ಹೈಕೋರ್ಟ್‌ ಅಂಗಳಕ್ಕೆ ಸಿಇಟಿ ಗೊಂದಲ ಬೆಂಗಳೂರು: 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) 2020–21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸದೇ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮವನ್ನು ಪ್ರಶ್ನಿಸಿ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಚಿಕ್ಕಮಗಳೂರಿನ ಆರ್.ಈಶ್ವರ್ ಸೇರಿ ಎಂಟು ವಿದ್ಯಾರ್ಥಿಗಳು ಈ ಸಂಬಂಧ ರಿಟ್‌ ಅರ್ಜಿ ಸಲ್ಲಿಸಿದ್ದು, ಗುರುವಾರ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದ ಕಾರಣ ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದೆ. ‘ಸಿಇಟಿ ರ‌್ಯಾಂಕ್‌ಗಳಿಗೆ 2021ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅರ್ಜಿದಾರರು ಪಡೆದ ಅಂಕಗಳನ್ನು ಪರಿಗಣಿಸುವಂತೆ ಕೆಇಎಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ ಸಿಇಟಿ ಕೌನ್ಸೆಲಿಂಗ್‌ಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.