ಯಶಸ್ಸು ಹಾಗೂ ಬೆಳವಣಿಗೆ... ಯಶಸ್ಸು ಈ ಶಬ್ದವೇ ಹಾಗೆ, ಎಲ್ಲರಿಗೂ ಬಲು ಅಚ್ಚುಮೆಚ್ಚು. ಯಶಸ್ಸು ಯಾರಿಗೆ ಬೇಕಾಗಿಲ್ಲ ಹೇಳಿ? ಈ ‘ಯಶಸ್ಸು’ ಎಂಬ ಶಬ್ದ ಕೇಳಿದ ಕೂಡಲೇ ಮೈ ಪುಳಕಿತವಾಗುತ್ತದೆ. ಯಶಸ್ಸಿನ ಜೊತೆಗೆ ಅದೃಷ್ಟವೂ ಸೇರಿದರೆ ಆ ವ್ಯಕ್ತಿಯನ್ನು ಪ್ರಪಂಚದಲ್ಲಿ ಹಿಡಿಯುವವರೇ ಇಲ್ಲ, ಎನ್ನುವಷ್ಟು ಎತ್ತರಕ್ಕೆ ಹೋಗಿಬಿಟ್ಟಿರುತ್ತಾರೆ. ಆದರೆ ಕೆಲವರಿಗೆ ಯಶಸ್ಸು ಮರಳುಗಾಡಿನ ಮರೀಚಿಕೆಯಾಗಿರುತ್ತದೆ. ಯಶಸ್ಸು ಯಾರೋ ಕೆಲವರ ಸ್ವತ್ತಲ್ಲ; ಎಲ್ಲರಿಗೂ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಪ್ರತಿಭೆ ಹಾಗೂ ಸಾಮರ್ಥ್ಯ ಇದ್ದೇ ಇರುತ್ತದೆ. ಅವಕಾಶ ದೊರೆತಾಗ ಅದು ಪ್ರಕಟವಾಗಿ, ಕ್ರಿಯಾಶೀಲವಾದಾಗ ಯಶಸ್ಸು ಖಂಡಿತ. ಚಾನೆಲ್ ಒಂದರ ಮುಖ್ಯಸ್ಥರಾದ ಸುಭಾಶಚಂದ್ರ ಅವರು ಯುವಕರಿಗಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಅವರು ಮೂರು ‘ಸಿ’ () ಗಳ ಬಗ್ಗೆ ಚೆನ್ನಾಗಿ ವಿವರಿಸಿದರು. ಆ ಮೂರು ಸಿ–ಗಳನ್ನು ಪಾಲಿಸಿದಲ್ಲಿ ಯಶಸ್ಸು ತಾನಾಗಿಯೇ ದೊರಕುವುದು ಎನ್ನುವುದು ಅವರ ಸಂದೇಶ. ಆ ಮೂರು ಸಿಗಳು ಯಾವುವೆಂದರೆ: - (ಏಕಾಗ್ರತೆ): ನಾವು ಯಾವುದೇ ಕೆಲಸ ಅಥವಾ ಕಾರ್ಯ ಮಾಡಬೇಕಾದರೆ ಏಕಾಗ್ರತೆ ಅವಶ್ಯ. ಏಕಾಗ್ರತೆ ಇಲ್ಲದೇ ಹೋದರೆ ಯಾವ ಕೆಲಸವೂ ಆಗುವುದಿಲ್ಲ. ಯಶಸ್ಸಿನ ಮೊದಲ ಮೆಟ್ಟಿಲು ಏಕಾಗ್ರತೆ. - (ನಿರಂತರ ಪ್ರಯತ್ನ): ಯಾವುದೇ ಕೆಲಸ ಮಾಡಬೇಕಾದರೆ ಏಕಾಗ್ರತೆಯನ್ನು ಸಾಧಿಸಿದ ನಂತರ, ಆ ಕೆಲಸ ಪರಿಪೂರ್ಣವಾಗುವವರೆಗೆ ನಿರಂತರ ಪ್ರಯತ್ನ ಇರಲೇಬೇಕು. -- (ಸಹಕಾರ): ಯಶಸ್ಸು ಸಾಧಿಸಲು ಏಕಾಗ್ರತೆ ಹಾಗೂ ನಿರಂತರ ಪ್ರಯತ್ನದ ಜೊತೆಗೆ ಸಂಬಂಧಿಸಿದವರ ಸಹಾಯ–ಸಹಕಾರಗಳನ್ನು ಪಡೆಯುವುದು ಅತಿ ಅವಶ್ಯ. