಡಬೇಕು? ಪಾಲಕರಾದ ನಾವೆಲ್ಲ ನಮ್ಮ ಮಕ್ಕಳು ‘ಡೈನಮಿಕ್ ಪರ್ಸನಾಲಿಟಿ’ಯನ್ನು ಹೊಂದಬೇಕು ಎಂದು ಆಶಿಸುತ್ತೇವೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತೇವೆ. ಕೆಲವರಂತೂ ತಮ್ಮ ಮಗು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕೆಂಬ ದೊಡ್ಡ ಕನಸು ಹೊತ್ತು ಅದರ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ; ಅದರಿಂದ ಮಗುವಿನ ಮಾನಸಿಕ ಸ್ಥಿತಿಯನ್ನು ಕದಡಿ ತಾವೂ ಮಾನಸಿಕ ವೇದನೆಯನ್ನು ಅನುಭವಿಸುತ್ತಾರೆ. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅವರ ಸುತ್ತಲಿನ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರ ಎಂದರೆ ಕೇವಲ ನಮ್ಮ ಸುತ್ತಮುತ್ತಲಿನ ಹವಾಮಾನ, ಗಾಳಿ, ವಾತಾವರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕುಟುಂಬ ಸದಸ್ಯರ ರೀತಿನೀತಿಗಳು ನೆರೆಹೊರೆಯವರ ಆಚಾರವಿಚಾರಗಳು ಅವರ ಜೀವನಶೈಲಿಯನ್ನೂ ಒಳಗೊಂಡಿರುತ್ತದೆ.. ಹೀಗಾಗಿ ಮಗುವಿನ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ಪರಿಸರ ಒದಗಿಸವುದು ಪಾಲಕರ ಕರ್ತವ್ಯ.ಪರಿಸರದಲ್ಲಿ ನಿತ್ಯ ನಡೆಯುವ ಅಸಂಖ್ಯ ಘಟನೆಗಳು, ವಿದ್ಯಮಾನಗಳು ಮಗುವಿನ ಮನಸ್ಸಿನ ಮೇಲೆ ಅತ್ಯಧಿಕ ಪರಿಣಾಮ ಬೀರುತ್ತವೆ. ತಂದೆ–ತಾಯಿಯ ಚಟಗಳು, ಹವ್ಯಾಸಗಳು, ಗುಣಲಕ್ಷಣಗಳು ಮಗುವಿನ ವ್ಯಕ್ತಿತ್ವ –ಬೆಳವಣಿಗೆಯನ್ನು ನಿರ್ಣಯಿಸುವ ಅಂಶಗಳಾಗಿರುತ್ತವೆ. ಹವ್ಯಾಸಗಳು ಪೂರಕವಾದರೆ ಚಟಗಳು ಮಾರಕವಾಗಿರುತ್ತವೆ. ಅಂದರೆ ಪಾಲಕರ ನಡೆವಳಿಕೆಗಳು ಮಕ್ಕಳ ಮೇಲೆ ಪ್ರತಿಬಿಂಬಿಸುತ್ತವೆ. ಪಾಲಕರ ಇಷ್ಟಗಳು, ಮಾಡುವ ಕೆಲಸಗಳು, ಆದ್ಯತೆಗಳು, ಹಾಕಿಕೊಳ್ಳುವ ಬಟ್ಟೆಗಳು, ಬಿಡುವಿನ ಸಮಯವನ್ನು ಕಳೆಯುವ ಬಗೆ – ಹೀಗೆ ನಮಗೆ ಸಣ್ಣ ಪುಟ್ಟವೆನಿಸುವ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟುಮಾಡುತ್ತವೆ; ಅವು ಅವರ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮೈಲುಗಲ್ಲುಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಅಂಶವನ್ನು ನಾವು ಅರಿಯದೆ, ಕೆಲವು ಬಾರಿ ಅರಿತೂ ಸ್ವಯಂ ನಿಯಂತ್ರಣ ಕಳೆದುಕೊಂಡು ಮಕ್ಕಳಿಗೆ ಆದರ್ಶ ಹೇಳುತ್ತ, ನಾವು ಮಾತ್ರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುತ್ತೇವೆ. ನಮ್ಮ ನುಡಿಗಳಿಗಿಂತ ನಮ್ಮ ಕ್ರಿಯೆಗಳು ಮಕ್ಕಳ ಮೇಲೆ ತುಂಬ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಸದಾ ನೆನಪಲ್ಲಿಟ್ಟುಕೊಳ್ಳಬೇಕು. ಮಗುವಿನ ಆಲೋಚನೆಗಳು, ವರ್ತನೆಗಳು, ಧ್ಯೇಯೋದ್ದೇಶಗಳು, ಗುರಿಗಳು