ಕೇಳದವರಿಗೆ ಕಿವಿಯಾದ ‘ಪಿ.ಎ.ಡಿ.ಸಿ’ ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಜನತಾ ನಗರದ ಪ್ಲಾಟ್‌ ನಂ: 197/1ರಲ್ಲಿ ನೆಲೆಗೊಂಡಿರುವ ‘ಇನ್‌ಸ್ಟಿಟ್ಯೂಟ್ ಆಫ್ ಮದರ್ ಆ್ಯಂಡ್ ಡೆಫ್ ಚೈಲ್ಡ್’ ಸಂಸ್ಥೆ ಹೆಸರೇ ಸೂಚಿಸುವಂತೆ ಕಿವುಡ ಮಕ್ಕಳು ಹಾಗೂ ಅವರ ತಾಯಂದಿರಿಗೆ ತರಬೇತಿ ನೀಡುವ ಅನನ್ಯ ಸಂಸ್ಥೆಯಾಗಿದೆ. ಈ ಸಂಸ್ಥೆ ಕಿವುಡ ಮಕ್ಕಳಿಗೆ ಶಾಲಾ ಪೂರ್ವ ಹಂತದಲ್ಲಿ ವಿಶೇಷ ಸಲಕರಣೆಗಳನ್ನು ಬಳಸಿಕೊಂಡು ಶ್ರವಣ ಮತ್ತು ವಾಕ್ ತರಬೇತಿ ನೀಡುತ್ತದೆ. ಅಲ್ಲದೆ, ಅವರ ತಾಯಂದಿರಿಗೂ ಮಕ್ಕಳಿಗೆ ಯಾವ ರೀತಿ ಶ್ರವಣ ಮತ್ತು ವಾಕ್ ತರಬೇತಿ ನೀಡಬೇಕು ಎಂಬುದನ್ನು ಕಲಿಸಿಕೊಡುತ್ತದೆ. ಈ ಸಂಸ್ಥೆಯನ್ನು ವಿಂಗ್‌ ಕಮಾಂಡರ್ ದಿ.ಕೆ.ಕೆ.ಶ್ರೀನಿವಾಸನ್ ಹಾಗೂ ಅವರ ಪತ್ನಿ ರತ್ನಾ ಶ್ರೀನಿವಾಸನ್ 1980ರಲ್ಲಿ ಸ್ಥಾಪಿಸಿದ್ದು, ಆರಂಭದಲ್ಲಿ 4 ಶ್ರವಣದೋಷ ಉಳ್ಳ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ತರಬೇತಿ ನೀಡಲು ಆರಂಭಿಸಿದರು. ಕ್ರಮೇಣ ಸಂಸ್ಥೆಗೆ ಸಹಾಯ ಯಾಚಿಸಿ ಬರುವ ಪೋಷಕರ ಸಂಖ್ಯೆ ಹೆಚ್ಚಿತು. ಆಗ ‘ಪಿ.ಎ.ಡಿ.ಸಿ’ (ಪೇರೆಂಟ್ಸ್ ಅಸೋಸಿಯೇಷನ್ ಫಾರ್ ಡೆಫ್ ಚಿಲ್ಡ್ರನ್) ಟ್ರಸ್ಟ್ ಹುಟ್ಟು ಹಾಕಿ ಸಂಸ್ಥೆ ಅಭಿವೃದ್ಧಿಗೆ ಸ್ಥಾಪಕರು ಕ್ರಮ ವಹಿಸಿದರು. ಅಂದು ಅಸ್ತಿತ್ವದಲ್ಲಿದ್ದ ‘ಮೈಸೂರು ವಿಶ್ವಸ್ಥ ಮಂಡಳಿ’ ಮೂಲಕ ಒಂದು ಎಕರೆ ನಿವೇಶನವನ್ನು ಮಂಜೂರು ಮಾಡಿಸಿಕೊಂಡು ದಾನಿಗಳ ನೆರವಿನಿಂದ ಸಂಸ್ಥೆಯ ಕಟ್ಟಡ ನಿರ್ಮಿಸಲಾಯಿತು. 1993 ಡಿಸೆಂಬರ್ 12ರಂದು ಹೊಸ ಕಟ್ಟಡಕ್ಕೆ ಸಂಸ್ಥೆಯ ಚಟುವಟಿಕೆಗಳನ್ನು ವರ್ಗಾಯಿಸಲಾಯಿತು. ನಂತರದ ದಿನಗಳಲ್ಲಿ ಜೈನ ಸಮಾಜ, ಜಿಂದಾಲ್ ಸಂಸ್ಥೆ, ಸೌತ್ ಇಂಡಿಯಾ ಪೇಪರ್ ಮಿಲ್ಸ್ ಹಾಗೂ ರೋಟರಿ ಸಂಸ್ಥೆಗಳ ನೆರವಿನಿಂದ ಸಂಸ್ಥೆ ತನ್ನ ಸೇವಾ ಕಾರ್ಯವನ್ನು ಮತ್ತಷ್ಟು ವಿಸ್ತರಿಸಿಕೊಂಡಿತು. ರೋಟರಿ ಸಂಸ್ಥೆ 1995ರಲ್ಲಿ ಪೇರೆಂಟ್ಸ್ ಅಸೋಸಿಯೇಷನ್ ಫಾರ್ ಡೆಫ್ ಚಿಲ್ಡ್ರನ್ ಜೊತೆಗೂಡಿ ‘ಆರ್.