ಮೂರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ: ಸಾಮಾನ್ಯ ಜ್ಞಾನ – ಮಾದರಿ ಪ್ರಶ್ನೋತ್ತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಮಾ. 12ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್-ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ. ಭಾಗ 10 1) ಯಾವ ಸರ್ಕಾರ ಸೈನ್ಯದ ತುಕಡಿಯೊಂದಕ್ಕೆ ಪಾಣಿಪತ್ ಎಂದು ಹೆಸರಿಟ್ಟಿದೆ? ಎ) ಪಾಕಿಸ್ತಾನದ ಸರ್ಕಾರ ಬಿ) ಭಾರತದ ಸರ್ಕಾರ ಸಿ) ತಾಲಿಬಾನ್ ಸರ್ಕಾರ ಡಿ) ಚೀನಾ ಸರ್ಕಾರ ಉತ್ತರ: ಸಿ 2) ದ್ವಿತೀಯ ಆಡಳಿತ ಸುಧಾರಣಾ ಆಯೋಗವು 2 ಮತ್ತು 3ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ಒಟ್ಟು 8 ಇಲಾಖೆಗಳಿಗೆ ಸಂಬಂಧಿಸಿದ 1165 ಶಿಫಾರಸುಗಳಿವೆ. ಆ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ. 1) ಪೊಲೀಸ್ ಇಲಾಖೆಯಲ್ಲಿ ನಾನ್‌ಗೆಜೆಟೆಡ್ ಹುದ್ದೆಗಳಲ್ಲಿ ಶೇ 8.3ರಷ್ಟು ಮಹಿಳಾ ಪಾತಿನಿಧ್ಯವಿದೆ. ಆದರೆ 2015ರಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಈ ಹುದ್ದೆಗಳ ಸಂಖ್ಯೆಯನ್ನು ಶೇ 33ಕ್ಕೆ ಏರಿಸಲು ಸಲಹೆ ನೀಡಿದೆ. ಹೀಗಾಗಿ ಪಿಎಸ್‌ಐ ಸಹಿತ ಎಲ್ಲಾ ತರಹದ ನಾನ್ ಗೆಜೆಟೆಡ್ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡುವುದು. 2) ವಿದ್ಯುತ್ ಪ್ರಸರಣ ಕಂಪನಿಗಳಿಗೆ ಗ್ರಾಮ ಪಂಚಾಯ್ತಿಗಳು ₹3993 ಕೋಟಿ ವಿದ್ಯುತ್ ಬಿಲ್ ಪಾವತಿ ಮಾಡದೇ ಉಳಿಸಿಕೊಂಡಿವೆ, ಹೀಗೆಯೇ ಮುಂದುವರಿದರೆ 2025ರ ಹೊತ್ತಿಗೆ ಇದರ ಹೊರೆ ₹ 8500 ಕೋಟಿಗೆ ತಲುಪಬಹುದು. ಹೀಗಾಗಿ ಇದರ ಬಗ್ಗೆ ಕ್ರಮ ವಹಿಸುವುದು. 3) ಸಮಾಜ ಕಲ್ಯಾಣ ಇಲಾಖೆ ನಡೆಸುವ 103 ವಿದ್ಯಾರ್ಥಿ ನಿಲಯಗಳಲ್ಲಿ ಶೇ 50ಕ್ಕಿಂತ ಕಡಿಮೆ ಸೀಟುಗಳು ಭರ್ತಿಯಾಗದೇ ಖಾಲಿ ಇವೆ. ಇವುಗಳನ್ನು ಹತ್ತಿರದ ವಿದ್ಯಾರ್ಥಿ ನಿಲಯಗಳಲ್ಲಿ ವಿಲೀನ ಮಾಡುವುದು ಅಥವಾ ಅವಶ್ಯಕತೆ ಇರುವ ಸ್ಥಳಗಳಿಗೆ ಅವುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು. 