ಶಿಕ್ಷಕರ ದಿನಾಚರಣೆ: ಹರಿಯಲಿ ಗುರುಕಾರುಣ್ಯದ ಗುಪ್ತಗಾಮಿನಿ... ಅದೊಂದು ಬೆಳಗ್ಗೆ ಪೋನ್ ರಿಂಗಾಯ್ತು. ಅತ್ತ ಕಡೆಯಿಂದ ‘ನಾನು ಸಾರ್ ನಿಮ್ಮ ಹಳೆಯ ಸ್ಟೂಡೆಂಟ್ ಪ್ರಿಯಾಂಕ. ಹ್ಯಾಪಿ ಟೀಚರ್ಸ್ ಡೇ ಸಾರ್. ನಿಮಗೆ ಶುಭಾಶಯ ಹೇಳೋದಕ್ಕಾಗಿ ಕರೆ ಮಾಡಿದೆ ಸಾರ್. ಹೇಗಿದ್ದೀರಾ?’ ಅಂದಿತು ದನಿ. ನನಗೆ ಆಕೆಯ ಗುರುತು ಸಿಕ್ಕಿತು. ‘ಧನ್ಯವಾದ ಕಣಮ್ಮ. ಮತ್ತೆ ಹೇಗಿದೆ ನಿನ್ನ ವೈದ್ಯಕೀಯ ಓದು? ಮೂರ‍್ನಾಲ್ಕು ವರ್ಷಗಳ ಹಿಂದೆ ನಿಮ್ಮ ಅಪ್ಪ ಸಿಕ್ಕಾಗ ಹೇಳಿದ್ರು ಮಗಳಿಗೆ ಮೆಡಿಕಲ್ ಸೀಟ್ ಸಿಕ್ಕಿದೆ ಅಂತ’ ಎಂದೆ. ‘ಹೌದು ಸರ್ ಮೆಡಿಕಲ್‌ಗೆ ಸೀಟ್ ಸಿಕ್ಕಿತ್ತು. ನಾನೇ ಹಠ ಹಿಡಿದು ಹೋಗಲಿಲ್ಲ. ಟೀಚರ್ ಆಗೋದು ನನ್ನ ಕನಸಾಗಿತ್ತು. ಅದಕ್ಕೆ ನೀವೇ ನನಗೆ ಪ್ರೇರಣೆ’ ಎಂದಳು. ನನಗೆ ಅತೀವ ಖುಷಿ ಆಯಿತು ಮತ್ತು ಅವಳ ಬಗ್ಗೆ ಹೆಮ್ಮೆಯೂ! ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಇಂಥದ್ದೇ ಮಾತನ್ನು ನಾನು ನಮ್ಮ ‍ಪ್ರೌಢಶಾಲೆಯ ಕನ್ನಡ ಮೇಷ್ಟ್ರ ಪ್ರಭಾವಕ್ಕೆ ಒಳಗಾಗಿ ‘ಸಾರ್ ನಾನೂ ನಿಮ್ಮ ಹಾಗೆ ಮೇಷ್ಟ್ರು ಆಗೋಕೆ ಏನು ಮಾಡ್ಬೇಕು?’ ಅಂತ ಕೇಳಿದ್ದೆ. ಅವರು ನನ್ನನ್ನು ಕೂರಿಸಿಕೊಂಡು ಸಾದ್ಯಂತವಾಗಿ ವಿವರಿಸಿದ್ದರು. ಓದು ಮುಗಿಸಿ ಶಾಲೆ ಬಿಟ್ಟು ಬರುವ ದಿನ ಅವರನ್ನು ಖಾಸಗಿಯಾಗಿ ಭೇಟಿ ಮಾಡಿ‌ ಒಂದು ಪ್ರಶ್ನೆ ಕೇಳಿದ್ದೆ ‘ನಿಮಗ್ಯಾಕೆ ಮೇಷ್ಟ್ರಾಗಬೇಕು ಅನಿಸಿತು ಸರ್?’ ಅಂತ. ಆಗ ಅವರು 'ಉಮಾಪತಿ ಅಂತ ಒಬ್ರು ಮೇಷ್ಟ್ರು ಇದ್ರು. ಅವರು ನನಗೆ ಸಿಗದೆ ಹೋಗಿದ್ದರೆ ನಾನಿವತ್ತು ಹೀಗೆ ಇರುತ್ತಿರಲಿಲ್ಲ. ಕಾಡುವ ಬಡತನದಲ್ಲಿದ್ದ ನನಗೆ ಬರೀ ವಿದ್ಯೆಯನ್ನಲ್ಲದೆ ಊಟವನ್ನೂ ಕೊಟ್ಟು ಪೊರೆದವರು. ನಾನು