ಬ್ಯಾಂಕ್‌ಗಳಿಗೆ ಬೇಕಾಗಿದ್ದಾರೆ ಸ್ಪೆಷಲ್‌ ಆಫೀಸರ್ಸ್‌ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಅರ್ಜಿ ಆಹ್ವಾನ ಮತ್ತು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್‌) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸುತ್ತಾ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ತೊಡಗಿದೆ. ಈಗ ಅದೇ ಐಬಿಪಿಎಸ್‌ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳ ಆರು ವಿಭಾಗಗಳಲ್ಲಿ ಖಾಲಿಯಿರುವ 710 ವಿಶೇಷ ಅಧಿಕಾರಿಗಳ (ಸ್ಪೆಷಲ್ ಆಫೀಸರ್ಸ್‌) ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಯಾವ ಬ್ಯಾಂಕ್, ಯಾವ ವಿಭಾಗ, ಎಷ್ಟು ಹುದ್ದೆಗಳು– ಈ ಕುರಿತ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಕೆ ವಿವರ ಐಬಿಪಿಎಸ್‌ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ನವೆಂಬರ್ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನ.21 ಅರ್ಜಿ ಸಲ್ಲಿಸಲು ಕೊನೇ ದಿನ. ಅರ್ಜಿ ಸಲ್ಲಿಸುವ ಜೊತೆ ಶುಲ್ಕ ಪಾವತಿಸಬೇಕು.ಸಾಮಾನ್ಯ, ಒಬಿಸಿ ಹಾಗೂ ಇತರ ಅಭ್ಯರ್ಥಿಗಳಿಗೆ ₹850, ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ₹ 175 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ನೋಂದಣಿ ಮಾಡಿಕೊಂಡ ನಂತರ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ / ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ‌ವಯೋಮಿತಿ: ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳು. ಎಸ್‌.ಸಿ, ಎಸ್‌.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ಅಂಕವಿಕಲ ಅಭ್ಯರ್ಥಿಗಳಿಗೆ10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಇದೆ. ಪರೀಕ್ಷಾ ಪ್ರಕ್ರಿಯೆ ಎರಡು ಹಂತಗಳ ಲಿಖಿತ ಪರೀಕ್ಷೆ ಇದೆ. ‌ಆನ್‌ಲೈನ್ ಮೂಲಕ ಪರೀಕ್ಷೆ ನಡೆಯಲಿದೆ. ಡಿ.24 ಅಥವಾ 31ರಂದು ಪೂರ್ವಭಾವಿ ಪರೀಕ್ಷೆ, ಜ.29, 2023ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಮೂರನೇ ಹಂತವೇ ಸಂದರ್ಶನ. ಅದು 2023ರ ಫೆಬ್ರುವರಿ– ಮಾರ್ಚ್‌ ತಿಂಗಳಲ್ಲಿ ನಿಗದಿಯಾಗಿದೆ. ‍ಪರೀಕ್ಷಾ ಕೇಂದ್ರಗಳು: ಪೂರ್ವಭಾವಿ ಪರೀಕ್ಷೆಯು ಬೆಳಗಾವಿ, ಬೆಂಗಳೂರು, ಬೀದರ್, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ನಡೆಯಲಿದೆ.ಮುಖ್ಯ ಪರೀಕ್ಷೆಯು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಯುತ್ತದೆ. ನೇಮಕಾತಿ ವಿಧಾನ ಹೇಗೆ ? ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನುಶಾರ್ಟ್‌ ಲಿಸ್ಟ್ ಮಾಡಿ, ಮುಖ್ಯಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆ. ಎರಡೂ ಪರೀಕ್ಷೆಗಳಲ್ಲೂ ಋಣಾತ್ಮಕ ಮೌಲ್ಯಮಾಪನವಿದೆ. ಪರೀಕ್ಷೆಗಳು ಇಂಗ್ಲಿಷ್/ ಹಿಂದಿ ಭಾಷೆಯಲ್ಲಿರಲಿದೆ.ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ. ಶೈಕ್ಷಣಿಕ ಅರ್ಹತೆಗಳೇನು? ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ವಿವರ ಈ ಕೆಳಕಂಡಂತಿದೆ. 1. ಐಟಿ ಆಫೀಸರ್ ಹುದ್ದೆ: ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್/ ಇನ್ಫರ್ಮೇಷನ್‌ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್‌ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಅಥವಾ ಟೆಕ್ನಾಲಜಿ ಪದವಿ ಪಡೆದಿರಬೇಕು ಅಥವಾ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟುಮೆಂಟೇಶನ್/ಕಂಪ್ಯೂಟರ್ ಸೈನ್ಸ್/ ಇನ್ಫರ್ಮೇಶನ್ ಟೆಕ್ನಾಲಜಿ/ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 2. ಅಗ್ರಿಕಲ್ಚರ್‌ ಫೀಲ್ಡ್‌ ಆಫೀಸರ್: ಕೃಷಿ, ತೋಟಗಾರಿಕೆ /ಪಶುಸಂಗೋಪನೆ / ಪಶು ವಿಜ್ಞಾನ/ ಡೇರಿ ಸೈನ್ಸ್/ ಅಗ್ರಿ ಎಂಜಿನಿಯರಿಂಗ್/ ಮೀನುಗಾರಿಕೆ / ಮೀನು ಸಾಕಣೆ, ಅಗ್ರಿ ಮಾರ್ಕೆಟಿಂಗ್ ಆ್ಯಂಡ್ ಕೋ ಆಪರೇಷನ್/ ಕೋ ಆಪರೇಷನ್ ಆ್ಯಂಡ್ ಬ್ಯಾಂಕಿಂಗ್ / ಅಗ್ರೊ ಫಾರೆಸ್ಟ್ರಿಯಲ್ಲಿ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು. 3. ಲಾ ಆಫೀಸರ್: ಕಾನೂನು ಪದವಿ ಪಡೆದಿರಬೇಕು ಮತ್ತು ಬಾರ್ ಕೌನ್ಸಿಲ್‌ನ ಸದಸ್ಯತ್ವ ಪಡೆದಿರಬೇಕು. 4. ರಾಜ್‌ಭಾಷಾ ಅಧಿಕಾರಿ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು. 5. ಎಚ್ ಆರ್ / ಪರ್ಸನಲ್ ಆಫೀಸರ್ ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್‌ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್ ಎಚ್‌ಆರ್/ ಎಚ್‌ಆರ್‌ಡಿ/ ಸೋಷಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಮಾಡಿರಬೇಕು. 6. ಮಾರ್ಕೆಟಿಂಗ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್) ಎಂಬಿಎ (ಮಾರ್ಕೆಟಿಂಗ್)/ಪಿಜಿಡಿಬಿಎ ಮಾಡಿರಬೇಕು. ಅಧಿಸೂಚನೆಗಾಗಿ ://./3frUh70 ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ .. ಭೇಟಿ ನೀಡಬಹುದು. (ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು, ವೃತ್ತಿ ಮಾರ್ಗದರ್ಶಕರು, ಮಡಿಕೇರಿ) (ಮುಂದಿನವಾರ: ನೇಮಕಾತಿ ಪ್ರಕ್ರಿಯೆ, ಪರೀಕ್ಷಾ ಪಠ್ಯಕ್ರಮದ ವಿವರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.