4) ಗ್ರಾಮಗಳಲ್ಲಿ ಪಿಡಿಒ ಗಳಿಗೆ ಮದುವೆ ನೋಂದಣಿಯ ಅಧಿಕಾರ ನೀಡಲು ಹಿಂದು ಮ್ಯಾರೇಜ್ ಆ್ಯಕ್ಟ್‌ಗೆ ತಿದ್ದುಪಡಿ ತರುವುದು ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ? ಎ) ಹೇಳಿಕೆ 1, 2, 3 ಮಾತ್ರ ಸರಿಯಾಗಿದೆ. ಬಿ) ಹೇಳಿಕೆ 1, 2, 3, ಮತ್ತು 4 ಸರಿಯಾಗಿದೆ ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ ಡಿ) ಹೇಳಿಕೆ 1, 2, 4 ಮಾತ್ರ ಸರಿಯಾಗಿವೆ. ಉತ್ತರ: ಬಿ 3) ಭಾರತೀಯ ರೈಲ್ವೆಯು 100 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾದ ದೇಶದ ಅತಿ ಉದ್ದದ ರೈಲು ಸುರಂಗ ಮಾರ್ಗವನ್ನು ನಿರ್ಮಿಸಿದೆ. 12.7 ಕಿ.ಮೀ ಉದ್ದದ ‘ಟಿ–49‘ ಹೆಸರಿನ ರೈಲ್ವೆ ಸುರಂಗ ಮಾರ್ಗ ………………………ನಲ್ಲಿ ನಿರ್ಮಿಸಲಾಗಿದೆ. ಎ) ಬಿಹಾರ ಬಿ) ಕಾಶ್ಮೀರ ಸಿ) ಪಂಜಾಬ್ ಡಿ) ಅರುಣಾಚಪ್ರದೇಶ ಉತ್ತರ : ಬಿ 4) ಬಪ್ಪಿ ಲಹಿರಿ ಎಂದೇ ಪ್ರಸಿದ್ಧರಾದ ಅಲೋಕೇಶ್ ಲಹಿರಿ ನಿಧನರಾದರು. ಇವರು ಮೂಲತಃ ಯಾವ ರಾಜ್ಯದವರು? ಎ) ಪಂಜಾಬ್ ‌ಬಿ) ಪಶ್ಚಿಮ ಬಂಗಾಳ ಸಿ) ರಾಜಸ್ಥಾನ ಡಿ) ಗುಜರಾತ್ ಉತ್ತರ: ಬಿ 5) ಇಂಗಾಲದ ಡೈಆಕ್ಸೈಡ್‍ ಹೊರಸೂಸುವಿಕೆಯಿಂದ ಜಾಗತಿಕ ತಾಪಮಾನ ಹೆಚ್ಚಳ ಮತ್ತು ಹವಾಮಾನ ಬದಲಾವಣೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಹೊರಸೂಸುವ ಇಂಗಾಲವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಿ ಮತ್ತು ಮರು ಬಳಕೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಈ ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿದ ಕೇಂದ್ರಗಳು ಭಾರತದ ಯಾವ ಸ್ಥಳಗಳಲ್ಲಿಆರಂಭವಾಗಲಿವೆ? ಎ) ಬೆಂಗಳೂರು ಮತ್ತು ಹೈದರಾಬಾದ್ ಬಿ) ಬೆಂಗಳೂರು ಮತ್ತು ಕೋಲ್ಕತ್ತಾ ಸಿ) ಮುಂಬೈ ಮತ್ತು ದೆಹಲಿ ಡಿ) ಮುಂಬೈ ಮತ್ತು ಬೆಂಗಳೂರು ಉತ್ತರ: ಡಿ 6)ಇತ್ತೀಚೆಗೆ ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯದಲ್ಲಿ 5 ಚಿನ್ನದ ಪದಕಗಳಿಸಿದ ಮುಸ್ಲಿಂ ವಿದ್ಯಾರ್ಥಿನಿಯ ಹೆಸರೇನು? ಎ) ಗಜಾಲ ಬಿ) ಫಾತೀಮಾ ಬೇಗಂ ಸಿ) ಸೈಯದಾ ಸಿದ್ದಕಿ ಡಿ) ಹಸಿನಾ ಗುಜ್ಜಾರ್ ಉತ್ತರ: ಎ 7) ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಟಾಟಾ ಸಂಸ್ಥೆಗೆ ಸೇರಿದ ಮೇಲೆ ಏರ್ ಇಂಡಿಯಾ ಸಿಇಓ ಆಗಿ ಯಾರನ್ನು ನೇಮಕ ಮಾಡಲಾಗಿದೆ? ಎ) ಇಲ್ಕರ್ ಐಸಿ ಬಿ) ಚಂದ್ರಶೇಖರನ್ ರಾಮಚಂದ್ರನ್ ಸಿ) ರಾಮನ್ ಜೋನಾಥನ್ ಡಿ) ವಿಕ್ಟರ್ ಮ್ಯಾನ್ಯುಯೆಲ್ ಉತ್ತರ: ಎ 8) ಲಸ್ಸಾ ಜ್ವರಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಎ) ಬ್ರಿಟನ್‌ನಲ್ಲಿ ಲಸ್ಸಾ ಎಂಬ ಹೊಸ ಜ್ವರವೊಂದು ಪತ್ತೆಯಾಗಿದ್ದು, ಈ ಜ್ವರದಿಂದ ಮೊದಲ ಸಾವು ಸಂಭವಿಸಿದೆ. ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ಬಂದವರಲ್ಲಿ ಲಸ್ಸಾ ಜ್ವರ ಕಾಣಿಸಿಕೊಂಡಿದೆ. ಆಫ್ರಿಕಾದ ಪೂರ್ವ ಭಾಗದಿಂದ ಬಂದ ಪ್ರತಿ ಮೂವರಲ್ಲಿ ಒಬ್ಬರಿಗೆ ಲಸ್ಸಾ ಜ್ವರ ಕಾಣಿಸಿಕೊಳ್ಳತೊಡಗಿದೆ 2) ಇಲಿಯ ಮೂತ್ರ ತಗುಲಿದ ವಸ್ತುಗಳನ್ನು ಮುಟ್ಟುವ ಮನುಷ್ಯನಿಗೆ ಈ ಸೋಂಕು ಹರಡುತ್ತದೆ. ಹೀಗಾಗಿ, ಇಲಿಗಳಿಂದ ದೂರ ಉಳಿಯುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. 3) ಯಾವುದೇ ವ್ಯಕ್ತಿ ಸೋಂಕಿತನಾದಾಗ 1 ರಿಂದ 3 ವಾರಗಳ ಬಳಿಕ ಸೋಂಕಿನ ಲಕ್ಷಣಗಳು ಗೋಚರವಾಗುತ್ತವೆ. ಆರಂಭದಲ್ಲಿ ಸೋಂಕಿನ ಲಕ್ಷಣಗಳು ಸೂಕ್ಷ್ಮವಾಗಿರುತ್ತವೆ. ಸೋಂಕಿತ ಮನುಷ್ಯನ ಕಣ್ಣು, ಬಾಯಿ, ಮೂಗಿನ ದ್ರವದ ಮೂಲಕ ಮತ್ತೊಬ್ಬರಿಗೆ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಯ ಬಳಿಯಲ್ಲಿ ಕುಳಿತಾಗ, ಕೈ ಕುಲುಕಿದಾಗ ಹಾಗೂ ತಬ್ಬಿಕೊಂಡಾಗ ಈ ಸೋಂಕು ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. 4) 1969ರಲ್ಲೇ ಈ ಜ್ವರದ ರೋಗಾಣು ಪತ್ತೆಯಾಗಿತ್ತು. ನೈಜೀರಿಯಾದಲ್ಲಿ 1969ರಲ್ಲಿ ಈ ಜ್ವರಕ್ಕೆ ತುತ್ತಾದ ಇಬ್ಬರು ನರ್ಸ್‌ಗಳು ಸಾವನ್ನಪ್ಪಿದ್ದರು. ಇಲಿಗಳಿಂದ ಉಗಮವಾದ ಲಸ್ಸಾ ಜ್ವರದ ವೈರಾಣು ಪೂರ್ವ ಆಫ್ರಿಕಾ ದೇಶಗಳಾದ ಗಿನಿಯಾ, ಲಿಬಿಯಾ ಹಾಗ ನೈಜೀರಿಯಾ ಸೇರಿದಂತೆ ಹಲವೆಡೆ ಹರಡಿತ್ತು. ಈ ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ ಎ) ಹೇಳಿಕೆ 1, 2, 3 ಮಾತ್ರ ಸರಿಯಾಗಿವೆ ಬಿ) ಹೇಳಿಕೆ 1, 2, 3, 4 ಸರಿಯಾಗಿವೆ. ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ ಡಿ) ಹೇಳಿಕೆ 2, 3, 4 ಮಾತ್ರ ಸರಿಯಾಗಿವೆ. ಉತ್ತರ: ಬಿ 9) ಕೆಳಗಿನ ಹೇಳಿಕೆಗಳನ್ನು ಗಮನಿಸಿ ಎ) ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕು ಹೊಂಬಳ ಗ್ರಾಮದಲ್ಲಿ 1928 ಜೂನ್ 28ರಂದು ಸಕ್ಕರೆಪ್ಪ ಹಾಗೂ ಪರ‍್ವತಮ್ಮ ದಂಪತಿಯ ಕಿರಿಯ ಪುತ್ರನಾಗಿ ಚನ್ನವೀರ ಕಣವಿ ಜನಿಸಿದರು. ಬಿ) ಕರ್ನಾಟಕ ವಿಶ್ವವಿದ್ಯಾಲಯದಲ್ಲಿ(ಕವಿವಿ) ಎಂ.ಎ. ಪದವಿ ಮುಗಿಸಿದ ಡಾ. ಚೆನ್ನವೀರ ಕಣವಿ ಅವರು ಕನ್ನಡ ಅಧ್ಯಾಪಕರಾಗಲು ಅರ್ಹರಾಗಿದ್ದರು. ಆದರೆ, ಅವಕಾಶ ಸಿಗಲಿಲ್ಲ. ಬದಲಿಗೆ, ಅದೇ ವಿವಿಯಲ್ಲಿ 1952ರಲ್ಲಿಪ್ರಸಾರಾಂಗಕ್ಕೆ ಕಾರ್ಯದರ್ಶಿಯಾಗಿ ನೇಮಕಗೊಂಡರು. 1983ರವರೆಗೂ ಪ್ರಸಾರಾಂಗದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. 3) ಕಣವಿ ಅವರ ‘ಜೀವಧ್ವನಿ‘ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗ ಕವಿವಿ ಕುಲಪತಿ ಆಗಿದ್ದ ಡಾ. ಡಿ.ಎಂ. ನಂಜುಂಡಪ್ಪ ಅವರು ಕನ್ನಡ ವಿಭಾಗಕ್ಕೆ ಕಣವಿ ಅವರನ್ನು ಗೌರವ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿದರು. ಆಗ ಅವರ ಸೇವಾವಧಿ 2 ವರ್ಷ ಮಾತ್ರ ಉಳಿದಿತ್ತು. 4) ‘ಭಾವಜೀವಿ‘, ‘ಆಕಾಶಬುಟ್ಟಿ‘, ‘ದೀಪಧಾರಿ‘, ‘ಜೀವಧ್ವನಿ‘, ‘ಮಧು ಚಂದ್ರ‘, ‘ನೆಲಮುಗಿಲು‘, ‘ಎರಡು ದಡ‘ ಸಾಹಿತ್ಯ ಕೃತಿಗಳನ್ನು ಚೆನ್ನವೀರ ಕಣವಿಯವರು ಬರೆದಿದ್ದಾರೆ. ಈ ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ ? ಎ) ಹೇಳಿಕೆ 1, 2, 3 ಮತ್ತು 4 ಸರಿಯಾಗಿದೆ ಬಿ) ಹೇಳಿಕೆ 1, 3, 4 ಮಾತ್ರ ಸರಿಯಾಗಿದೆ. ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ ಡಿ) ಹೇಳಿಕೆ 1, 2, 4 ಮಾತ್ರ ಸರಿಯಾಗಿವೆ. ಉತ್ತರ: ಎ ===== ನಿಮಗಿದು ಗೊತ್ತೆ? ವಿಶ್ವಸಂಸ್ಥೆ (ಯುನೈಟೆಡ್‌ ನೇಷನ್ಸ್‌) ವಿಶ್ವಸಂಸ್ಥೆ – ಇದೊಂದು ಅಂತರರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಸ್ಥಾಪಿತವಾಯಿತು. ಎರಡನೆಯ ಮಹಾಯುದ್ಧದ ಉಂಟಾದ ಘೋರ ಪರಿಣಾಮಗಳನ್ನು ಅರಿತು, ಮುಂದೆ ಯುದ್ಧಗಳಾಗುವುದನ್ನು ತಪ್ಪಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ, ಉತ್ತಮ ‘ಜಗತ್ತು‘ ನಿರ್ಮಿಸುವ ಉದ್ದೇಶದೊಂದಿಗೆ ಇದನ್ನು ಸ್ಥಾಪಿಸಲಾಯಿತು. 