ಅಂದೇ ನಿರ್ಧರಿಸಿದ್ದೆ ನಾನು ಮೇಷ್ಟ್ರಾಗಲೇ ಬೇಕು ಅಂತ. ನನ್ನಂತಹ ಹಲವು ಬಡಮಕ್ಕಳಿಗೆ ನನ್ನಿಂದನೂ ಒಂದು ಸಹಾಯ ಆಗುವಂತಾಗಬೇಕು ಅಂತ’ ಎಂದು ಭಾವುಕರಾಗಿ ಹೇಳಿದ್ದರು. ನಾನು, ನನ್ನ ವಿದ್ಯಾರ್ಥಿನಿ, ನನ್ನ ಗುರುಗಳು ಮತ್ತು ಅವರ ಗುರುಗಳು ಈ ನಾಲ್ಕು ಜನ ಒಂದು ತಂತುವಿನಲ್ಲಿ ಬಂಧಿಸಿಕೊಂಡಿವೆಯೇನೊ ಎನಿಸತೊಡಗಿತು. ಪೀಳಿಗೆಯಿಂದ ಪೀಳಿಗೆಗೆ ನಾಡಿನ ಈ ದೇಹದೊಳಗೆ ಗುರು-ಕಾರುಣ್ಯವೂ ಗುಪ್ತಗಾಮಿನಿಯಂತೆ ಹರಿಯುತ್ತಾ ಸಮಾಜವನ್ನು ಅದೆಷ್ಟು ಆರೋಗ್ಯಪೂರ್ಣವಾಗಿಟ್ಟಿದೆ. ನಮಗೆ ಗೊತ್ತಿಲ್ಲದೆ ನಮ್ಮ ನಮ್ಮ ಗುರುವನ್ನು ನಮ್ಮಷ್ಟಕ್ಕೆ ನಾವು ಅರಸುತ್ತಾ ಹೋಗುತ್ತೇವೆ. ಅವರು ಸಿಗುತ್ತಾರೆ ಕೂಡ. ಏಕೆಂದರೆ ನಮ್ಮೊಳಗೊಮ್ಮೆ ಗುಪ್ತವಾಗಿ ಕೂತ ಗುರು ಇರುತ್ತಾನೆ. ಅವನು ಹೊರಗಿನ ಗುರುವಿನಲ್ಲಿ ತನ್ನದೇ ಲಕ್ಷಣ ಕಂಡ ತಕ್ಷಣ ಇವರು ತನ್ನವರೇ ಎನ್ನುವ ಸಲುಗೆ ಮೂಡಿ ಅವರನ್ನು ಗುರುವಾಗಿ ಸ್ವೀಕರಿಸುತ್ತಾನೆ. ಅವರಿಬ್ಬರ ನಡುವೆ ಕಲಿಕೆ ಮತ್ತು ಕಲಿಸುವಿಕೆ ಅರಳುತ್ತದೆ. ‌ಆ ಗುರು ಸಲುಗೆ ಕೊನೆಯವರೆಗೂ ಕೈಹಿಡಿದು ನಡೆಸುತ್ತದೆ. ಅವರವರ ಗುರುಗಳನ್ನು ಅವರವರೆ ಹುಡುಕಿಕೊಳ್ಳಬೇಕು. ಪ್ರತಿಯೊಬ್ಬ ಗುರುವೂ ಒಬ್ಬ ಒಳ್ಳೆಯ ಶಿಷ್ಯನಿಗಾಗಿ ಕಾಯುತ್ತಿರುತ್ತಾನೆ; ಪ್ರತಿಯೊಬ್ಬ ಶಿಷ್ಯನೂ ಒಳ್ಳೆಯ ಗುರುವಿಗಾಗಿ ಕಾಯುತ್ತಿರುತ್ತಾನೆ. ಅವರಿಬ್ಬರೂ ಸಂಧಿಸಿದ ದಿನ ಖಂಡಿತ ಅಲ್ಲೊಂದು ಅದ್ಬುತವಾದದ್ದು ನಡೆಯುತ್ತದೆ. ಅದೇ ಭುವನದ ಭಾಗ್ಯ. ನಾನು ಎಷ್ಟೊ ಪ್ರಶ್ನೆಗಳಿಗೆ ಮೇಷ್ಟ್ರು ಬಳಿ ಕೇಳುವಂತೆ ಗೂಗಲ್‌ನಲ್ಲಿ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರ ಪಡೆದಿದ್ದೇನೆ. ಹಲ್ವ ಮಾಡುವುದು ಹೇಗೆಂದು