ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಪಾಠ ‘ಸರ್ಕಾರಿ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಮಾಡ ಬೇಕು’ ಎಂದು ಮುಖ್ಯ ಮಂತ್ರಿಯವರು ಹೇಳಿಕೆ ಕೊಟ್ಟಿದ್ದಾರೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಕಲಿಸಬಲ್ಲ ಅರ್ಹ ಶಿಕ್ಷಕರಿಲ್ಲ. ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಭಾಷೆಯೆನ್ನುವುದು ಕಬ್ಬಿಣದ ಕಡಲೆ ಆಗಿದ್ದು ಮತ್ತು ಖಾಸಗಿ ಶಾಲೆಗಳ ಬೇಡಿಕೆ ಹೆಚ್ಚುವುದಕ್ಕೆ ಇಂಥ ಅಂಶಗಳೇ ಮುಖ್ಯ ಕಾರಣವಾಗಿವೆ. ನಗರದ ಬೊಮ್ಮನ ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಐದು ದಿನ ಬೆಳಿಗ್ಗೆ 11 ಘಂಟೆಯಿಂದ ಮಧ್ಯಾಹ್ನದ ಊಟದ ಬೆಲ್ ಬಾರಿಸುವವರೆಗೂ ಇಂಗ್ಲಿಷ್ ಪಾಠ ನಡೆಯುತ್ತದೆ. ಕಥೆಯನ್ನು ಹೇಳುವ ಮೂಲಕ ಅಕ್ಷರಗಳನ್ನು ಪರಿಚಯಿಸಲಾಗುತ್ತದೆ. ಇವರಿಗೆ ಪಾಠ ಮಾಡುವವರೆಲ್ಲರೂ ಗೃಹಿಣಿಯರು, ಮತ್ತೆ ಕೆಲವರು ಉದ್ಯೋಗಿಗಳೂ ಹೌದು. ಯಾರೂ ತರಬೇತಿ ಹೊಂದಿದ ಶಿಕ್ಷಕರಲ್ಲ ಆದರೆ ಆಶಾ ಇನ್ಫಿನೈಟ್ ಸಂಸ್ಥೆ ಇವರಿಗೆ ತರಬೇತಿ ನೀಡಿ ಅಗತ್ಯವಿರುವ ಲೆಸನ್ ಪ್ಲಾನ್, ಅದಕ್ಕೆ ಬೇಕಾದ ಪ್ಲಕಾರ್ಡ್ಸ್, ಕಥೆಯನ್ನು ವಿವರಿಸುವ ಚಾರ್ಟ್, ಎಲ್ಲವನ್ನೂ ಒದಗಿಸುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ನೀಡುವ ಶಿಕ್ಷಣಕ್ಕಿಂತ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಆಶಾ ಇನ್ಫಿನೈಟ್ ಸಂಸ್ಥೆಯು ಒಳ್ಳೆಯ ಕೆಲಸ ಮಾಡುತ್ತಿದೆ. ಎಲ್ಲವೂ ಶಿಸ್ತು ಬದ್ಧವಾಗಿ ನಡೆಯುತ್ತದೆ. ಪ್ರತಿಯೊಂದು ತರಗತಿಗೂ ಒಂದು ಹೆಸರನ್ನು ನೀಡಲಾಗುತ್ತದೆ, ಪ್ರಾಣಿ, ಪಕ್ಷಿ ಮತ್ತು ಹಣ್ಣುಗಳ ಹೆಸರುಗಳು. ಪ್ರತಿಯೊಂದು ತರಗತಿಯಲ್ಲೂ ಮಕ್ಕಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಈ ರೀತಿ ಮೂರೂ ತರಗತಿಗಳಿಗೂ ಅನ್ವಯಿಸಲಾಗುತ್ತದೆ. ಪ್ರತಿಯೊಂದು ವಿಭಾಗಕ್ಕೂ ಒಬ್ಬ ಲೀಡರ್, ಆ ಗುಂಪಿಗೆ ಪ್ರಾಣಿ, ಪಕ್ಷಿ ಮತ್ತು ಹಣ್ಣುಗಳ ಹೆಸರನ್ನು ನೀಡಲಾಗಿದೆ. ಪ್ರತಿಯೊಂದು ಗುಂಪಿಗೂ ಒಂದು ಪೆಟ್ಟಿಗೆಯಲ್ಲಿ ಆ ಮಕ್ಕಳಿಗೆ ಹಾಕಿ ಕೊಳ್ಳಲು ಬ್ಯಾಡ್ಜಗಳು, ಮಕ್ಕಳ ಪುಸ್ತಕಗಳು, ಬರೆಯಲು ನಾಲ್ಕು ಲೈನಿನ ಒಂದು ಪುಸ್ತಕ ಮತ್ತು ಆಶಾ ಸಂಸ್ಥೆಯವರೇ ರೂಪಿಸಿದ ಒಂದು ಟೆಕ್ಸ್ಟ್ ಬುಕ್ ಮತ್ತು ಒಂದು ಪರ್ಸಿನಲ್ಲಿ ಅವರಿಗೆ ಬರೆಯಲು ಪೆನ್ಸಿಲ್, ರಬ್ಬರ್, ಸ್ಕೇಲ್, ಮತ್ತು ಪೆನ್ಸಿಲ್ ಅನ್ನು ಚೂಪು ಮಾಡಲು ಮೆಂಡರ್, ಈ ರೀತಿ ಬರೆಯಲು ಬೇಕಾದ ಸಲಕರಣೆಗಳು ಇರುತ್ತವೆ, ಆ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಲೀಡರ್ ತರಗತಿಯ ಕೋಣೆಯಲ್ಲಿ ಇಡುತ್ತಾನೆ/ಳೆ. ಶಿಕ್ಷಕಿ ಅವಳಿಗೆ ಮೀಸಲಾದ ಪೆಟ್ಟಿಗೆಯನ್ನು ತರುತ್ತಾಳೆ. ಲೀಡರ್‌ಗಳು ಮಿಕ್ಕ ಮಕ್ಕಳಿಗೆಲ್ಲಾ ಬ್ಯಾಡ್ಜ್ ಹಾಕುತ್ತಾರೆ, ಪ್ರತಿಯೊಬ್ಬ ಲೀಡರ್ ಅವರ ಗುಂಪಿನ ಹೆಸರು ಮತ್ತು ಚಿತ್ರವಿರುವ ಪ್ಲಕಾರ್ಡ್ ಅನ್ನು ಹಿಡಿದು ತರಗತಿಯ ಒಳಗೆ ಬರುತ್ತಾನೆ ಅವನ ಹಿಂದೆ ಮಿಕ್ಕ ಮಕ್ಕಳು ಸಾಲಾಗಿ ಬರುತ್ತಾರೆ. ಹೀಗೆ ನಾಲ್ಕೂ ಗುಂಪಿನ ಮಕ್ಕಳು ತರಗತಿಯ ಒಳಗೆ ಬರುತ್ತಾರೆ. ಮೊದಲಿಗೆ ಒಂದು ಪ್ರತಿಜ್ಞೆಯನ್ನು ಟೀಚರ್ ಓದುತ್ತಾರೆ. ನಮ್ಮ ದೇಶದ ಮೌಲ್ಯಗಳನ್ನು ಅದಕ್ಕೆ ನಾವು ನೀಡಬೇಕಾದ ಗೌರವದ ಬಗೆಗಿನ ಪ್ರತಿಜ್ಞೆ ಇತ್ಯಾದಿ. ಮಕ್ಕಳು ಅದನ್ನು ಪುನರುಚ್ಚರಿಸುತ್ತಾರೆ. ನಂತರ ಪಾಠ ಪ್ರಾರಂಭವಾಗುತ್ತದೆ. ಬೇರೆಲ್ಲಾ ಖಾಸಗಿ ಶಾಲೆಯಲ್ಲಿ ಹೇಳಿಕೊಡುವ ರೀತಿಯಲ್ಲೇ ಒಂದೊಂದು ಅಕ್ಷರವನ್ನೂ ಅದರ ಉಚ್ಚಾರಣೆಗನುಸಾರವಾಗಿ ಒಂದು ಕಥೆಯ ಮೂಲಕ ತಿಳಿಸಲಾಗುತ್ತದೆ. ನಂತರ ಮಕ್ಕಳು ಅದನ್ನು ಮತ್ತೆ ಮತ್ತೆ ಉಚ್ಚರಿಸುವಂತೆ ಮಾಡಿ ಅವರಿಗೆ ಮನನ ಮಾಡಿಕೊಡುತ್ತಾರೆ. ಹಿಂದಿನ ದಿನ ಕಲಿತ ಅಕ್ಷರವನ್ನು ಪುನರಾವರ್ತನೆ ಮಾಡಿಸುತ್ತಾರೆ. ನಂತರ ಆ ಅಕ್ಷರಕ್ಕೆ ಸಂಬಂಧ ಪಟ್ಟ ಚಿತ್ರಕ್ಕೆ ಬಣ್ಣವನ್ನು ತುಂಬಿಸುತ್ತಾರೆ . ಈ ಎಲ್ಲವೂ ಮುಗಿದ ನಂತರ ಪುಸ್ತಕಗಳು, ಸಲಕರಣೆಗಳ ಪೌಚ್ ಎಲ್ಲವನ್ನೂ ಲೀಡರ್‌ಗಳು ತೆಗೆದುಕೊಂಡು