ಹಲೋ...ನಿಮ್ಮ ಧ್ವನಿಗೂ ಬೆಲೆಯಿದೆ ಉದ್ಯೋಗವನ್ನು ಎಲ್ಲೆಲ್ಲೋ ಹುಡುಕುತ್ತಿದ್ದೀರಾ? ನಿಮ್ಮ ಧ್ವನಿಯೇ ನಿಮಗೆ ದುಡಿಮೆ ಕೊಡಬಹುದು. ಹೌದು, ಹಾಗೆಂದ ಮಾತ್ರಕ್ಕೆ ರೇಡಿಯೊ, ಟಿವಿ ಕಾರ್ಯಕ್ರಮಗಳು, ನಿರೂಪಕ ವೃತ್ತಿ ಬಗೆಗಷ್ಟೇ ಹೇಳುತ್ತಿಲ್ಲ. ಅವುಗಳ ಜೊತೆಗೆ ಧ್ವನಿಯೊಂದು ಬದುಕಿನುದ್ದಕ್ಕೂ ಬಂಡವಾಳವಾಗಬಹುದಾದ ಸಾಧ್ಯತೆಯಿದೆ. ಸಿನಿಮಾಗಳಲ್ಲಿ ಕಂಠದಾನ ಕಲಾವಿದರ ಬಗ್ಗೆ ಕೇಳಿದ್ದೀರಿ. ಜಾಹೀರಾತುಗಳಲ್ಲಿ ಕೇಳಿಸುವ ಮಧುರ ಅಥವಾ ಗಡಸು ಧ್ವನಿಯನ್ನೂ ಆಲಿಸಿದ್ದೀರಿ. ಇವರೆಲ್ಲರೂ ಧ್ವನಿಯನ್ನೇ ಬದುಕಾಗಿಸಿಕೊಂಡವರು. ಆದರೆ ಇವು ಇಷ್ಟಕ್ಕೇ ಸೀಮಿತ ಅಲ್ಲ. ಇತ್ತೀಚೆಗೆ ಕೋವಿಡ್‌ ಜಾಗೃತಿಯ ಕಾಲರ್‌ ಟ್ಯೂನ್‌ ಕೇಳಿರಬಹುದು. ಅದರ ಮೊದಲ ಆವೃತ್ತಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಧ್ವನಿ ಕೊಟ್ಟವರು ಮಂಗಳೂರಿನ ಡೇರೆಲ್‌ ಜೆಸ್ಸಿಕಾ ಫೆರ್ನಾಂಡಿಸ್‌. ನಂತರ ವಿದ್ಯಾ ಭಟ್‌ ಅವರ ಧ್ವನಿಯೂ ಮೂಡಿಬಂತು. ದೆಹಲಿಯ ಜಾಸ್ಲಿನ್‌ ಭಲ್ಲಾ, ಮೇರುನಟ ಅಮಿತಾಬ್‌ ಬಚ್ಚನ್‌ ಕೂಡಾ ಈ ಸಂದೇಶಕ್ಕೆ ಧ್ವನಿಯಾದರು. ಬಸ್‌, ರೈಲು, ಮೆಟ್ರೊ ನಿಲ್ದಾಣಗಳಲ್ಲಿ ಕೇಳಿಬರುವ ಸಂದೇಶಗಳು, ಲಿಫ್ಟ್‌ನಲ್ಲಿ ಕೇಳಿಸುವ ಮಾಹಿತಿ, ಟೆಲಿಫೋನ್‌ ಕರೆಗಳಲ್ಲಿ ಕೇಳಿಬರುವ ಸಂವಹನಾತ್ಮಕ ಪ್ರತಿಕ್ರಿಯೆಯ ಧ್ವನಿ (ಇಂಟರ‍್ಯಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಂ) ಇಲ್ಲೆಲ್ಲಾ ಕಂಠದಾನ ಕಲಾವಿದರು ಸದ್ದಿಲ್ಲದೆ ತೊಡಗಿಕೊಂಡಿದ್ದಾರೆ. ನೆನಪಿಡಿ, ಕಂಠದಾನ ಎಂದರೆ ಬರೆದದ್ದನ್ನು ಓದಿ ಧ್ವನಿಮುದ್ರಿಸುವುದಷ್ಟೇ ಅಲ್ಲ. ಸೃಜನಶೀಲತೆ ಬೇಕು. ಕೃತಿಗೆ ಜೀವ ತುಂಬುವ ಕೌಶಲವಿರಬೇಕು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಈಗ ಬಂದಿರುವ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌) ಎಲ್ಲ ಸಾಧನಗಳಲ್ಲಿ ಧ್ವನಿ ಪ್ರತಿಕ್ರಿಯೆಯ ಆಯ್ಕೆಯಲ್ಲಿ ಪೂರ್ವಮುದ್ರಿತ ಧ್ವನಿ ಬೇಕಾಗುತ್ತದೆ. ಅದಕ್ಕಾಗಿ ಈ ಕ್ಷೇತ್ರದಲ್ಲಿ ಹೊಸ ಧ್ವನಿಗಳಿಗೆ ಬೇಡಿಕೆ ಮತ್ತು ಅವಕಾಶ ಇದ್ದೇ ಇದೆ. ಆ್ಯಪಲ್‌ನ ‘ಸಿರಿ’ಗೆ ಧ್ವನಿ ನೀಡಿದ ಸೂಸನ್‌ ಬೆನೆಟ್‌, ಅಮೆಜಾನ್‌ನ ‘ಅಲೆಕ್ಸಾ’ಗೆ ಧ್ವನಿ ನೀಡಿದ ನಿನಾ ರೋಲ್‌ ಅವರ ಧ್ವನಿ ಕೇಳಿರಬಹು ದಲ್ವಾ. ಹಾಗೇ ‘ಸಿರಿ’, ‘ಅಲೆಕ್ಸಾ’ ಸ್ಥಳೀಯ ಭಾಷೆಗಳಲ್ಲೂ ಬರುವ ದಿನಗಳು ದೂರವಿಲ್ಲ. ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ತೊಡಗಿರುವ ಅನಿತಾ ರಂಗಸ್ವಾಮಿ ಹೇಳುವಂತೆ, ‘ಪ್ರತಿಯೊಂದು ಧ್ವನಿಯನ್ನು ನಾವು ಶ್ರದ್ಧೆಯಿಂದ ಹೊರತರಬೇಕಾಗುತ್ತದೆ. ಮೈಕ್‌ ಮುಂದೆ, ನಿಶ್ಯಬ್ದದ ಕೊಠಡಿಯಲ್ಲಿ ನಾವೇ ಒಂದು ಪ್ರಪಂಚ ಸೃಷ್ಟಿಸಿಕೊಂಡು ರಾಜ, ರಾಣಿಯರಾಗುತ್ತೇವೆ. ಪ್ರತಿ ಪಾತ್ರಕ್ಕೆ ಧ್ವನಿಯ ಮೂಲಕ ಭಾವ, ಜೀವ ತುಂಬುತ್ತೇವೆ. ಹಾಗಾಗಿ ಇದು ಖುಷಿಯಿಂದ ಮಾಡುವ ವೃತ್ತಿ’ ಎನ್ನುತ್ತಾರೆ. ಅನಿತಾ ಅವರು ಈವರೆಗೆ ಸುಮಾರು 8 ಸಾವಿರಕ್ಕೂ ಅಧಿಕ ರೇಡಿಯೊ ಜಿಂಗಲ್‌, ಸಾಕ್ಷ್ಯಚಿತ್ರ, ಆಲ್ಬಂಗಳಿಗೆ ಧ್ವನಿ ನೀಡಿದ್ದಾರೆ. ಪ್ರಮುಖ ದೂರವಾಣಿ ಕಂಪನಿಗಳ ಐವಿಆರ್‌ಎಸ್‌ನಲ್ಲೂ ಅನಿತಾ ಅವರ ಧ್ವನಿ ಇದೆ. ದೆಹಲಿಯಲ್ಲಿರುವ ಕನ್ನಡಿತಿ ಸವಿತಾ ಇನಾಂದಾರ್‌ ಅವರೂ ಇದೇ ಕ್ಷೇತ್ರದಲ್ಲಿ ಸಕ್ರಿಯರು. ಟೆಲಿಫೋನ್‌ ಐವಿಆರ್‌ಎಸ್‌, ರೇಡಿಯೊ ಕಾರ್ಯಕ್ರಮಗಳಲ್ಲಿ ಸವಿತಾ ಅವರ ಧ್ವನಿ ಆಗಾಗ ಕೇಳಿಸುತ್ತಿರುತ್ತದೆ. ಉದ್ಯೋಗ ಹೇಗೆ? ಹೆಚ್ಚಿನ ಕಂಠದಾನ ಕಲಾವಿದರು ಸ್ವತಂತ್ರ ವೃತ್ತಿಯನ್ನೇ (ಫ್ರೀಲಾನ್ಸರ್‌) ಮಾಡುತ್ತಿರುತ್ತಾರೆ. ಹಾಗಾಗಿ ಅವಕಾಶ ಗಳೂ ವಿಶಾಲವಾಗಿರುತ್ತವೆ. ಆಯಾ ಯೋಜನೆಯ ಸ್ವರೂಪಕ್ಕೆ (ಜಿಂಗಲ್‌ ಅಥವಾ ನಿರೂಪಣೆ, ಚಿತ್ರಕ್ಕೆ ಕಂಠದಾನ) ಅನುಗುಣವಾಗಿ ಸಂಭಾವನೆ ನಿಗದಿಯಾಗುತ್ತದೆ. ಬಹುತೇಕವು ಒಂದೊಂದು ಯೋಜನೆಗೂ ಕನಿಷ್ಠ ಐದಂಕಿ ಮೀರಿದ ಸಂಭಾವನೆ ಇರುತ್ತದೆ ಎಂಬುದು ಆ ಕ್ಷೇತ್ರದವರ ಮಾತು. ಕಂಠದಾನದ ಜೊತೆಗೆ ಸ್ಕ್ರಿಪ್ಟ್‌ ಬರೆಯುವುದು, ಧ್ವನಿ ಸಂಯೋಜನೆ ಮತ್ತಿತರ ತಾಂತ್ರಿಕ ಕೆಲಸ ಗೊತ್ತಿದ್ದರೆ ಅದು ಪೂರಕ ಅಂಶವಾಗಿ ಆದಾಯದ ದಾರಿ ತೆರೆಯುತ್ತವೆ. ಏನು ಅರ್ಹತೆ? ಆಸಕ್ತಿ ಮತ್ತು ಧ್ವನಿ ಶುದ್ಧತೆ, ಸ್ಪಷ್ಟತೆ ಕಾಯ್ದುಕೊಳ್ಳುವುದು ಮುಖ್ಯ. ಹೆಚ್ಚು ಭಾಷೆ ತಿಳಿದಷ್ಟೂ ಅವಕಾಶಗಳು ಹೆಚ್ಚು. ಕೆಲವು ತರಬೇತಿ ಶಾಲೆಗಳು ಇವೆಯಾದರೂ ಪರಿಪೂರ್ಣತೆಯ ಖಾತ್ರಿ ಇಲ್ಲ. ರಂಗಭೂಮಿ, ರೇಡಿಯೊ, ಸಂಗೀತ ಸೇರಿದಂತೆ ಪ್ರದರ್ಶಕ ಕಲೆಗಳಲ್ಲಿ ನಿರಂತರ ತೊಡಗಿಕೊಂಡಿರುವವರಿಗೆ ಈ ಕಲೆ ತಾನಾಗಿಯೇ ಒಲಿಯುತ್ತದೆ. ಅದೇ ಕಲಿಕೆ ಮೈಕ್‌ ಮುಂದೆ ಬರಬೇಕು ಅಷ್ಟೇ. ನೆನಪಿಡಿ, ಇಲ್ಲಿಯೂ ತೀವ್ರ ಸ್ಪರ್ಧೆ ಇದೆ. ಗೆದ್ದವನೇ ಜಾಣ. ಹೆಚ್ಚಿನ ಮಾಹಿತಿಗೆ: @., anitha1848@. ಗೆ ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.