ಸಾಮರ್ಥ್ಯ ವೃದ್ಧಿಗೆ ‘ಬೃಂದಾವನ’ ವೇದಿಕೆ ಬೆಂಗಳೂರಿನ ಜಯನಗರ 2ನೇ ಬ್ಲಾಕ್, 9–ಎ ಮುಖ್ಯರಸ್ತೆಯ ಫ್ಲ್ಯಾಟ್ನಂ. 456ರಲ್ಲಿರುವ ‘ಬೃಂದಾವನ’ ವಿಶೇಷ ಶಾಲೆ 1993ರಲ್ಲಿ ಸ್ಥಾಪನೆಯಾಗಿದೆ. ಡಾ.ಗಾಯತ್ರಿ ಕೃಷ್ಣ, ಕುಸುಮಾ ನಾರಾಯಣಮೂರ್ತಿ, ರೂಪಾ ಶಿವಕುಮಾರ ನೇತೃತ್ವದ ‘ಬೃಂದಾವನ ಸೈಕೋ ಎಜುಕೇಶನ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌’ ಆಡಳಿತಕ್ಕೆ ಒಳಪಟ್ಟು ಈ ಶಾಲೆ ಕಾರ್ಯನಿರ್ವಹಿಸುತ್ತಿದೆ. ಕಲಿಕಾ ನ್ಯೂನತೆಯುಳ್ಳ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಧ್ಯೇಯವನ್ನು ಈ ಶಾಲೆ ಹೊಂದಿದೆ. ಆಟಿಸಂ, ಡೌನ್‌ಸಿಂಡ್ರೋಂ, ಬುದ್ಧಿಮಾಂದ್ಯತೆಯಂತಹ ತೀವ್ರ ಸಮಸ್ಯೆಯುಳ್ಳ ಮಕ್ಕಳ ಬದಲು, ಲಘು ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ, ಡಿಸ್‌ಲೆಕ್ಸಿಯಾ, ವರ್ತನಾ ಸಮಸ್ಯೆ ಹೊಂದಿರುವ ಮಕ್ಕಳಿಗೆ ಈ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ. ಮಕ್ಕಳಲ್ಲಿ ಹುದುಗಿರುವ ಸೃಜನಶೀಲತೆಯನ್ನು ಗುರುತಿಸಿ, ಕ್ರಮಾನುಗತ ಕಲಿಕೆ, ಸಕಾರಾತ್ಮಕ ಪುನರ್ಬಲನದ ಮೂಲಕ ಸಾಮರ್ಥ್ಯ ಸಾಣೆ ಹಿಡಿಯುವುದು ಈ ಸಂಸ್ಥೆಯ ಮುಖ್ಯ ಕಾರ್ಯ. ಸಾಮಾನ್ಯ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ವೈದ್ಯರ ಸಲಹೆಯ ಮೇರೆಗೆ ಅಥವಾ ಪೋಷಕರೇ ಸ್ವಯಂ ಆಸಕ್ತಿಯಿಂದ ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳನ್ನು ಈ ಸಂಸ್ಥೆಗೆ ದಾಖಲಿಸುತ್ತಾರೆ. ಸಂಸ್ಥೆ ಇಬ್ಬರು ಶಿಕ್ಷಕರು ಹಾಗೂ ಒಬ್ಬ ವಿದ್ಯಾರ್ಥಿಯಿಂದ ತನ್ನ ಕಾರ್ಯನಿರ್ವಹಣೆ ಆರಂಭಿಸಿತ್ತು. ಪ್ರಸ್ತುತ 30 ಪೂರ್ಣಾವಧಿ ಶಿಕ್ಷಕರು, 18 ಅರೆಕಾಲಿಕ ಶಿಕ್ಷಕರು ಹಾಗೂ 137 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಸಂಸ್ಥೆಯಲ್ಲಿ ಪೂರ್ಣಾವಧಿಯ– ಕಿರಿಯರ ವಿಭಾಗ, ಹಿರಿಯರ ವಿಭಾಗ ಹಾಗೂ ಅಲ್ಪಾವಧಿಯ– ಪರಿಹಾರ ಬೋಧನಾ ವಿಭಾಗಗಳಿದ್ದು, ಇಲ್ಲಿ ರಾಜ್ಯ, ಸಿ.