ಹುಡುಕಿ, ರುಚಿಯಾದ ಹಲ್ವ ಮಾಡಿದ್ದೀನಿ. ನಾನು ಮನೆಯ ವಿಳಾಸ ಹುಡುಕುತ್ತಿರುವಾಗ ಎಷ್ಟೊ ಜನರು ಆ ಮನೆಗೆ ದಾರಿ ತೋರಿ ಸಹಕರಿಸಿದ್ದಾರೆ. ನನ್ನ ರೂಮಿನ ತುಂಬಾ ಪುಸ್ತಕಗಳು ತುಂಬಿಕೊಂಡಿವೆ. ಅದರಿಂದ ತುಂಬಾ ಕಲಿತಿದ್ದೇನೆ. ಟಿ.ವಿ ನೋಡುತ್ತಾ ದೊಡ್ಡ ದೊಡ್ಡ ಹಾಡುಗಳು ಈಗ ನನಗೆ ಬಾಯಿಪಾಠವಾಗಿವೆ. ಹೀಗೆ ಬಗೆ ಬಗೆಯ ವಿಚಾರವನ್ನು ಕಲಿಸಿದ್ದೆಲ್ಲವನ್ನು ‘ಗುರು’ ಎಂದು ಕೊಳ್ಳಬಹುದೇ? ಬಹುಶಃ ಅಲ್ಲ ಅನಿಸುತ್ತೆ. ನಮಗೆ ಕಲಿಸುತ್ತಾ, ಇಡೀ ಬದುಕನ್ನೂ ಪ್ರಭಾವಿಸಿ, ಸನ್ಮಾರ್ಗದಲ್ಲಿ ಕರೆದೊಯ್ಯುವವರು ಗುರು. ಎಲ್ಲರಿಗೂ ಒಬ್ಬ ಅಂಥ ಗುರುವಿನ ಅವಶ್ಯಕತೆ ಇದೆ. ಇಷ್ಟು ವರ್ಷದ ಶಾಲಾ ದಿನಗಳಲ್ಲಿ ನನಗೆ ಎಲ್ಲಾ ಶಿಕ್ಷಕರ ನೆನಪಿಲ್ಲ. ಕೆಲವು ಶಿಕ್ಷಕರ ನೆನಪಂತೂ ಹೋಗುವುದೇ ಇಲ್ಲ. ಅದೇ ಗುರು ಮಹಿಮೆ. ನನಗೆ ಹೈಸ್ಕೂಲ್‌ನಲ್ಲಿ ಮಲ್ಲೇಶಪ್ಪ ಎಂಬ ಶಿಕ್ಷಕರಿದ್ದರು. ಅವರೇ ಮುಖ್ಯ ಶಿಕ್ಷಕರು. ಅವರ ಬಂದ ಮೇಲೆ ಸ್ಕೂಲ್‌ಗೆ ಒಂದು ಕಳೆ ಬಂದ ಹಾಗೆ ಆಯ್ತು. ಇಡೀ ಶಾಲೆ ಒಂದು ಶಿಸ್ತಿಗೆ ಒಗ್ಗಿಕೊಂಡಿತು. ಭಿನ್ನ ಭಿನ್ನವಾದ ಹೊಸ ಕಾರ್ಯಕ್ರಮಗಳನ್ನು ರೂಪಿಸಿದರು. ನಾವೆಲ್ಲಾ ಆಗ ಶಾಲೆಗೆ ಹೋಗಲು ಸಂಭ್ರಮಪಡುತ್ತಿದ್ದವು. ಇಡೀ ಊರಿಗೆ, ತಾಲ್ಲೂಕಿಗೆ ಅವರ ಕಾರ್ಯದ ಸೊಬಗು ಹರಡಿತು. ಶಾಲೆಯ ಫಲಿತಾಂಶವೂ ಹೆಚ್ಚಾಯಿತು. ಮೊನ್ನೆಯಷ್ಟೆ ‘ಯಾವ ನಾಡೂ ಕೂಡ ಅಲ್ಲಿನ ಶಿಕ್ಷಕರನ್ನು ಮೀರಿ ಬೆಳೆಯಲು ಸಾಧ್ಯವೆ ಇಲ್ಲ’ ಎಂಬ ಸಾಲನ್ನು ಓದಿಕೊಳ್ಳುವಾಗ ಮಲ್ಲೇಶಪ್ಪ ಮೇಷ್ಟ್ರು ನೆನಪಾದರು. ಒಬ್ಬ ಒಳ್ಳೆಯ ಶಿಕ್ಷಕ ಶಾಲೆಯನ್ನು ಬದಲಾಯಿಸಿದಂತೆ, ಎಲ್ಲಾ ಒಳ್ಳೆಯ ಶಿಕ್ಷಕರು ಇಡೀ ಸಮಾಜವನ್ನು, ಹೇಗೆ ಬದಲಾಯಿಸಬಲ್ಲರು, ಪ್ರಭಾವಿಸಬಲ್ಲರು ಎಂದು ಯೋಚಿಸುವಂತಾಯಿತು. ಇಂದಿಗೂ ನಾನು ಬೋಧನೆಯಲ್ಲಿ ಏನಾದರೂ ಸಮಸ್ಯೆ ಎದುರಿಸಿ ದರೆ ಅವರಿಗೊಂದು ಕರೆ ಮಾಡುತ್ತೇನೆ. ಅದಕ್ಕೊಂದು ಚೆಂದದ ಪರಿಹಾರವನ್ನು ಸೂಚಿಸುತ್ತಾರೆ. ಒಬ್ಬ ಒಳ್ಳೆಯ ಗುರು ಹೇಗೆ ಬರೀ ಒಳ್ಳೆಯದನ್ನೇ ಬಿತ್ತುತ್ತಾ ಹೋಗುತ್ತಾರೆ ಎನ್ನುವುದಕ್ಕೆ ಇಂತಹ ಗುರುಗಳು ಯಾವತ್ತೂ ಒಂದು ಉದಾಹರಣೆಯಾಗುತ್ತಾರೆ. ಈಗೀಗ ನನ್ನ ವಿದ್ಯಾರ್ಥಿಗಳು ಕೆಲವೊಮ್ಮೆ ನನ್ನ ಮಾತನ್ನೇ ಕೇಳುವುದಿಲ್ಲ. ಅವರನ್ನು ಆ ರೀತಿ ಪ್ರಭಾವಿಸಿದ್ದು ಏನಿರಬಹುದೆಂದು ಚಿಂತಿಸುವಂತಾಗುತ್ತದೆ. ಉತ್ತಮ ಗುರು ಪರಂಪರೆಯ ತಂತುವನ್ನು ಈ ಕಾಲ ಕಿತ್ತು ಹಾಕಿತಾ? ಎಂದು ಯೋಚಿಸುವಂತಾಗುತ್ತದೆ. ಈ ದೇಶದ ಪರಂಪರೆಯಲ್ಲಿ ಗುರುವಿಗೆ ದೇವರ ಸ್ಥಾನವಿದೆ. ಅದ್ಭುತ ಗುರು ಪರಂಪರೆಯೂ ಇದೆ. ಅದು ಉಳಿಯಬೇಕು. ಕಲಿಸುವವನಿಲ್ಲದೆ ಕಲಿಕೆ ಇಲ್ಲ. ಗುರುವಿಲ್ಲದ ಶಿಕ್ಷಣವಿಲ್ಲ. ತಂದೆ ತಾಯಿಯ ಬಳಿಕ ಕಲಿಸಿದವರೇ ಇಲ್ಲಿ ಪೂಜ್ಯ. ಎಲ್ಲರೂ ಗುರು ಮುಖೇನವೇ ಸಮಾಜದ ಅಂಗಳಕ್ಕೆ ಕಾಲಿಡಬೇಕು. ಕಾಲಿಟ್ಟ ಮೇಲೆ ಜೀವನ ಪೂರ್ತಿ ಅಂತಹ ಗುರುವಿಗೆ ಕೃತಜ್ಞರಾಗಿರಬೇಕು. ಇಂದು ಅಂಥ ಶಿಕ್ಷಕರನ್ನು ನೆನೆವ ದಿನ. ಅಂತಹ ಶಿಕ್ಷಕರು ಹೆಚ್ಚಾದಷ್ಟು ಇಡೀ ಸಮಾಜ ನೆಮ್ಮದಿಯಲ್ಲಿರುತ್ತದೆ. ಉತ್ತಮ ಗುರು ಪರಂಪರೆ ಉಳಿದಷ್ಟು ನಾಡು ಸಂಭ್ರಮಿಸುತ್ತದೆ. ಆಗ ಶಿಕ್ಷಕರ ದಿನಾಚರಣೆಗೂ ಒಂದು ಅರ್ಥ ಬರುತ್ತದೆ. ದಾರಿ ತಪ್ಪಿದ ನಮ್ಮ ಈ ದಿನಗಳಿಗೆ, ಇಲ್ಲಿ ಯಾವುದೂ ಸರಿಯಿಲ್ಲ ಎಂಬ ಗೊಣಗಾಟಕ್ಕೆ ವಿದ್ಯೆಯೊಂದೇ ಔಷಧಿ. ಅದನ್ನು ದಯಪಾಲಿಸುವ ಗುರುವೇ ಚಿಕಿತ್ಸಕ. ಅವನೊಂದೇ ಎಲ್ಲದಕ್ಕೂ ಪರಿಹಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.