ರಕ್ಷಣಾ ಪಡೆಗೆ ಮಹಿಳೆಯರು ಸೇರುವುದು ಹೇಗೆ? 1. ನಾನು ಬಿಎಸ್‌ಸಿ (ಪಿಸಿಎಂ) ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ರಕ್ಷಣಾ ಪಡೆಗೆ ಸೇರಬೇಕು ಎಂಬ ಆಸೆ ಇದೆ. ಸೇನೆ ಅಥವಾ ವಾಯುಸೇನೆಗೆ ಸೇರಬಯಸಿದ್ದೇನೆ. ಹೇಗೆ ಸೇರಬಹುದೆಂದು ದಯಮಾಡಿ ತಿಳಿಸಿ. -ವರ್ಷಾ, ಊರು ತಿಳಿಸಿಲ್ಲ. ರಕ್ಷಣಾ ಪಡೆಗೆ ಸೇರಿ ದೇಶ ಸೇವೆ ಮಾಡಬೇಕೆನ್ನುವ ನಿಮ್ಮ ಆಸೆ ಶ್ಲಾಘನೀಯ. ಸೇನಾಧಿಕಾರಿಗಳಿಗೆ ಸಿಗುವ ವೇತನ, ಸವಲತ್ತುಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಸಿಗುವ ಗೌರವ, ಮನ್ನಣೆಯನ್ನು ಗಮನಿಸಿದರೆ ಈ ವೃತ್ತಿ ಅತ್ಯಂತ ಆಕರ್ಷಣೀಯ. ಪಿಯುಸಿ ನಂತರ ಎನ್‌ಡಿಎ ಪರೀಕ್ಷೆ ಅಥವಾ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಮುಖಾಂತರ ರಕ್ಷಣಾ ಪಡೆಯನ್ನು ಸೇರಬಹುದು. ನೀವು ಪದವಿಯ ಅಂತಿಮ ವರ್ಷದಲ್ಲಿರುವುದರಿಂದ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಸಿಡಿಎಸ್) ಪರೀಕ್ಷೆಯ ಮುಖಾಂತರ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಸೇರಿ ನಾನ್-ಟೆಕ್ನಿಕಲ್ ಹುದ್ದೆಗಳನ್ನು ಅರಸಬಹುದು ಹಾಗೂ ಭಾರತೀಯ ವಾಯುಸೇನೆಯ ಹುದ್ದೆಗಳಿಗೆ ಏರ್ ಫೋರ್ಸ್ ಕಂಬೈನ್ಡ್ ಅಡ್ಮಿಷನ್ ಟೆಸ್ಟ್ (ಎಎಫ್‌ಸಿಎಟಿ) ಮುಖಾಂತರ ಪ್ರಯತ್ನಿಸಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: ://../ ://..//. 2. ನಾನು ಇಂಗ್ಲಿಷ್ ಎಂಎ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮಾಡಿರುತ್ತೇನೆ. ಬೆಂಗಳೂರಿನಲ್ಲಿ ಒಂದು ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ವಿದೇಶದಲ್ಲಿ ಪೋಸ್ಟ್ ಡಾಕ್ಟರೇಟ್ ಮಾಡಲು ಆಸೆ ಹಾಗೂ ಅಲ್ಲಿಯೇ ಉದ್ಯೋಗ ಪಡೆಯಬೇಕೆಂದು ಬಯಸುತ್ತೇನೆ. ಯಾವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅವಕಾಶಗಳ ಸಿಗುತ್ತವೆ? -ಪ್ರಜ್ವಲ್, ಬೆಂಗಳೂರು. ನೀವು ನೀಡಿರುವ ಇಷ್ಟೇ ಮಾಹಿತಿಯನ್ನು ಗಮನಿಸಿ ಸಮಂಜಸವಾದ ಸಲಹೆ ನೀಡಲಾಗುವುದಿಲ್ಲ. ಆದರೂ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಅವಕಾಶಗಳನ್ನು ಮತ್ತು ನೀವು ಪೋಸ್ಟ್ ಡಾಕ್ಟರೇಟ್ ಸಂಶೋಧನೆಯ ವಿಷಯವನ್ನು ಗಮನಿಸಿ ಸೂಕ್ತವಾದ ವಿಶ್ವವಿದ್ಯಾಲಯದ ಆಯ್ಕೆ ಮಾಡಬೇಕು. ಯುಎಸ್‌ಎ, ಯುಕೆ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ವಿಶ್ವವಿದ್ಯಾಲಯಗಳ ಅವಕಾಶಗಳನ್ನು ಪರಿಶೀಲಿಸಿ. ಪ್ರಮುಖವಾಗಿ, ವಿಷಯದ ಪ್ರಸ್ತುತತೆ ಕುರಿತು ನಿಮ್ಮ ಪಿಎಚ್‌ಡಿ ಮಾರ್ಗದರ್ಶಕರ ಅಭಿಪ್ರಾಯ ಹಾಗೂ ಮಾರ್ಗದರ್ಶನ ಉಪಯುಕ್ತ. 2022-23ನೇ ಸಾಲಿನ ಫುಲ್ ಬ್ರೈಟ್‌ ಸ್ಕಾಲರ್‌ಶಿಪ್‌ಗೂ ನೀವು ಪ್ರಯತ್ನಿಸಬಹುದು. ಹೆಚ್ಚಿನ ವಿವರಗಳಿಗಾಗಿ, ಗಮನಿಸಿ:://.../----. 3. ನಾನು ಎಂಎ (ಇಂಗ್ಲಿಷ್‌) ಮುಗಿಸಿದ್ದೇನೆ. ಆದರೆ, ಮುಂದೇನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ. -ಸುಷ್ಮಾ, ಶಿವಮೊಗ್ಗ ನೀವು ನೀಡಿರುವ ಮಾಹಿತಿಯ ಪ್ರಕಾರ ವೃತ್ತಿಯ ಯೋಜನೆಯಂತೆ ಕೋರ್ಸ್ ಮಾಡಿದ್ದೀರಾ ಎಂಬುದು ತಿಳಿಯದು. ಇಲ್ಲದಿದ್ದರೆ, ಇಂತಹ ಗೊಂದಲಗಳು ಸ್ವಾಭಾವಿಕ. ಎಂಎ ನಂತರ ಆಸಕ್ತಿಯಿದ್ದರೆ ಪಿಎಚ್‌ಡಿ ಮಾಡಿ ಅಥವಾ ಅದಕ್ಕೂ ಮುಂಚಿತವಾಗಿ ಶಿಕ್ಷಕ ವೃತ್ತಿಯನ್ನು ಅರಸಬಹುದು. ಭಾಷೆಯ ತಜ್ಞತೆಯಿದ್ದರೆ ಮನೆಯಿಂದಲೇ ಮಾಡಬಹುದಾದ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್‌ಸ್ಕ್ರಿಪ್ಶನ್ ಇತ್ಯಾದಿ ಅವಕಾಶಗಳಿವೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ವೃತ್ತಿಗಳನ್ನೂ ಅರಸಬಹುದು. ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. 4. ಸರ್, ನಾನು ಡಿಪ್ಲೊಮಾ ಮುಗಿಸಿದ್ದೇನೆ. ನನಗೆ ಪೊಲೀಸ್ ಆಗಬೇಕು ಅಂತ ಆಸೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ಇದೆಯಾ? ಹಾಗೇ, ನಾವು ಬಡವರು; ಪರೀಕ್ಷೆಗೆ ಮನೆಯಲ್ಲಿ ಕೂತು ಓದಬಹುದಾ ಅಥವಾ ಕೋಚಿಂಗ್ ಅನಿವಾರ್ಯವೇ? ಮಾರ್ಗದರ್ಶನ ನೀಡಿ ಸರ್. -ಮೊಹಮದ್ ಅಲಿ, ಊರು ತಿಳಿಸಿಲ್ಲ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ನಿಭಾಯಿಸಬಹುದು ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ, ಕೋಚಿಂಗ್ ಸೆಂಟರ್ ಅವಶ್ಯಕತೆಯಿಲ್ಲ. ಅನೇಕ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ತಯಾರಾಗಿ ಯಶಸ್ವಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಪರೀಕ್ಷೆಗೆ ಹೇಗೆ ಓದಬೇಕು ಎನ್ನುವುದನ್ನು ಆಗಸ್ಟ್ ತಿಂಗಳ 23ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಕರ್ನಾಟಕ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತು ವಿಷಯಸೂಚಿಗೆ ಗಮನಿಸಿ: ://./-- 5. ನಾನು ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿವಿಲ್ ಎಂಜಿನಿಯರಿಂಗ್‌ ಮಾಡಿದ್ದೇನೆ. ತಿಂಗಳಿಗೆ 35 ಸಾವಿರ ಸಂಬಳ ಇದೆ. ಈಗ ನನಗೆ ಪಿಸಿ (ಪೊಲೀಸ್) ಕೆಲಸ ಸಿಕ್ಕಿದೆ. ಮಾಡುತ್ತಿರುವ ಕೆಲಸ ಮುಂದುವರೆಸುವುದೋ ಅಥವಾ ಪಿಸಿ ಕೆಲಸಕ್ಕೆ ಹೋಗುವುದೋ ಗೊಂದಲದಲ್ಲಿದ್ದೇನೆ. ಸಲಹೆ ನೀಡಿ ಸರ್. -ಸಂತೋಷ್, ಶಿವಮೊಗ್ಗ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಆಯಾ ವೃತ್ತಿಗೆ ಅನುಗುಣವಾದ ಕೌಶಲಗಳ ಅಗತ್ಯವಿರುತ್ತದೆ. ಯಾವ ವೃತ್ತಿ ನಿಮಗೆ ಸೂಕ್ತ ಎಂದು ಗುರುತಿಸಲು ನಿಮ್ಮ ವ್ಯಕ್ತಿತ್ವ, ಆಸಕ್ತಿ ಮತ್ತು ವೃತ್ತಿಯ ಅವಶ್ಯಕತೆಗಳನ್ನು ಗಮನಿಸಬೇಕು. ನಿಮ್ಮ ಜೀವನದ ಗುರಿಯನ್ನು ಯೋಜನೆಯೆಂಬ ವಾಹನದ ಮೂಲಕವೇ ತಲುಪಲು ಸಾಧ್ಯ. ಹಾಗಾಗಿ, ಮೊದಲು ನಿಮ್ಮ ವೃತ್ತಿ ಮತ್ತು ಖಾಸಗಿ ಜೀವನದ ಕನಸುಗಳನ್ನು ಸಾಕಾರಪಡಿಸುವ ಯೋಜನೆಯನ್ನು ಮಾಡಿ, ನಿಮ್ಮ ಅಭಿರುಚಿಗೆ ಅನುಗುಣವಾದ ವೃತ್ತಿಯನ್ನೇ ಆರಿಸಿಕೊಳ್ಳಿ. 6. ನಾನು ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ವೆಟರ್ನರಿ ಕೋರ್ಸ್ ಮಾಡುವ ಆಸಕ್ತಿ ಇದೆ. ಈ ಕೋರ್ಸಿಗೆ ವಯೋಮಿತಿ ತಿಳಿಸಿ. ಹೆಸರು, ಊರು ತಿಳಿಸಿಲ್ಲ. ನಮಗಿರುವ ಮಾಹಿತಿಯಂತೆ ಕನಿಷ್ಠ 17 ವರ್ಷ ಮತ್ತು ಗರಿಷ್ಠ 25 ವರ್ಷದ ಮಿತಿಯಿರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.