ಬರವಣಿಗೆ ಕೌಶಲಕ್ಕೆ ಸರಳ ಸೂತ್ರಗಳು: ಭಾಷೆ ಕಲಿಕೆಯ ಐದು ಹಂತಗಳು ಮನೆಯಲ್ಲಿ ಕನ್ನಡದ ಪರಿಸರವಿದ್ದರೂ, ತಂತ್ರಜ್ಞಾನ ಜಗತ್ತಿನ ಪರಿಣಾಮವಾಗಿ ಉಂಟಾಗುವ ಕಲಿಕಾ ದೋಷಗಳನ್ನು ನಿವಾರಿಸಲು, ಕನ್ನಡವನ್ನು ವ್ಯವಸ್ಥಿತ ವಿಧಾನದಲ್ಲಿ ಕಲಿಸಬೇಕು. ಆ ಕಲಿಕಾ ವಿಧಾನಗಳು ಇಲ್ಲಿವೆ. **** ಯಾವುದೆ ಭಾಷೆಯನ್ನು ಸಮರ್ಪಕವಾಗಿ ಕಲಿಯುವುದು ಹೇಗೆ?- ಹೀಗೊಂದು ಪ್ರಶ್ನೆ ಕೇಳಿಕೊಂಡರೆ ಐದು ಹಂತಗಳಲ್ಲಿ ಭಾಷೆಯನ್ನು ಕಲಿಯಬೇಕು ಎನ್ನುವುದೇ ಉತ್ತರ. ಅವುಗಳೆಂದರೆ, ಆಲಿಸುವಿಕೆ, ಪುನರುಕ್ತಿ, ಅರ್ಥ ಗ್ರಹಣ, ಅಕ್ಷರ ಗುರುತಿಸುವಿಕೆ, ಬರವಣಿಗೆ.‌ ಆದರೆ ಈ ಐದೂ ಹಂತಗಳಲ್ಲಿ ಯಾವುದಾದರೂ ಭಾಷೆಯ ಕಲಿಕೆ ನಡೆಯುತ್ತಿದೆಯೆ? ಎಂದರೆ ಬಹುಮಟ್ಟಿಗೆ ‘ಇಲ್ಲ’. ಮಾತೃಭಾಷೆಯ ನಾಲ್ಕು ಹಂತಗಳು ಪರಿಸರದಿಂದಲೇ ಆಗಿರುತ್ತವೆ. ಅಂದರೆ ಕನ್ನಡದ ಪದಗಳನ್ನು ಮಗು ಮನೆಯಲ್ಲಿ ಕೇಳುತ್ತದೆ. ಕೇಳಿದ್ದನ್ನು ಉಚ್ಚರಿಸುತ್ತದೆ. ಉಚ್ಚರಿಸಿದ್ದರಲ್ಲಿ ಕೆಲವು ಪದಗಳಾದರೂ ಅರ್ಥವಾಗುತ್ತವೆ. ಹಲವು ಫಲಕಗಳಲ್ಲಿ, ಪುಸ್ತಕಗಳಲ್ಲಿ ಕನ್ನಡ ಅಕ್ಷರಗಳನ್ನು ನೋಡಿರುತ್ತದೆ. ಆಗ ಶಾಲೆಯಲ್ಲಿ ನೇರವಾಗಿ ಬರೆವಣಿಗೆಯಿಂದಲೇ ಕನ್ನಡ ಕಲಿಕೆ ನಡೆಸಬಹುದು. ಆದರೆ ಇಂಗ್ಲಿಷ್, ಹಿಂದಿ ಪದಗಳನ್ನು ಮನೆಯಲ್ಲಿ ಕೇಳಿರುವುದಿಲ್ಲ.‌ ಶಬ್ದಗಳ ಅರ್ಥ ಗೊತ್ತಾಗಿರುವುದಿಲ್ಲ. ಅಕ್ಷರವನ್ನು ಗುರುತಿಸುವ ಸಾಮರ್ಥ್ಯ ಬಂದಿರುವುದಿಲ್ಲ.