ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ‘ಗೊಂದಲ ನಿವಾರಿಸಲು ವೃತ್ತಿ ಯೋಜನೆ ರೂಪಿಸಿ’ 1. ನಾನು ಬಿಕಾಂ ಮುಗಿಸಿದ್ದೇನೆ. ಮುಂದೆ ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ಉದ್ಯೋಗಕ್ಕೆಹೋಗುವುದೋ ಅಥವಾ ಮುಂದೆ ಓದುವುದೋ? ಪೈಥಾನ್, ಡೇಟಾ ಸೈನ್ಸ್, ಮಷಿನ್ ಲರ್ನಿಂಗ್ ಕೋರ್ಸ್‌ಗಳನ್ನು ಮಾಡುವುದು ಸೂಕ್ತವೇ? ಇದರಿಂದ ಕೆಲಸ ಸಿಗುವುದೇ? ಹೆಸರು, ಊರು ತಿಳಿಸಿಲ್ಲ. 2. ನಾನು ಎಂಬಿಎ ಪದವಿ ಮಾಡುತ್ತಿದ್ದೇನೆ ಹಾಗೂ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಮುಂದೆ ನಾನು ಕೆಲಸಕ್ಕೆ ಹೋಗುವುದೋ ಅಥವಾ ಪರೀಕ್ಷೆಗೆ ತಯಾರಿ ನಡೆಸುವುದೋ ಎಂಬ ಯೋಚನೆಯಲ್ಲಿ ಇದ್ದೇನೆ. ಮಾರ್ಗದರ್ಶನ ನೀಡಿ. ಅಪೂರ್ವ, ಬೆಂಗಳೂರು. 3. ನಾನು ಕನ್‌ಸ್ಟ್ರಕ್ಷನ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಟೆಕ್ ಮಾಡುತ್ತಿದ್ದೇನೆ. ಎಂಟೆಕ್ ಮುಗಿದ ಬಳಿಕ ನಾನು ಉದ್ಯೋಗಕ್ಕೆ ಸೇರುವುದೋ ಅಥವಾ ಸಂಶೋಧನೆಗೋ? ನನಗೆ ಪ್ರಾಧ್ಯಾಪಕ ವೃತ್ತಿ ಮಾಡುವ ಆಸೆಯೂ ಇದೆ. ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಹೆಸರು, ಊರು ತಿಳಿಸಿಲ್ಲ. ಖಚಿತವಾದ ವೃತ್ತಿಯೋಜನೆಯಿಲ್ಲದೆ ಕೋರ್ಸ್‌ಗಳನ್ನು ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು. ನೀವು ಪರಿಶೀಲಿಸುತ್ತಿರುವ ಎಲ್ಲಾ ಆಯ್ಕೆಗಳು ವೃತ್ತಿಯ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳ ದೃಷ್ಟಿಯಿಂದ ವಿಭಿನ್ನ. ಹಾಗಾಗಿ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯೋಜನೆಯನ್ನು ಮಾಡಿ ಅದರಂತೆ ವೃತ್ತಿಯ ಆಯ್ಕೆ ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೀಕ್ಷಿಸಿ: ://../?=MHnPg_sp6E0 4. ನಾನು 2021 ರಲ್ಲಿ ಬಿ.ಎ ಗೆ ಸೇರಿದ್ದೇನೆ. ನನಗೆ ಕೆಎಎಸ್ ಪರೀಕ್ಷೆ ಬರೆಯುವ ಹಂಬಲವಿದೆ. ಅದಕ್ಕೆ ಈಗಲೇ ತಯಾರಿ ನಡೆಸುವುದೋ ಅಥವಾ ಪದವಿ ಮುಗಿದ ಮೇಲೆ ತಯಾರಿ ಆರಂಭಿಸಿದರೆ ಉತ್ತಮವೋ ತಿಳಿಸಿ. ಹೆಸರು, ಊರು ತಿಳಿಸಿಲ್ಲ. ಒಬ್ಬ ದಕ್ಷ ಕೆಎಎಸ್ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಆಯ್ಕೆಯ ಪ್ರಕ್ರಿಯೆಯಲ್ಲಿ ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ. ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಆಸಕ್ತಿ ಮತ್ತು ಅಭಿರುಚಿಯ ಆಧಾರದ ಮೇಲೆ ಕೆಎಎಸ್ ವೃತ್ತಿ ನಿಮಗೆ ಸರಿಹೊಂದುವುದೇ ಎಂದು ಸ್ವಯಂ ವಿಮರ್ಶೆ ಮಾಡುವುದು ಒಳ್ಳೆಯದು. ಆ ನಂತರ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಕಠಿಣವಾದ ಆಯ್ಕೆ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ನೀವು ಎರಡನೇ ವರ್ಷದ ಪದವಿ ಕೋರ್ಸ್ ಮಾಡುವಾಗಲೇ ಕೆಎಎಸ್ ಪರೀಕ್ಷೆಗೆ ತಯಾರಿ ಶುರು ಮಾಡುವುದು ಸೂಕ್ತ. 5. ನಾನು ಎಂಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಇತ್ತೀಚೆಗೆ ಹೊರಡಿಸಿದ ಸಿವಿಲ್ ಕಾನ್‌ಸ್ಟೇಬಲ್‌ ಹುದ್ದೆಗೆ ಆಯ್ಕೆಯಾಗಿರುತ್ತೇನೆ. ಈ ಹುದ್ದೆಗೆ ಸೇರಿದರೆ ಮುಂದಿನ ವಿದ್ಯಾಭ್ಯಾಸ ಕಡಿತಗೊಳ್ಳುವ ಆತಂಕವಿದೆ, ಹುದ್ದೆಯಲ್ಲಿದ್ದು ಕ್ಕೊಂಡು ರೆಗ್ಯುಲರ್ ಪದವಿ ಪಡೆಯಲು ಅವಕಾಶವಿದೆಯೇ? ನವನೀತ, ಊರು ತಿಳಿಸಿಲ್ಲ. ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ರೆಗ್ಯುಲರ್ ಪದವಿಯನ್ನು ಮುಂದುವರಿಸಲು ಸಾಧ್ಯವಿಲ್ಲ. ಆದರೆ, ನೀವು ಈಗಾಗಲೇ ಎಂಎಸ್‌ಸಿ ಅಂತಿಮ ವರ್ಷದಲ್ಲಿರುವುದರಿಂದ ವೇತನರಹಿತ ರಜೆ ಸಾಧ್ಯವೇ ಅಥವಾ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಬಹುದೇ ಎಂದು ಪರಿಶೀಲಿಸಿ. 6. ನಾನು ರಾಜ್ಯ ಸರ್ಕಾರಿ ನೌಕರನಾಗಿದ್ದು ಕಾನ್‌ಸ್ಟೇಬಲ್‌ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ದೂರ ಶಿಕ್ಷಣದ ಮೂಲಕ ಬಿ.ಎ ಪದವಿಯನ್ನು ಪಡೆದಿದ್ದು, ಇಲಾಖೆಯಿಂದ ಎನ್‌ಓಸಿ(ನಿರಾಕ್ಷೇಪಣಾ ಪ್ರಮಾಣ ಪತ್ರ) ಪಡೆದಿರುವುದಿಲ್ಲ. ಇದರಿಂದಾಗಿ ಮುಂದೆ ಸರ್ಕಾರಿ ಉದ್ಯೋಗ ಪಡೆಯಲು ತೊಂದರೆಯಾಗುವುದೇ? ದಯಮಾಡಿ ತಿಳಿಸಿ. ಮಹೇಶ್ ಮೌರ್ಯ, ಬೆಂಗಳೂರು. ನೀವು ಈಗಲೂ ನಿಮ್ಮ ಮೇಲಧಿಕಾರಿಯವರೊಡನೆ ಸಮಾಲೋಚಿಸಿ, ಸರ್ಕಾರದಿಂದ ಘಟನೋತ್ತರ ಮಂಜೂರಾತಿಯನ್ನು ಪಡೆದುಕೊಳ್ಳಬಹುದು. 7. ಕೆಪಿಟಿಸಿಎಲ್ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡುವುದು, ಮನೆಯಲ್ಲೇ ಕುಳಿತುಕೊಂಡು ಓದುವುದೇ ಅಥವಾ ಕೋಚಿಂಗ್ ಕ್ಲಾಸ್ ಸೇರುವುದೇ? ಪರಿಹಾರ ತಿಳಿಸಿ. ಹೆಸರು, ಊರು ತಿಳಿಸಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ಸ್ವಂತ ಪರಿಶ್ರಮದಿಂದ ಐಎಎಸ್/ ಕೆಎಎಸ್ ನಂತಹ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಆದ್ದರಿಂದ, ಕೋಚಿಂಗ್ ಸೆಂಟರ್‌ಗಳನ್ನು ಸೇರುವುದು ಕಡ್ಡಾಯವಲ್ಲ. ಹಾಗಾಗಿ, ನೀವೇ ತಯಾರಾಗಬಹುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೆ ಎನ್ನುವುದು ನಿಮ್ಮ ನಿರ್ಧಾರ. 8. ಶಿಕ್ಷಕರಾಗಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆ? ಹೌದು, ಎಂದಾದರೆ ಏಕೆ ಬರೆಯಬೇಕು? ಹೆಸರು, ಊರು ತಿಳಿಸಿಲ್ಲ. ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಹಾಗಾಗಿ, ಶಿಕ್ಷಕರ ನೇಮಕಾತಿಗಾಗಿ ರಾಷ್ಟ್ರೀಯ ಮಾನದಂಡಗಳನ್ನು ಸ್ಥಾಪಿಸಲು ಮತ್ತು ಶಿಕ್ಷಕರ ಅರ್ಹತೆಯನ್ನು ಪರಿಶೀಲಿಸುವ ಸಲುವಾಗಿ ಸಿಇಟಿ ಮತ್ತು ಎಸ್‌ಸಿಇಟಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಲ್ಲಿ ಈ ಅರ್ಹತೆಗಳು ಇವೆಯೇ ಎಂದು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. 9. ನಾನು 2021 ರಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಮುಗಿಸಿದ್ದೇನೆ. ಈಗ ನಾನು ಗೇಟ್ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಯಾವುದಾದರೂ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಮಾಡುವಾಸೆ. ಐಐಟಿಯಲ್ಲಿ ಮಾಡಿದರೆ ಉತ್ತಮವೇ? ಕೆಲವರು ಅಲ್ಲಿ ಮಾಡುವುದು ಉಪಯೋಗವಿಲ್ಲ ಎನ್ನುತ್ತಿದ್ದಾರೆ. ನನಗೆ ಗೊಂದಲವಾಗುತ್ತಿದೆ. ಹೆಸರು, ಊರು ತಿಳಿಸಿಲ್ಲ. ಐಐಟಿ, ನಮ್ಮ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ, ಸ್ನಾತಕೋತ್ತರ ಪದವಿಯನ್ನು ಐಐಟಿಯಲ್ಲಿ ಮುಗಿಸಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಶುಭಹಾರೈಕೆಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.