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟು ಅಳವಡಿಸಿಕೊಂಡರೆ ಆಗ ಯಶಸ್ಸು ಖಂಡಿತ. ಈ ಮೂರು ಸಿ–ಗಳ ಮಹತ್ವವು ಜೀವನದ ಪ್ರತಿ ಹಂತಗಳಲ್ಲಿಯೂ ಉಪಯೋಗಕ್ಕೆ ಬರುತ್ತವೆ. ಯಶಸ್ಸಿನ ಜೊತೆಗೆ ಬೆಳವಣಿಗೆಯ ಹಂತಗಳು ನಾಲ್ಕು ಆಯಾಮಗಳಲ್ಲಿ ನಡೆಯುತ್ತವೆ. ಈ ಬೆಳವಣಿಗೆಗಳು ಜೀವನದ ಉತ್ಸಾಹವನ್ನು ಹೆಚ್ಚಿಸುತ್ತವೆ; ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ಈ ನಾಲ್ಕು ಬೆಳವಣಿಗೆಗಳೆಂದರೆ: 1) ವೈಯಕ್ತಿಕ ಬೆಳವಣಿಗೆ, 2) ಕೌಟುಂಬಿಕ ಬೆಳವಣಿಗೆ, 3) ಔದ್ಯೋಗಿಕ ಬೆಳವಣಿಗೆ 4) ಸಾಮಾಜಿಕ ಬೆಳವಣಿಗೆ. 1) ವೈಯಕ್ತಿಕ ಬೆಳವಣಿಗೆ: ಪ್ರತಿಯೊಬ್ಬ ವ್ಯಕ್ತಿಗೂ ತಾನು ಬೆಳೆಯಬೇಕೆಂಬ ಹಂಬಲವಿರುತ್ತದೆ. ವಿದ್ಯಾರ್ಥಿದೆಸೆಯಲ್ಲಿ ವೈಯಕ್ತಿಕ ಬೆಳವಣಿಗೆ ಎನ್ನುವುದು ಉನ್ನತ ದರ್ಜೆಯಲ್ಲಿ ಪದವಿ ಪಡೆಯುವುದು, ಪ್ರತಿಭೆಯ ಅನಾವರಣದಂಥವು ಸೇರಿರುತ್ತವೆ. ಒಂದು ಹಂತದ ವಿದ್ಯಾಭ್ಯಾಸದ ನಂತರ ಉದ್ಯೋಗದಲ್ಲಿ ತೊಡಗಿಸಿಕೊಂಡು ಹಣವನ್ನು ಸಂಪಾದಿಸುವ ಕನಸನ್ನು ಸಾಕಾರಗೊಳಿಸಿಕೊಳ್ಳುವುದೂ ಈ ಬೆಳವಣಿಗೆಯ ಒಂದು ಭಾಗವೇ. 2) ಕೌಟುಂಬಿಕ ಬೆಳವಣಿಗೆ: ಕೌಟುಂಬಿಕ ಜೀವನಕ್ಕೆ ಹೊಂದಿಕೊಳ್ಳುವುದರಿಂದ ಸಾಧಿಸುವ ಬೆಳವಣಿಗೆ. ಕುಟುಂಬ ಸಣ್ಣದಿರಬಹುದು ಅಥವಾ ಅವಿಭಕ್ತ ಕುಟುಂಬವಾಗಿರಬಹುದು, ಒಬ್ಬರಿಗೊಬ್ಬರು ಸಹಕಾರದಿಂದ ಸಹ ಬಾಳ್ವೆ ನಡೆಸುವುದರ ಮೂಲಕ ಕೌಟುಂಬಿಕ ಬೆಳವಣಿಗೆಯನ್ನು ಸಾಧಿಸಬಹುದು. ಇಂದಿನ ಆಧುನಿಕ ಜೀವನದಲ್ಲಿ ಕೌಟುಂಬಿಕ ಸಮಸ್ಯೆಗಳು ಬಹು ಸಂಕೀರ್ಣವಾಗಿವೆ. ಇಂತಹ ಸಂಕೀರ್ಣಗಳಿಂದ ಹೊರಬಂದು ಕುಟುಂಬದಲ್ಲಿ ಸಾಮರಸ್ಯ ಸಾಧಿಸುವುದೇ ಕೌಟುಂಬಿಕ ಬೆಳವಣಿಗೆ. 3) ಔದ್ಯೋಗಿಕ ಬೆಳವಣಿಗೆ: ಒಂದು ಹಂತದ ವಿದ್ಯಾಭ್ಯಾಸದ ನಂತರ ಜೀವನೋಪಾಯಕ್ಕಾಗಿ ಪ್ರತಿಯೊಬ್ಬ ವ್ಯಕ್ತಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಅದು ನೌಕರಿಯಾಗಿರಬಹುದು, ವೃತ್ತಿಯಾಗಿರಬಹುದು ಅಥವಾ ವ್ಯಾಪಾರದಲ್ಲಿ ತೊಡಗಿಕೊಳ್ಳುವುದಾಗಿರಬಹುದು. ಇದರಿಂದ ಆರ್ಥಿಕವಾಗಿ ಸಬಲರಾಗಿ ಕುಟುಂಬದ ನಿರ್ವಹಣೆ ಮಾಡುವ ಜವಾಬ್ದಾರಿ. ತಾವು ತೊಡಗಿಕೊಂಡಿರುವ ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವುದು, ಸಹೋದ್ಯೋಗಿಗಳ ಜೊತೆಗೆ ಸಾಮರಸ್ಯ ಸಾಧಿಸುವುದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು. 4) ಸಾಮಾಜಿಕ ಬೆಳವಣಿಗೆ: ಮಾನವನು ಸಂಘಜೀವಿಯಾದ ಕಾರಣ ಸಾಮಾಜಿಕ ಬೆಳವಣಿಗೆಯೂ ಅವಶ್ಯ. ಕಾರಣ ಈ ಮೇಲಿನ ಮೂರು ಬೆಳವಣಿಗೆಗಳ ಜೊತೆಗೆ ವ್ಯಕ್ತಿಯು ಸಮಾಜದಲ್ಲಿ ತನ್ನನ್ನು ಗುರುತಿಸಿಕೊಳ್ಳಬೇಕು ಎನ್ನುವುದು ಎಲ್ಲರಲ್ಲೂ ಇದ್ದೇ ಇರುತ್ತದೆ. ಸಮಾಜದಿಂದ ಎಲ್ಲವನ್ನೂ ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ. ವ್ಯಕ್ತಿಯ ಸ್ವಂತ ಬದುಕಿನ ಮೇಲೂ ಸಮಾಜದ ಪ್ರಭಾವ ಇದ್ದೇ ಇರುತ್ತದೆ. ವ್ಯಕ್ತಿಯೂ ಸಮಾಜದ ಭಾಗವೇ ಆಗಿರುವುದರಿಂದ ಸಮಾಜಾಭಿಮುಖವಾಗಿ ತೊಡಗಿಕೊಳ್ಳುವುದು ಆವಶ್ಯಕವಾಗಿದೆ. ಸಮಾಜದ ಕ್ಷೇಮದಲ್ಲಿಯೇ ವ್ಯಕ್ತಿಯ ಕ್ಷೇಮವೂ ಸೇರಿರುತ್ತದೆ; ವ್ಯಕ್ತಿಯ ಬೆಳವಣಿಗೆಯಲ್ಲಿಯೇ ಸಮಾಜದ ಬೆಳವಣಿಗೆಯೂ ಸೇರಿರುತ್ತದೆ. ಹೀಗೆ ಇಂದಿನ ಯುವ ಜನಾಂಗವು ಯಶಸ್ಸಿನ ಜೊತೆಗೆ ಜೀವನವನ್ನು ಸಮಗ್ರವಾಗಿ ರೂಪಿಸಿಕೊಳ್ಳು ಆವಶ್ಯಕವಾದ ಬೆಳವಣಿಗೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಭರವಸೆಯ ಬೆಳಕಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.