ಗುಂಪು ಚರ್ಚೆಯ ಗಮ್ಮತ್ತು ಓದಿದ್ದಕ್ಕಿಂತ ಕೇಳಿದ್ದು, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೇಳಿಸಿಕೊಂಡಿದ್ದು ದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ. ಈ ವಿಧಾನದ ಕಲಿಕೆಗೆ ಗುಂಪು ಚರ್ಚೆ (ಗ್ರೂಪ್ ಸ್ಟಡಿ) ಸಹಕಾರಿ. ಗುಂಪು ಚರ್ಚೆ ಅಥವಾ ಜೊತೆಯಾಗಿ ಮಾಡುವ ಅಧ್ಯಯನಗಳು (ಗ್ರೂಪ್‌ ಸ್ಟಡಿ) ಗಮ್ಮತ್ತಿನಲ್ಲಿ (ಸ್ವಾರಸ್ಯ) ಕಲಿಕೆಯನ್ನು ಮುಂದುವರಿಸಲು ಸಹಾಯಕವಾಗುತ್ತವೆ. ಆದರೆ ಅದನ್ನು ನಿರ್ವಹಿಸುವ ವಿಧಾನ ತಿಳಿದುಕೊಂಡರೆ ಶಾಲಾ, ಕಾಲೇಜು, ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಗುಂಪು ಚರ್ಚೆಯಲ್ಲಿ 3 ರಿಂದ 6 ವಿದ್ಯಾರ್ಥಿಗಳಿರಲಿ. ದೊಡ್ಡ ಗುಂಪಾಗಿ 30 ರಿಂದ 40 ಮಂದಿ ಸೇರಿಕೊಂಡರೆ ಕಲಿಕೆ ಪರಿಣಾಮಕಾರಿಯಾಗುವುದಿಲ್ಲ. ಈ ವಿಧಾನದ ಚರ್ಚೆಯಲ್ಲಿ ಕೆಲವು ಹುಡುಗರೂ, ಕೆಲವು ಹುಡುಗಿಯರೂ ಇರುವುದು ಕಲಿಕಾ ಗಾಂಭೀರ್ಯದ ದೃಷ್ಟಿಯಿಂದ ಸಹಾಯಕ. ಕೇವಲ ಹುಡುಗರು ಅಥವಾ ಹುಡುಗಿಯರಷ್ಟೇ ಇದ್ದರೆ ಚರ್ಚೆ ಪಠ್ಯ ವಿಷಯದ ಆಚೆಗೆ ಹೋಗುವ ಅವಕಾಶ ಹೆಚ್ಚು. ಕೇವಲ ಹುಡುಗರು, ಕೇವಲ ಹುಡುಗಿಯರು ಇದ್ದಾಗಲೂ ಕಲಿಕೆಯನ್ನೇ ಕೇಂದ್ರೀಕರಿಸುತ್ತೇವೆ ಎನ್ನುವ ಆತ್ಮವಿಶ್ವಾಸವಿದ್ದರೆ ಆಗ ಹಾಗೆ ಗುಂಪು ಚರ್ಚೆಯನ್ನು ಮಾಡಬಹುದು. ಗುಂಪನ್ನು ನಿರ್ವಹಿಸಲು ವಾರಕ್ಕೊಬ್ಬ ನಾಯಕ/ನಾಯಕಿ ಮಾಡಿಕೊಳ್ಳಬೇಕು. ಎಲ್ಲ ಸದಸ್ಯರಿಗೂ ನಾಯಕತ್ವ ಸಿಗುವ ಹಾಗೆ ಆಗಬೇಕು. ಗುಂಪು ಚರ್ಚೆ ವಿಧಾನಗಳು ಹಲವಾರು ವಿಧಾನಗಳಲ್ಲಿ ಗುಂಪು ಚರ್ಚೆ ಮಾಡಬಹುದು. ವಿಧಾನವು ಅಧ್ಯಯನದ ಉದ್ದೇಶ ವನ್ನು ಅವಲಂಬಿಸಿರುತ್ತದೆ. ನಿಜವಾಗಿ ಕಲಿಕೆಯ ಸಾರ್ಥಕತೆ ಕಲಿಕಾ ದೃಢೀಕರಣದಲ್ಲಿರುತ್ತದೆ. ಒಮ್ಮೆ ಕಲಿತ ಕೂಡಲೇ ಕಲಿಕೆ ಯಶಸ್ವಿಯಾಯಿತೆಂದು ಅರ್ಥವಲ್ಲ. ಕಲಿತದ್ದು ಮನಸ್ಸಿನಲ್ಲಿ ಉಳಿಯಬೇಕು. ಅದಾಗಬೇಕಾದರೆ ಕಲಿತದ್ದನ್ನು ಹಲವು ಬಾರಿ ಪುನರಾವರ್ತನೆ ಮಾಡಿ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ಈ ಅಂಶವನ್ನೂ ಗಮನದಲ್ಲಿರಿಸಿಕೊಂಡು ಸೂಚಿಸಬಹುದಾದ ಗುಂಪು ಚರ್ಚೆಯ ಕೆಲವು ವಿಧಾನಗಳು ಹೀಗಿವೆ. 1. ಪಠ್ಯ ವಿವರಣೆ ನಾಲ್ಕು ವಿದ್ಯಾರ್ಥಿಗಳ ಒಂದು ಗುಂಪು, ನಾಲ್ಕು ಪುಟಗಳ ಪಾಠವಿದೆ ಎಂದಾದರೆ, ಒಬ್ಬೊಬ್ಬ ವಿದ್ಯಾರ್ಥಿ ಪಾಠದ ಒಂದೊಂದು ಪುಟವನ್ನು ತೆಗೆದುಕೊಂಡು ಅಧ್ಯಯನ ಮಾಡಬೇಕು. ಮರುದಿನ ಗುಂಪು ಅಧ್ಯಯನಕ್ಕೆ ಸೇರಿದಾಗ ಪ್ರತಿಯೊಬ್ಬರೂ ತನ್ನ ಪುಟದ ವಿಷಯವನ್ನು ಇತರರಿಗೆ ವಿವರಿಸಬೇಕು. ಇತರರು ತಮಗೆ ಅರ್ಥವಾಗದ ವಿಷಯಗಳನ್ನು ಕೇಳಬೇಕು. ವಿವರಣೆ ಕೊಟ್ಟವರು ಆ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಿಂದ ಓದುವ ಕೆಲಸ ಕಡಿಮೆ ಯಾಗುತ್ತದೆ ಮತ್ತು ಓದಿದ್ದಕ್ಕಿಂತ ಕೇಳಿದ್ದು ಹೆಚ್ಚು ಚೆನ್ನಾಗಿ ನೆನಪುಳಿಯುತ್ತದೆ. ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೆಚ್ಚು ಓದಬೇಕಾದ ಅಗತ್ಯವಿರುವ ಕಾಲೇಜು ವಿದ್ಯಾರ್ಥಿಗಳಿಗೆ ಈ ವಿಧಾನವು ಹೆಚ್ಚು ಸಹಾಯಕವಾಗಿದೆ. 2. ಪ್ರಶ್ನೋತ್ತರಗಳು ಗುಂಪಿನ ಎಲ್ಲ ಸದಸ್ಯರು ತಾವು ಅಭ್ಯಾಸ ಮಾಡಲಿರುವ ಪಠ್ಯ ಭಾಗವನ್ನು ನಿರ್ಧರಿಸಬೇಕು. ನಂತರ ಆ ಪಾಠದಲ್ಲಿ ಬರಬಹುದಾದ ಪ್ರಶ್ನೆಗಳನ್ನು ರಚಿಸಿಕೊಳ್ಳಬೇಕು. ಆ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಂಡಿರಬೇಕು. ನಂತರ ಗುಂಪಿನ ಮೊದಲನೆಯ ಸದಸ್ಯ/ಸ್ಯೆ ಪ್ರಶ್ನೆಯನ್ನು ಕೇಳಬೇಕು. ಅದಕ್ಕೆ ಎರಡನೆಯ ಸದಸ್ಯ/ಸ್ಯೆ ಉತ್ತರಿಸಬೇಕು. ಉತ್ತರಿಸಿದ ಸದಸ್ಯರಿಗೆ 5 ಅಂಕ ಎಂದು ನಿರ್ಧರಿಸಬೇಕು. ಉತ್ತರಿಸದೆ ಇದ್ದರೆ ನಂತರದ ಸದಸ್ಯ/ಸ್ಯೆಗೆ ಪ್ರಶ್ನೆ ವರ್ಗಾವಣೆಯಾಗುತ್ತದೆ. ಅವರೂ ಉತ್ತರಿಸದಿದ್ದರೆ ಪ್ರಶ್ನೆ ಮೂರನೆಯ ಸದಸ್ಯ/ಸ್ಯೆಗೆ ವರ್ಗಾವಣೆಯಾಗುತ್ತದೆ. ಯಾರೂ ಉತ್ತರಿಸದೆ ಇದ್ದರೆ ಪ್ರಶ್ನೆ ಕೇಳಿದವರೇ ಉತ್ತರಿಸಬೇಕು. 