‌ ಆದರೂ ಕನ್ನಡವನ್ನು ಕಲಿಸಿದ ಹಾಗೆಯೇ ಇಂಗ್ಲಿಷ್, ಹಿಂದಿ ಭಾಷೆಗಳನ್ನು ಕಲಿಸುವ ಪದ್ಧತಿ ಶಾಲೆಗಳಲ್ಲಿದೆ. ಅಂದರೆ ನಾಲ್ಕೂ ಹಂತಗಳ ಕಲಿಕೆ ಶಾಲೆಯಲ್ಲಿ ನಡೆದಿರುವುದಿಲ್ಲ. ನಿಜವಾಗಿ ಮನೆಯ ಪರಿಸರ ಕನ್ನಡವೇ ಆಗಿದ್ದರೂ, ಮನೆಯಲ್ಲೇ ನಾಲ್ಕು ಹಂತಗಳ ಕಲಿಕೆ ನಡೆದಿದ್ದರೂ, ತಂತ್ರಜ್ಞಾನ ಜಗತ್ತಿನ ಪರಿಣಾಮವಾಗಿ ಉಂಟಾಗುವ ಕಲಿಕಾ ದೋಷಗಳನ್ನು ನಿವಾರಿಸಲು ಕನ್ನಡವನ್ನೂ ವ್ಯವಸ್ಥಿತ ವಿಧಾನದಲ್ಲಿ ಕಲಿಸಬೇಕಾಗಿದೆ.‌ ಮನೆಯ ಪರಿಸರ ಕನ್ನಡದ್ದಲ್ಲದೆ ಇರುವಾಗಲಂತೂ ಇದು ತೀರಾ ಅವಶ್ಯಕವಾಗಿದೆ. ಭಾಷೆಯನ್ನು ವ್ಯವಸ್ಥಿತವಾಗಿ ಕಲಿಸುವ ಐದು ಹಂತಗಳವಿವರಇಲ್ಲಿದೆ ಆಲಿಸುವಿಕೆ:ಆಲಿಸುವಿಕೆಯಲ್ಲಿ ಎರಡು ಕಾರ್ಯಗಳಾಗಬೇಕು. ಪದಗಳನ್ನು ಗ್ರಹಿಸಬೇಕು. ಒಂದು ಪದವನ್ನು ಉಚ್ಚರಿಸುವುದು ಹೇಗೆ ಮತ್ತು ಆ ಪದವನ್ನು ಬಳಸುವ ಸಂದರ್ಭ ಯಾವುದು ಎಂಬುದನ್ನು ಗ್ರಹಿಸಬೇಕು.‌ ಎರಡನೆಯದಾಗಿ, ಪದಗಳ ಸಮುಚ್ಚಯದಿಂದ ವಾಕ್ಯಗಳಾಗಿ ರೂಪುಗೊಂಡಾಗ ಹೇಗಿರುತ್ತದೆ ಎಂದು ಗ್ರಹಿಸಬೇಕು. ಪುನರುಕ್ತಿ:ಪದಗಳ ಪುನರುಕ್ತಿ ಎನ್ನುವುದು ತೀರಾ ಎಳೆಯ ಹಂತದಲ್ಲಿ ಬರುತ್ತದೆ.‌ ಆದರೆ ಸ್ವಲ್ಪ ಬೆಳೆದ ಮಕ್ಕಳಿಗೂ ಉಚ್ಛಾರ ಸಮರ್ಪಕವಾಗಬೇಕಾದರೆ ಕೆಲವೊಮ್ಮೆ ಪದಗಳ ಪುನರುಕ್ತಿಯ ಅಗತ್ಯ ವಿರುತ್ತದೆ. ಆದರೆ ಬೆಳೆದ ಮಕ್ಕಳಿಗೂ ವಾಕ್ಯಗಳನ್ನೂ ಇದೇ ರೀತಿ ಕಲಿಸುವ ಅಗತ್ಯವಿರುತ್ತದೆ. ಸರಾಗವಾಗಿ ಓದುವಂತಾಗಲು ವಾಕ್ಯಗಳ ಪುನರುಕ್ತಿ ಅಗತ್ಯವಿದೆ. ಅರ್ಥ ಗ್ರಹಣ:ಬಹಳಷ್ಟು ಸಾರಿ ಪುನರುಕ್ತಿಗೊಳಿ ಸಿದ ಪದಗಳು ಅರ್ಥವಾಗುವುದಿಲ್ಲ. ಉದಾಹರಣೆ: ಬಹಳ ಮಂದಿಗೆ, ಓಜೆ, ಅಳ್ಳಕ, ದ್ರವ್ಯಾಲಯ.. ಇಂತಹ ಅನೇಕ ಪದಗಳು ಅರ್ಥವಾಗುವುದಿಲ್ಲ. ಇಂತಹ ಪದಗಳಿಗೆ ಶಬ್ದಕೋಶದ ಮೂಲಕ ಅರ್ಥ ತಿಳಿದುಕೊಂಡರೆ ಸಾಕಾಗುವುದಿಲ್ಲ. ಆ ಪದಗಳನ್ನು ಬರೆಯುವಾಗ ಅಥವಾ ಮಾತನಾಡುವಾಗ ವಾಕ್ಯಗಳಲ್ಲಿ ಬಳಸಬೇಕು. ಆಗ ಅವು ನೆನಪಿನಲ್ಲಿ ಉಳಿಯುತ್ತವೆ. ಅರ್ಥವಾಗದಿರುವ ಪ್ರತಿ ಪದವನ್ನೂ ಬಳಸುವ ಮೂಲಕ ಅರ್ಥ ಮಾಡಿಕೊಳ್ಳಬೇಕು.‌ ಪದಗಳು ಅರ್ಥವಾಗದೆ ವಾಕ್ಯಗಳು ಪೂರ್ಣವಾಗಿ ಅರ್ಥವಾಗುವುದಿಲ್ಲ. ವಾಕ್ಯಗಳನ್ನು ಕೇಳುವಾಗ ಅಥವಾ ಓದಿಕೊಳ್ಳುವಾಗ ಯಾವ ಹಿನ್ನೆಲೆಯಲ್ಲಿ ಅದನ್ನು ಬಳಸಲಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಆಗ ವಾಕ್ಯ ಪೂರ್ಣ ಅರ್ಥ ಆದಂತಾಗುತ್ತದೆ. ಗುರುತಿಸುವಿಕೆ:ಗುರುತಿಸುವಿಕೆಯು ಪದಗಳಿಗೆ ಸಂಬಂಧಿ ಸಿದ್ದು. ಇದರಲ್ಲಿ ಅಕ್ಷರಗಳನ್ನು ಗುರುತಿಸುವುದೇ ಪ್ರಧಾನ ವಾಗಿದೆ. ಬೆಳೆದ ಮಕ್ಕಳಿಗೆ ಅಕ್ಷರದ ಗುರುತಿಸುವಿಕೆ ಸಾಮಾನ್ಯವಾಗಿ ಇರುತ್ತದೆ. ಆದ್ದರಿಂದ ಬೆಳೆದ ಮಕ್ಕಳು ಅದನ್ನು ಪ್ರತ್ಯೇಕವಾಗಿ ಕಲಿಯುವಂತಾದ್ದೇನೂ ಇರುವುದಿಲ್ಲ. ಆದರೆ ವಾಕ್ಯಗಳನ್ನು ಗುರುತಿಸುವಾಗ, ಅದನ್ನು ಹೇಗೆ ಓದಿಕೊಳ್ಳಬೇಕು ಎಂಬುದು ಮುಖ್ಯ. ವಾಕ್ಯಗಳ ನಡುವೆ ಚಿಹ್ನೆಗಳನ್ನು ಬಳಸಲಾಗಿರುತ್ತದೆ.‌ ಆ ಚಿಹ್ನೆಗಳು ವಾಕ್ಯವನ್ನು ಹೇಗೆ ಮತ್ತು ಯಾವ ಭಾವದಿಂದ ಓದಿಕೊಳ್ಳಬೇಕು ಎಂದು ತಿಳಿಸುತ್ತವೆ.‌ ಆ ವಿಧಾನದಲ್ಲೆ ವಾಕ್ಯವನ್ನು ಓದಿಕೊಂಡಾಗ ಮಾತ್ರ ‌ಸರಿಯಾಗಿ ಅರ್ಥವಾಗುತ್ತದೆ. ಬರೆವಣಿಗೆ:ಭಾಷೆ ಕಲಿಕೆಯಲ್ಲಿ ಬರೆವಣಿಗೆಯು ಕೊನೆಯ ಹಂತದ್ದು. ಇದುವರೆಗಿನ ಹಂತಗಳಲ್ಲಿ ಅರ್ಥ ಮಾಡಿಕೊಂಡದ್ದನ್ನು ತನ್ನದೇ ಭಾಷಾ ಸಾಮರ್ಥ್ಯದಲ್ಲಿ ನಿರೂಪಿಸುವ ಹಂತವೇ ಬರೆವಣಿಗೆ.