ಡಬ್ಲೂ.ಪಿ.ಎ.ಡಿ.ಸಿ’ (ರೋಟರಿ ವೆಸ್ಟ್ ಪೇರೆಂಟ್ಸ್ ಅಸೋಸಿಯೇಷನ್ ಫಾರ್ ಡೆಫ್ ಚಿಲ್ಡ್ರನ್) ಟ್ರಸ್ಟ್ ರಚಿಸಿಕೊಂಡಿದ್ದು ಸಂಸ್ಥೆಯ ಉನ್ನತಿಗೆ ಶ್ರಮಿಸುತ್ತಿದೆ. ಸರ್ಕಾರದ ನೆರವಿಲ್ಲದೆ, ಸಂಘ– ಸಂಸ್ಥೆಗಳು ಹಾಗೂ ದಾನಿಗಳ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ತಾಯಂದಿರ ವಾಸ್ತವ್ಯಕ್ಕೆ ಹಾಸ್ಟೆಲ್ ನಿರ್ಮಿಸಲಾಗಿದೆ. ಪ್ರಸ್ತುತ ಸಂಸ್ಥೆಯಲ್ಲಿ 95 ಶ್ರವಣದೋಷ ಉಳ್ಳ ಮಕ್ಕಳು ಹಾಗೂ ಅವರ ತಾಯಂದಿರಿಗೆ ತರಬೇತಿ ನೀಡಲಾಗುತ್ತಿದೆ. 24 ತಾಯಂದಿರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ್ದು, ಉಳಿದವರು ಸಂಸ್ಥೆಯ ಸುತ್ತಲಿನ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದುಕೊಂಡು ತಮ್ಮ ಮಕ್ಕಳ ಜೊತೆ ತಾವೂ ಕೂಡ ತರಬೇತಿ ಹೊಂದುತ್ತಿದ್ದಾರೆ. ಪ್ರಸ್ತುತ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ರತ್ನಾ ಶೆಟ್ಟಿ ಕೂಡ ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಹಿರಿಯ ತಾಯಿಯೇ ಆಗಿದ್ದಾರೆ. ಇವರಂತೆಯೇ 13 ಜನ ಹಿರಿಯ ತಾಯಂದಿರೇ ಇಲ್ಲಿ ತರಬೇತಿ ನೀಡುವ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಶಾಲಾ ಪೂರ್ವ ಹಂತದ ತರಬೇತಿ ಪಡೆಯುವ ಮಕ್ಕಳು ನಂತರ ತಮ್ಮ ಮೂಲ ಸ್ಥಾನಕ್ಕೆ ತೆರಳಿ ಸಾಮಾನ್ಯ ಶಾಲೆಗೆ ಸೇರಿ ಶಿಕ್ಷಣ ಮುಂದುವರಿಸುತ್ತಾರೆ. ಈವರೆಗೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹಾಗೂ ಅವರ ತಾಯಂದಿರಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಹಿರಿಮೆ ಸಂಸ್ಥೆಯದ್ದಾಗಿದೆ. ಇಲ್ಲಿ ತರಬೇತಿ ಪಡೆದಿರುವ ಹಲವು ವಿದ್ಯಾರ್ತಿಗಳು ಐ.ಬಿ.ಎಂ, ವಿಪ್ರೋ, ಇನ್ಫೊಸಿಸ್, ಎಸ್‌.ಬಿ.ಐ, ಕೆಪಿಟಿಸಿಎಲ್, ಇಸ್ರೋ, ಎಚ್.ಪಿ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯ ಮಹಾಂತೇಶ ಬಾಗಿ ಮೈಸೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಮಿಮ್ಸ್‌) ಎಂ.ಬಿ.ಬಿ.ಎಸ್ ಓದುತ್ತಿದ್ದಾರೆ. ಕುಂದಾಪುರದ ಅನನ್ಯಾ ಶೆಟ್ಟಿ ಚೆನ್ನೈನ ಐ.ಐ.ಟಿ.ಯಲ್ಲಿ ಓದುತ್ತಿದ್ದಾರೆ. ಇದಲ್ಲದೇ ಹಲವು ವಿದ್ಯಾರ್ಥಿಗಳು ಎಂ.ಬಿ.ಎ, ಎಂ.ಸಿ.ಎ, ಬಿ.ಡಿ.ಎಸ್, ಬಿ.ಇ, ಎಂ.ಟೆಕ್ ಅಧ್ಯಯನ ಮಾಡಿ ಸರ್ಕಾರಿ, ಖಾಸಗಿ ವಲಯದಲ್ಲಿ ಕೆಲಸ ಗಿಟ್ಟಿಸಿಕೊಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಲೋಕಸಭಾ ಸದಸಯರಾಗಿದ್ದ ವಿಜಯಶಂಕರ್ ಹಾಗೂ ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯರಾಗಿದ್ದ ಗೋ. ಮಧುಸೂದನ್ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೆರವು ನೀಡಿದ್ದಾರೆ. ಮೈಸೂರಿನ ಗಣೇಶ್ ಬೀಡಿ ವರ್ಕ್ಸ್‌ನವರು ಸಂಸ್ಥೆಯಲ್ಲಿ ರಮಾಬಾಯಿ ಸ್ಮಾರಕ ಒಳಾಂಗಣ ರಂಗಮಂದಿರ ನಿರ್ಮಿಸಿಕೊಟ್ಟಿದ್ದಾರೆ. 2016ರಲ್ಲಿ ಸಂಸ್ಥೆಗೆ ಅತ್ಯುತ್ತಮ ವಿಶೇಷ ಶಾಲೆ ರಾಜ್ಯ ಪ್ರಶಸ್ತಿ ಲಭಿಸಿದೆ. ಟಿ.ವಿ–9, ಪಬ್ಲಿಕ್ ವಾಹಿನಿ ಸೇರಿ ಹಲವು ಮಾದ್ಯಮಗಳಲ್ಲಿ ಸಂಸ್ಥೆಯ ಕುರಿತು ವರದಿಗಳು ಪ್ರಸಾರವಾಗಿವೆ. ಸಂಸ್ಥೆಯಲ್ಲಿ ಪ್ರವೇಶ, ನೆರವು ಮತ್ತಿತರ ಮಾಹಿತಿಗೆ ಮೊ: 94803 44297 ಅಥವಾ ದೂರವಾಣಿ: 0821– 2544392 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.