5 ಅಂಕ ಅವರದಾಗುತ್ತದೆ. ನಂತರ ಎರಡನೆಯ ಸದಸ್ಯ/ಸ್ಯೆ ಪ್ರಶ್ನೆ ಕೇಳಬೇಕು. ಇದು ಪರೀಕ್ಷೆಯಲ್ಲಿ ಯಾವ ಪ್ರಶ್ನೆ ಹೇಗೆ ಕೇಳಿದರೆ ಹೇಗೆ ಉತ್ತರಿಸಬೇಕು ಎಂದು ಅರಿಯಲು, ತನ್ನ ಅಧ್ಯಯನ ಎಷ್ಟು ಸಮರ್ಥವಾಗಿದೆ ಎಂದು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ದೋಷವಿರುವುದನ್ನು ಹೆಚ್ಚು ಅಧ್ಯಯನ ಮಾಡಲು, ಕಲಿಕಾ ದೃಢೀಕರಣ ಮಾಡಿಕೊಳ್ಳಲು ಸಹಾಯಕ. 3. ಸರಣಿ ಪ್ರಶ್ನೆಗಳು ಮೇಲೆ ಪಠ್ಯ ವಿವರಣೆಯಲ್ಲಿ ಹೇಳಿದ್ದಂತೆ ಗುಂಪು ರಚಿಸಿಕೊಂಡು, ಪಾಠವನ್ನು ಹಂಚಿಕೊಳ್ಳಬೇಕು. ಚರ್ಚೆಗೆ ಮೊದಲು ಎಲ್ಲರೂ ನಾಲ್ಕು ಪುಟಗಳನ್ನು‌ ಓದಿಕೊಂಡಿರಬೇಕು. ಹಂಚಿಕೆಯಾಗಿರುವ ಪುಟದಿಂದ ಒಂದು ವಾಕ್ಯದ ಉತ್ತರದ ಪ್ರಶ್ನೆಯನ್ನು ಮಾತ್ರ ತೆಗೆಯಬೇಕು ಅಥವಾ ಯೋಚಿಸಿರಬೇಕು. ಈ ಪ್ರಶ್ನೆಗಳು ಆ ಪುಟದಲ್ಲಿನ ಎಲ್ಲ ವಿಷಯಗಳೂ ಒಂದಕ್ಕೊಂದು ಪೋಣಿಸಲ್ಪಟ್ಟ ಹಾಗೆ ಇರಬೇಕು. ಪ್ರಶ್ನೆ ಕೇಳಿದಾಗ ಎರಡನೇ ಸದಸ್ಯ/ ಸದಸ್ಯೆ ಉತ್ತರಿಸಬೇಕು. ಉತ್ತರಿಸಿದರೆ ಅವರಿಗೆ ಒಂದು ಅಂಕ. ಉತ್ತರಿಸದಿದ್ದರೆ ನಂತರದವರಿಗೆ ವರ್ಗಾ ವಣೆ. ಯಾರೂ ಉತ್ತರಿಸದಿದ್ದರೆ ಪ್ರಶ್ನೆ ಕೇಳಿದವರೇ ಉತ್ತರಿಸಬೇಕು. ಆದರೆ ಉತ್ತರಿಸುವಾಗ ಇಲ್ಲಿ ಪುಸ್ತಕವನ್ನು ತೆರೆದಿಟ್ಟುಕೊಳ್ಳಬಹುದು. ಉತ್ತರಿಸಲು ಸಮಯಾವಕಾಶ ಕೊಡುವಂತಿಲ್ಲ. ಪ್ರಶ್ನೆ ಕೇಳಿದ ಕೂಡಲೇ ಉತ್ತರ ಹೇಳಬೇಕು. ಈ ವಿಧಾನವು ಇಡೀ ಪಾಠವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡು ನೆನಪಿಟ್ಟುಕೊಳ್ಳಲು ಸಹಾಯಕ. 4. ಕ್ಲಿಷ್ಟ ಪರಿಕಲ್ಪನೆಗಳ ಗುಂಪು ಅಧ್ಯಯನ ಪಾಠದಲ್ಲಿರುವ ಕ್ಲಿಷ್ಟ ಪರಿಕಲ್ಪನೆಗಳನ್ನು ಗುರುತು ಹಾಕಿಕೊಳ್ಳಬೇಕು. ಈ ಪರಿಕಲ್ಪನೆಗಳನ್ನು ವಿವರಿಸಬಲ್ಲ ಗುಂಪಿನ ಸದಸ್ಯರು, ಇವುಗಳನ್ನು ಹಂಚಿಕೆ ಮಾಡಿಕೊಳ್ಳಬೇಕು. ಚರ್ಚೆಗೆ ಸೇರಿದಾಗ ತಮ್ಮ ತಮ್ಮ ಪರಿಕಲ್ಪನೆಗಳನ್ನು ಉಳಿದವರಿಗೆ ವಿವರಿಸಬೇಕು. ಅದರ ಬಗ್ಗೆ ಸಂಶಯ ಉಳ್ಳವರು ಕೇಳಿ ಪರಿಹರಿಸಿಕೊಳ್ಳಬೇಕು. ಈ ವಿಧಾನದಲ್ಲಿ ಅನಗತ್ಯವಾಗಿ ಪೋಲಾಗುವ ಸಮಯ, ಶ್ರಮ ಎರಡೂ ಉಳಿಯುತ್ತದೆ. ಹೆಚ್ಚು ಪರಿಕಲ್ಪನೆಗಳನ್ನು ಅಧ್ಯಯನ ಮಾಡಬೇಕಾದ ಕಾಲೇಜು ವಿದ್ಯಾರ್ಥಿಗಳಿಗೆ ಇದು ಅನುಕೂಲ. 5. ಉತ್ತರ ಅಭ್ಯಾಸ ಈ ವಿಧಾನದಲ್ಲಿ ಗುಂಪಿನ ಸದಸ್ಯರು ಇಬ್ಬಿಬ್ಬರಾಗಿ ವಿಂಗಡಣೆ ಆಗಬೇಕು. ಇದರಲ್ಲಿ ಉತ್ತರದ ಅಭ್ಯಾಸ ಮಾತ್ರ ನಡೆಯುತ್ತದೆ.‌ ಗುಂಪು ಸೇರುವ ಮೊದಲು ಉತ್ತರಗಳನ್ನು ಕಲಿತು ಬಂದಿರಬೇಕು. ಉತ್ತರ ಕೊಡುವರು ಪುಸ್ತಕವನ್ನು ಮುಚ್ಚಿರಬೇಕು. ಒಬ್ಬರು ಪ್ರಶ್ನೆ ಕೇಳುವುದು, ಮತ್ತೊಬ್ಬರು ಉತ್ತರಿಸುವುದು, ಇದು ಮುಗಿದ ಮೇಲೆ ಉತ್ತರಿಸಿದವರು ಪ್ರಶ್ನೆ ಕೇಳುವುದು, ಪ್ರಶ್ನಿಸಿದವರು ಉತ್ತರ ಹೇಳುವುದು ನಡೆಯಬೇಕು. ಉತ್ತರ ಗೊತ್ತಿಲ್ಲದಿದ್ದರೆ ಪ್ರಶ್ನೆ ಕೇಳಿದವರೇ ಉತ್ತರ ಹೇಳಿ ಉತ್ತರಿಸುವ ವರಿಗೆ ಮನದಟ್ಟು ಮಾಡಬೇಕು. ಕೇವಲ ಪರೀಕ್ಷೆಗಾಗಿ ಈ ವಿಧಾನ ಬಹಳ ಪರಿಣಾಮಕಾರಿಯಾಗಿರುತ್ತದೆ. ಒಟ್ಟಾರೆ ಓದಿದ್ದಕ್ಕಿಂತ ಕೇಳಿದ್ದು, ತಾವೇ ತೊಡಗಿಕೊಂಡು ಕೇಳಿಸಿಕೊಂಡದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಗುಂಪು ಚರ್ಚೆಗಳು ಅಧ್ಯಯನಕ್ಕೆ ಸಹಾಯಕವಾಗಿವೆ. 6. ಮುಕ್ತ ಚರ್ಚೆ ಇದರಲ್ಲಿ ಗುಂಪು ಸೇರಿದಾಗ ಪಠ್ಯ ವಸ್ತು ಮತ್ತು ಪಠ್ಯಕ್ಕೆ ಸಂಬಂಧಿಸಿದ ಮತ್ತು ಸಂಬಂಧಿಸದ ಅಧ್ಯಯನ ಯೋಗ್ಯವಾದ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಬಹುದು. ಒಂದು ವಿಷಯಕ್ಕೆ ಹಲವು ದೃಷ್ಟಿಕೋನಗಳಿಂದ ಪ್ರತಿಯೊಬ್ಬರೂ ಉತ್ತರಿಸಬೇಕು. ಇದು ಕಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು, ಬಹುಮುಖಿ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ಕಲಿಕಾ ದಕ್ಷತೆಯನ್ನು ಕಾಪಾಡಿಕೊಳ್ಳಲು ಅನುಕೂಲ. ಪದವಿ, ಸ್ನಾತಕೋತ್ತರ ಪದವಿ, ಐ.ಎ.‌ಎಸ್, ಕೆ.ಎ.‌ಎಸ್. ವಿದ್ಯಾರ್ಥಿಗಳಿಗೆಲ್ಲ ಈ ವಿಧಾನದ ಚರ್ಚೆಯು ಬಹಳ ಉಪಯುಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.