ಶಿಕ್ಷಣ: ಕಲಿಕೆಗೆ ಅನುಭವದ ಸ್ಪರ್ಶವಿರಲಿ ದಿನವೂ ತನ್ನ ತಂದೆ ಜೊತೆಗೆ ಕಿರಾಣಿ ಅಂಗಡಿಗೆ ಹೋಗುವ ಹತ್ತು ವರ್ಷದ ಅಕುಲ್ ಗ್ರಾಹಕರೊಂದಿಗೆ ಹಣದ ವಹಿವಾಟಿನ ಲೆಕ್ಕಾಚಾರವನ್ನು ತಪ್ಪಿಲ್ಲದಂತೆ ಮಾಡುತ್ತಾನೆ. ತಾಯಿಯ ಜೊತೆಗೆ ಆಗಾಗ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತಲೇ ಹನ್ನೆರಡರ ಹರೆಯದ ಶ್ವೇತ ಅಡುಗೆ ಕೆಲಸವನ್ನೂ ಕಲಿತೆ ಬಿಟ್ಟಳು. ಇದು ಕೇವಲ ಅಕುಲ್ ಮತ್ತು ಶ್ವೇತರ ಕಲಿಕೆಯಲ್ಲ. ಇಂತಹ ಅದೆಷ್ಟೋ ಮಕ್ಕಳು ದೈನಂದಿನ ಅನೌಪಚಾರಿಕ ಚಟುವಟಿಕೆಗಳ ಅನುಭವದ ಮೂಲಕ ಕಲಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಇಂದಿನ ಪ್ರಪಂಚವು ಹೆಚ್ಚು ಕ್ರಿಯಾತ್ಮಕ ಹಾಗೂ ಸಂಕೀರ್ಣ ಕಲಿಕೆಯನ್ನು ಬೆಂಬಲಿಸುತ್ತದೆ. ಮಕ್ಕಳು ಸದಾ ಕಲಿಕೆಯಲ್ಲಿರಬೇಕೆಂಬುದು ಬಹುತೇಕ ಪಾಲಕರ ಆಶಯವಾಗಿದೆ. ಮಕ್ಕಳು ಯಾವಾಗಲೂ ಅನುಭವದ ಮೂಲಕ ಕಲಿಯಲು ಇಷ್ಟಪಡುತ್ತಾರೆ. ಅಲ್ಲದೇ ಅನುಭವ ಜನ್ಯ ಕಲಿಕೆಯನ್ನು ಶಿಕ್ಷಣ ತಜ್ಞರು ಹಾಗೂ ಮಕ್ಕಳ ಮನಃಶಾಸ್ತ್ರಜ್ಞರೂ ಬೆಂಬಲಿಸುತ್ತಾರೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಅನುಭವ ಜನ್ಯ ಕಲಿಕೆ ಅಗತ್ಯ ಎಂಬುದನ್ನು ಎಲ್ಲಾ ಶಿಕ್ಷಣ ತಜ್ಞರು ತನ್ನ ಕಲಿಕಾ ಸಿದ್ಧಾಂತಗಳ ಮೂಲಕ ಸಾಬೀತುಪಡಿಸಿದ್ದಾರೆ. ಅನುಭವ ಜನ್ಯ ಕಲಿಕೆ ಎಂದರೆ... ಹೆಸರೇ ಸೂಚಿಸುವಂತೆ ಅನುಭವದ ಮೂಲಕ ಕಲಿಯುವ ಪ್ರಕ್ರಿಯೆ ಇದು. ಮನಃಶಾಸ್ತ್ರಜ್ಞರಾದ ಡೇವಿಡ್ ಕೋಲ್ಬ್ ಮೊದಲು ಈ ಸಿದ್ದಾಂತ ಪ್ರತಿಪಾದಿಸಿದರು. ‘ಅನುಭವವು ಜ್ಞಾನದ ರೂಪಾಂತರವಾಗಿ ಪರಿವರ್ತನೆ ಆಗುತ್ತದೆ. ಅನುಭವವನ್ನು ಗ್ರಹಿಸುವ ಹಾಗೂ ಪರಿವರ್ತಿಸುವ ಸಂಯೋಜನೆಯಿಂದ ಜ್ಞಾನ ದೊರೆಯುತ್ತದೆ’ ಎಂದು ಡೇವಿಡ್ ಕೋಲ್ಬ್ ವ್ಯಾಖ್ಯಾನಿಸಿದ್ದಾರೆ. ಸಾಂಸ್ಕೃತಿಕ ವಿನಿಮಯ, ಹೊರಸಂಚಾರ, ವಸ್ತುಸಂಗ್ರಹಾಲಯಗಳ ಭೇಟಿ, ಪ್ರವಾಸಗಳು, ಪ್ರಯೋಗಗಳು, ಯೋಜನೆ ಆಧಾರಿತ ಕಲಿಕೆಯಂತಹ ಚಟುವಟಿಕೆಗಳು ಅನುಭವ ಜನ್ಯ ಕಲಿಕೆಯನ್ನು ಪ್ರೋತ್ಸಾಹಿಸುತ್ತವೆ. ಪ್ರಯೋಜನಗಳು →ನೈಜ ಜಗತ್ತಿನ ಅನುಭವಗಳೊಂದಿಗೆಪರಿಕಲ್ಪನೆಗಳನ್ನು ಮಕ್ಕಳಿಗೆ ಕಲಿಸಿದರೆ ಬೇಗನೆ ಅರ್ಥೈಸಿಕೊಳ್ಳುತ್ತಾರೆ. ಉದಾಹರಣೆಗೆ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದಕ್ಕಿಂತ ಮಕ್ಕಳನ್ನೇ ಬ್ಯಾಂಕಿಂಗ್ ವ್ಯವಹಾರಗಳಿಗೆ ಕಳಿಸಬೇಕು. ಆಗ ಪರಿಕಲ್ಪನೆಗಳನ್ನು ಬಹುಬೇಗ ಅರ್ಥ ಮಾಡಿಕೊಳ್ಳುತ್ತಾರೆ. →ಅನುಭವದ ಮೂಲಕ ಕಲಿಕೆಯುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸವಾಲುಗಳನ್ನು ಎದುರಿಸುವ ಕೌಶಲ ಗಳಿಸುತ್ತಾರೆ. →ಅಮೂರ್ತ ಪರಿಕಲ್ಪನೆಗಳಿಗೆ ಪ್ರಾಯೋಗಿಕ ಅನುಭವ ಬೆರೆಯು ವುದರಿಂದ ಕಲಿಕೆ ಸಕಾರಾತ್ಮಕವಾಗಿ ಪ್ರತಿಬಿಂಬಿತವಾಗುತ್ತದೆ. ವೈವಿಧ್ಯಮಯ ಅನುಭವಾತ್ಮಕ ಚಟುವಟಿಕೆಗಳು ಹೊಸ ಹೊಸ ಕಲಿಕೆಯನ್ನು ಉತ್ತೇಜಿಸುತ್ತವೆ. →ವಿದ್ಯಾರ್ಥಿಗಳು ಕೈಗೆಟುಕುವ ಕಾರ್ಯಗಳಲ್ಲಿ ತೊಡಗುವುದರಿಂದ ಇತರರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಸಾಮಾನ್ಯ ತಪ್ಪುಗಳನ್ನು ಮೀರಿ ಬೆಳೆಯುವ ಉತ್ಸಾಹ ತೋರುತ್ತಾರೆ. →ಜ್ಞಾನ ಮತ್ತು ಕೌಶಲಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿ ಯವಾಗಿ ಬಳಸುವುದರಿಂದ ಅವರ ವರ್ತನೆಗಳಲ್ಲೂ ಸುಧಾರಣೆಯಾಗುತ್ತದೆ. ಕಲಿಕಾ ಸಂತೃಪ್ತಿಯನ್ನು ಅನುಭವಿಸುತ್ತಾರೆ. ಕಲಿಕೆಗೆ ಅನುಭವದ ಸಂಯೋಜನೆ ಹೇಗೆ? →ಸ್ಥಳೀಯ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಗಳಿಗೆ ಮಕ್ಕಳನ್ನು ಕರೆದೊಯ್ಯಿರಿ. ಅಲ್ಲಿ ಮಕ್ಕಳಿಗೆ ವಿಭಿನ್ನ ಸಂಸ್ಕೃತಿಗಳ ಪರಿಚಯವಾಗುತ್ತದೆ. →ಮನೆಯೇ ಮಕ್ಕಳ ಕಲಿಕಾ ಪ್ರಯೋಗ ಶಾಲೆಯಾಗಲಿ. →ಆಗಾಗ್ಗೆ ಕೈಗೊಳ್ಳುವ ಕೌಟುಂಬಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯಿರಿ. ಪ್ರವಾಸದಲ್ಲಿ ಅವರು ಕೇಳುವ ಪ್ರಶ್ನೆಗಳಿಗೆ ಆತ್ಮೀಯತೆಯಿಂದ ಉತ್ತರಿಸಿ. →ಸಭೆ ಸಮಾರಂಭಗಳಿಗೂ ಮಕ್ಕಳನ್ನು ಕರೆದೊಯ್ಯಿರಿ. ವೈವಿಧ್ಯಮಯ ಸನ್ನಿವೇಶದಲ್ಲಿ ಸಂವಹನ ಹೇಗೆ ಎಂಬುದನ್ನು ಕಲಿಯುತ್ತಾರೆ. →ಬೈಕ್/ವಾಹನ ಚಾಲನೆಗೆ ಸತತ ಅಭ್ಯಾಸ ಮತ್ತು ಪ್ರಾಯೋಗಿಕ ಅನುಭವ ಅಗತ್ಯ ಇರುವಂತೆ ಕೆಲವು ಕಲಿಕೆಗೆ ಸತತ ಅನುಭವಅಗತ್ಯ. ಉದಾಹರಣೆಗೆ ಗಣಿತದ ಕೆಲವು ಪರಿಕಲ್ಪನೆಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲು ಸತತ ಅಭ್ಯಾಸ ಮತ್ತು ಪ್ರಾಯೋಗಿಕ ಅನುಭವ ಅಗತ್ಯ. →ಮಕ್ಕಳು ಸಂಘಜೀವಿಗಳಾಗಲು ಸಾಮಾಜಿಕವಾಗಿ ಬೆರೆಯ ಬೇಕು. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಮಕ್ಕಳನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. →ಚಿಕ್ಕ ಚಿಕ್ಕ ಕಲಿಕಾ ಅನುಭವಗಳ ಮೂಲಕ ಸಮಗ್ರ ಕಲಿಕೆಯನ್ನು ಉತ್ತೇಜಿಸಬೇಕು. →ಪ್ರಾರಂಭದಲ್ಲಿ ನಿರ್ದಿಷ್ಟ ಪರಿಕಲ್ಪನೆಯ ಮೇಲೆ ಮಾತ್ರ ಮಕ್ಕಳು ಗಮನ ಕೇಂದ್ರೀಕರಿಸಿ ಕಲಿಯುವಂತೆ ಉತ್ತೇಜಿಸಿ. ಕ್ರಮೇಣ ಸಂಕೀರ್ಣ ಪರಿಕಲ್ಪನೆಯನ್ನು ಗ್ರಹಿಸಲು ಸಮರ್ಥರಾಗುತ್ತಾರೆ. →ಯಾವುದೇ ಕಾರಣಕ್ಕೂ ಮಕ್ಕಳ ಕಲಿಕಾ ಚಟುವಟಿಕೆಯನ್ನು ನೀವೇ ಮಾಡಬೇಡಿ. ಮಕ್ಕಳೇ ಚಟುವಟಿಕೆ ಮೂಲಕ ಕಲಿಯಲು ಪ್ರೋತ್ಸಾಹಿಸಿ. ಉದಾಹರಣೆಗೆ, ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳು. lಕಲಿಕೆಗೆ ಪೂರಕವಾದ ಚಾರ್ಟ್ಸ್, ಪೋಸ್ಟರ್, ಫ್ಲೋ ಚಾರ್ಟ್, ಫ್ಲಾಶ್ ಕಾರ್ಡ್‌ ಇತ್ಯಾದಿಗಳನ್ನು ತಯಾರಿಸಿಕೊಳ್ಳಲು ಮಾರ್ಗ ದರ್ಶನ ಮಾಡಿ. ಅದಕ್ಕೆ ಅಗತ್ಯ ಲೇಖನ ಸಾಮಗ್ರಿಗಳನ್ನು ಒದಗಿಸಿ. ಕೊನೆಹನಿ : ಪಾಲಕರು ಮಕ್ಕಳ ಕಲಿಕಾ ಚಟುವಟಿಕೆಗೆ ಪೂರಕ ಅವಕಾಶ ಕಲ್ಪಿಸಬೇಕೇ ವಿನಹ ಮಕ್ಕಳ ಕಲಿಕಾ ಚಟುವಟಿಕೆಯನ್ನು ತಾವೇ ಪೂರೈಸಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.