1,591 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ: ಪೂರ್ಣ ವಿವರ ಇಲ್ಲಿದೆ ಪೊಲೀಸ್ ಇಲಾಖೆ ಸೇರಬೇಕು ಎಂಬ ಯುವಕರ ಕನಸು ನನಸಾಗುವ ಮತ್ತೊಂದು ಅವಕಾಶ ಈಗ ಒದಗಿ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಪೊಲೀಸ್ ಕಮಿಷನರೇಟ್‌ಗಳಲ್ಲಿ ಕಾರ್ಯನಿವರ್ಹಿಸಲು 1,591 ಪುರುಷ, ಮಹಿಳಾ, ತೃತೀಯ ಲಿಂಗಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಇಂದಿನಿಂದ (ಅ.20) ಆನ್‌ಲೈನ್ ಅರ್ಜಿಸಲ್ಲಿಕೆ ಆರಂಭವಾಗಲಿದೆ. ಕರ್ನಾಟಕ ಸಾಮಾನ್ಯ ವೃಂದ 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಕಲ್ಯಾಣ ಕರ್ನಾಟಕ ವೃಂದದ 454 ಸೇರಿ ಒಟ್ಟು 1,591 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಪೂರ್ಣ ವರ್ಗೀಕರಣದ ಮಾಹಿತಿಗೆ ಇಲಾಖೆ ತನ್ನ ಜಾಲತಾಣದಲ್ಲಿ (://-./) ಪ್ರಕಟಿಸಿರುವ ಅಧಿಸೂಚನೆ ನೋಡಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ (ಅ.20 ರಿಂದ) ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನವೆಂಬರ್ 21, ಅರ್ಜಿ ಸಲ್ಲಿಕೆಗೆ ಕೊನೆ ದಿನ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ₹400 ಹಾಗೂ ಎಸ್‌ಸಿ/ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳು ₹200 ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕವನ್ನು ಆನ್‌ಲೈನ್‌, ಚಲನ್ ಪ್ರತಿ ಮೂಲಕ ಬ್ಯಾಂಕ್‌ ನಲ್ಲಿ ಹಾಗೂ ಅಂಚೆ ಕಚೇರಿಗಳಲ್ಲಿ ಪಾವತಿಸಲು ಅವಕಾಶ ಇದೆ. ಅಭ್ಯರ್ಥಿಗಳು ಕೊನೆ ಕೊನೆ ದಿನಾಂಕದವರೆಗೆ ಕಾಯದೇ ಬೇಗ ಅರ್ಜಿ ಸಲ್ಲಿಸಿ ತಯಾರಿ ನಡೆಸುವುದು ಸೂಕ್ತ. ಶೈಕ್ಷಣಿಕ ಅರ್ಹತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ ಪಿಯುಸಿ ಪಾಸಾಗಿರಬೇಕು ಅಥವಾ ಪಿಯುಸಿಗೆ ತತ್ಸಮಾನವಾದ ಕೋರ್ಸ್‌ನ್ನು ಪೂರ್ಣಗೊಳಿಸಿರಬೇಕು. ವೇತನ ಶ್ರೇಣಿ ಏನಿದೆ? ಸಿವಿಲ್ ಪೊಲೀಸ್ ಕಾನ್ಸ್‌ಸ್ಟೆಬಲ್‌ ಆಗಿ ಆಯ್ಕೆಯಾಗುವ ವ್ಯಕ್ತಿಗೆ ರಾಜ್ಯ ಸರ್ಕಾರ ₹23,500–₹47,650 ವೇತನ ಶ್ರೇಣಿಯನ್ನು ನಿಗದಿಪಡಿಸಿದೆ. 2006ರ ನಿಯಮದಂತೆ ಅಂಶದಾಯಿ ಪಿಂಚಣಿ ಸೌಲಭ್ಯ ದೊರೆಯಲಿದೆ. ವಯೋಮಿತಿ ಏನಿದೆ? ಕನಿಷ್ಠ 19 ವರ್ಷ– ಗರಿಷ್ಠ 25 ವರ್ಷಗಳು(ಸಾಮಾನ್ಯ ವರ್ಗದ ಅಭ್ಯರ್ಥಿಗೆ), ಎಸ್‌.ಸಿ/ಎಸ್‌ಟಿ, ಒಬಿಸಿ ಅಭ್ಯರ್ಥಿಗಳು 27 ವರ್ಷ ಹಾಗೂ ಬುಡಕಟ್ಟು ಅಭ್ಯರ್ಥಿಗಳು 30 ವರ್ಷ ಮೀರಿರಬಾರದು. ಆಯ್ಕೆ ವಿಧಾನ ಹೇಗಿದೆ? ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ ಮೂಲಕ ನೇರ ನೇಮಕಾತಿ ನಡೆಯಲಿದೆ. ಸಂದರ್ಶನ ಇರುವುದಿಲ್ಲ. ವೈದ್ಯಕೀಯ ಪರೀಕ್ಷೆ ಪಾಸಾದ ಮೇಲೆ ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಪಟ್ಟಿ ಪ್ರಕಟವಾಗುತ್ತದೆ. ಹಂತ 1: ಈ ಹಂತದಲ್ಲಿ 100 ಅಂಕಗಳಿಗೆ ಬಹುಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಇರುತ್ತದೆ. ಹಂತ 2: ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಮೆರಿಟ್ ಆಧಾರದ ಮೇಲೆ 1:5 ರಂತೆ ಅಭ್ಯರ್ಥಿಗಳನ್ನು ದೇಹದಾರ್ಢ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಗೆ ಕರೆಯಲಾಗುತ್ತದೆ. ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ 30 ಅಂಕಗಳನ್ನು ಪಡೆಯಲೇಬೇಕು. ಅಂದಾಗ ಮಾತ್ರ ಈ ದೈಹಿಕ ಪರೀಕ್ಷೆಗ ಅರ್ಹತೆ ಇರುತ್ತದೆ. ಹಂತ 3: ದೇಹದಾರ್ಢ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಪರಿಗಣಿಸಿ ಲಭ್ಯ ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ. ಹಂತ 4: ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆ ಪಾಸಾದ ಅಭ್ಯರ್ಥಿಗಳನ್ನು ಪರಿಗಣಿಸಿ ಲಭ್ಯ ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಆಯ್ಕೆ ಪ್ರಾಧಿಕಾರ ಹೊರಬಿಡುತ್ತದೆ. ಹಂತ 5: ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಸಿಂಧುತ್ವ ಪೂರೈಸಿ ತರಬೇತಿಗೆ ಹಾಜರಾಗಬೇಕಾಗುತ್ತದೆ. ತರಬೇತಿ ನಂತರ ಎರಡೂವರೆ ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ. ಇದು ಮುಗಿದ ಮೇಲೆ ಇಲಾಖೆಯಲ್ಲಿ ಅಭ್ಯರ್ಥಿಯು ಹುದ್ದೆಯನ್ನು ನಿಭಾಯಿಸಬೇಕಾಗುತ್ತದೆ. ಪರೀಕ್ಷೆ ಹೇಗಿರುತ್ತದೆ? ಮೊದಲೇ ಹೇಳಿದಂತೆ ಬಹುಆಯ್ಕೆಯ 100 ಅಂಕಗಳ 100 ಪ್ರಶ್ನೆಗಳ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿರುತ್ತದೆ. ಪಿಯುಸಿ ಹಂತದವರೆಗಿನ ಪಠ್ಯಕ್ರಮ ಇರಲಿದೆ. ಒಂದೂವರೆ ಗಂಟೆ ಪರೀಕ್ಷಾ ಅವಧಿ ಇದ್ದು, 4 ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ತೃತೀಯ ಲಿಂಗಿಗಳು ಯಾರು? ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಸೂಚನೆಯ ಪ್ರಕಾರ ಕೇಂದ್ರ ಸರ್ಕಾರ ಹೊರಡಿಸಿರುವ ‘ತೃತೀಯ ಲಿಂಗ ವ್ಯಕಿಗಳ ರಕ್ಷಣಾ ಹಕ್ಕುಗಳು ಹಾಗೂ ನಿಯಮಗಳು 2020ರ’ ಅನ್ವಯ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಪಡೆಯಬೇಕು. ಈ ಪ್ರಮಾಣ ಪತ್ರ ಹೊಂದಿರದಿದ್ದಲ್ಲಿ ತೃತೀಯ ಲಿಂಗದ ಮೀಸಲಾತಿಯನ್ನು ಪರಿಗಣಿಸಲಾಗುವುದಿಲ್ಲ. ಬುಡಕಟ್ಟು ಜನಾಂಗದವರು ಎಂದರೆ ಯಾರು? ಬುಡಕಟ್ಟು ಜನಾಂಗ ಎಂದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಅರಣ್ಯಗಳಲ್ಲಿನ ಸಿದ್ದಿಗರು, ಜೇನುಕುರುಬ, ಕಾಡುಕುರುಬ, ಯರವ, ಸೋಲಿಗ, ಕುಡಿಯ, ಗೌಡ್ಲು, ಹಸಲರು, ಮಲೆಕುಡಿಯ, ಕೊರಗರ ಸಮುದಾಯದವರು. ಪರೀಕ್ಷೆ ದಿನಾಂಕ ಅಂತಿಮಗೊಂಡಿಲ್ಲ ಈ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರ, ಪರೀಕ್ಷಾ ದಿನಾಂಕ ಹಾಗೂ ಪಠ್ಯಕ್ರಮ, ವಿಸ್ತೃತ ಅಧಿಸೂಚನೆಯ ಪರೀಶಿಲನೆಗಾಗಿ ಇಲಾಖೆಯ ://-./ ವೆಬ್‌ಸೈಟ್ ನೋಡಬೇಕು. ತಯಾರಿಗೆ ಟಿಪ್ಸ್ * ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆ ಪಡೆಯಲು ದೈಹಿಕ ಕ್ಷಮತೆ ಅತ್ಯಂತ ಮುಖ್ಯವಾಗಿರುವುದರಿಂದ ಅಭ್ಯರ್ಥಿಗಳು ದೈಹಿಕವಾಗಿ ಸದೃಡವಾಗಿರಲು ಸೂಕ್ತ ತಯಾರಿ ನಡೆಸಬೇಕು ಮತ್ತು ಈ ಬಗ್ಗೆ ಸದಾ ಗಮನವಿರಬೇಕು. ಪ್ರತಿದಿನ ಉತ್ತಮ ಆಹಾರ, ವ್ಯಾಯಾಮ ಅಗತ್ಯವಾದದ್ದು. * ಪಠ್ಯಕ್ರಮದ ಪ್ರಕಾರ ಅಧ್ಯಯನ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಿ * ಪಠ್ಯಕ್ರಮದ ಪ್ರಕಾರ ಓದಲು ಮುಂಚಿತವಾಗಿ ವೇಳಾಪಟ್ಟಿಯನ್ನು ತಯಾರಿಸಿಟ್ಟುಕೊಳ್ಳಿ * ಯಾವ ಪಠ್ಯದಿಂದ ಹೆಚ್ಚು ಪ್ರಶ್ನೆಗಳು ಬರಲಿವೆ ಎಂಬುದರ ಕುರಿತು ತಜ್ಞರ ಜೊತೆ, ಸಹಪಾಠಿಗಳ ಜೊತೆ ಚರ್ಚಿಸಿ * ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ ಪರೀಕ್ಷೆಗೆ ಸಂಬಂಧಿಸಿದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸಿ * ಕೋಚಿಂಗ್ ಸೆಂಟರ್‌ಗಳು ನಡೆಸುವ ಮಾದರಿ ಪರೀಕ್ಷೆಗಳಿಗೆ ಹಾಜರಾಗಿ * ಒಎಂಆರ್‌ ಪತ್ರಿಕೆ ತುಂಬಲು ಸೂಕ್ತ ತಯಾರಿ ಮಾಡಿಕೊಳ್ಳಿ, ಇದು ಪರೀಕ್ಷೆಯಲ್ಲಿ ಗೊಂದಲಗಳನ್ನು ತಪ್ಪಿಸುತ್ತದೆ. * ತಯಾರಿ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮ ಸ್ನೇಹಿತರು ಅಥವಾ ಪರಿಚಯಸ್ಥರಿಂದ ಸೂಕ್ತ ಮಾರ್ಗದರ್ಶನ ಪಡೆಯಬಹುದು. * ಇಲಾಖೆ ಸೇರಲು ಬೇಕಾದ ಮಾನಸಿಕ ಸಿದ್ಧತೆಯನ್ನು ಮಾಡಿಟ್ಟುಕೊಳ್ಳುವುದು * ಕಠಿಣ ಪರಿಶ್ರಮ, ತಾಳ್ಮೆ ಇರಲಿ. ಇವರೆಡರಿಂದ ಯಶಸ್ಸು ಕಟ್ಟಿಟ್ಟಬುತ್ತಿ –ಕಿಶೋರ್‌ ಕುಮಾರ್ ಎಸ್‌.ಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕರು, ಧಾರವಾಡ **** ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.