ಬಿ.ಎಸ್‌.ಇ ಹಾಗೂ ಐ.ಸಿ.ಎಸ್‌.ಇ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ಕಿರಿಯರ ವಿಭಾಗದಲ್ಲಿ– 9ರಿಂದ 14 ವರ್ಷದ ಮಕ್ಕಳಿಗೆ ಶಬ್ದೋಚ್ಚಾರ, ಭಾಷಾ ಅಭಿವ್ಯಕ್ತಿ, ಓದುವಿಕೆ, ಗ್ರಹಿಕೆ, ಕೈಬರಹ, ಕಾಗುಣಿತ, ಬರವಣಿಗೆ ಹಾಗೂ ಮೂಲ ಗಣಿತ ತರಬೇತಿ ನೀಡಲಾಗುತ್ತದೆ. ಹಿರಿಯರ ವಿಭಾಗದಲ್ಲಿ– 15ರಿಂದ 18 ವರ್ಷದ ಮಕ್ಕಳಿಗೆ ಪಠ್ಯ ಓದುವಿಕೆ, ಗ್ರಹಿಸುವಿಕೆ, ಪರೀಕ್ಷೆ ಬರೆಯುವಿಕೆ ಹಾಗೂ ಅಧ್ಯಯನ ಕೌಶಲ ತರಬೇತಿ ನೀಡಲಾಗುತ್ತದೆ. ಪರಿಹಾರ ಬೋಧನೆ ವಿಭಾಗದಲ್ಲಿ– ಆನಂದದಾಯಕ ಕಲಿಕೆ, ಅನ್ವೇಷಣೆ, ಹಾಡುಗಾರಿಕೆ, ಕ್ರೀಡೆ, ಕತೆ ಹೇಳುವಿಕೆ... ಇತ್ಯಾದಿ ಸರಳ ಬೋಧನಾ ವಿಧಾನಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲಾಗುತ್ತದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಕಿರಿಯರ ಮತ್ತು ಹಿರಿಯರ ವಿಭಾಗಗಳನ್ನು ಪ್ರತ್ಯೇಕಿಸಲಾಗಿದ್ದು, ಜಯನಗರದಲ್ಲಿ ಕಿರಿಯರಿಗೆ ಹಾಗೂ ಜೆ.ಪಿ. ನಗರದಲ್ಲಿ ಹಿರಿಯರಿಗೆ ತರಬೇತಿ ನೀಡಲಾಗುತ್ತದೆ. ಎರಡೂ ಕೇಂದ್ರಗಳಲ್ಲಿ ತಲಾ 8 ಸುಸಜ್ಜಿತ ತರಗತಿಗಳು, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್, ಗೃಹ ವಿಜ್ಞಾನ ಪರಿಕರಗಳು, ದೃಕ್– ಶ್ರವಣೋಪಕರಣ ಕೊಠಡಿ, ಎಲ್‌.ಇ.ಡಿ ಪಕ್ಷೇಪಕ, ಸಭಾಭವನ, ಆಟದ ಮೈದಾನ ಸೌಕರ್ಯಗಳನ್ನು ಒದಗಿಸಲಾಗಿದೆ. ಕೌಶಲ ವೃದ್ಧಿ, ಓದು–ಬರಹ–ಶಬ್ದ–ಗಣಿತ ಸಾಮರ್ಥ್ಯ ವೃದ್ಧಿ, ಬಹು ಸಂವೇದನಾ ತರಬೇತಿ, ಪ್ರತ್ಯಕ್ಷಾನುಭವ, ಪ್ರಾಜೆಕ್ಟ್ ಪದ್ಧತಿ... ಮುಂತಾದ ತಂತ್ರಗಳನ್ನು ಅನುಸರಿಸಿ ಮಕ್ಕಳ ಕಲಿಕೆ–ಗ್ರಹಿಕೆ ಸಾಮರ್ಥ್ಯ ವೃದ್ಧಿಸಲಾಗುತ್ತದೆ. ಪ್ರತಿ ಮಗುವಿನ ಕುರಿತು ವೈಯಕ್ತಿಕ ಕಾಳಜಿ, ನಿರಂತರ–ವಿಸ್ತೃತ ಮೌಲ್ಯಮಾಪನ, ನಿಯಮಿತ ಆಪ್ತಸಮಾಲೋಚನೆ, ಆರ್ಟ್ ಬೇಸ್ಡ್ ಥೆರಪಿ, ಯೋಗ ಥೆರಪಿ, ಮ್ಯೂಸಿಕ್ ಥೆರಪಿ, ಥಿಯೇಟರ್ ಥೆರಪಿ... ಇತ್ಯಾದಿಗಳಿಂದ ಮಕ್ಕಳ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ. 16 ವರ್ಷ ದಾಟಿದ ಮಕ್ಕಳಿಗೆ ವೃತ್ತಿ ತರಬೇತಿ ನೀಡಲಾಗುತ್ತದೆ. ಶಾಲೆಯ ಮಕ್ಕಳು ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲೂ ಮುಂದಿದ್ದು, ಜಯಪುರದಲ್ಲಿ ನಡೆದ ‘ಸ್ಪರ್ಧಾ ಕಾಂಟೆಸ್ಟ್’ ಮತ್ತು ಕಲಾ ಸ್ಪರ್ಧೆಗಳಲ್ಲಿ, ಬೆಂಗಳೂರಿನ ಮಾಹಿತಿ ಸಂಪನ್ಮೂಲ ಕೇಂದ್ರ ಏರ್ಪಡಿಸಿದ ಹಾಡು ಮತ್ತು ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿ ಕುಶಾಲ ಅಂತರರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನಲ್ಲಿ 2013 ಹಾಗೂ 2015ರಲ್ಲಿ ಭಾರತವನ್ನು ಪ್ರತಿನಿಧಿಸಿ ಈಜು ಸ್ಪರ್ಧೆಯಲ್ಲಿ ಒಂದು ಚಿನ್ನ, ಬೆಳ್ಳಿ ಹಾಗೂ 2 ಕಂಚಿನ ಪದ ಬಾಚಿಕೊಂಡಿದ್ದಾರೆ. ಮಾಹೆಕ್– ಯೂರೋಕಿಡ್ಸ್‌ ಫ್ರಾಂಚೈಸಿಯಾಗಿ, ಅನಿಕೇತ– ವಕೀಲರಾಗಿ, ನಚಿಕೇತ– ಗೂಗಲ್ ಇಂಡಿಯಾದ ಉದ್ಯೋಗಿಯಾಗಿ, ಮೇಘನಾ– ಬೃಂದಾವನ ಸಂಸ್ಥೆಯ ಸಿಬ್ಬಂದಿಯಾಗಿ, ಹಾರ್ದಿಕ್– ಇವೆಂಟ್ ಮ್ಯಾನೇಜರ್‌ ಆಗಿ, ದೀಪಕ್– ಶಿಕ್ಷಕರಾಗಿ, ರಿತ್ವಿಕ್– ಫೋಟೋಗ್ರಾಫರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೃಂದಾವನ ಶಾಲೆ 2008ರಲ್ಲಿ ‘ಅತ್ಯುತ್ತಮ ವಿಶೇಷ ಶಾಲೆ’ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನವಾಗಿದೆ. ಶಾಲೆಯಲ್ಲಿ ಪ್ರವೇಶ, ನೆರವು ಮತ್ತಿತರ ಮಾಹಿತಿಗೆ ದೂ: 080–26567311 / 41614211 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.