1945ರ ಏಪ್ರಿಲ್ 25ರಂದು ಅಮೆರಿಕದ ಸ್ಯಾನ್ ಫ್ರಾನ್ಸ್ಕೊ ನಗರದಲ್ಲಿ ನಡೆದ ಸಮ್ಮೇಳನ / ಸಮಾವೇಶದಲ್ಲಿ 50 ರಾಷ್ಟ್ರಗಳು ವಿಶ್ವಸಂಸ್ಥೆಯ ಚಾರ್ಟರ್‌ಗೆ (ಸನ್ನದು) ಸಹಿ ಹಾಕಿದವು. ಈ ಚಾರ್ಟರ್‌ನಲ್ಲಿದ್ದ ಅಂಶಗಳು 1945ರ ಅಕ್ಟೋಬರ್ 24ರಂದು ಜಾರಿಗೆ ಬಂದವು. ಅಂದು ಭಾರತ, ಫ್ರಾನ್ಸ್, ಬ್ರಿಟನ್, ಸೋವಿಯತ್ ಯೂನಿಯನ್, ಅಮೆರಿಕ ಮತ್ತಿತರ ರಾಷ್ಟ್ರಗಳು ಚಾರ್ಟರ್‌ಗೆ ಅನುಮೋದನೆ ನೀಡಿದವು. ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟ್ರವರ ಸಲಹೆಯ ಮೇರೆಗೆ ವಿಶ್ವ ಸಂಸ್ಥೆ ( ) ಎಂಬ ಹೆಸರನ್ನು ಅಂಗೀಕರಿಸಲಾಯಿತು. ಚಾರ್ಟರ್‌ನ ಪ್ರಸ್ತಾವನೆಯನ್ನು ಸಿದ್ಧಪಡಿಸಿದವರು ಫೀಲ್ಡ್ ಮಾರ್ಷಲ್ ಸ್ಮಟ್ಸ್.( ). ಮುಂದೆ ಹಂತ ಹಂತವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸದ್ಯ ವಿಶ್ವಸಂಸ್ಥೆಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 193. ಹೀಗೆ ಸ್ಥಾಪನೆಯಾದ ವಿಶ್ವಸಂಸ್ಥೆಯು ಹಲವು ಉದ್ದೇಶಗಳನ್ನು ಹೊಂದಿದೆ. ಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ತತ್ವದ ಮೇಲೆ, ಪರಸ್ಪರ ಸಮಾನತೆ, ಸೌಹಾರ್ದ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಬಗೆಹರಿಸುವುದು. ಎಲ್ಲ ಸಮಸ್ಯೆಗಳನ್ನೂ ಶಾಂತಿಯುತ ವಿಧಾನಗಳಲ್ಲೇ ಪರಿಹರಿಸಲು ಪ್ರಯತ್ನಿಸುವುದು. ಈ ಮೂಲಕ ಸಶಸ್ತ್ರ ಆಕ್ರಮಣವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ಪ್ರಯತ್ನಿಸುವುದು. ಸದಸ್ಯ ರಾಷ್ಟ್ರಗಳ ನಡುವೆ ಮೈತ್ರಿ ಪೂರ್ಣ ಸಂಬಂಧಗಳನ್ನು ಬೆಳೆಸುವುದು.. ಇತ್ಯಾದಿ. ವಿಶ್ವ ಸಂಸ್ಥೆಯ ಆರು ಮುಖ್ಯ ಅಂಗಗಳಿವೆ. ಮಹಾಸಭೆ ( ): ಇದು ವಿಶ್ವಸಂಸ್ಥೆಯ ಧೋರಣೆಯನ್ನು ರೂಪಿಸುವ ವ್ಯವಸ್ಥೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಮಹಾಸಭೆಯಲ್ಲಿರುತ್ತಾರೆ. ಪ್ರತಿಯೊಂದು ದೇಶಕ್ಕೂ ಒಂದು ಮತ ಇರುತ್ತದೆ. ಇದು ವರ್ಷಕ್ಕೆ ಒಮ್ಮೆ ಸಮಾವೇಶಗೊಳ್ಳುತ್ತದೆ. ಎಲ್ಲಾ ಮುಖ್ಯ ವಿಷಯಗಳು ಮೂರನೇ ಎರಡರ ಬಹುಮತದಿಂದ ಇತ್ಯರ್ಥಪಡಿಸಲಾಗುವುದು. ಇದು ವಿಶ್ವ ಸಂಸ್ಥೆಯ ಆಯವ್ಯಯವನ್ನು ನಿಗದಿ ಮಾಡುತ್ತದೆ. ಭದ್ರತಾ ಮಂಡಳಿ ( ):- ಈ ಸಮಿತಿಯ ಶಿಫಾರಸ್ಸಿನ ಮೇಲೆ ಮಹಾಸಭೆಯ ಸದಸ್ಯರನ್ನು ಚುನಾಯಿಸುತ್ತದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ಆರಿಸಲಾಗುತ್ತದೆ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುತ್ತದೆ. ಆರ್ಥಿಕ ಮತ್ತು ಸಾಮಾಜಿಕ ಮಂಡಳಿ: ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಕಾಪಾಡಲು ಇದು ಶ್ರಮಿಸುತ್ತದೆ. ಧರ್ಮದರ್ಶಿತ್ವ ಮಂಡಳಿ ( ): ಇದು ವಿಶ್ವಸಂಸ್ಥೆಯ ಆಶ್ರಯದಲ್ಲಿರುವ ದೇಶಗಳ ಹಿತರಕ್ಷಣೆಗಾಗಿ ಶ್ರಮಿಸುವುದು ಈ ಮಂಡಳಿಯ ಉದ್ದೇಶ. ಆ ದೇಶಗಳು ಸ್ವತಂತ್ರ ಅಥವಾ ಸ್ವಾವಲಂಬಿಯಾಗಲು ಅಣಿಗೊಳಿಸುವುದು ಈ ಮಂಡಳಿ ನೆರವಾಗುತ್ತದೆ. ಅಂತರಾಷ್ಟ್ರೀಯ ನ್ಯಾಯಾಲಯ( ) : ಇದು ಕಾನೂನಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ವಿವಾದಗಳನ್ನು ಇತ್ಯರ್ಥಪಡಿಸುತ್ತದೆ. ಎರಡು ರಾಷ್ಟ್ರಗಳ ನಡುವಣ ವಿವಾದವನ್ನೂ ಅದು ತೀರ್ಮಾನಿಸುತ್ತದೆ. ಇದು ವಿಶ್ವಸಂಸ್ಥೆಯ ಮುಖ್ಯ ನ್ಯಾಯಾಂಗ ವ್ಯವಸ್ಥೆಯಾಗಿದೆ. ಈ ನ್ಯಾಯಾಲಯವು ಹೇಗ್‌ನಲ್ಲಿದೆ. ಸಚಿವಾಲಯ (): ವಿಶ್ವಸಂಸ್ಥೆಯ ವಿವಿಧ ವಿಭಾಗಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ವಿಷಯಗಳನ್ನು ಈ ಸಚಿವಾಲಯ ಪರಿಶೀಲಿಸುತ್ತದೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಈ ಸಚಿವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ. ಸಾಮಾನ್ಯಸಭೆಯ ಭದ್ರತಾ ಮಂಡಳಿಯ ಶಿಫಾರಸ್ಸಿನ ಮೇಲೆ ಐದು ವರ್ಷಗಳ ಅವಧಿಗಾಗಿ ಪ್ರಧಾನ ಕಾರ್ಯದರ್ಶಿಯವನರನ್ನು ಆಯ್ಕೆ ಮಾಡಲಾಗಿರುತ್ತದೆ. ಅವರನ್ನು ಪುನರ್‌ನೇಮಕ ಮಾಡಲು ಅವಕಾಶವಿದೆ. ವಿಶ್ವ ಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ್‌ನಲ್ಲಿದೆ. ವಿಶ್ವಸಂಸ್ಥೆ ಪ್ರತ್ಯೇಕ ಧ್ವಜವನ್ನು ಹೊಂದಿದೆ. ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು– ಇಂಗ್ಲಿಷ್, ಫ್ರೆಂಚ್, ಚೈನೀಸ್, ರಷ್ಯನ್, ಅರಾಬಿಕ್ ಮತ್ತು ಸ್ಪ್ಯಾನಿಶ್ . ಆದರೆ ಇಂಗ್ಲಿಷ್ ಮತ್ತು ಫ್ರೆಂಚ್ ಅದರ ಕಾರ್ಯ ಭಾಷೆಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.