ಜಿಪಿಎಸ್‌ಟಿಆರ್‌ ಪರೀಕ್ಷೆ ಹೇಗಿರುತ್ತದೆ ? 1. ನಾನು ಪಿಯುಸಿ (ವಿಜ್ಞಾನ) ಮತ್ತು ಡಿಪ್ಲೊಮಾ (ಎಜುಕೇಷನ್) ಕೋರ್ಸ್ ಮುಗಿಸಿ 8 ವರ್ಷವಾಯಿತು. ನಂತರ, ಕೌಟುಂಬಿಕ ಕಾರಣಗಳಿಂದ ಪದವಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿದೆ. ಈಗ ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ. ಆದರೆ, ಜಿಪಿಎಸ್‌ಟಿಆರ್ ಪರೀಕ್ಷೆ ತೆಗೆದುಕೊಳ್ಳಲು ಬಿಎ ಅಥವಾ ಬಿ.ಎಸ್ಸಿ ಯಾವುದು ಉತ್ತಮ? ಸದ್ಯ ಬಿ.ಎಸ್ಸಿ ಓದಲು ಕಷ್ಟವಾಗಬಹುದು; ಆದರೆ ಶಿಕ್ಷಕಿಯಾಗಲೇಬೇಕು. ದಯಮಾಡಿ, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ. ಹೆಸರು, ಊರು ತಿಳಿಸಿಲ್ಲ. ನೀವು ಶಾಲೆಯಲ್ಲಿ ಬೋಧಿಸಲು ಇಚ್ಛಿಸುವ ವಿಷಯವನ್ನು ಪದವಿಯಲ್ಲಿ ಓದಿರಬೇಕು. ಹಾಗಾಗಿ, ಆಸಕ್ತಿ, ಅಭಿರುಚಿ ಮತ್ತು ಅನುಕೂಲದಂತೆ, ಯಾವ ಪದವಿಯನ್ನು ಮಾಡಬೇಕೆನ್ನುವುದನ್ನು ನಿರ್ಧರಿಸಿ. ಕರ್ನಾಟಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ (ಜಿಪಿಎಸ್‌ಟಿಆರ್) 400 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯ ಮಾದರಿ ಹೀಗಿರುತ್ತದೆ: • ಸಾಮಾನ್ಯ ಜ್ಞಾನ (ಬಹು ಆಯ್ಕೆ ಮಾದರಿ); ಇದು ಎಲ್ಲ ವಿಷಯದ ಹುದ್ದೆಗಳಿಗೆ ಕಡ್ಡಾಯ; ಗರಿಷ್ಟ ಅಂಕ 150. • ವಿಷಯ ಸಾಮರ್ಥ್ಯ/ಜ್ಞಾನ (ನಿರ್ಧಿಷ್ಟ ವಿಷಯದ ಪತ್ರಿಕೆ); ಗರಿಷ್ಟ ಅಂಕ 150. • ಭಾಷಾ ಸಾಮರ್ಥ್ಯ ಪತ್ರಿಕೆ (ವಿವರಣಾತ್ಮಕ ಮಾದರಿಯ ಪ್ರಶ್ನೆಗಳು); ಆಯಾ ವಿಷಯದ ಬೋಧನಾ ಮಾಧ್ಯಮಕ್ಕೆ ಸಂಬAಧಿಸಿದ ಭಾಷಾ ಸಾಮರ್ಥ್ಯದ ಪರೀಕ್ಷೆ; ಗರಿಷ್ಟ ಅಂಕ 150. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ://..../ 2. ಎಂಸಿಎ ಪೂರ್ಣಗೊಳಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸದ್ಯಕ್ಕೆ ಎಂಬಿಎ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ, ಯಾವ ವಿಷಯದಲ್ಲಿ ಎಂಬಿಎ ಮಾಡಬೇಕು ಎಂದು ತಿಳಿಯುತ್ತಿಲ್ಲ. ಸಲಹೆ ನೀಡಿ. ಎಸ್, ಸವಿತಾ, ಊರು ತಿಳಿಸಿಲ್ಲ. ಎಂಬಿಎ ನಂತರ ಮುಂದೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿದ್ದರೆ ಅಥವಾ ನಿಮ್ಮ ಅಭಿರುಚಿ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದ ಕನಸುಗಳಂತೆ ವೃತ್ತಿಯೋಜನೆಯನ್ನು ಮಾಡಿದರೆ, ಯಾವ ವಿಷಯದಲ್ಲಿ ಎಂಬಿಎ ಮಾಡಬೇಕು ಎನ್ನುವುದು ಅರಿವಾಗುತ್ತದೆ. ಉದಾಹರಣೆಗೆ; ತಂತ್ರಜ್ಞಾನ ಕ್ಷೇತ್ರದಲ್ಲೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕೇ ಅಥವಾ ಇನ್ನಿತರ ಕ್ಷೇತ್ರಗಳ ಅವಕಾಶಗಳನ್ನು ಬಳಸಿಕೊಳ್ಳಬೇಕೇ ಎನ್ನುವುದು ಸ್ಪಷ್ಟವಾಗಬೇಕು. ಈಗ ಎಂಬಿಎ ಕೋರ್ಸ್ ಅನ್ನು ಸುಮಾರು 25ಕ್ಕೂ (ಐಟಿ, ಮಾರ್ಕೆಟಿಂಗ್, ಎಚ್‌ಆರ್, ಆಪರೇಷನ್ಸ್, ಸಪ್ಲೈ ಚೈನ್, ಹಾಸ್ಪಿಟಲ್, ಸ್ಪೋರ್ಟ್ಸ್, ಇವೆಂಟ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ) ಹೆಚ್ಚು ವಿಭಾಗಗಳಲ್ಲಿ ಮಾಡಬಹುದು. ವೃತ್ತಿ ಯೋಜನೆಯನ್ನು ಕುರಿತ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: ://..// 3. ನನಗೀಗ 28 ವರ್ಷ. 2013ರಲ್ಲಿ ಪಿಯುಸಿ (ವಿಜ್ಞಾನ) ಉತ್ತೀರ್ಣನಾಗಿದ್ದೇನೆ. ಕುಟುಂಬದ ಆರ್ಥಿಕ ಸಮಸ್ಯೆಗಳಿಂದ, ಶಿಕ್ಷಣ ಮುಂದುವರಿಸಲಾಗದೆ ಉದ್ಯೋಗ ಮಾಡಬೇಕಾಯಿತು, ಆದರೆ, ಪಶುವೈದ್ಯನಾಗಬೇಕೆಂದು ನನ್ನ ಕನಸಾಗಿತ್ತು. ಈಗ, ನಾನು ಬಿವಿಎಸ್‌ಸಿ ಕೋರ್ಸ್ ಮಾಡಬಹುದೇ? ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ ಮತ್ತು ಶೈಕ್ಷಣಿಕ ಸಾಲ ದೊರೆಯುವುದೇ? ದಯವಿಟ್ಟು ತಿಳಿಸಿ. ವಿಸ್ಮಯ್, ತುಮಕೂರು. ನೀಟ್ ಪರೀಕ್ಷೆಗಿದ್ದ ಗರಿಷ್ಟ ವಯೋಮಿತಿಯನ್ನು ಇತ್ತೀಚೆಗಷ್ಟೇ ತೆಗೆದುಹಾಕಲಾಗಿದೆ. ಹಾಗಾಗಿ, ನೀವು ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಬಿವಿಎಸ್‌ಸಿ ಕೋರ್ಸ್ ಮಾಡಬಹುದು. ವೆಟರ್ನರಿ ಸೈನ್ಸ್ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಬಿವಿಎಸ್‌ಸಿ ಕೋರ್ಸ್ ನಂತರ ಕೃಷಿ ಮತ್ತು ಪಶುಪಾಲನಾ ಇಲಾಖೆಗಳು, ಕೋಳಿ ಸಾಕಣೆ ಕೇಂದ್ರಗಳು, ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು, ಶ್ವಾನ ತರಬೇತಿ ಕೇಂದ್ರಗಳು, ಮೃಗಾಲಯಗಳು, ವನ್ಯಜೀವಿ ಅಭಯಾರಣ್ಯಗಳು, ಸಂಶೋಧನಾ ಕೇಂದ್ರಗಳು, ಪ್ರಾಣಿಗಳ ಸಂತಾನೋತ್ಪತ್ತಿ ಕೇಂದ್ರಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಯುಪಿಎಸ್‌ಸಿ/ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು. ಹಾಗೂ, ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶು ವೈದ್ಯಾಧಿಕಾರಿ ಹುದ್ದೆಗಳಿಗೂ ಪ್ರಯತ್ನಿಸಬಹುದು. ಶೈಕ್ಷಣಿಕ ಸಾಲವೂ ದೊರಕುತ್ತದೆ. 4. ನಾನು ಎಂಜಿನಿಯರಿಂಗ್ (ಇಸಿಇ) ಕೋರ್ಸ್ ಅನ್ನು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮುಗಿಸಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೇನೆ. ಮುಂದೆ, ಎಂಬಿಎ ಅಥವಾ ಎಂಟೆಕ್ ಮಾಡುವ ಬಯಕೆಯಿದೆ. ದೂರ ಶಿಕ್ಷಣ ಅಥವಾ ಸಂಜೆ ಕಾಲೇಜು, ಇವೆರಡರಲ್ಲಿ ಯಾವುದರಲ್ಲಿ ಮಾಡಿದರೆ ಒಳಿತು? ಈ ಕುರಿತು ಹೆಚ್ಚಿನ ಮಾಹಿತಿ ತಿಳಿಸಿ. ಹೆಸರು, ಊರು ತಿಳಿಸಿಲ್ಲ. ಮೊದಲಿಗೆ, ಎಂಟೆಕ್ ಮಾಡಬೇಕೇ ಅಥವಾ ಎಂಬಿಎ ಮಾಡಬೇಕೇ ಎಂದು ನಿರ್ಧರಿಸಿ. ಎಂಟೆಕ್ ಕೋರ್ಸ್ ಮಾಡುವುದಾದರೆ ರೆಗ್ಯುಲರ್ ಪದ್ಧತಿಯಲ್ಲಿ ಮಾಡುವುದು ಸೂಕ್ತ. ಎಂಬಿಎ ಕೋರ್ಸ್ ಅನ್ನು ರೆಗ್ಯುಲರ್, ದೂರ ಶಿಕ್ಷಣ ಅಥವಾ ಆನ್‌ಲೈನ್ ಪದ್ಧತಿಯಲ್ಲಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://../?= 5. ನಾನು ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷವನ್ನು ಮುಗಿಸಿ, ಎರಡನೇ ಮತ್ತು ಮೂರನೇ ವರ್ಷವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮುಖಾಂತರ ಮುಗಿಸಿರುತ್ತೇನೆ. ಈ ಪದವಿಯು ಮಾನ್ಯವೇ? ಮತ್ತು ಇದರ ಆಧಾರದ ಮೇಲೆ ನಾನು ದೂರ ಶಿಕ್ಷಣದ ಮೂಲಕ ಎಂಎ (ಅರ್ಥಶಾಸ್ತ್ರ) ಮಾಡಬಹುದೇ? ಹೆಸರು, ಊರು ತಿಳಿಸಿಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಮಾನ್ಯತೆ ಪಡೆದ ದೂರ ಶಿಕ್ಷಣದ ಎಲ್ಲಾ ಪದವಿ ಕೋರ್ಸ್‌ಗಳಿಗೆ ಮಾನ್ಯತೆಯಿದೆ. ಹಾಗಾಗಿ, ನೀವು ಎಂಎ (ಅರ್ಥಶಾಸ್ತ್ರ) ಕೋರ್ಸ ಅನ್ನು ದೂರಶಿಕ್ಷಣದ ಮೂಲಕ ಮಾಡಬಹುದು. ನೀವು ಪದವಿಯನ್ನು ಮುಗಿಸಿರುವ ವರ್ಷಕ್ಕೆ ಸಂಬಂಧಿಸಿದಂತೆ ಮಾನ್ಯತೆಯ ಖಚಿತವಾದ ಮಾಹಿತಿಗಾಗಿ ಗಮನಿಸಿ: ://.../ 6. ಬಿಕಾಂ ಪೂರ್ಣಗೊಳಿಸಿದ್ದೇನೆ. ಕನ್ನಡದಲ್ಲಿ ಎಂಎ ಮಾಡಬೇಕು ಎಂದುಕೊಂಡಿದ್ದೇನೆ. ಎಂಎ ಕನ್ನಡಕ್ಕೆ ಭವಿಷ್ಯವಿದೆಯೇ? ಪ್ರಾಧ್ಯಾಪಕರಾಗಲು ಸಾಧ್ಯವೇ? ದಯಮಾಡಿ ತಿಳಿಸಿ ಸರ್. ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿಯಿದ್ದರೆ ಎಂಎ ಮಾಡಬಹುದು. ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವಿಷಯಗಳಲ್ಲಿ ಶಿಕ್ಷಣ ಮುಂದುವರೆಸುವುದು ಉತ್ತಮ. ಹಾಗೂ, ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ. ಶಿಕ್ಷಣದ ನಂತರ, ಪ್ರಿಂಟ್, ಎಲೆಕ್ಟ್ರಾನಿಕ್ಸ್‌ ಮತ್ತು ಡಿಜಿಟಲ್ ಸೇರಿದಂತೆ ಮಾಧ್ಯಮಗಳು, ವಿಷಯಾಭಿವೃದ್ಧಿ, ಪ್ರಕಾಶನ ಸಂಸ್ಥೆಗಳು, ಚಿತ್ರೋದ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ. ಹಾಗೂ, ಎಂಎ ನಂತರ ಪಿಎಚ್‌ಡಿ ಮಾಡಿ ಪ್ರಾಧ್ಯಾಪಕರಾಗಬಹುದು. 