ದಾವಣಗೆರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಬರ! ತುಮಕೂರು: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳು ಸಂಖ್ಯೆ ಇಳಿಮುಖವಾಗುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಯಾವುದೇ ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಖಾಸಗಿ ಶಾಲೆಗಳತ್ತ ಪೋಷಕರ ವ್ಯಾಮೋಹಗೊಂಡಿರುವುದು ಎದ್ದು ಕಾಣುತ್ತಿದೆ. ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ಈ ಹಂತ ಹಂತದ ಇಳಿಕೆಯೇ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿಸುವಲ್ಲಿ ಕಾರಣವಾಗುತ್ತಿದೆ. ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 2016–17ರಲ್ಲಿ ಒಂದರಿಂದ 10ನೇ ತರಗತಿಯವರೆಗೆ 1,06,844 ವಿದ್ಯಾರ್ಥಿಗಳು ದಾಖಲಾಗಿದ್ದರು. 2017–18ರಲ್ಲಿ 1,01,828 ಹಾಗೂ ಪ್ರಸಕ್ತ 2018–19ನೇ ಶೈಕ್ಷಣಿಕ ವರ್ಷದಲ್ಲಿ 97,436 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೇವಲ ಮೂರೇ ವರ್ಷದ ಅಂತರದಲ್ಲಿ ಹತ್ತು ಸಾವಿರ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 2016–17ರಲ್ಲಿ ಒಂದರಿಂದ 10ನೇ ತರಗತಿಯವರೆಗೆ 83,668 ವಿದ್ಯಾರ್ಥಿಗಳು ದಾಖಲಾಗಿದ್ದರು. 2017–18ರಲ್ಲಿ 77,789 ಹಾಗೂ ಪ್ರಸಕ್ತ 2018–19ನೇ ಶೈಕ್ಷಣಿಕ ವರ್ಷದಲ್ಲಿ 75,737 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೇವಲ ಮೂರೇ ವರ್ಷದ ಅಂತರದಲ್ಲಿ 8 ಸಾವಿರ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವುದು ಕಡಿಮೆ ಆಗುತ್ತಿದೆ. ನಡುವೆ ಶಾಲೆ ಬಿಡುವವರು ಹೆಚ್ಚಳ: ಇಡೀ ಜಿಲ್ಲೆಯ ಶೈಕ್ಷಣಿಕ ಅಂಕಿ ಅಂಶಗಳನ್ನು ಗಮನಿಸಿದಾಗ ಸರ್ಕಾರಿ ಶಾಲೆಗಳಿಗೆ ನಡುವೆಯೇ ‘ಕೈ’ ಕೊಡುವವರ ಸಂಖ್ಯೆ ಹೆಚ್ಚಿದೆ. ಒಂದನೇ ತರಗತಿಗೆ ದಾಖಲಾಗಿ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಸಂಖ್ಯೆ ಅತಿ ವಿರಳ. ಹಂತ ಹಂತವಾಗಿ ಮಕ್ಕಳು ಶಾಲೆ ಬಿಡುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಇನ್ನೂ ಕುತ್ತು ತರುವ ಬೆಳವಣಿಗೆ ಅಂದರೆ ‌‌‌ಎರಡೂ ಶೈಕ್ಷಣಿಕ ಜಿಲ್ಲೆಗಳ 1854 ಶಾಲೆಗಳಲ್ಲಿ 30ರೊಳಗೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೆಲವು ಶಾಲೆಗಳಲ್ಲಿ 5, 10 ಮಂದಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಈ ಶಾಲೆಗಳಿಗೆ ಭವಿಷ್ಯದಲ್ಲಿ ಬೀಗ ಬೀಳುವುದು ಖಚಿತ ಎನ್ನುವಂತಿದೆ. ‘ಎರಡು ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿಯೇ ಖಾಸಗಿ, ಸರ್ಕಾರಿ ಶಾಲೆಗಳು ಹೇರಳವಾಗಿವೆ. ಸರ್ಕಾರಿ ಶಾಲೆ ಇದ್ದ ಸಮೀಪದಲ್ಲಿಯೇ ಸರ್ಕಾರ ಖಾಸಗಿ ಶಾಲೆಗೂ ಅನುಮತಿ ನೀಡುತ್ತದೆ. ಹೀಗಿದ್ದ ಮೇಲೆ ಸರ್ಕಾರಿ ಶಾಲೆಗೆ ಮಕ್ಕಳು ಹೇಗೆ ದಾಖಲಾಗುವರು’ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಪ್ರಶ್ನಿಸುವರು. **** ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ತಾಲ್ಲೂಕು 2016–17 2017–18 2018–19 ಚಿಕ್ಕನಾಯಕನಹಳ್ಳಿ 16,881 16,379 15,873 ಗುಬ್ಬಿ 19,810 19,159 18,444 ಕುಣಿಗಲ್ 15,019 13,751 12,961 ತಿಪಟೂರು 13,681 12,849 12,247 ತುಮಕೂರು 31,826 30,562 29,160 ತುರುವೇಕೆರೆ 9,627 9,128 8,751 *** ಮಧುಗಿರಿ ಶೈಕ್ಷಣಿಕ ಜಿಲ್ಲೆ ತಾಲ್ಲೂಕು 2016–17 2017–18 2018–19 ಕೊರಟಗೆರೆ 15,004 14,029 13,794 ಮಧುಗಿರಿ 21,489 20,029 16,603 ಪಾವಗಡ 18,614 16,742 16,064 ಶಿರಾ 28,561 26,989 26,321 2018–19ನೇ ಸಾಲಿನಲ್ಲಿ ಒಂದರಿಂದ ಮೂವತ್ತರೊಳಗೆ ವಿದ್ಯಾರ್ಥಿಗಳು ದಾಖಲಾಗಿರುವ ಶಾಲೆಗಳ ಸಂಖ್ಯೆ ಚಿಕ್ಕನಾಯಕನಹಳ್ಳಿ 160 ಗುಬ್ಬಿ 238 ಕುಣಿಗಲ್ 235 ತಿಪಟೂರು 167 ತುಮಕೂರು 252 ತುರುವೇಕೆರೆ 193 ಕೊರಟಗೆರೆ 195 ಮಧುಗಿರಿ 83 ಪಾವಗಡ 180 ಶಿರಾ 155 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.