‌ ಅರ್ಥ ಮಾಡಿಕೊಂಡದ್ದನ್ನು ನಿರೂಪಿಸಬೇಕಾದರೆ ಭಾಷಾ ಸಾಮರ್ಥ್ಯ ಇರಬೇಕು. ಅಂದರೆ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡದ್ದನ್ನು ಸ್ವಂತ ವಾಕ್ಯದಲ್ಲಿ ಬರೆದು ಹೇಳಲು ಗೊತ್ತಿರಬೇಕು.‌ ಮಾತೃಭಾಷೆ ಯಾವುದೇ ಭಾಷೆಯ ಕಲಿಕೆಗೆ ಆಧಾರವಾಗಿರುತ್ತದೆ. ಮಾತೃಭಾಷೆಯಲ್ಲಿ ಕಲ್ಪನೆಗಳನ್ನು ಹೆಚ್ಚಿಸಿ ಕೊಳ್ಳಬೇಕು. ಆಗ ಚಿಂತನೆಗಳು ಹೆಚ್ಚುತ್ತವೆ. ಸಂಕೀರ್ಣವಾದ ಅನುಭವಗಳನ್ನು ಹೇಳಲು ಸಾಧ್ಯವಾಗುತ್ತದೆ.‌ ಈ ಸಾಮರ್ಥ್ಯ ಹೆಚ್ಚಾದಂತೆಲ್ಲ ಕಲಿಕೆಯ ಸೂಕ್ಷ್ಮತೆ ವಿಸ್ತರಿಸಿ, ಇತರೇ ಕಲಿಕೆಗಳ ದಕ್ಷತೆಯು ಹೆಚ್ಚಾಗುತ್ತದೆ. ಸೃಜನಶೀಲ ಚಟುವಟಿಕೆಗಳು ಕನ್ನಡ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಸೃಜನಶೀಲ ಚಟುವಟಿಕೆಗಳನ್ನು ಮಾಡಬಹುದು ಅವು ಹೀಗಿವೆ: ಪಠ್ಯ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಯನ್ನು ನಿರ್ವಹಿಸುವುದು. ಉದಾಹರಣೆಗೆ ಕುಮಾರವ್ಯಾಸನ ಒಂದು ಪದ್ಯ ಇದ್ದರೆ ಕುಮಾರವ್ಯಾಸ ಭಾರತದ ಒಂದು ಭಾಗವನ್ನು ಓದುವ ಅಭ್ಯಾಸ ಇರಿಸಿಕೊಳ್ಳಬಹುದು. ಪದ್ಯವನ್ನು ಪ್ರಬಂಧವಾಗಿ, ಪ್ರಬಂಧವನ್ನು ಪದ್ಯವಾಗಿ, ಕವಿತೆಯನ್ನು ಕಥೆಯಾಗಿ, ಪ್ರಬಂಧವನ್ನು ಕತೆಯಾಗಿ ಮಾರ್ಪಡಿಸಿ ಬರೆಯುವ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳ ಸಂದರ್ಶನ, ಸಂವಾದಗಳನ್ನು ಮಾಡಬಹುದು. ಪರಿಕಲ್ಪನೆಗಳನ್ನು ವಿಸ್ತರಿಸಿ ವಿವರಿಸಿ ಬರೆಯಬಹುದು. ಉದಾಹರಣೆಗೆ, ‘ಜಗಲಿ ಹಾರದವನು ಗಗನ ಹಾರಿಯಾನೇ' ಎನ್ನುವಂತಹ ಮಾತುಗಳನ್ನು ವಿಸ್ತರಿಸಿ ಬರೆಯುವ ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳಲ್ಲದೆಯೂ ಪಾಠದಲ್ಲಿ ಬರುವ ಹಲವು ಇಂತಹ ಪರಿಕಲ್ಪನೆಗಳನ್ನು ಸೃಜನಶೀಲವಾಗಿ ವಿಸ್ತರಿಸಿ ಕಲಿಯಬಹುದು. ಬರವಣಿಗೆ ಕೌಶಲ lಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ಒಳಗೊಳ್ಳುವ ಹಾಗೆ ಬರೆಯುವ ಭಾಷಾ ಕೌಶಲವಿರಬೇಕು. lವಿಷಯಗಳನ್ನು ಪ್ಯಾರಾಗಳಾಗಿ ವಿಂಗಡಿಸಿ ಬರೆಯಲು ಗೊತ್ತಿರಬೇಕು.‌ ಒಂದು ಪ್ರಬಂಧವನ್ನು ಒಂದು ‘ಸ್ಟೇರ್ ಕೇಸ್’(ಮಹಡಿ ಮೆಟ್ಟಿಲು) ಎಂದು ಭಾವಿಸಿಕೊಂಡರೆ ಅದಕ್ಕೆ ಹತ್ತಲು ಇರುವ ಪ್ರತಿ ಮೆಟ್ಟಿಲನ್ನೂ ಒಂದು ಪ್ಯಾರಾ ಎಂದುಕೊಳ್ಳಬಹುದು. ಎಲ್ಲ ಪ್ಯಾರಾಗಳು ಒಟ್ಟಾಗಿ ಒಂದು ಅರ್ಥವನ್ನು ಉಂಟು ಮಾಡುತ್ತವೆ. ಆದ್ದರಿಂದ ಪ್ಯಾರಾಗಳ ನಡುವೆ ಸಂಬಂಧವಿದೆ.‌ ಆದರೆ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬದಲಾವಣೆ ಮಾಡಿಕೊಳ್ಳುವಾಗ ಪ್ಯಾರಾ ಬದಲಿಸ ಬೇಕಾಗುತ್ತದೆ. ಒಂದು ವಿಷಯವನ್ನು ಹಲವು ಘಟಕಗಳಾಗಿ ಮಾಡಿಕೊಂಡು ಪ್ರತಿ ಘಟಕಕ್ಕೂ ಒಂದೊಂದು ಪ್ಯಾರಾ ಬರೆಯುತ್ತಾ ಹೋದರೆ ಬರೆದೂ ಬರೆದೂ ಪ್ಯಾರಾ ಮಾಡುವ ಕೌಶಲವು ಸಿದ್ಧಿಸುತ್ತದೆ. lಚಿಹ್ನೆಗಳನ್ನು ಸಮರ್ಪಕವಾಗಿ ಬಳಸಲು ತಿಳಿದಿರಬೇಕು. lಆಯಾ ಸನ್ನಿವೇಶದ ಅರ್ಥವನ್ನು ಹೆಚ್ಚು ಪರಿಣಾಮಕಾರಿ ಯಾಗಿ ಹೇಳಬಲ್ಲ ಅತೀ ಚಿಕ್ಕ ಕಥೆ/ ಸನ್ನಿವೇಶ/ ಗಾದೆ/ ಘಟನೆಗಳನ್ನು ಬಳಸಲು ತಿಳಿದಿರಬೇಕು. lಅಕ್ಷರಗಳು ಸ್ಫುಟವಾಗಿರಬೇಕು. lಓದಿದ ನಂತರ ಓದಿದಾಗ ಅರ್ಥವಾದ ವಿಷಯಗಳ ಸಾರಾಂಶವನ್ನು ಟಿಪ್ಪಣಿಯಾಗಿ ಬರೆದಿಡಲು ತಿಳಿದಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.