7. ನನ್ನ ಮಗ ಸಿವಿಲ್ ಎಂಜಿನಿಯರಿಂಗ್ ಮಾಡುತ್ತಿದ್ದು, ವೈದ್ಯಕೀಯ ಕಾರಣಗಳಿಂದ ಅನುತ್ತೀರ್ಣನಾಗಿರುತ್ತಾನೆ. ಆದರೆ, ಈಗ ಅವನಿಗೆ ಸಾಫ್ಟ್ವೇರ್ ಎಂಜಿನಿಯರ್ ಆಗುವ ಇಚ್ಚೆಯಿದೆ. ಹಾಗಾದರೆ, ಅವನು ಯಾವ ಕೋರ್ಸ್ ಮಾಡಬಹುದು? ಎಂಜಿನಿಯರಿಂಗ್ ಮುಗಿಸಿದ ಮೇಲೆ ಆ ಸಾಧ್ಯತೆ ಇದೆಯೇ? ಎಂಬಿಎ ಮಾಡಿಸುವುದು ಒಳ್ಳೆಯದೇ? ವಿದೇಶಗಳಲ್ಲಿ ಎಂಎಸ್ ಮಾಡಿಸುವುದು ಉತ್ತಮವೇ? ದಯವಿಟ್ಟು ಮಾರ್ಗದರ್ಶನ ಮಾಡಿ. ಯಾದವ, ಕೊಪ್ಪ. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೂ ಸಾಫ್ಟ್ವೇರ್ ಕ್ಷೇತ್ರಕ್ಕೂ ಸಂಬಂಧವಿಲ್ಲ. ಹಾಗಾಗಿ, ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಆ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು. ಸಾಫ್ಟ್ವೇರ್ ಬೇಡಿಕೆಯಲ್ಲಿರುವ ಕ್ಷೇತ್ರ; ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್ ಇತ್ಯಾದಿ) ಅಥವಾ ಬಿಸಿಎ/ಎಂಸಿಎ ಮಾಡಿ ಸಾಫ್ಟ್ವೇರ್ ವೃತ್ತಿಯನ್ನು ಅರಸಬಹುದು. ಅಥವಾ, ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್ಗಳಾದ ಮೆಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ ಕೋರ್ಸ್ಗಳನ್ನು ಮಾಡಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಪ್ರಶ್ನೆಯಲ್ಲಿ ಅನೇಕ ಸಾಧ್ಯತೆಗಳೂ ಹಾಗೂ ಗೊಂದಲಗಳೂ ಕಾಣುತ್ತಿವೆ. ಹಾಗಾಗಿ, ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೃತ್ತಿ ಸಮಾಲೋಚಕರನ್ನು ಸಂಪರ್ಕಿಸುವುದು ಉತ್ತಮ. 8. ನಾನು ಬಿಕಾಂ ಪದವೀಧರನಾಗಿದ್ದು, ಪ್ರತಿಯೊಂದು ಸೆಮಿಸ್ಟರ್‌ನಲ್ಲಿಯೂ ಅರ್ಥಶಾಸ್ತ್ರ ವಿಷಯವನ್ನು ಓದಿದ್ದು, ಈಗ ಅಧಿಸೂಚನೆ ಹೊರಡಿಸಲಾದ ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತೇನೆಯೇ? ಹೆಸರು, ಊರು ತಿಳಿಸಿಲ್ಲ. ಸಾಂಖ್ಯಿಕ ನಿರೀಕ್ಷಕ ಹುದ್ದೆಯ ವಿದ್ಯಾರ್ಹತೆಗೆ ಪದವಿಯಲ್ಲಿ ಅರ್ಥಶಾಸ್ತç ವಿಷಯವನ್ನು ಓದಿರಬೇಕು. ಹಾಗಾಗಿ, ನಮ್ಮ ಅಭಿಪ್ರಾಯದಂತೆ ನಿಮಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಯಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ://..../%20Statistic%20Inspector%20RPC%20105%20post%2015-10-2022. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.