ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಕಡೆ ಕಂಪನಿಗಳ ಚಿತ್ತ ನವದೆಹಲಿ: ಭಾರತದಲ್ಲಿರುವ ಕಂಪನಿಗಳು ಅಭಿವೃದ್ಧಿಯತ್ತ ಹೊರಳಿದ್ದು, ಮಾನವ ಸಂಪನ್ಮೂಲ ಹೆಚ್ಚಳದ ಉದ್ದೇಶದೊಂದಿಗೆ ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ಮ್ಯಾನ್‌ಪವರ್‌ಗ್ರೂಪ್ ಎಂಪ್ಯಾಯ್‌ಮೆಂಟ್‌ ಔಟ್‌ಲುಕ್ ಸಮೀಕ್ಷೆಯಲ್ಲಿ ಒಟ್ಟು 3,020 ಕಂಪನಿಯಿಂದ ಮಾಹಿತಿ ಪಡೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಈವರೆಗೂ ನೌಕರರನ್ನು ನೇಮಿಸಿಕೊಳ್ಳುವ ದರ ಶೇ 17ರಷ್ಟು ಕುಸಿದಿದೆ. ಆದರೆ ಈ ವರ್ಷ ಪ್ರತಿ ತ್ರೈಮಾಸಿಕ ದಾಖಲೆಗಳ ಪ್ರಕಾರ ನೇಮಕಾತಿ ಪ್ರಕ್ರಿಯೆ ಶೇ 1ರಷ್ಟು ಹೆಚ್ಚಳವಾಗಿದೆ. ವೃತ್ತಿಪರ ಅಭಿವೃದ್ಧಿಯ ದೃಷ್ಟಿಕೋನದಿಂದ ತರಬೇತಿ, ಕೌಶಲಾಭಿವೃದ್ಧಿ ಮತ್ತು ಮರುಕೌಶಲಾಭಿವೃದ್ಧಿಗೆ ಕಂಪನಿಗಳು ಹೆಚ್ಚು ಒತ್ತು ನೀಡುತ್ತಿವೆ. ಸಕಾರಾತ್ಮಕ ವೃತ್ತಿ ಸಂಸ್ಕೃತಿಯಿಂದಾಗಿ ತಮ್ಮಲ್ಲಿರುವ ನೌಕರರ ಸಂಖ್ಯೆಯನ್ನು ಹೆಚ್ಚಿಸುವ ಕಡೆ ಗಮನ ಕೇಂದ್ರೀಕರಿಸಿವೆ ಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ. ‘ಜಾಗತಿಕ ಮಟ್ಟದಲ್ಲಿ ರಾಜಕೀಯ ಹಾಗೂ ಆರ್ಥಿಕ ಅಸ್ಥಿರತೆಯ ನಡುವೆಯೂ ಕಂಪನಿಗಳ ಈ ಮನಸ್ಥಿತಿಯು ಸ್ಥಿರ ಆರ್ಥಿಕತೆಯ ಲಕ್ಷಣಗಳಾಗಿವೆ’ ಎಂದು ಮ್ಯಾನ್‌ಪವರ್‌ಗ್ರೂಪ್‌ನ ಭಾರತ ಹಾಗು ಮಧ್ಯಪ್ರಾಚ್ಯದ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಗುಲಾಟಿ ಹೇಳಿದ್ದಾರೆ. ‘ಹಬ್ಬದ ಋತುವಿನ ಆರಂಭದೊಂದಿಗೆ ಪ್ರಮುಖ ವಲಯಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳ ಪರಿಣಾಮವಾಗಿ ದೇಶದಾದ್ಯಂತ ನೇಮಕಾತಿ ಪ್ರಕ್ರಿಯೆಗಳು ಚುರುಕುಗೊಂಡಿವೆ. ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದಿದ್ದಾರೆ. ‘ಉತ್ತರ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆ ಶೇ 40ರಷ್ಟು ಇದ್ದರೆ, ಪಶ್ಚಿಮದಲ್ಲಿ ಶೇ 38ರಷ್ಟು, ದಕ್ಷಿಣದಲ್ಲಿ ಶೇ 36ರಷ್ಟು ಹಾಗೂ ಪೂರ್ವದಲ್ಲಿ ಶೇ 34ರಷ್ಟಿದೆ. ಮಾಹಿತಿ ತಂತ್ರಜ್ಞಾನ ಒಳಗೊಂಡಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಗರಿಷ್ಠ ಶೇ 44ರಷ್ಟು ನೇಮಕಾತಿ ಪ್ರಕ್ರಿಯೆ ಹೆಚ್ಚಳವಾಗಿದೆ. ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಗೆ ಹೋಲಿಸಿದಲ್ಲಿ ಇದು ಬೆಳವಣಿಗೆಯ ಹಾದಿಯಲ್ಲಿದೆ’ ಎಂದಿದ್ದಾರೆ. ಏಷ್ಯಾ ಪೆಸಿಫಿಕ್ ಪ್ರಾಂತ್ಯವನ್ನು ಗಮನಿಸಿದರೆ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆ ಶೇ 37ರಷ್ಟಿದೆ. ಸಿಂಗಪುರದಲ್ಲಿ ಶೇ 36ರಷ್ಟಿದ್ದು, ಈ ಎರಡು ಜಾಗತಿಕ ಮಟ್ಟದಲ್ಲೇ ಗರಿಷ್ಠ ಎನ್ನಲಾಗಿದೆ. ಜಪಾನ್‌ನಲ್ಲಿ ಅತ್ಯಂತ ಕಡಿಮೆ ಶೇ 11ರಷ್ಟು ದಾಖಲಾಗಿದೆ. ನೌಕರಿ ಬದಲಾವಣೆ ಬಯಸಿದ ಅನುಭವಿಗಳ ಪ್ರಮಾಣ ಶೇ 34ರಷ್ಟಿದೆ. ಮನೆ ನಿರ್ವಹಣೆಯಿಂದ ವೃತ್ತಿ ಬಿಟ್ಟು ಮತ್ತೆ ಕೆಲಸ ಹುಡುಕುತ್ತಿರುವವರ ಪ್ರಮಾಣ ಶೇ 27ರಷ್ಟಿದೆ. ದೀರ್ಘಕಾಲದವರೆಗೆ ನೌಕರಿಯಲ್ಲಿಲ್ಲದವರ ಪ್ರಮಾಣ ಶೇ 26ರಷ್ಟಿದೆ ಎಂದು ಇದೇ ವರದಿ ಹೇಳಿದೆ. ‘ಜಾಗತಿಕ ಮಟ್ಟದಲ್ಲಿ ವೃತ್ತಿ ಕುರಿತ ಅಭಿವ್ಯಕ್ತಿ ಬದಲಾಗಿದೆ. ತಮ್ಮ ಕೌಶಲಭರಿತ ಉದ್ಯೋಗಿಗಳ ಸಂಖ್ಯೆ ಹೆಚ್ಚಳದ ಜತೆಗೆ ಅವರ ಗುಣಮಟ್ಟಕ್ಕೂ ಕಂಪನಿಗಳು ಈಗ ಸಾಕಷ್ಟು ಹಣ ಹೂಡುತ್ತಿವೆ. ಆ ಮೂಲಕ ವೃತ್ತಿ ಸ್ಥಳದಲ್ಲಿನ ಆರೋಗ್ಯಕರ ವಾತಾವರಣ ಹೆಚ್ಚಳ ಕಂಪನಿಗಳ ಉದ್ದೇಶವಾಗಿದೆ’ ಎಂದು ಗುಲಾಟಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.