ಎಂಐಟಿಎಂನಿಂದ ಉದ್ಯೋಗ ಮೇಳ 12ಕ್ಕೆ ಮೈಸೂರು: ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳವಾಡಿಯ ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈಸೂರು(ಎಂಐಟಿಎಂ) ಆವರಣದಲ್ಲಿ ಆ.12ರಂದು ಬೆಳಿಗ್ಗೆ 9ರಿಂದ ಸಂಜೆ 5ವರೆಗೆ ‘ಉದ್ಯೋಗ ಮೇಳ’ ಆಯೋಜಿಸಲಾಗಿದೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎ‌.ಎಂ.ಅನಿರುದ್ಧ ಮಾತನಾಡಿ, ‘ಮೇಳವನ್ನು ಶಾಸಕ ರಮೇಶ್‌ ಬಾಬು ಬಂಡಿ ಸಿದ್ದೇಗೌಡ ಉದ್ಘಾಟಿಸಲಿದ್ದಾರೆ. ವಿವಿಧ ಹಿನ್ನೆಲೆಯ 110 ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, 9,400 ಉದ್ಯೋಗಗಳನ್ನು ನೀಡುವ ಗುರಿಯನ್ನು ಹೊಂದಿವೆ. ಎಸ್ಸೆಸ್ಸೆಲ್ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆಯ ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಕಂಪನಿಗಳಿಗೆ ಸ್ವವಿವರ ಮತ್ತು ಸಂದರ್ಶನ ನೀಡಬಹುದು’ ಎಂದರು. ‘ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಿಂದ ಅಭ್ಯರ್ಥಿಗಳ ಪ್ರಯಾಣಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಸ್ವವಿವರದೊಂದಿಗೆ ಸ್ಥಳದಲ್ಲಿಯೂ ನೋಂದಣಿಯಾಗಬಹುದು. ಮಾಹಿತಿಗೆ ಮೊ.ಸಂ. 94808 84443, 96202 28022 ಸಂಪರ್ಕಿಸಬಹುದು’ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಿ.ಜಿ.ನರೇಶ್ ಕುಮಾರ್, ಪ್ಲೇಸ್‌ಮೆಂಟ್‌ ಅಧಿಕಾರಿ ಎಸ್.ಡಿ.ಶಿವಸಾಗರ್, ಇನ್ಫಾರ್ಮೇಷನ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ವೈ.ಎಚ್.ಶರತ್ ಕುಮಾರ್ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.