ಪದವಿ ಜೊತೆ ‘ಎಸ್‌ಎಸ್‌ಸಿ’ಗೆ ತಯಾರಿ ಹೇಗೆ? 1. ನಾನು ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವಿಯ ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಎಸ್‌ಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಕಡಿಮೆ ಸಮಯದಲ್ಲಿ ಸಿದ್ಧತೆ ಹೇಗಿರಬೇಕು ಎಂದು ತಿಳಿಸಿ. ಜೊತೆಗೆ, ಸ್ನಾತಕೋತ್ತರ ಪದವಿಯನ್ನು ಯಾವ ವಿಷಯದಲ್ಲಿ ಪಡೆದರೆ ಸರ್ಕಾರಿ ಕೆಲಸ ಪಡೆಯಲು ಹೆಚ್ಚಿನ ಅವಕಾಶಗಳಿವೆ? ಸಿದ್ದಾರ್ಥ ಎಸ್. ಹನೂರು. ಪರೀಕ್ಷೆಯ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಈ ಸಲಹೆಗಳ ಅನುಸಾರ ಸಿದ್ಧತೆಯಿರಲಿ: * ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. * ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆ ಅತ್ಯಗತ್ಯ. * ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಪರೀಕ್ಷೆಗೆ ತಯಾರಿ ನಡೆಸುವ ಕುರಿತ ದೊರೆಯುವ ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ. * ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಬರವಣಿಗೆ ಇರಬೇಕು. * ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ. * ನಿಮಗಿಷ್ಟವಿರುವ ಮತ್ತು ವೃತ್ತಿಯ ನಿರ್ವಹಣೆಗೆ ಅನುಕೂಲವಾಗುವಂತಹ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ://./ 2. ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಗಿಸಿದ್ದೇನೆ. ಮುಂದೆ ಯಾವ ಕೋರ್ಸ್ ಮಾಡಬೇಕೆಂದು ತಿಳಿಯುತ್ತಿಲ್ಲ. ಆದ್ದರಿಂದ, ನನಗೆ ಯಾವ ಕೋರ್ಸ್ ಮಾಡಿದರೆ ಸೂಕ್ತ ಹಾಗೂ ಕೋರ್ಸ್ ಪ್ರಾಮುಖ್ಯತೆ ಬಗ್ಗೆ ತಿಳಿಸಿ. ಪ್ರವೀಣ ಹಳಿಂಗಳಿ, ಬನಹಟ್ಟಿ. ಪಿಯುಸಿ (ವಿಜ್ಞಾನ) ನಂತರ ನೀವು ಮಾಡಬಹುದಾದ ಕೋರ್ಸ್‌ಗಳೆಂದರೆ ಎಂಬಿಬಿಎಸ್, ಬಿಡಿಎಸ್, ಬಿವಿಎಸ್‌ಸಿ, ಬಿಎನ್‌ವೈಎಸ್, ಬಿಪಿಟಿ, ಬಿ.ಎಸ್ಸಿ (ಪ್ಯಾರಾ ಮೆಡಿಕಲ್), ಬಿಇ, ಬಿಟೆಕ್, ಬಿ.ಎಸ್ಸಿ, ಬಿ.ಎಸ್ಸಿ (ಆನರ್ಸ್), ಬಿಎಸ್ಸಿ (ಕೃಷಿ ಇತ್ಯಾದಿ), ಬಿ.ಡಿಸೈನ್, ಬಿಸಿಎ, ಬಿಬಿಎ, ಎನ್‌ಡಿಎ ಇತ್ಯಾದಿ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಗಮನಿಸಿ, ನಿಮಗೆ ಸರಿಹೊಂದುವ ವೃತ್ತಿಯನ್ನು ಗುರುತಿಸಿ, ಅದರಂತೆ ಸೂಕ್ತವಾದ ಕೋರ್ಸ್ ಆಯ್ಕೆ ಮಾಡಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://..// 3. ನಾನು ಬಿಕಾಂ ಪದವಿ ಮುಗಿಸಿದ್ಧೇನೆ. ರಾಜ್ಯಶಾಸ್ತ್ರದಲ್ಲಿ ಎಂ.ಎ ಮಾಡಬೇಕು ಎಂದಿದ್ದೇನೆ. ಅದು ಸಾಧ್ಯವೇ? ರಮೇಶ್, ದಾವಣಗೆರೆ. ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಕೋರ್ಸ್ ಮಾಡಲು ಅದೇ ವಿಷಯವನ್ನು ಅಥವಾ ಸಂಬಂಧಪಟ್ಟ ವಿಷಯವನ್ನು ಪದವಿ ಕೋರ್ಸ್‌ಲ್ಲಿ ಓದಿರಬೇಕು. ಆದರೂ, ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ (ದೆಹಲಿ ವಿಶ್ವವಿದ್ಯಾಲಯ, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಇತ್ಯಾದಿ) ರಾಜ್ಯಶಾಸ್ತ್ರವನ್ನು ಪದವಿ ಕೋರ್ಸ್‌ನಲ್ಲಿ ಓದಿಲ್ಲದಿದ್ದರೂ ಎಂ.ಎ ಪದವಿಯನ್ನು ರಾಜ್ಯಶಾಸ್ತ್ರದಲ್ಲಿ ಮಾಡಲು ಅವಕಾಶವಿದೆ. ಹಾಗೂ, ದೂರ ಶಿಕ್ಷಣದ ಮೂಲಕವೂ ಎಂಎ (ರಾಜ್ಯಶಾಸ್ತ್ರ) ಮಾಡಬಹುದು. 4. ನಾನು ಈಗಾಗಲೇ ಬಿಬಿಎಂ ಪದವೀಧರನಾಗಿದ್ದು, ಅನಂತರ ಎಂಕಾ ಮುಗಿಸಿದ್ದೇನೆ. ಈ ಪದವಿ ಮುಂದೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹವಾಗುತ್ತದೆಯೇ? ಮಂಜುನಾಥ ಕೊಪ್ಪಳ. ನೀವು ಎಂಕಾಂ ಪದವಿಯಲ್ಲಿ ಕನಿಷ್ಠ ಶೇ 55 ಗಳಿಸಿದ್ದರೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಸಿಗುತ್ತದೆ. 5.ನಾನು ಎಂ.ಎಸ್ಸಿ (ಸಸ್ಯಶಾಸ್ತ್ರ) ಓದಿಕೊಂಡಿದ್ದೇನೆ. ಸರ್ಕಾರಿ ಕೆಲಸಕ್ಕೆ ಸೇರಬೇಕೆಂದು ಮೂರು ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಸಫಲವಾಗಿಲ್ಲ. ನನಗೆ ಶಿಕ್ಷಕ ವೃತ್ತಿ ಇಷ್ಟವಿಲ್ಲ; ಬೇರೆ ಖಾಸಗಿ ಕೆಲಸಗಳ ಬಗ್ಗೆ ಮಾಹಿತಿ ನೀಡಿ. ಹೆಸರು, ಊರು ತಿಳಿಸಿಲ್ಲ. ಎಂ.ಎಸ್ಸಿ (ಸಸ್ಯಶಾಸ್ತ್ರ) ಪದವಿಯ ನಂತರ ಬಯೋಟೆಕ್ನಾಲಜಿ, ಔಷಧ, ಆಹಾರ, ನರ್ಸರೀಸ್, ಪರಿಸರ, ಪ್ರಯೋಗಾಲಯ ಗಳು ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ, ಎನರ್ಜಿ ರಿಸರ್ಚ್ ಇನ್‌ಸ್ಟಿಟ್ಯೂಟ್, ವೈಲ್ಡ್ ಲೈಫ್ ಪ್ರೊಟೆಕ್ಷನ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು. 6. ನಾನು ಎಂಬಿಬಿಎಸ್ ಮಾಡಬೇಕು ಎಂದಿದ್ದೇನೆ. ಜೊತೆಗೆ ಬ್ಯಾಡ್ಮಿಂಟನ್ ಆಟಗಾರನೂ ಹೌದು. ವೈದ್ಯನೂ ಆಗಿ ಆಟಗಾರನೂ ಆಗಲು ಬಯಸುತ್ತೇನೆ. ಸಲಹೆ ನೀಡಿ. ಹೆಸರು, ಊರು ತಿಳಿಸಿಲ್ಲ. ಆಧುನಿಕ ಜಗತ್ತಿನಲ್ಲಿ ಯಾವುದೇ ಉದ್ಯೋಗ ಅಥವಾ ವೃತಿಯಲ್ಲಿ ಒತ್ತಡ ಸಾಮಾನ್ಯವೆಂದೇ ಹೇಳಬಹುದು. ಅದರಲ್ಲೂ, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಒತ್ತಡದ ಜೊತೆ ಅನಿಶ್ಚಿತ ಕೆಲಸದ ವೇಳೆಯಿಂದ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಸಾಧಿಸುವುದು ಸವಾಲಾಗಬಹುದು. ಆದರೆ, ವೃತ್ತಿಯ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಮಯದ ನಿರ್ವಹಣೆಯಿಂದ ಆಸಕ್ತಿ, ಅಭಿರುಚಿಯಿರುವ ಪ್ರವೃತ್ತಿಯಲ್ಲೂ ಸಕ್ರಿಯವಾಗಿ ನಿಮ್ಮನ್ನು ತೊಡಗಿಸಿಕೊಂಡರೆ, ವೃತ್ತಿಯಲ್ಲಿ ಯಶಸ್ಸು ಮತ್ತು ಬದುಕಿನಲ್ಲಿ ಸಂತೃಪ್ತಿಯನ್ನು ಸಾಧಿಸುವುದು ಸುಲಭವಾಗುತ್ತದೆ. ಆದ್ದರಿಂದಲೇ, ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಬದುಕಿಗೆ ಅವಶ್ಯಕ. ಹಾಗಾಗಿ, ವೈದ್ಯಕೀಯ ವೃತ್ತಿಯ ಜೊತೆಗೆ ಬ್ಯಾಡ್ಮಿಂಟನ್ ಆಟಗಾರರಾಗುವ ನಿಮ್ಮ ಆಲೋಚನೆ ಸೂಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.