ಪರಿಸರದ ಪ್ರಭಾವದಿಂದಲೇ ರೂಪಿಸಲ್ಪಡುತ್ತವೆ. ಹೀಗಾಗಿ ಮಗುವನ್ನು ಸಕಾರಾತ್ಮಕವಾಗಿ ಚಿಂತಿಸಲು, ಉತ್ತಮ ಸಂಸ್ಕಾರವುಳ್ಳ ಮನೆ–ಮಕ್ಕಳ ಸಹವಾಸದಲ್ಲಿ ಸಮಯವನ್ನು ಕಳೆಯಲು ಮತ್ತು ಸಂಸ್ಕಾರವಂತರ ಗೆಳೆತನವನ್ನು ಮಾಡುವಂತೆ ಪ್ರೇರೇಪಿಸುವುದು ಉತ್ತಮ. ನಕಾರಾತ್ಮಕವಾಗಿ ಯೊಚಿಸುವ ಜನರೊಂದಿಗೆ ಮಗು ಬೆಳೆದರೆ ಕ್ಷುಲ್ಲಕ ಚಟಗಳನ್ನು ಬೆಳೆಸಿಕೊಳ್ಳುತ್ತದಲ್ಲದೆ, ಹತಾಶವಾಗಿ, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದೂ ಶತಃಸಿದ್ಧ. ದಿನವೂ ಪಾಲಕರು ಮಕ್ಕಳಿಗಾಗಿ ಒಂದೆರಡು ತಾಸನ್ನಾದರೂ ಮೀಸಲಿಡಲೇಬೇಕು. ಈ ಸಮಯದಲ್ಲೂ ಕೇವಲ ವಿದ್ಯಾಭ್ಯಾಸಕ್ಕಷ್ಟೆ ಮಹತ್ವ ಕೊಡದೇ ಅವರ ಆಸಕ್ತಿಗಳ ಬಗೆಗೆ ಗಮನಹರಿಸಬೇಕು, ಅವರ ಇಷ್ಟ–ಕಷ್ಟಗಳನ್ನು ಆಲಿಸಬೇಕು. ಅವರೊಂದಿಗೆ ಬೆರೆತು ಆಡಬೇಕು. ಸಂತಸದ ಕ್ಷಣಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ಇದು ಅವರಲ್ಲಿಯೂ ಪಾಲಕರಲ್ಲಿಯೂ ಹೊಸ ಚೈತನ್ಯ ಮೂಡಿಸುತ್ತದೆ. ಮಕ್ಕಳನ್ನು ಕ್ರಿಯಾಶೀಲರಾಗಿಸಿ, ಸಂವಹನ ಕೌಶಲವನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯ ಮಾಡಬೇಕು. ಅವರನ್ನು ಸದಾ ನಿಂದಿಸುವುದಾಗಲೀ ಟೀಕಿಸುವುದಾಗಲೀ ಮಾಡುವುದು ಸರಿಯಲ್ಲ; ಅವರ ಗೆಳೆಯ/ಗೆಳತಿಯರ ಮುಂದೆ ಬೈಯ್ಯಬೇಡಿ. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಇದರಿಂದ ಅವರ ಆತ್ಮವಿಶ್ವಾಸ ಕುಂದುತ್ತದೆ. ನಯವಾಗಿ ಪ್ರೀತಿಯಿಂದ ನಡೆದುಕೊಳ್ಳಿ. ಅವರ ದೌರ್ಬಲ್ಯಗಳನ್ನು ತಿಳಿಹೇಳಿ ಸರಿಪಡಿಸಿ. ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಲು, ಹಾಸ್ಯಮನೋಭಾವ ಹೊಂದಲು, ಮುಗಳ್ನಗುತ್ತ ಮಾತನಾಡಲು ಪ್ರೇರೇಪಿಸಿ. ಅವರ ಮಾತಿಗೆ ಮನ್ನಣೆ ಕೊಡಿ. ವರ್ತನೆ ಸಂದರ್ಭಾನುಸಾರ ಹಾಗೂ ನ್ಯಾಯೋಚಿತವಾಗಿರಲೆಂಬುದನ್ನು ಹೇಳಿಕೊಡಲು ಮರೆಯದಿರಿ. ಕೋಪ, ತಾಪ ಅಹಂಕಾರ, ಅಸಹನೆ, ಅಸೂಯೆಯಂಥ ನಕಾರಾತ್ಮಕ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಕಲಿಸಿ. ಹೊಂದಾಣಿಕೆಯೇ ಜೀವನ ಎನ್ನುವುದನ್ನು ಮನದಟ್ಟು ಮಾಡಿಕೊಡಿ. ಸ್ನೇಹಪರತೆ ಮತ್ತು ಜ್ಞಾನಸಂಪನ್ನತೆ ಬದುಕಿನ ಬಂಡಿಯ ಎರಡು ಗಾಲಿಗಳು ಎನ್ನುವುದನ್ನು ಹೇಳಿಕೊಡಿ. ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ, ಶ್ರದ್ಧೆ, ಆಸಕ್ತಿಯಿರಲಿ ಎನ್ನುವುದನ್ನು ನಿಮ್ಮ ಕೃತಿಗಳಿಂದ ಅವರಿಗೆ ಮನವರಿಕೆ ಮಾಡಿಕೊಡಿ. ಪಾಲಕರು ನಮ್ಮ ಅವಗುಣಗಳನ್ನು ತಿದ್ದಿಕೊಂಡು, ಮಕ್ಕಳ ಸುಂದರ ಬದುಕಿಗೆ ದಾರಿದೀಪವಾಗೋಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.