ಅವರವರ ಪೆಟ್ಟಿಗೆಗೆ ಹಾಕುತ್ತಾರೆ. ನಂತರ ರಾಷ್ಟ್ರಗೀತೆಯನ್ನು ಮಕ್ಕಳು ಮತ್ತು ಶಿಕ್ಷಕರು ಸೇರಿ ಹಾಡುತ್ತಾರೆ. ನಂತರ ಜೈ ಹಿಂದ್ ಘೋಷಣೆಯೊಂದಿಗೆ ಅಂದಿನ ಪಾಠ ಮುಗಿಯುತ್ತದೆ. ಮಕ್ಕಳು ಊಟಕ್ಕೆ ಹೋಗುತ್ತಾರೆ. ಅಲ್ಲಿಗೆ ಬಂದಿರುವ ಆಶಾ ಸಂಸ್ಥೆಯ ಕಾರ್ಯಕರ್ತರು ಹಾಜರಿ ಹಾಕಿ ಮನೆಗೆ ಹೊರಡುತ್ತಾರೆ. ಈ ರೀತಿ ವಾರದಲ್ಲಿ ಐದು ದಿನ ಪಾಠವನ್ನು ನಡೆಸಲಾಗುತ್ತದೆ. ಶಿಕ್ಷಕಿಯರಿಗೂ ಪ್ರತ್ಯೇಕ ಕೈಪಿಡಿ ನೀಡಲಾಗುತ್ತದೆ. ಶಿಕ್ಷಕಿಯರಿಗೆ ಅಷ್ಟು ಕಷ್ಟವಾಗುವುದೇ ಇಲ್ಲ , ಪ್ರತಿಯೊಂದು ವಿಷಯವನ್ನು ಅವರ ವಾಟ್ಸ್ ಆಪ್ ಗ್ರೂಪಿನಲ್ಲಿ ಚರ್ಚಿಸಲಾಗುತ್ತದೆ. ಅಗತ್ಯ ಸಲಹೆಗಳನ್ನು ನೀಡಲಾಗುತ್ತದೆ . ಪ್ರತಿ ದಿನ ಹನ್ನೊಂದು ಘಂಟೆಗೆ ಈ ಶಿಕ್ಷಕಿಯರು ಹಾಜರ್.ಶಾಲೆ ಇರುವುದು ಬೊಮ್ಮನಹಳ್ಳಿಯಲ್ಲಾದರೂ ಶಿಕ್ಷಕಿಯರು ಎಚ್ಎಸ್‌ಆರ್ ಲೇಔಟ್, ಜಯನಗರ, ಚಾಮರಾಜ ಪೇಟೆಯಿಂದಲೂ ಬರುತ್ತಾರೆ. ಯಾರಿಗೂ ಯಾವ ಸಂಬಳವಿಲ್ಲ. ಆದರೆ ಇವರೆಲ್ಲಾ ಆಶಾ ಸಂಸ್ಥೆಯ ಸ್ವಯಂ ಸೇವಕಿಯರು. ಎಲ್ಲರಿಗೂ ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡುವ ಆಸೆ, ತಮ್ಮ ವೇಳೆಯನ್ನು ಸದ್ವಿನಿಯೋಗ ಮಾಡಿಕೊಳ್ಳುವ ತವಕ . ಆ ಮಕ್ಕಳೊಡನೆ ಕಳೆಯುವ ಸಮಯ ನಿಜಕ್ಕೂ ಸ್ಮರಣೀಯ. ಆದರೆ ಈ ಎಲ್ಲವೂ ಸಾಧ್ಯವಾಗಿರುವುದು ನಲವತ್ತರ ಹರಯದ ಸುಂದರ ಯುವತಿ ಮೀರಾ ರಮಣ ಅವರಿಂದಲೇ. ಆಶಾ ಇನ್ಫಿನೈಟ ಸಂಸ್ಥೆಯನ್ನು ಹುಟ್ಟು ಹಾಕಿರುವುದು ಇವರೇ. ಇಂಗ್ಲಿಷ್ ಸಾಹಿತ್ಯ ಮತ್ತು ಸಮಾಜ ಶಾಸ್ತ್ರದಲ್ಲಿ ಎಂ.ಎ. ಮಾಡಿದ್ದಾರೆ. ಇನ್ನೂ ಹೆಚ್ಚು ಹೆಚ್ಚು ಶಾಲೆಗಳಲ್ಲಿ ತಮ್ಮ ಕಾಯಕವನ್ನು ಮುಂದುವರೆಸುವ ಆಸೆ ಮೀರಾ ಅವರದು. ಇಂಗ್ಲಿಷ್ ಭಾಷೆ ಆ ಮಕ್ಕಳಲ್ಲಿ ಖಂಡಿತ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ ತನ್ಮೂಲಕ ಒಳ್ಳೆಯ ಉದ್ಯೋಗ ಗಳಿಸುವುದು ಸಾಧ್ಯವಾಗುತ್ತದೆ ಎನ್ನುವುದು ಮೀರಾ ಅವರ ಅಭಿಪ್ರಾಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.